ಅಯೋಧ್ಯೆ: ಅಯೋಧ್ಯೆಯ ರಾಮ ಮಂದಿರದ ದೇಣಿಗೆ ದುರುಪಯೋಗ ವಿವಾದಕ್ಕೆ ಸಂಬಂಧಿಸಿದಂತೆ ಹಿರಿಯ ಬಾಲಿವುಡ್ ನಟ ಅನುಪಮ್ ಖೇರ್ (Anupam Kher) ನೀಡಿರುವ ಹೇಳಿಕೆ ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ಚರ್ಚೆಗೆ ಗ್ರಾಸವಾಗಿದೆ. ಮಂದಿರದ ಹುಂಡಿ ಹಣದ ಎಣಿಕೆಯಲ್ಲಿ ನಡೆದಿರುವ ಅಕ್ರಮ ಹಾಗೂ ಕಳ್ಳತನದ ಆರೋಪಗಳನ್ನು ‘ಅತ್ಯಂತ ಸಣ್ಣ ವಿಷಯ’ ಎಂದು ಕರೆದಿದ್ದ ನಟನ ವಿರುದ್ಧ ವ್ಯಾಪಕ ಆಕ್ರೋಶ ವ್ಯಕ್ತವಾಗಿತ್ತು. ಆದರೆ, ಇದೀಗ ತಮಗೆ ಟ್ರೋಲ್ ಮಾಡುವವರ ವಿರುದ್ಧ ಕಿಡಿಕಾರಿರುವ ಅನುಪಮ್ ಖೇರ್, ತಾವು ಹೇಳಿದ ಮಾತಿಗೆ ಈಗಲೂ ಬದ್ಧರಾಗಿದ್ದು, ಯಾವುದೇ ಟೀಕೆಗಳಿಗೆ ಹೆದರಿ ತಮ್ಮ ನಿಲುವನ್ನು ಬದಲಾಯಿಸುವುದಿಲ್ಲ ಎಂದು ತಿರುಗೇಟು ನೀಡಿದ್ದಾರೆ.
ವಿಡಿಯೋ ಶೇರ್ ಮಾಡಿಕೊಂಡ ನಟ
ತಮ್ಮ ಹೇಳಿಕೆಗೆ ವ್ಯಕ್ತವಾದ ತೀವ್ರ ವಿರೋಧದ ಬೆನ್ನಲ್ಲೇ ಸೋಮವಾರ ಇನ್‌ಸ್ಟಾಗ್ರಾಮ್ ಮತ್ತು ಎಕ್ಸ್ (ಟ್ವಿಟರ್) ಖಾತೆಗಳಲ್ಲಿ ವಿಡಿಯೋ ಒಂದನ್ನು ಹಂಚಿಕೊಂಡಿರುವ ಅನುಪಮ್ ಖೇರ್, ಟ್ರೋಲರ್‌ಗಳಿಗೆ ನೇರವಾಗಿಯೇ ಉತ್ತರಿಸಿದ್ದಾರೆ. ಕೆಲವು ದಿನಗಳ ಹಿಂದೆ ರಾಮ ಮಂದಿರಕ್ಕೆ ಭೇಟಿ ನೀಡಿದ್ದಾಗ ತಮ್ಮ ಮನಸ್ಸಿನಲ್ಲಿದ್ದ ನಿಜವಾದ ಅನಿಸಿಕೆಯನ್ನು ಹಂಚಿಕೊಂಡಿದ್ದಾಗಿ ತಿಳಿಸಿರುವ ಅವರು, ಇದು ಕೆಲವರಿಗೆ ಇಷ್ಟವಾಗದ ಕಾರಣ ತಮ್ಮದೇ ಆದ ಕಾರ್ಯಸೂಚಿಯನ್ನು (ಅಜೆಂಡಾ) ಮುನ್ನಡೆಸಲು ನನ್ನನ್ನು ಗುರಿಯಾಗಿಸಿಕೊಂಡು ಇಡೀ ವ್ಯವಸ್ಥೆಯೇ ಮುಗಿಬಿದ್ದಿದೆ ಎಂದು ಆರೋಪಿಸಿದ್ದಾರೆ. ತಾವು ಸ್ವಂತ ಶ್ರಮದಿಂದ ಬೆಳೆದವರಾಗಿದ್ದು, ಯಾವುದಕ್ಕೂ ಹೆದರುವುದಿಲ್ಲ ಎಂದು ವಿಡಿಯೋದಲ್ಲಿ ಸ್ಪಷ್ಟಪಡಿಸಿದ್ದಾರೆ.
सच से लोगों को सबसे ज़्यादा डर तब लगता है, जब वह उनके एजेंडे के अनुकूल नहीं होता।
— Anupam Kher (@AnupamPKher) July 13, 2026
कुछ दिन पहले मैंने राम मंदिर में हुई चोरी के बारे में जो कहा, पूरी ईमानदारी और ज़िम्मेदारी से कहा। आज भी अपने हर शब्द पर कायम हूँ।
लेकिन कुछ लोगों को सच से ज़्यादा एक मुद्दा चाहिए होता है। उन्हें… pic.twitter.com/1U2kHJfzhG
ಸಾಮಾಜಿಕ ಜಾಲತಾಣದಲ್ಲಿ ಬರೆದುಕೊಂಡಿರುವ ಅವರು, ಜನರ ಅಜೆಂಡಾಗಳಿಗೆ ಹೊಂದಿಕೆಯಾಗದಿದ್ದಾಗ ಅವರು ಸತ್ಯವನ್ನು ಕಂಡು ಹೆಚ್ಚು ಹೆದರುತ್ತಾರೆ. ರಾಮ ಮಂದಿರದ ಕಳ್ಳತನದ ಬಗ್ಗೆ ತಾವು ಪೂರ್ಣ ಪ್ರಾಮಾಣಿಕತೆ ಮತ್ತು ಜವಾಬ್ದಾರಿಯಿಂದ ಮಾತನಾಡಿದ್ದು, ಇಂದಿಗೂ ಆ ಪ್ರತಿಯೊಂದು ಪದಕ್ಕೂ ಬದ್ಧರಾಗಿರುವುದಾಗಿ ಹೇಳಿದ್ದಾರೆ. ಕೆಲವರಿಗೆ ಸತ್ಯಕ್ಕಿಂತ ಹೆಚ್ಚಾಗಿ ವಿವಾದ, ಚರ್ಚೆ ಮತ್ತು ಗದ್ದಲಗಳೇ ಬೇಕಾಗಿವೆ. ಅದಕ್ಕಾಗಿಯೇ ತಮ್ಮ ಹೇಳಿಕೆಯನ್ನು ತಿರುಚಿ ಪ್ರಸ್ತುತಪಡಿಸಲಾಗುತ್ತಿದೆ. ಟ್ರೋಲರ್‌ಗಳು, ಕರೆಯಲ್ಪಡುವ ಇನ್ಫ್ಲುಯೆನ್ಸರ್ಸ್ ಅಥವಾ ರಾಜಕೀಯ ನಾಯಕರು ಯಾರೇ ಆದರೂ, ಯಾರ ಗದ್ದಲಕ್ಕೂ ತಮ್ಮ ನಿಲುವು ಬದಲಾಗುವುದಿಲ್ಲ. ತಮಗೆ ಸರಿ ಅನಿಸಿದ್ದನ್ನು ಮುಕ್ತವಾಗಿ ಹೇಳುವುದು ತಮ್ಮ ಹಕ್ಕು ಮತ್ತು ಕರ್ತವ್ಯವಾಗಿದೆ ಎಂದು ಅವರು ಗುಡುಗಿದ್ದಾರೆ.
ಅಷ್ಟಕ್ಕೂ ಅನುಪಮ್ ಖೇರ್ ಹೇಳಿದ್ದೇನು?
ರಾಮ ಮಂದಿರದ ದೇಣಿಗೆ ದುರುಪಯೋಗದ ವಿವಾದದ ಕುರಿತು ಮಾಧ್ಯಮ ಸಂದರ್ಶನವೊಂದರಲ್ಲಿ ಮಾತನಾಡಿದ್ದ ಅನುಪಮ್ ಖೇರ್, ಈ ಕಳ್ಳತನವನ್ನು ಮೊಘಲರ ಕಾಲದ ದೌರ್ಜನ್ಯಗಳಿಗೆ ಹೋಲಿಸಿ ಇದೊಂದು ಸಣ್ಣ ವಿಷಯ ಎಂದು ಬಣ್ಣಿಸಿದ್ದರು. ಕಳ್ಳ ಒಳಗಿನವನೇ ಇರಲಿ ಅಥವಾ ಹೊರಗಿನವನೇ ಇರಲಿ, ಕಳ್ಳ ಎಂದಿಗೂ ಕಳ್ಳನೇ. ಆದರೆ ಈ ಘಟನೆಯನ್ನು ಕೋಮು ಅಥವಾ ಧಾರ್ಮಿಕ ದೃಷ್ಟಿಕೋನದಿಂದ ನೋಡಬಾರದು ಎಂದು ಅವರು ಪ್ರತಿಪಾದಿಸಿದ್ದರು. ಮೊಘಲರ ಕಾಲದಲ್ಲಿ ದೇವಾಲಯಗಳನ್ನು ಧ್ವಂಸಗೊಳಿಸಿ, ಲೂಟಿ ಮಾಡಿ, ಬ್ರಾಹ್ಮಣರನ್ನು ಕೊಂದ ಘಟನೆಗಳಿಗೆ ಹೋಲಿಸಿದರೆ, ಪ್ರಸ್ತುತ ನಡೆದಿರುವ ಘಟನೆ ಕೇವಲ ಕೆಲವೇ ವ್ಯಕ್ತಿಗಳ ದುರಾಶೆಯಿಂದಾಗಿ ನಡೆದಿರುವ ಅತ್ಯಂತ ಸಣ್ಣ ವಿಷಯ ಎಂದು ಹೇಳಿದ್ದರು.
ಇದೇ ವೇಳೆ ಮತ್ತೊಂದು ಸಂದರ್ಶನದಲ್ಲಿ ಮಾತನಾಡಿದ್ದ ಅವರು, ರಾಮ ಮಂದಿರದ ದೇಣಿಗೆ ಹಣವನ್ನು ಕಳ್ಳತನ ಮಾಡಿದವರನ್ನು ಪತ್ತೆಹಚ್ಚಿ ಕಠಿಣ ಶಿಕ್ಷೆ ವಿಧಿಸಬೇಕು ಎಂದೂ ಒತ್ತಾಯಿಸಿದ್ದರು. ಸದ್ಯ ಅನುಪಮ್ ಖೇರ್ ಅವರು ಅಯೋಧ್ಯೆಯಲ್ಲಿ ತಮ್ಮ ಮುಂಬರುವ ‘ಶ್ರೀ ರಾಮ್ ಭೂಮಿ’ ಚಿತ್ರದ ಚಿತ್ರೀಕರಣದಲ್ಲಿ ಬ್ಯುಸಿಯಾಗಿದ್ದು, ಈ ನಡುವೆ ಅವರ ಹೇಳಿಕೆ ಭಾರಿ ಸಂಚಲನ ಮೂಡಿಸಿದೆ.
ಇದನ್ನೂ ಓದಿ: ನ್ಯೂಕ್ಲಿಯರ್ ಬಾಂಬ್’ನಂತೆ ಬರಲಿದ್ದಾನೆ ರಿಚ್ಚಿ: ರಿಚರ್ಡ್ ಆ್ಯಂಟನಿ ಬಗ್ಗೆ ಅಜನೀಶ್ ಬಿಗ್ ಅಪ್‌ಡೇಟ್
