ಮಹಾರಾಷ್ಟ್ರ: ಪುಣೆಯ ರಿಯಲ್ ಎಸ್ಟೇಟ್ ಉದ್ಯಮಿ ಕೇತನ್ ಅಗರ್ವಾಲ್ (Ketan Agarwal) ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಅವರ ತಾಯಿ ರಾಖಿ ಅಗರ್ವಾಲ್ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಭಾವುಕ ಪತ್ರವೊಂದನ್ನು ಬರೆದಿದ್ದಾರೆ. ತಮ್ಮ ಮಗನ ಸಾವಿಗೆ ಕಾರಣರಾದವರಿಗೆ ಕಠಿಣ ಶಿಕ್ಷೆಯಾಗಬೇಕು ಮತ್ತು ಪ್ರಕರಣದಲ್ಲಿ ಶೀಘ್ರ ನ್ಯಾಯ ಸಿಗುವಂತಾಗಬೇಕು ಎಂದು ಅವರು ಪತ್ರದಲ್ಲಿ ಒತ್ತಾಯಿಸಿದ್ದಾರೆ. ತಮಗೆ ಯಾವುದೇ ಸಹಾನುಭೂತಿ ಅಥವಾ ವಿಶೇಷ ಸವಲತ್ತು ಬೇಡ, ಕೇವಲ ನ್ಯಾಯ ಮಾತ್ರ ಬೇಕು ಎಂದಿರುವ ಅವರು, ಸ್ವಂತ ಮಗನ ನ್ಯಾಯಕ್ಕಾಗಿ ದೇಶದ ಪ್ರಧಾನ ಮಂತ್ರಿಯವರನ್ನು ಭೇಟಿ ಮಾಡಬೇಕಾದ ಪರಿಸ್ಥಿತಿ ಬರುತ್ತದೆ ಎಂದು ತಾವು ಎಂದಿಗೂ ಯೋಚಿಸಿರಲಿಲ್ಲ ಎಂದು ಕಣ್ಣೀರು ಹಾಕಿದ್ದಾರೆ.
ಏನಿದೆ ಕೇತನ್ ತಾಯಿ ಪತ್ರದಲ್ಲಿ?
ಪ್ರಧಾನಿ ಮೋದಿ ಅವರಿಗೆ ಕಳುಹಿಸಿರುವ ಇಮೇಲ್‌ನಲ್ಲಿ ರಾಖಿ ಅಗರ್ವಾಲ್ ಅವರು ಚಿಕ್ಕ ವಯಸ್ಸಿನಲ್ಲೇ ಮಗನನ್ನು ಕಳೆದುಕೊಂಡ ತಾಯಿಯ ಅಸಹನೀಯ ವೇದನೆಯನ್ನು ಹಂಚಿಕೊಂಡಿದ್ದಾರೆ. “ಪ್ರತಿಯೊಬ್ಬ ತಾಯಿಯಂತೆ ನಾನು ಕೂಡ ಕೇತನ್ ಮದುವೆಯಾಗಿ, ಸುಂದರ ಜೀವನವನ್ನು ಕಟ್ಟಿ ನಮ್ಮೊಂದಿಗೆ ವೃದ್ಧಾಪ್ಯದವರೆಗೂ ಇರುತ್ತಾನೆ ಎಂದು ಕನಸು ಕಂಡಿದ್ದೆ. ಆದರೆ ವಿಧಿಯಾಟ ಬೇರೆಯೇ ಇತ್ತು. ನನ್ನ ಮಗನ ಅಂತ್ಯಸಂಸ್ಕಾರವನ್ನು ನಾನೇ ಮಾಡಬೇಕಾದ ದುಸ್ಥಿತಿ ಬಂತು. ನನ್ನ ಮಗನನ್ನು ಅತ್ಯಂತ ಕ್ರೂರವಾಗಿ ಕೊಲೆ ಮಾಡಲಾಗಿದೆ, ಅವನೊಂದಿಗೆ ನನ್ನ ಇಡೀ ಜಗತ್ತೇ ಕೊನೆಗೊಂಡಿದೆ. ಮನೆಯ ಪ್ರತಿಯೊಂದು ಮೂಲೆಯೂ ಅವನನ್ನು ನೆನಪಿಸುತ್ತಿದೆ. ಅವನ ನಗುವಿನ ಜಾಗದಲ್ಲಿ ಈಗ ಆವರಿಸಿರುವ ಮೌನ, ಅವನು ಇನ್ಮುಂದೆ ಎಂದಿಗೂ ಮರಳಿ ಬರಲಾರ ಎಂಬುದನ್ನು ನೆನಪಿಸುತ್ತಿದೆ” ಎಂದು ಬರೆದಿದ್ದಾರೆ. ಈ ದುರಂತದಿಂದ ಇಡೀ ಕುಟುಂಬವೇ ಆಘಾತಕ್ಕೊಳಗಾಗಿದ್ದು, ಮೊಮ್ಮಗನ ಸಾವಿನ ದುಃಖ ತಡೆಯಲಾರದೆ ಕೇತನ್ ಸಾವನ್ನಪ್ಪಿದ ಕೇವಲ 20 ದಿನಗಳಲ್ಲೇ ಅವರ ತಾತ ಕೂಡ ಕಣ್ಣು ಮುಚ್ಚಿದ್ದಾರೆ ಎಂದು ತಿಳಿಸಿದ್ದಾರೆ.
ಪ್ರಧಾನಿ ಅವರಿಗೆ ನೇರವಾಗಿ ಮನವಿ ಮಾಡಿರುವ ರಾಖಿ ಅಗರ್ವಾಲ್, “ಮೋದಿ ಜೀ, ನಾನು ಕೇವಲ ಒಬ್ಬ ತಾಯಿ. ನಾನು ಯಾವುದೇ ಸಹಾನುಭೂತಿ ಅಥವಾ ವಿಶೇಷ ಸೌಲಭ್ಯವನ್ನು ಕೇಳುತ್ತಿಲ್ಲ. ನನಗೆ ಬೇಕಿರುವುದು ನನ್ನ ಮಗನ ಸಾವಿಗೆ ನ್ಯಾಯ ಮಾತ್ರ” ಎಂದು ವಿನಂತಿಸಿದ್ದಾರೆ. ಯಾವುದೇ ಅನಗತ್ಯ ವಿಳಂಬವಿಲ್ಲದೆ ತನಿಖೆ ನಡೆಸಿ, ಅಪರಾಧಿಗಳಿಗೆ ಕಾನೂನು ಪ್ರಕಾರ ಕಠಿಣ ಶಿಕ್ಷೆ ವಿಧಿಸಬೇಕು ಎಂದು ಅವರು ಅಧಿಕಾರಿಗಳಿಗೆ ಒತ್ತಾಯಿಸಿದ್ದಾರೆ. ಕೇತನ್ ಕೇವಲ ಒಂದು ಕೇಸ್ ಫೈಲ್ ಆಗಿ ಉಳಿಯಬಾರದು. ಅವನು ಯಾರಿಗೋ ಮಗ, ಸಹೋದರ, ಮೊಮ್ಮಗ ಆಗಿದ್ದಿರಬಹುದು, ಆದರೆ ನನಗೆ ಅವನೇ ನನ್ನ ಸರ್ವಸ್ವವಾಗಿದ್ದ. ಪ್ರತಿ ರಾತ್ರಿ ಮಗನ ಫೋಟೋ ಜೊತೆ ಮಾತನಾಡುವಾಗ, ನಿನಗೆ ನ್ಯಾಯ ಸಿಕ್ಕಿದೆ ಎಂದು ಹೇಳುವ ದಿನಕ್ಕಾಗಿ ಕಾಯುತ್ತಿದ್ದೇನೆ ಎಂದು ಭಾವೋದ್ವೇಗದಿಂದ ಪತ್ರದಲ್ಲಿ ಉಲ್ಲೇಖಿಸಿದ್ದಾರೆ.
ಅಷ್ಟಕ್ಕೂ ಕೇತನ್ ಅಗರ್ವಾಲ್ ಪ್ರಕರಣದಲ್ಲಿ ಆಗಿದ್ದೇನು? ಪುಣೆಯ 26 ವರ್ಷದ ರಿಯಲ್ ಎಸ್ಟೇಟ್ ಉದ್ಯಮಿ ಕೇತನ್ ಅಗರ್ವಾಲ್ ಜೂನ್ 18 ರಂದು ಪುಣೆ ಜಿಲ್ಲೆಯ ಲೋಹಗಢ ಕೋಟೆಯ ಸಮೀಪವಿರುವ ಕಣಿವೆಗೆ ಬಿದ್ದು ಸಾವನ್ನಪ್ಪಿದ್ದರು. ಆರಂಭದಲ್ಲಿ ಇದನ್ನು ಆಕಸ್ಮಿಕ ಸಾವು ಎಂದು ದಾಖಲಿಸಿಕೊಳ್ಳಲಾಗಿತ್ತು. ಆದರೆ, ಪೊಲೀಸರು ತನಿಖೆ ತೀವ್ರಗೊಳಿಸಿದಾಗ ಇದೊಂದು ಪೂರ್ವಯೋಜಿತ ಕೊಲೆ ಎಂಬ ಆಘಾತಕಾರಿ ಸತ್ಯ ಬೆಳಕಿಗೆ ಬಂದಿದೆ. ಈ ಸಂಬಂಧ ಕೇತನ್ ನಿಶ್ಚಿತಾರ್ಥವಾಗಿದ್ದ ಯುವತಿ ಸಿಯಾ ಗೋಯಲ್ ಮತ್ತು ಆಕೆಯ ಪ್ರಿಯಕರ ಚೇತನ್ ಚೌಧರಿಯನ್ನು ಪೊಲೀಸರು ಬಂಧಿಸಿದ್ದಾರೆ. ಇಬ್ಬರೂ ಸೇರಿ ಪ್ರವಾಸದ ನೆಪದಲ್ಲಿ ಕೇತನ್‌ನನ್ನು ಕೋಟೆಗೆ ಕರೆದೊಯ್ದು, ಅಲ್ಲಿಂದ ಪ್ರಪಾತಕ್ಕೆ ತಳ್ಳಿ ಕೊಲೆ ಮಾಡಿದ್ದಾರೆ ಎಂದು ತನಿಖೆಯಿಂದ ತಿಳಿದುಬಂದಿದೆ.
ಪೊಲೀಸರ ಪ್ರಕಾರ, ಈ ಕೊಲೆಯನ್ನು ಅತ್ಯಂತ ವ್ಯವಸ್ಥಿತವಾಗಿ ಯೋಜಿಸಲಾಗಿತ್ತು. ಡಿಜಿಟಲ್ ಪುರಾವೆಗಳು, ಸಿಸಿಟಿವಿ ದೃಶ್ಯಾವಳಿಗಳು, ಸಾಕ್ಷಿಗಳ ಹೇಳಿಕೆಗಳು ಮತ್ತು ವಿಧಿವಿಜ್ಞಾನ ಪ್ರಯೋಗಾಲಯದ (ಫೋರೆನ್ಸಿಕ್) ವರದಿಗಳ ಆಧಾರದ ಮೇಲೆ ತನಿಖೆ ನಡೆಸಲಾಗುತ್ತಿದೆ. ಸದ್ಯ ಬಂಧಿತರಿಬ್ಬರೂ ನ್ಯಾಯಾಂಗ ಬಂಧನದಲ್ಲಿದ್ದು, ಪ್ರಕರಣದ ಮುಂದಿನ ತನಿಖೆ ಪ್ರಗತಿಯಲ್ಲಿದೆ.
ಇದನ್ನೂ ಓದಿ: ಚಲಿಸುವ ರೈಲಿನಿಂದ ಬೀಳುತ್ತಿದ್ದ ಯುವಕನಿಗೆ ಜೀವದಾನ ಮಾಡಿದ ಸಿಬ್ಬಂದಿ
