ಬೆಂಗಳೂರು: ರಾಜ್ಯದಲ್ಲಿ ಮುಂಗಾರು ಮಳೆಯ ಆರ್ಭಟ ಜೋರಾಗಿದ್ದು, ಕರ್ನಾಟಕದ ಪ್ರಮುಖ ಜಲಾಶಯಗಳಿಗೆ ಒಟ್ಟಾರೆಯಾಗಿ ಬರೋಬ್ಬರಿ 1,06,369 ಕ್ಯೂಸೆಕ್‌ನಷ್ಟು ಬೃಹತ್ (Dam Level) ಪ್ರಮಾಣದ ನೀರು ಹರಿದುಬರುತ್ತಿದೆ. ಸದ್ಯಕ್ಕೆ ಡ್ಯಾಂಗಳಲ್ಲಿನ ಒಟ್ಟಾರೆ ನೀರಿನ ಮಟ್ಟ ಶೇಕಡಾ 50 ರಷ್ಟಿದೆ ಎಂದು ವರದಿಯಾಗಿದ್ದರೂ, ಜಲಾಶಯಗಳ ನೈಜ ಸ್ಥಿತಿಗತಿ ಮಾತ್ರ ಕೃಷಿಕರಲ್ಲಿ ಮತ್ತು ಸಾರ್ವಜನಿಕರಲ್ಲಿ ತೀವ್ರ ಕಳವಳ ಮೂಡಿಸುತ್ತಿದೆ. ಸದ್ಯ ರಾಜ್ಯದ ಎಲ್ಲಾ ಡ್ಯಾಂಗಳಲ್ಲಿ ಶೇಖರಣೆಯಾಗಿರುವುದು ಕೇವಲ ಶೇಕಡಾ 39 ರಷ್ಟು ಅಂದರೆ 351.96 ಟಿಎಂಸಿ ನೀರು ಮಾತ್ರ. ಆದರೆ ಕಳೆದ ವರ್ಷ ಇದೇ ಸಮಯದಲ್ಲಿ ಜಲಾಶಯಗಳಲ್ಲಿ ಬರೋಬ್ಬರಿ 646.55 ಟಿಎಂಸಿ ನೀರು ಸಂಗ್ರಹವಿತ್ತು. ಈ ಹಳೆಯ ಅಂಕಿ-ಅಂಶಕ್ಕೆ ಹೋಲಿಸಿದರೆ ಪ್ರಸ್ತುತ ಅರ್ಧದಷ್ಟು ನೀರು ಕೂಡ ಸಂಗ್ರಹವಾಗದಿರುವುದು ಮುಂದಿನ ಬೇಸಿಗೆಯಲ್ಲಿ ಎದುರಾಗಬಹುದಾದ ನೀರಿನ ಬಿಕ್ಕಟ್ಟಿನ ಮುನ್ಸೂಚನೆ ನೀಡುತ್ತಿದೆ.
ಹೀಗಿದೆ ಡ್ಯಾಂ ಪರಿಸ್ಥಿತಿ
ದಕ್ಷಿಣ ಕರ್ನಾಟಕದ ಜನರ ಪ್ರಮುಖ ಆಧಾರವಾಗಿರುವ ಕಾವೇರಿ ಕೊಳ್ಳದ ಡ್ಯಾಂಗಳು ಪ್ರಸ್ತುತ ಶೇಕಡಾ 49 ರಷ್ಟು ಮಾತ್ರ ಭರ್ತಿಯಾಗಿವೆ. ಈ ಭಾಗದ ಪ್ರಮುಖ ಜಲಾಶಯ ಹಾಗೂ ಮೈಸೂರು-ಬೆಂಗಳೂರು ನಗರಗಳ ಒಡಲಾಗಿರುವ ಕೃಷ್ಣರಾಜಸಾಗರ (ಕೆಆರ್‌ಎಸ್) ಡ್ಯಾಂಗೆ ಸದ್ಯ 7,515 ಕ್ಯೂಸೆಕ್ ನೀರು ಬರುತ್ತಿದ್ದು, ಅಲ್ಲಿ ಕೇವಲ ಶೇಕಡಾ 35 ರಷ್ಟು ಅಂದರೆ 17.25 ಟಿಎಂಸಿ ನೀರು ಮಾತ್ರ ದಾಸ್ತಾನಿದೆ. ಇನ್ನುಳಿದಂತೆ ಇದೇ ಕೊಳ್ಳದ ಕಬಿನಿ ಜಲಾಶಯವು ಶೇಕಡಾ 60 ರಷ್ಟು (11.71 ಟಿಎಂಸಿ) ಹಾಗೂ ಹೇಮಾವತಿ ಜಲಾಶಯವು ಶೇಕಡಾ 59 ರಷ್ಟು (22.05 ಟಿಎಂಸಿ) ತುಂಬಿದ್ದು, ಕಾವೇರಿ ಕೊಳ್ಳದ ಒಟ್ಟು ಒಳಹರಿವು 15,177 ಕ್ಯೂಸೆಕ್ ದಾಟಿದೆ.
ಇನ್ನೊಂದೆಡೆ ಉತ್ತರ ಕರ್ನಾಟಕದ ಕೃಷ್ಣಾ ಕೊಳ್ಳದ ಪರಿಸ್ಥಿತಿ ತೀರಾ ಭಿನ್ನವಾಗಿದ್ದು, ಜಲಾಶಯಗಳಿಗೆ ಹರಿದುಬರುತ್ತಿರುವ ನೀರಿನ ಪ್ರಮಾಣ ಆಶಾದಾಯಕವಾಗಿದೆ. ವಿಶೇಷವಾಗಿ ಆಲಮಟ್ಟಿ ಜಲಾಶಯಕ್ಕೆ 56,765 ಕ್ಯೂಸೆಕ್‌ನಷ್ಟು ಭಾರಿ ಪ್ರಮಾಣದ ನೀರು ಬರುತ್ತಿದ್ದು, ಈಗಾಗಲೇ ಅದು ಶೇಕಡಾ 71 ರಷ್ಟು (87.87 ಟಿಎಂಸಿ) ಭರ್ತಿಯಾಗಿದೆ. ಆದರೆ ಇದೇ ವಲಯದ ಬಹುಮುಖ್ಯ ಜಲಾಶಯವಾದ ತುಂಗಭದ್ರಾ ಡ್ಯಾಂ ಕೇವಲ ಶೇಕಡಾ 23 ರಷ್ಟು (24.36 ಟಿಎಂಸಿ) ನೀರನ್ನು ಮಾತ್ರ ಹೊಂದಿದ್ದು, ಇಲ್ಲಿನ 17,152 ಕ್ಯೂಸೆಕ್ ಒಳಹರಿವು ರೈತರ ಆತಂಕವನ್ನು ಪೂರ್ತಿಯಾಗಿ ನೀಗಿಸಿಲ್ಲ. ಈ ಕೊಳ್ಳದ ಇತರ ಜಲಾಶಯಗಳಾದ ಮಲಪ್ರಭಾ ಶೇಕಡಾ 32, ಘಟಪ್ರಭಾ (ಹಿಡಕಲ್) ಶೇಕಡಾ 38 ಹಾಗೂ ನಾರಾಯಣಪುರ ಶೇಕಡಾ 59 ರಷ್ಟು ತುಂಬಿದ್ದು, ಒಟ್ಟಾರೆ ಕೃಷ್ಣಾ ಕೊಳ್ಳಕ್ಕೆ 82,526 ಕ್ಯೂಸೆಕ್ ನೀರು ಹರಿದುಬರುತ್ತಿದೆ.
ನೆಮ್ಮದಿ ಕೊಟ್ಟ ವಾಣಿ ವಿಲಾಸ
ಮಲೆನಾಡು ಹಾಗೂ ಹಳೇ ಮೈಸೂರು ಭಾಗದ ಜಲಾಶಯಗಳನ್ನು ಗಮನಿಸಿದರೆ, ಭದ್ರಾ ಡ್ಯಾಂನಲ್ಲಿ ಶೇಕಡಾ 45 ರಷ್ಟು (32.21 ಟಿಎಂಸಿ) ಮತ್ತು ರಾಜ್ಯದ ಪ್ರಮುಖ ವಿದ್ಯುತ್ ಉತ್ಪಾದನಾ ಮೂಲವಾದ ಲಿಂಗನಮಕ್ಕಿಯಲ್ಲಿ ಕೇವಲ ಶೇಕಡಾ 20 ರಷ್ಟು (30.90 ಟಿಎಂಸಿ) ನೀರು ಮಾತ್ರ ಶೇಖರಣೆಯಾಗಿದೆ. ಇವೆಲ್ಲದರ ನಡುವೆ, ಬಯಲುಸೀಮೆಯ ಚಿತ್ರದುರ್ಗ ಜಿಲ್ಲೆಯ ವಾಣಿ ವಿಲಾಸ ಸಾಗರಕ್ಕೆ ಯಾವುದೇ ಹೊಸ ಒಳಹರಿವು ಇಲ್ಲದಿದ್ದರೂ ಸಹ ಶೇಕಡಾ 78 ರಷ್ಟು (23.68 ಟಿಎಂಸಿ) ನೀರನ್ನು ಹೊಂದಿದ್ದು, ಈ ಭಾಗದ ರೈತರ ಮೊಗದಲ್ಲಿ ಮಂದಹಾಸ ಮೂಡಿಸಿದೆ. ಪ್ರಸ್ತುತ ಮಳೆ ಸುರಿಯುತ್ತಿದ್ದರೂ ಸಹ ಪ್ರಮುಖ ಜಲಾಶಯಗಳು ಇನ್ನು ಪೂರ್ಣ ಪ್ರಮಾಣದಲ್ಲಿ ಭರ್ತಿಯಾಗದ ಕಾರಣ ಸದ್ಯಕ್ಕೆ ನಿಟ್ಟುಸಿರು ಬಿಡುವಂತಿಲ್ಲ. ಮುಂಬರುವ ದಿನಗಳಲ್ಲಿ ವರುಣದೇವ ಇನ್ನಷ್ಟು ವ್ಯಾಪಕವಾಗಿ ಸುರಿದರೆ ಮಾತ್ರ ಕೃಷಿ ವಲಯದ ಆತಂಕ ದೂರಾಗಲು ಸಾಧ್ಯ.
ಇದನ್ನೂ ಓದಿ: ಸಿಗಂದೂರು ಸೇತುವೆಗೆ ಒಂದು ವರ್ಷ: ಪಟಾಕಿ ಸಿಡಿಸಿ, ಸಿಹಿ ಹಂಚಿ ಸಂಭ್ರಮಿಸಿದ ಜನ
