ಮುರುಡೇಶ್ವರ: ಉತ್ತರ ಕನ್ನಡ ಜಿಲ್ಲೆಯ ಪ್ರಸಿದ್ಧ ಮುರುಡೇಶ್ವರ ರೈಲ್ವೇ ನಿಲ್ದಾಣದಲ್ಲಿ ಭೀಕರ ದುರಂತವೊಂದು ಕೂದಲೆಳೆ ಅಂತರದಲ್ಲಿ ತಪ್ಪಿದೆ. ಚಲಿಸುತ್ತಿದ್ದ ರೈಲಿನಿಂದ ಕೆಳಗಿಳಿಯಲು ಹೋಗಿ ಹಳಿಗಳ ಮಧ್ಯೆ ಸಿಲುಕಿಕೊಳ್ಳುತ್ತಿದ್ದ 22 ವರ್ಷದ ಯುವಕನೊಬ್ಬನನ್ನು ಕೊಂಕಣ (Shocking) ರೈಲ್ವೇಯ ಪಾಯಿಂಟ್ಸ್‌ಮನ್ ಗಣಪತಿ ನಾಯ್ಕ್ ಅವರು ತಕ್ಷಣ ಎಚ್ಚೆತ್ತುಕೊಂಡು ಬದುಕಿಸಿದ್ದಾರೆ. ಸದ್ಯ ಈ ರೋಮಾಂಚನಕಾರಿ ರಕ್ಷಣಾ ಕಾರ್ಯಾಚರಣೆಯ ಸಿಸಿಟಿವಿ ದೃಶ್ಯಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ರೈಲ್ವೇ ನೌಕರನ ಸಮಯಪ್ರಜ್ಞೆಗೆ ದೇಶಾದ್ಯಂತ ಮೆಚ್ಚುಗೆ ವ್ಯಕ್ತವಾಗುತ್ತಿದೆ.
ಏನಿದು ಘಟನೆ?
ಕೇರಳದ ಕೊಚ್ಚುವೇಲಿಯಿಂದ ರಾಜಸ್ಥಾನದ ಶ್ರೀ ಗಂಗಾನಗರಕ್ಕೆ ಸಂಚರಿಸುತ್ತಿದ್ದ ರೈಲು ಸಂಖ್ಯೆ 16312 ಮುರುಡೇಶ್ವರ ನಿಲ್ದಾಣವನ್ನು ದಾಟುತ್ತಿದ್ದಾಗ ಈ ಘಟನೆ ನಡೆದಿದೆ. ರೈಲು ಇನ್ನು ನಿಲ್ಲದಿದ್ದರೂ ಆತುರದಿಂದ ಕೆಳಗಿಳಿಯಲು ಪ್ರಯತ್ನಿಸಿದ ಪ್ರಯಾಣಿಕನೊಬ್ಬ ಆಯತಪ್ಪಿ ಪ್ಲಾಟ್‌ಫಾರ್ಮ್ ಹಾಗೂ ಚಲಿಸುವ ರೈಲಿನ ನಡುವಿನ ಕಂದಕಕ್ಕೆ ಜಾರಿದ್ದಾನೆ. ಅದೇ ವೇಳೆ ಕರ್ತವ್ಯದಲ್ಲಿದ್ದ ಗಣಪತಿ ನಾಯ್ಕ್ ಅವರು ಅಪಾಯವನ್ನು ಮೊದಲೇ ಅರಿತು, ಮಿಂಚಿನ ವೇಗದಲ್ಲಿ ಧಾವಿಸಿ ಯುವಕನನ್ನು ಪ್ಲಾಟ್‌ಫಾರ್ಮ್‌ನತ್ತ ಎಳೆದಿದ್ದಾರೆ. ಒಂದು ವೇಳೆ ಅವರು ಒಂದು ಕ್ಷಣ ತಡ ಮಾಡಿದ್ದರೂ ಯುವಕನ ಪ್ರಾಣಕ್ಕೆ ಕುತ್ತು ಬರುತ್ತಿತ್ತು.
ಗಣಪತಿ ನಾಯ್ಕ್ ಅವರ ಈ ಅಪ್ರತಿಮ ಧೈರ್ಯ ಮತ್ತು ಕರ್ತವ್ಯ ಪ್ರಜ್ಞೆಯನ್ನು ಕೊಂಕಣ ರೈಲ್ವೇ ಕಾರ್ಪೊರೇಷನ್ ಲಿಮಿಟೆಡ್ (KRCL) ಮುಕ್ತಕಂಠದಿಂದ ಶ್ಲಾಘಿಸಿದೆ. ಇಲಾಖೆಯ ವ್ಯವಸ್ಥಾಪಕ ನಿರ್ದೇಶಕರು ಅವರ ಈ ಸಾಹಸ ಕಾರ್ಯಕ್ಕೆ 10,000 ರೂಪಾಯಿಗಳ ನಗದು ಬಹುಮಾನವನ್ನು ನೀಡಿ ಗೌರವಿಸಿದ್ದಾರೆ.
Shri Ganapati Naik,Pointsman/Murdeshwar,displayed exceptional presence of mind by rescuing a passenger attempting to deboard the moving TrainNo.16312,averting a major tragedy.A cash reward of ₹10,000 was awarded by CMD/KRCL in recognition of his exemplary courage & prompt action pic.twitter.com/V7qjoOfMZP
— Konkan Railway (@KonkanRailway) July 12, 2026
ರಿಯಲ್ ಹೀರೋ ಎಂದ ಜನ
ಇತ್ತ ಇಂಟರ್ನೆಟ್‌ನಲ್ಲಿ ಈ ವಿಡಿಯೋ ನೋಡಿದ ಸಾರ್ವಜನಿಕರು ರೈಲ್ವೇ ನೌಕರನನ್ನು ರಿಯಲ್ ಹೀರೊ ಎಂದು ಕೊಂಡಾಡುತ್ತಿದ್ದಾರೆ. ಆದರೆ, ಇದೇ ಸಂದರ್ಭದಲ್ಲಿ ರೈಲ್ವೇ ಇಲಾಖೆಯ ಎಚ್ಚರಿಕೆಗಳನ್ನು ನಿರ್ಲಕ್ಷಿಸಿ ಚಲಿಸುವ ರೈಲಿನಿಂದ ಇಳಿಯುವ ಅಥವಾ ಹತ್ತುವ ಸಾಹಸಕ್ಕೆ ಕೈಹಾಕುವ ಬೇಜವಾಬ್ದಾರಿ ಪ್ರಯಾಣಿಕರ ವಿರುದ್ಧ ನೆಟ್ಟಿಗರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಇಂತಹ ಅಪಾಯಕಾರಿ ನಡೆಗಳು ಕೇವಲ ಸ್ವಂತ ಜೀವಕ್ಕೆ ಮಾತ್ರವಲ್ಲದೆ, ಉಳಿಸಲು ಬರುವ ಇತರರ ಪ್ರಾಣಕ್ಕೂ ಸಂಚಕಾರ ತರುತ್ತವೆ. ಆದ್ದರಿಂದ ಇಂತಹ ಕಿಡಿಗೇಡಿಗಳಿಗೆ ಭಾರೀ ಮೊತ್ತದ ದಂಡ ವಿಧಿಸಬೇಕೆಂಬ ಆಗ್ರಹವೂ ಕೇಳಿಬಂದಿದೆ.
ಇದನ್ನೂ ಓದಿ: ಶಿಕಾರಿಪುರದಲ್ಲಿ ಬಯಲಾಯ್ತು ಒಂದು ವರ್ಷದ ಹಿಂದಿನ ಕರಾಳ ರಹಸ್ಯ
