ಬೆಂಗಳೂರು: ರಾಜ್ಯದ ಮುಜರಾಯಿ ಇಲಾಖೆಯ ಅಧೀನದಲ್ಲಿರುವ ಮುಜರಾಯಿ ದೇವಸ್ಥಾನಗಳ ಆಸ್ತಿಪಾಸ್ತಿ, ನಗದು ಹಾಗೂ ಅಮೂಲ್ಯ ಒಡವೆಗಳ ರಕ್ಷಣೆಗಾಗಿ ಕರ್ನಾಟಕ ಸರ್ಕಾರವು ಹೊಸದಾಗಿ ಕಟ್ಟುನಿಟ್ಟಿನ ಪ್ರಮಾಣಿತ ಕಾರ್ಯಾಚರಣೆ ವಿಧಾನವನ್ನು (SOP) ಜಾರಿಗೆ ತಂದಿದೆ. ಇತ್ತೀಚಿನ ದಿನಗಳಲ್ಲಿ ಹೆಚ್ಚಾಗುತ್ತಿರುವ ಹುಂಡಿ ಕಳ್ಳತನ ಮತ್ತು ದೇಣಿಗೆ ದುರುಪಯೋಗ ಪ್ರಕರಣಗಳಿಗೆ ಬ್ರೇಕ್ ಹಾಕಲು ಕಂದಾಯ ಇಲಾಖೆಯ ಪ್ರಧಾನ (Big News) ಕಾರ್ಯದರ್ಶಿ ರಾಜೇಂದ್ರ ಕುಮಾರ್ ಕಟಾರಿಯಾ ಅವರು ಈ ಕಠಿಣ ಆದೇಶ ಹೊರಡಿಸಿದ್ದಾರೆ.
ಈ ನೂತನ ಮಾರ್ಗಸೂಚಿಯ ಪ್ರಮುಖ ಅಂಶಗಳು ಈ ಕೆಳಗಿನಂತಿವೆ:
1. ಹುಂಡಿ ಭದ್ರತೆ ಮತ್ತು ಹೈಟೆಕ್ ಸಿಸಿಟಿವಿ ಕಣ್ಗಾವಲು
ದೇವಾಲಯಗಳಲ್ಲಿನ ಭದ್ರತೆಯನ್ನು ತಾಂತ್ರಿಕವಾಗಿ ಬಲಪಡಿಸಲು ಹಲವು ಕ್ರಮಗಳನ್ನು ಅಳವಡಿಸಲಾಗುತ್ತಿದೆ:
- ಸುಧಾರಿತ ವೆಬ್ ಕ್ಯಾಮೆರಾಗಳು: ಹುಂಡಿಗಳು ನಾಲ್ಕೂ ದಿಕ್ಕುಗಳಿಂದ ಸ್ಪಷ್ಟವಾಗಿ ಕಾಣಿಸುವಂತೆ ಅತ್ಯಾಧುನಿಕ ಕ್ಯಾಮೆರಾಗಳನ್ನು ಅಳವಡಿಸಬೇಕು. ಕರ್ಪೂರದ ಹೊಗೆಯಿಂದ ಲೆನ್ಸ್ ಮಸುಕಾಗದಂತಹ ಮತ್ತು ಧ್ವಂಸಗೊಳಿಸಲು ಸಾಧ್ಯವಿಲ್ಲದ ಕ್ಯಾಮೆರಾಗಳನ್ನೇ ಬಳಸಬೇಕು.
- ಕೇಂದ್ರೀಕೃತ ಲೈವ್ ಫೀಡ್: ಧಾರ್ಮಿಕ ದತ್ತಿ ಇಲಾಖೆಯ ಕೇಂದ್ರ ಕಚೇರಿಯ ವಿಶೇಷ ಸರ್ವರ್ ಮೂಲಕ ಎಲ್ಲ ದೇವಸ್ಥಾನಗಳ ಮೇಲ್ವಿಚಾರಣೆ ನಡೆಯಲಿದೆ.
- ಪೊಲೀಸ್ ಸಂಪರ್ಕ: ಸುರಕ್ಷತೆಯ ದೃಷ್ಟಿಯಿಂದ ಈ ಸಿಸಿಟಿವಿಗಳ ನೇರ ಸಂಪರ್ಕವನ್ನು (Live Feed) ಜಿಲ್ಲಾಧಿಕಾರಿಗಳು, ಎಸ್‌ಪಿ ಹಾಗೂ ಸ್ಥಳೀಯ ಪೊಲೀಸ್ ಠಾಣೆಗಳ ಡ್ಯಾಶ್‌ಬೋರ್ಡ್‌ಗಳಿಗೆ ಕಲ್ಪಿಸಲಾಗುತ್ತದೆ.
2. ಕ್ಯುಆರ್ (QR) ಕೋಡ್ ಸುರಕ್ಷತೆ ಮತ್ತು ಡಿಜಿಟಲ್ ಪಾವತಿ
ನಗದು ರಹಿತ ವ್ಯವಸ್ಥೆಯನ್ನು ಉತ್ತೇಜಿಸುವ ಜೊತೆಗೆ ವಂಚನೆ ತಡೆಯಲು ಬಿಗಿ ಕ್ರಮ ಕೈಗೊಳ್ಳಲಾಗಿದೆ:
- ದುರುಪಯೋಗಕ್ಕೆ ತಡೆ: ಹುಂಡಿಗಳ ಬಳಿ ಇರುವ ಕ್ಯುಆರ್ ಕೋಡ್‌ಗಳ ಮೇಲೆ ಕಿಡಿಗೇಡಿಗಳು ನಕಲಿ ಕೋಡ್ ಅಂಟಿಸದಂತೆ ಅಧಿಕಾರಿಗಳು ನಿಯಮಿತವಾಗಿ ಪರಿಶೀಲಿಸಬೇಕು.
- ಖಾತೆಗಳ ಸಂಯೋಜನೆ: ಯುಪಿಐ, ಭೀಮ್ ಹಾಗೂ ಕ್ಯುಆರ್ ಕೋಡ್ ಮೂಲಕ ಬರುವ ದೇಣಿಗೆಯನ್ನು ನೇರವಾಗಿ ದೇವಸ್ಥಾನದ ಅಧಿಕೃತ ಬ್ಯಾಂಕ್ ಖಾತೆಗೆ ಲಿಂಕ್ ಮಾಡಬೇಕು ಮತ್ತು ಇದನ್ನು ದೇವಸ್ಥಾನದ ಲೆಕ್ಕಪತ್ರದೊಂದಿಗೆ ಸಂಯೋಜಿಸಬೇಕು.
3. ಪಾರದರ್ಶಕ ಹುಂಡಿ ಎಣಿಕೆ ಪ್ರಕ್ರಿಯೆ
ಹುಂಡಿ ಹಣದ ಎಣಿಕೆಯಲ್ಲಿ ಯಾವುದೇ ಅಪಸ್ವರ ಬಾರದಂತೆ ಸಂಪೂರ್ಣ ಪಾರದರ್ಶಕತೆ ಕಾಯ್ದುಕೊಳ್ಳಲು ಸೂಚಿಸಲಾಗಿದೆ:
- ನಿಗದಿತ ಕ್ಯಾಲೆಂಡರ್: ಹುಂಡಿ ಎಣಿಕೆಗಾಗಿಯೇ ಪ್ರತ್ಯೇಕ ದಿನಗಳನ್ನು ನಿಗದಿಪಡಿಸಬೇಕು. ಹೆಚ್ಚು ಆದಾಯ ಬರುವ ದೇವಸ್ಥಾನಗಳಲ್ಲಿ ವಾರಕ್ಕೊಮ್ಮೆ ಮತ್ತು ಸಾಧಾರಣ ಆದಾಯವಿರುವೆಡೆ ಎರಡು ವಾರಕ್ಕೊಮ್ಮೆ ತಹಸೀಲ್ದಾರ್ ನೇತೃತ್ವದಲ್ಲೇ ಎಣಿಕೆ ನಡೆಯಬೇಕು.
- ತಂತ್ರಜ್ಞಾನದ ಬಳಕೆ: ಎಣಿಕೆ ಕೊಠಡಿ ಪ್ರವೇಶಿಸುವ ಸಿಬ್ಬಂದಿಯ ಗುರುತಿಗೆ ‘ಫೇಸ್ ರೆಕಗ್ನಿಷನ್’ (ಮುಖ ಗುರುತಿಸುವಿಕೆ) ತಂತ್ರಜ್ಞಾನ ಬಳಸಬೇಕು. ಅಲ್ಲದೆ, ಕೊಠಡಿ ಪ್ರವೇಶಿಸುವ ಮುನ್ನ ಸಿಬ್ಬಂದಿ ತಮ್ಮ ಬಳಿ ಇರುವ ನಗದನ್ನು ಘೋಷಿಸುವುದು ಕಡ್ಡಾಯ.
- ಸಂಪೂರ್ಣ ಚಿತ್ರೀಕರಣ: ಹುಂಡಿ ತರುವುದರಿಂದ ಹಿಡಿದು ಹಣ ಎಣಿಸಿ ಬ್ಯಾಂಕ್‌ಗೆ ಒಪ್ಪಿಸುವವರೆಗಿನ ಇಡೀ ಪ್ರಕ್ರಿಯೆಯನ್ನು ಸಮಯ ಮತ್ತು ದಿನಾಂಕ ನಮೂದಾಗುವಂತೆ ವಿಡಿಯೋ ಚಿತ್ರೀಕರಣ ಮಾಡಬೇಕು.
- ಖಾಸಗಿಯವರಿಗೆ ನಿಷೇಧ: ಎಣಿಕೆ ಕಾರ್ಯಕ್ಕೆ ಸಾರ್ವಜನಿಕರನ್ನು ಬಳಸುವಂತಿಲ್ಲ. ಕೇವಲ ಗೃಹರಕ್ಷಕರು, ಬ್ಯಾಂಕ್ ನೌಕರರು ಅಥವಾ ಸರ್ಕಾರಿ ಸಿಬ್ಬಂದಿಯನ್ನು ಮಾತ್ರ ನಿಯೋಜಿಸಬೇಕು.
4. ಉಸ್ತುವಾರಿ ಸಮಿತಿ ಮತ್ತು ಜಂಟಿ ತಪಾಸಣೆ
ನಿಯಮಗಳು ಕಟ್ಟುನಿಟ್ಟಾಗಿ ಪಾಲನೆಯಾಗುತ್ತಿವೆಯೇ ಎಂಬುದನ್ನು ಖಚಿತಪಡಿಸಿಕೊಳ್ಳಲು ಉನ್ನತ ಮಟ್ಟದ ಸಮಿತಿಗಳನ್ನು ರಚಿಸಲಾಗಿದೆ:
- ಜಿಲ್ಲಾ ಮಟ್ಟದ ಸಮಿತಿ: ಜಿಲ್ಲಾಧಿಕಾರಿಗಳ (DC) ಅಧ್ಯಕ್ಷತೆಯಲ್ಲಿ ಎಸ್‌ಪಿ, ಮುಜರಾಯಿ ಅಧಿಕಾರಿಗಳು ಮತ್ತು ಅಗ್ನಿಶಾಮಕ ಅಧಿಕಾರಿಗಳನ್ನೊಳಗೊಂಡ ಸಮಿತಿ ತಿಂಗಳಿಗೊಮ್ಮೆ ಸಭೆ ನಡೆಸಿ ಅಗ್ನಿ ಸುರಕ್ಷತೆ ಹಾಗೂ ಸಿಸಿಟಿವಿ ಸ್ಥಿತಿಗತಿ ಪರಿಶೀಲಿಸಲಿದೆ.
- ನಿಯಮಿತ ಸ್ಥಳ ಭೇಟಿ: ಸ್ಥಳೀಯ ಅಧಿಕಾರಿಗಳು 15 ದಿನಗಳಿಗೊಮ್ಮೆ ಜಂಟಿ ತಪಾಸಣೆ ನಡೆಸಬೇಕು. ಅಲ್ಲದೆ, ಪ್ರತಿ 3 ತಿಂಗಳಿಗೊಮ್ಮೆ ಜಿಲ್ಲಾಧಿಕಾರಿಗಳು (DC), ಜಿಲ್ಲಾ ಪೊಲೀಸ್ ಅಧೀಕ್ಷಕರು (SP) ಮತ್ತು ಸಿಇಒ ಅವರು ಪ್ರಮುಖ ದೇವಸ್ಥಾನಗಳಿಗೆ ಕಡ್ಡಾಯ ಭೇಟಿ ನೀಡಿ ವ್ಯವಸ್ಥೆಯನ್ನು ಪರಿಶೀಲಿಸಬೇಕು.
- ವರದಿ ಸಲ್ಲಿಕೆ: ಜಿಲ್ಲಾಧಿಕಾರಿಗಳು ಪ್ರತಿ ತಿಂಗಳು ಪ್ರಗತಿ ಮತ್ತು ನ್ಯೂನತೆಗಳ ಕುರಿತು ಕ್ರೋಢೀಕೃತ ಮಾಸಿಕ ವರದಿಯನ್ನು ಸರ್ಕಾರಕ್ಕೆ ಹಾಗೂ ಒಂದು ಪ್ರತಿಯನ್ನು ಡಿಜಿ-ಐಜಿಪಿ ಅವರಿಗೆ ಸಲ್ಲಿಸಬೇಕಾಗುತ್ತದೆ.
ಇದನ್ನೂ ಓದಿ: ಕೊಲ್ಲೂರು ಮೂಕಾಂಬಿಕಾ ದೇವಸ್ಥಾನಕ್ಕೆ ಆನೆ ದಾನ: ಕೇರಳಕ್ಕೆ ಕರ್ನಾಟಕದ ಪ್ರಸ್ತಾವನೆ
