ಅಮೇಠಿ: ಉತ್ತರ ಪ್ರದೇಶದಲ್ಲಿ ತ್ರಿಸ್ಟರ ಪಂಚಾಯತ್ ಚುನಾವಣೆಯ ಅಂತಿಮ ಮತದಾರರ ಪಟ್ಟಿ ಬಿಡುಗಡೆಯಾಗಿದ್ದು, ಇದರಲ್ಲಿ ಮಾಜಿ ಕೇಂದ್ರ ಸಚಿವೆ ಹಾಗೂ ಭಾರತೀಯ ಜನತಾ ಪಕ್ಷದ ಹಿರಿಯ ನಾಯಕಿ ಸ್ಮೃತಿ ಇರಾನಿ (Smriti Irani) ಅವರ ಹೆಸರೇ ನಾಪತ್ತೆಯಾಗಿರುವುದು ಭಾರಿ ಸಂಚಲನ ಮೂಡಿಸಿದೆ. ಅಮೇಠಿಯ ಮಾಜಿ ಸಂಸದೆಯೂ ಆಗಿರುವ ಸ್ಮೃತಿ ಇರಾನಿ ಅವರ ಹೆಸರು ವೋಟರ್ ಲಿಸ್ಟ್‌ನಿಂದ ಕೈಬಿಟ್ಟು ಹೋಗಿರುವುದು ತಿಳಿಯುತ್ತಿದ್ದಂತೆಯೇ ರಾಜಕೀಯ ಮತ್ತು ಆಡಳಿತ ವಲಯದಲ್ಲಿ ಹಠಾತ್ ಗೊಂದಲ ಹಾಗೂ ಆತಂಕ ನಿರ್ಮಾಣವಾಗಿದೆ. ಈ ಗಂಭೀರ ಲೋಪದ ವಿರುದ್ಧ ಬಿಜೆಪಿ ಜಿಲ್ಲಾಧ್ಯಕ್ಷ ಸುಧಾಂಶು ಶುಕ್ಲಾ ಅವರು ಉಪವಿಭಾಗೀಯ ದಂಡಾಧಿಕಾರಿಗೆ (SDM) ಅಧಿಕೃತವಾಗಿ ದೂರು ದಾಖಲಿಸಿದ್ದು, ಇದರ ಬೆನ್ನಲ್ಲೇ ಒಟ್ಟಾರೆ ಮತದಾರರ ಪಟ್ಟಿ ಪರಿಷ್ಕರಣೆಯಲ್ಲಿ ಭಾರಿ ಅಕ್ರಮ ಮತ್ತು ನಿರ್ಲಕ್ಷ್ಯ ನಡೆದಿದೆ ಎಂಬ ಆರೋಪಗಳು ಕೇಳಿಬರುತ್ತಿವೆ.
ತನಿಖೆಗೆ ಬಿಜೆಪಿ ಆಗ್ರಹ
ಸ್ಮೃತಿ ಇರಾನಿ ಅವರು ಅಮೇಠಿ ಲೋಕಸಭಾ ಕ್ಷೇತ್ರದಿಂದ ಸಂಸದೆಯಾಗಿದ್ದ ಅವಧಿಯಲ್ಲಿ ಗೌರಿಗಂಜ್ ತಹಸಿಲ್ ವ್ಯಾಪ್ತಿಯ ಮೇದನ್ ಮವಾಯಿ ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ತಮ್ಮ ಸ್ವಂತ ನಿವಾಸವನ್ನು ನಿರ್ಮಿಸಿದ್ದರು. ಈ ವಸತಿ ದಾಖಲೆಗಳ ಆಧಾರದ ಮೇಲೆಯೇ ಅವರು ಇಲ್ಲಿನ ಸ್ಥಳೀಯ ಮತದಾರರಾಗಿದ್ದರು. ಈ ಕುರಿತು ಪ್ರತಿಕ್ರಿಯಿಸಿರುವ ಮೇದನ್ ಮವಾಯಿ ಗ್ರಾಮ ಪಂಚಾಯತ್‌ನ ಪ್ರಧಾನ ಪ್ರತಿನಿಧಿ ತೀರ್ಥರಾಜ್ ಮಿಶ್ರಾ, ಸ್ಮೃತಿ ಇರಾನಿ ಅವರ ಹೆಸರನ್ನು ಪಂಚಾಯತ್ ಮತದಾರರ ಪಟ್ಟಿಯಲ್ಲಿ ಸೇರಿಸಲು ಬೇಕಾದ ಎಲ್ಲಾ ಅಗತ್ಯ ಮತ್ತು ಅಧಿಕೃತ ದಾಖಲೆಗಳನ್ನು ಸಮಯಕ್ಕೆ ಸರಿಯಾಗಿಯೇ ಬೂತ್ ಮಟ್ಟದ ಅಧಿಕಾರಿಗಳಿಗೆ (BLO) ತಲುಪಿಸಲಾಗಿತ್ತು ಎಂದು ಸ್ಪಷ್ಟಪಡಿಸಿದ್ದಾರೆ. ಆದರೂ ಅಂತಿಮ ಪಟ್ಟಿಯಲ್ಲಿ ಅವರ ಹೆಸರು ಇಲ್ಲದಿರುವುದು ಆಡಳಿತಶಾಹಿಯ ಸಂಪೂರ್ಣ ನಿರ್ಲಕ್ಷ್ಯವಾಗಿದ್ದು, ಈ ಬಗ್ಗೆ ಉನ್ನತ ಮಟ್ಟದ ತನಿಖೆಯಾಗಬೇಕು ಎಂದು ಅವರು ಒತ್ತಾಯಿಸಿದ್ದಾರೆ.
ಇದೇ ವೇಳೆ ಮತದಾರರ ಪಟ್ಟಿಯಲ್ಲಿ ನಡೆದಿರುವ ಮತ್ತಷ್ಟು ಯಡವಟ್ಟುಗಳನ್ನು ಬಯಲಿಗೆಳೆದಿರುವ ತೀರ್ಥರಾಜ್ ಮಿಶ್ರಾ, ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ಈಗಾಗಲೇ ಮೃತಪಟ್ಟಿರುವ ಅನೇಕ ಜನರ ಹೆಸರುಗಳು ಇನ್ನೂ ಮತದಾರರ ಪಟ್ಟಿಯಲ್ಲಿ ಜೀವಂತವಾಗಿವೆ ಎಂದು ಗಂಭೀರ ಆರೋಪ ಮಾಡಿದ್ದಾರೆ. ಚಂದ್ರಭಾನ್ ಸಿಂಗ್, ದೇವಿಬಕ್ಷ್, ಶಿವಮೋಹನ್, ಮಾಲ್ತಿ ದೇವಿ ಸೇರಿದಂತೆ ಹಲವರು ನಿಧನರಾಗಿ ವರ್ಷಗಳೇ ಕಳೆದಿದ್ದರೂ ಮತ್ತು ಅದಕ್ಕೆ ಸಂಬಂಧಿಸಿದ ಮರಣ ದಾಖಲೆಗಳನ್ನು ನೀಡಿದ್ದರೂ ಅವರ ಹೆಸರುಗಳನ್ನು ಪಟ್ಟಿಯಿಂದ ತೆಗೆದುಹಾಕಲಾಗಿಲ್ಲ. ಇಷ್ಟೇ ಅಲ್ಲದೆ ಶಾಹಗಂಜ್ ಬ್ಲಾಕ್‌ನ ಪನಿಯಾರ್ ಗ್ರಾಮ ಪಂಚಾಯತ್‌ನಲ್ಲಿಯೂ ಸಹ ಅಂತಿಮ ಪಟ್ಟಿಯಿಂದ ಬರೋಬ್ಬರಿ 870 ಕ್ಕೂ ಹೆಚ್ಚು ಅರ್ಹ ಮತದಾರರ ಹೆಸರುಗಳು ನಾಪತ್ತೆಯಾಗಿದ್ದು, ಸ್ಥಳೀಯ ಜನರಲ್ಲಿ ಭಾರಿ ಆಕ್ರೋಶಕ್ಕೆ ಕಾರಣವಾಗಿದೆ.
ಈ ಇಡೀ ವಿವಾದದ ಕುರಿತು ವಿವರಣೆ ನೀಡಿರುವ ಗೌರಿಗಂಜ್ ಎಸ್‌ಡಿಎಂ ಪ್ರೀತಿ ತಿವಾರಿ ಅವರು, ಸ್ಮೃತಿ ಇರಾನಿ ಅವರ ಹೆಸರು ಪ್ರಸ್ತುತ ವಿಧಾನಸಭಾ ಮತದಾರರ ಪಟ್ಟಿಯಲ್ಲಿ ವಿಶೇಷ ಸಂಕ್ಷಿಪ್ತ ಪರಿಷ್ಕರಣೆಯ (SIR) ಮೂಲಕ ನೋಂದಾಯಿತವಾಗಿದೆ ಎಂದು ತಿಳಿಸಿದ್ದಾರೆ. ಆದರೆ ಪಂಚಾಯತ್ ಚುನಾವಣೆಯ ಮತದಾರರ ಪಟ್ಟಿಗೆ ಅವರ ಹೆಸರು ಸೇರಿಸಲು ಬಿಎಲ್‌ಒ ಅಧಿಕಾರಿಗಳು ಸಲ್ಲಿಸಿದ್ದ ಅರ್ಜಿ ಮತ್ತು ದಾಖಲೆಗಳಲ್ಲಿ ಸ್ವತಃ ಸ್ಮೃತಿ ಇರಾನಿ ಅವರ ಸಹ ಇರಲಿಲ್ಲ. ಈ ತಾಂತ್ರಿಕ ಕಾರಣದಿಂದಾಗಿಯೇ ಅವರ ಅರ್ಜಿಯನ್ನು ತಿರಸ್ಕರಿಸಲಾಗಿತ್ತು ಎಂದು ಸ್ಪಷ್ಟನೆ ನೀಡಿದ್ದಾರೆ. ಸದ್ಯ ಈ ಬಗ್ಗೆ ಸಂಬಂಧಪಟ್ಟವರಿಗೆ ಮಾಹಿತಿ ನೀಡಲಾಗಿದ್ದು, ಇರಾನಿ ಅವರ ಸಹಿ ಇರುವ ಹೊಸ ದಾಖಲೆಗಳು ಸಿಕ್ಕ ತಕ್ಷಣವೇ ಮುಂಬರುವ ಪೂರಕ ಮತದಾರರ ಪಟ್ಟಿಯ (Supplementary List) ಮೂಲಕ ಅವರ ಹೆಸರನ್ನು ಸೇರ್ಪಡೆ ಮಾಡಲಾಗುವುದು ಹಾಗೂ ಮೃತಪಟ್ಟವರ ಹೆಸರುಗಳನ್ನು ತೆಗೆದುಹಾಕಲು ತನಿಖೆ ನಡೆಸಲಾಗುವುದು ಎಂದು ಭರವಸೆ ನೀಡಿದ್ದಾರೆ. ಪಂಚಾಯತ್ ಚುನಾವಣೆಯ ಹೊಸ್ತಿಲಲ್ಲಿ ಎದುರಾಗಿರುವ ಈ ಮತದಾರರ ಪಟ್ಟಿಯ ಲೋಪದೋಷಗಳು ಮುಂಬರುವ ಮುಕ್ತ ಮತ್ತು ನ್ಯಾಯಸಮ್ಮತ ಚುನಾವಣೆಯ ಸಿದ್ಧತೆಗಳ ಮೇಲೆಯೇ ಸಾರ್ವಜನಿಕರು ಪ್ರಶ್ನೆ ಎತ್ತುವಂತೆ ಮಾಡಿದೆ.
