ಗುವಾಹಟಿ: ಅಸ್ಸಾಂ ಮುಖ್ಯಮಂತ್ರಿಯಾಗಿ ಹಿಮಂತ ಬಿಸ್ವಾ ಶರ್ಮಾ (Assam) ಅವರು ಎರಡನೇ ಬಾರಿಗೆ ಅಧಿಕಾರ ವಹಿಸಿಕೊಳ್ಳುವ ಐತಿಹಾಸಿಕ ಕ್ಷಣದಲ್ಲಿ ಭದ್ರತಾ ಲೋಪದ ಆಘಾತಕಾರಿ ಘಟನೆಯೊಂದು ಸಂಭವಿಸಿದೆ. ಗುವಾಹಟಿಯ ಖಾನಪಾರದಲ್ಲಿ ನಡೆದ ಅದ್ಧೂರಿ ಪ್ರಮಾಣ ವಚನ ಸಮಾರಂಭದ ವೇಳೆ, ಜೀವಂತ ಗುಂಡುಗಳನ್ನು ಹೊತ್ತು ತಂದಿದ್ದ ವ್ಯಕ್ತಿಯೊಬ್ಬನನ್ನು ಭದ್ರತಾ ಸಿಬ್ಬಂದಿ ಸೆರೆಹಿಡಿದಿದ್ದಾರೆ.
ತಪಾಸಣೆ ವೇಳೆ ಬಲೆಗೆ ಬಿದ್ದ ಆರೋಪಿ ಪಶುವೈದ್ಯಕೀಯ ಕಾಲೇಜು ಮೈದಾನದಲ್ಲಿ ಸಮಾರಂಭ ನಡೆಯುತ್ತಿದ್ದುದರಿಂದ ಪ್ರವೇಶ ದ್ವಾರದಲ್ಲಿ ಬಿಗಿ ಪೊಲೀಸ್ ಬಂದೋಬಸ್ತ್ ಏರ್ಪಡಿಸಲಾಗಿತ್ತು. ಸ್ಕ್ರೀನಿಂಗ್ ನಡೆಸುತ್ತಿದ್ದಾಗ ವ್ಯಕ್ತಿಯೊಬ್ಬನ ಬಳಿ ಮದ್ದುಗುಂಡುಗಳು ಇರುವುದು ಪತ್ತೆಯಾಗಿದೆ. ತಕ್ಷಣ ಆತನನ್ನು ವಶಕ್ಕೆ ಪಡೆದ ಪೊಲೀಸರು ಬಸಿಷ್ಠ ಪೊಲೀಸ್ ಠಾಣೆಗೆ ಕರೆದೊಯ್ದು ತನಿಖೆ ನಡೆಸುತ್ತಿದ್ದಾರೆ. ಆತನ ಬಳಿ ಗುಂಡುಗಳು ಸಿಕ್ಕಿವೆಯೇ ಹೊರತು ಯಾವುದೇ ಮಾರಕ ಆಯುಧ ಪತ್ತೆಯಾಗಿಲ್ಲ ಎಂದು ಮೂಲಗಳು ತಿಳಿಸಿವೆ.
ವಿವಿಐಪಿಗಳ ಉಪಸ್ಥಿತಿಯಲ್ಲಿ ಆತಂಕ ಪ್ರಧಾನಿ ನರೇಂದ್ರ ಮೋದಿ, ಅಮಿತ್ ಶಾ ಮತ್ತು ರಾಜನಾಥ್ ಸಿಂಗ್ ಅವರಂತಹ ಉನ್ನತ ನಾಯಕರು ವೇದಿಕೆಯ ಮೇಲಿರುವಾಗಲೇ ಇಂತಹ ಘಟನೆ ನಡೆದಿರುವುದು ಭದ್ರತಾ ವ್ಯವಸ್ಥೆಯ ಬಗ್ಗೆ ಕಳವಳ ಮೂಡಿಸಿದೆ. ರಾಜ್ಯಪಾಲ ಲಕ್ಷ್ಮಣ್ ಪ್ರಸಾದ್ ಆಚಾರ್ಯ ಅವರು ಹಿಮಂತ ಬಿಸ್ವಾ ಶರ್ಮಾ ಅವರಿಗೆ ಪ್ರಮಾಣ ವಚನ ಬೋಧಿಸಿದರು. ಈ ಸಂಭ್ರಮದ ನಡುವೆಯೇ ಬಂಧಿತನ ಉದ್ದೇಶವೇನಿತ್ತು ಎಂಬ ಬಗ್ಗೆ ತೀವ್ರ ವಿಚಾರಣೆ ನಡೆಯುತ್ತಿದೆ.
ಜಿಲೆಟಿನ್ ಕಡ್ಡಿ ಪತ್ತೆ: ಎನ್‌ಐಎ ತನಿಖೆ ಚುರುಕು ಇನ್ನೊಂದೆಡೆ, ಪ್ರಧಾನಿ ನರೇಂದ್ರ ಮೋದಿ ಅವರು ಸಂಚರಿಸಬೇಕಿದ್ದ ಮಾರ್ಗದಲ್ಲಿ ಜಿಲೆಟಿನ್ ಕಡ್ಡಿಗಳು ಪತ್ತೆಯಾದ ಪ್ರಕರಣವನ್ನು ಕೇಂದ್ರ ಸರ್ಕಾರ ಗಂಭೀರವಾಗಿ ಪರಿಗಣಿಸಿದೆ. ರಾಷ್ಟ್ರೀಯ ತನಿಖಾ ಸಂಸ್ಥೆ (NIA) ಮತ್ತು ಗುಪ್ತಚರ ಇಲಾಖೆ (IB) ಅಧಿಕಾರಿಗಳು ವಡೇರಹಳ್ಳಿ ಗೇಟ್ ಸಮೀಪದ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಈ ಸ್ಫೋಟಕಗಳನ್ನು ಇಟ್ಟವರು ಯಾರು ಎಂಬ ಬಗ್ಗೆ ಇನ್ನೂ ಸುಳಿವು ಸಿಕ್ಕಿಲ್ಲವಾದರೂ, ಎನ್‌ಐಎ ಡಿವೈಎಸ್‌ಪಿ ನೇತೃತ್ವದ ತಂಡವು ತನಿಖೆಯನ್ನು ತೀವ್ರಗೊಳಿಸಿದೆ.
ಸತತವಾಗಿ ನಡೆಯುತ್ತಿರುವ ಈ ಭದ್ರತಾ ಲೋಪದ ಘಟನೆಗಳು ಕೇಂದ್ರ ಮತ್ತು ರಾಜ್ಯದ ಭದ್ರತಾ ಏಜೆನ್ಸಿಗಳಲ್ಲಿ ತಲ್ಲಣ ಮೂಡಿಸಿದ್ದು, ಪ್ರಧಾನಿಯವರ ಭದ್ರತೆಗೆ ಸಂಬಂಧಿಸಿದಂತೆ ಹೆಚ್ಚಿನ ಮುನ್ನೆಚ್ಚರಿಕೆ ವಹಿಸಲಾಗುತ್ತಿದೆ. ಒಟ್ಟಿನಲ್ಲಿ ಅಸ್ಸಾಂನಲ್ಲಿ ಹೊಸ ಸರ್ಕಾರದ ಪದಗ್ರಹಣದ ಸಂಭ್ರಮದ ನಡುವೆಯೇ ಈ ಬೆಳವಣಿಗೆಗಳು ಆತಂಕದ ಛಾಯೆ ಮೂಡಿಸಿವೆ.
