ಬೆಂಗಳೂರು: ಕನ್ನಡ ಚಿತ್ರರಂಗದ ಇತಿಹಾಸದಲ್ಲಿ ಸುಂದರ ನಟನೆಯ ಮೂಲಕ ಕನ್ನಡಿಗರ ಮನಗೆದ್ದಿರುವ ಹಿರಿಯ ನಟಿ ಅಂಬಿಕಾ, (Ambika) ಇತ್ತೀಚಿನ ಸಂದರ್ಶನವೊಂದರಲ್ಲಿ ಡಾ. ರಾಜ್‌ಕುಮಾರ್ ಅವರೊಂದಿಗಿನ ನೆನಪುಗಳನ್ನು ಮೆಲುಕು ಹಾಕಿದ್ದಾರೆ. ಅಣ್ಣಾವ್ರು ತಮಗೆ ಕೇವಲ ಸಹನಟನಾಗಿ ಮಾತ್ರವಲ್ಲದೆ, ಕನ್ನಡ ಭಾಷೆ ಮತ್ತು ಸಂಸ್ಕಾರವನ್ನು ಕಲಿಸಿದ ಗುರುವಿನಂತೆ ಮಾರ್ಗದರ್ಶನ ನೀಡಿದ್ದರು ಎಂದು ಅವರು ಸ್ಮರಿಸಿದ್ದಾರೆ.
ಅಂಬಿಕಾ ಮೂಲತಃ ಮಲಯಾಳಂ ಮೂಲದವರಾದರೂ, ರಾಜ್‌ಕುಮಾರ್ ಅವರೊಂದಿಗೆ ನಟಿಸಿದ ‘ಚಲಿಸುವ ಮೋಡಗಳು’ ಸೇರಿದಂತೆ ಹಲವು ಚಿತ್ರಗಳು ಅವರಿಗೆ ದೊಡ್ಡ ಮಟ್ಟದ ಜನಪ್ರಿಯತೆ ತಂದುಕೊಟ್ಟವು. “ನನ್ನ ವೃತ್ತಿಜೀವನಕ್ಕೆ ಹೆಚ್ಚಿನ ಶಕ್ತಿ ನೀಡಿದ್ದು ಕನ್ನಡ ಚಿತ್ರರಂಗ. ನಾನು ಶೇ. 80ರಷ್ಟು ಕನ್ನಡ ಕಲಿತಿದ್ದೇ ಡಾ. ರಾಜ್ ಅವರಿಂದ” ಎಂದು ಅವರು ಹೆಮ್ಮೆಯಿಂದ ಹೇಳಿಕೊಂಡಿದ್ದಾರೆ.
ಭಾಷೆಯ ಸೌಂದರ್ಯಕ್ಕೆ ಅಣ್ಣಾವ್ರ ಸೂತ್ರ: ಭಾಷೆಯನ್ನು ಕೇವಲ ಸಂವಹನಕ್ಕಾಗಿ ಬಳಸಬಾರದು, ಅದರಲ್ಲಿ ಒಂದು ರೀತಿಯ ಗೌರವ ಮತ್ತು ಮಾಧುರ್ಯವಿರಬೇಕು ಎಂಬುದು ರಾಜ್‌ಕುಮಾರ್ ಅವರ ನಿಲುವಾಗಿತ್ತು. “ಯಾರು ಬೇಕಾದರೂ ಮಾತನಾಡಬಹುದು, ಆದರೆ ಆಡುವ ಮಾತು ಸಭ್ಯವಾಗಿರಬೇಕು ಎಂದು ಅಣ್ಣಾವ್ರು ಹೇಳುತ್ತಿದ್ದರು. ನಾವು ಬಳಸುವ ಪದಗಳು ಎದುರಿಗಿರುವ ವ್ಯಕ್ತಿಗೆ ಗೌರವ ನೀಡುವಂತಿರಬೇಕು ಎಂದು ಅವರು ನನಗೆ ಕಲಿಸಿಕೊಟ್ಟಿದ್ದರು” ಎಂದು ಅಂಬಿಕಾ ತಿಳಿಸಿದ್ದಾರೆ.
ಜೀವನಪರ್ಯಂತ ಪಾಲಿಸುತ್ತಿರುವ ಸಂಸ್ಕಾರ: ಅಣ್ಣಾವ್ರು ಹೇಳಿಕೊಟ್ಟ ಮತ್ತೊಂದು ಮುಖ್ಯ ಪಾಠವೆಂದರೆ ಏಕವಚನ ಬಳಸದಿರುವುದು. ಯಾರನ್ನೇ ಆಗಲಿ ‘ಏಯ್’ ಎನ್ನುವುದಕ್ಕಿಂತ ‘ಹೇಗಿದ್ದೀರಿ’ ಎಂದು ಮರ್ಯಾದೆಯಿಂದ ಕೇಳುವುದರಲ್ಲಿ ಇರುವ ವ್ಯತ್ಯಾಸವನ್ನು ರಾಜ್‌ಕುಮಾರ್ ಮನವರಿಕೆ ಮಾಡಿಕೊಟ್ಟಿದ್ದರು. “ನಾನು ಇಂದಿಗೂ ಯಾರನ್ನೂ ಏಕವಚನದಲ್ಲಿ ಸಂಬೋಧಿಸುವುದಿಲ್ಲ ಅಥವಾ ಅಸಭ್ಯ ಪದಗಳನ್ನು ಬಳಸುವುದಿಲ್ಲ. ಇದಕ್ಕೆ ಅಣ್ಣಾವ್ರು ಅಂದು ನೀಡಿದ ಸಂಸ್ಕಾರವೇ ಕಾರಣ” ಎಂದು ಅಂಬಿಕಾ ವಿವರಿಸಿದ್ದಾರೆ.
ಕನ್ನಡದ ಕುಲಕಂಠೀರವ ಎಂದೇ ಖ್ಯಾತರಾಗಿರುವ ಡಾ. ರಾಜ್ ಅವರ ಸ್ಪಷ್ಟ ಉಚ್ಚಾರಣೆ ಮತ್ತು ಭಾಷಾ ಪ್ರೇಮವು ಇಂದಿನ ತಲೆಮಾರಿನ ನಟರಿಗೂ ಮಾದರಿಯಾಗಿದೆ. ಅಂಬಿಕಾ ಅವರ ಈ ಮನದಾಳದ ಮಾತುಗಳು ಅಣ್ಣಾವ್ರು ಕೇವಲ ನಟರಾಗಿ ಮಾತ್ರವಲ್ಲದೆ, ಒಬ್ಬ ಮಹಾನ್ ವ್ಯಕ್ತಿಯಾಗಿ ಎಲ್ಲರ ಮೇಲೆ ಬೀರಿದ ಪ್ರಭಾವವನ್ನು ಮತ್ತೊಮ್ಮೆ ನೆನಪಿಸಿವೆ.
ಇದನ್ನೂ ಓದಿ: ಬಾಲಿವುಡ್‌ನಲ್ಲಿ ಸಾಯಿ ಪಲ್ಲವಿಗೆ ಹಿನ್ನಡೆ, ಮಹತ್ವದ ನಿರ್ಧಾರ ಮಾಡಿದ ರಾಮಾಯಣ ತಂಡ
