TOP NEWS

Bigg Boss: ಬಿಗ್ ಬಾಸ್ ಮನೆಯಲ್ಲಿ ಗಗನ್ ಚಿನ್ನಪ್ಪ ವರ್ತನೆಗೆ ನೆಟ್ಟಿಗರ ಆಕ್ರೋಶ: ಕ್ರಮಕ್ಕೆ ಒತ್ತಾಯ

Netizens Slam Bigg Boss Kannada Contestant Gagan Chinnappa Over Behaviour Tag Kichcha Sudeep and Colors Kannada

ಬೆಂಗಳೂರು: ಕಿರುತೆರೆಯ ಜನಪ್ರಿಯ ರಿಯಾಲಿಟಿ ಶೋ ‘ಬಿಗ್ ಬಾಸ್ ಕನ್ನಡ’ (Bigg Boss) ಮನೆಯಲ್ಲಿ ಸ್ಪರ್ಧಿ ಗಗನ್ ಚಿನ್ನಪ್ಪ ಅವರ ವರ್ತನೆ ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ತೀವ್ರ ಚರ್ಚೆ ಹಾಗೂ ಆಕ್ರೋಶಕ್ಕೆ ಕಾರಣವಾಗಿದೆ. ಸಹಸ್ಪರ್ಧಿಗಳು ಬಟ್ಟೆ ಬದಲಾಯಿಸುವ ಸ್ಥಳದ ಬಳಿ ಗಗನ್ ನಡೆದುಕೊಂಡಿರುವ ರೀತಿಗೆ ವೀಕ್ಷಕರು ಕಟುವಾಗಿ ಟೀಕಿಸುತ್ತಿದ್ದು, ಈ ಕುರಿತ ವಿಡಿಯೋ ತುಣುಕುಗಳು ‘ಎಕ್ಸ್’ (ಹಿಂದಿನ ಟ್ವಿಟರ್) ವೇದಿಕೆಯಲ್ಲಿ ಭಾರಿ ವೈರಲ್ ಆಗುತ್ತಿವೆ.

ಕದ್ದು ಕೇಳಿಸಿಕೊಳ್ಳುವುದೇ ದೊಡ್ಡ ತಪ್ಪಾಗಿರುವಾಗ, ಸಹಸ್ಪರ್ಧಿಗಳು ಡ್ರೆಸ್ ಚೇಂಜ್ ಮಾಡುವ ಸಂದರ್ಭದಲ್ಲಿ ಅಲ್ಲಿ ನಿಂತು ಏನು ಕದ್ದು ಕೇಳಿಸಿಕೊಳ್ಳುತ್ತಿದ್ದಾರೆ ಎಂದು ನೆಟ್ಟಿಗರು ಖಾರವಾಗಿ ಪ್ರಶ್ನಿಸಿದ್ದಾರೆ. ಗಗನ್ ಅವರ ಈ ವರ್ತನೆ ಅತ್ಯಂತ ಕೀಳು ಮಟ್ಟದ್ದಾಗಿದೆ ಎಂದು ಅಸಮಾಧಾನ ಹೊರಹಾಕಿರುವ ಪ್ರೇಕ್ಷಕರು, “ಚೀಪ್ ಗಗನ್” ಎಂಬ ಬರಹಗಳೊಂದಿಗೆ ತಮ್ಮ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.

ವಾಹಿನಿ ಹಾಗೂ ಕಿಚ್ಚ ಸುದೀಪ್‌ಗೆ (Bigg Boss) ವೀಕ್ಷಕರ ನೇರ ಪ್ರಶ್ನೆ

ವೈರಲ್ ವಿಡಿಯೋಗಳನ್ನು ಹಂಚಿಕೊಳ್ಳುತ್ತಿರುವ ನೆಟ್ಟಿಗರು, ಕಲರ್ಸ್ ಕನ್ನಡ ವಾಹಿನಿ ಮತ್ತು ಕಾರ್ಯಕ್ರಮದ ನಿರೂಪಕ ಕಿಚ್ಚ ಸುದೀಪ್ ಅವರನ್ನು ನೇರವಾಗಿ ಟ್ಯಾಗ್ ಮಾಡಿ ಕ್ರಮಕ್ಕೆ ಒತ್ತಾಯಿಸುತ್ತಿದ್ದಾರೆ. “ಹೇ ಕಲರ್ಸ್ ಕನ್ನಡ, ನಿಮ್ಮ ಮಗ ಏನು ಮಾಡುತ್ತಿದ್ದಾನೆ ನೋಡಿ! ಕಿಚ್ಚ ಸುದೀಪ್ ಅವರೇ, ನೀವು ಇದನ್ನು ಖಂಡಿತ ಗಮನಿಸುತ್ತೀರಿ ಎಂದು ಭಾವಿಸುತ್ತೇವೆ” ಎಂದು ಬಳಕೆದಾರರೊಬ್ಬರು ಪೋಸ್ಟ್ ಮಾಡಿದ್ದಾರೆ.

ಮನೆಯ ಕ್ಯಾಪ್ಟನ್ ಅಥವಾ ವಿಐಪಿ ಎಂಬ ಕಾರಣಕ್ಕೆ ಇಂತಹ ವರ್ತನೆ ತೋರಲು ಗಗನ್ ಅವರಿಗೆ ಯಾರು ಅಧಿಕಾರ ಕೊಟ್ಟರು ಎಂದು ಹಲವರು ಪ್ರಶ್ನಿಸಿದ್ದಾರೆ. “ಕದಿಯುವುದು ಅಥವಾ ಕದ್ದು ಕೇಳಿಸಿಕೊಳ್ಳುವುದು ತಪ್ಪು ನಿಜ, ಆದರೆ ಬಟ್ಟೆ ಬದಲಾಯಿಸುವ ವೇಳೆ ಅಲ್ಲಿ ಏನು ಮಾಡುತ್ತಿದ್ದಾರೆ? ಮನರಂಜನೆಯ ಹೆಸರಿನಲ್ಲಿ ಮತ್ತೊಬ್ಬರ ಖಾಸಗಿತನ ಮತ್ತು ವೈಯಕ್ತಿಕ ಗೌಪ್ಯತೆಗೆ ಧಕ್ಕೆ ತರುವುದು ಎಷ್ಟು ಸರಿ?” ಎಂದು ವೀಕ್ಷಕರು ಕಮೆಂಟ್‌ಗಳ ಮೂಲಕ ವಾಹಿನಿಯ ಮ್ಯಾನೇಜ್‌ಮೆಂಟ್ ಹಾಗೂ ಬಿಗ್ ಬಾಸ್ ತಂಡದ ಉತ್ತರಕ್ಕೆ ಆಗ್ರಹಿಸಿದ್ದಾರೆ.

ವಾರಾಂತ್ಯದ ಪಂಚಾಯಿತಿಯತ್ತ ಎಲ್ಲರ ಚಿತ್ತ

ಬಿಗ್ ಬಾಸ್ ಮನೆಯೊಳಗಿನ ನಿಯಮಗಳು ಹಾಗೂ ಸ್ಪರ್ಧಿಗಳ ಖಾಸಗಿತನದ ವಿಚಾರವಾಗಿ ಸಾಮಾಜಿಕ ಜಾಲತಾಣಗಳಲ್ಲಿ ದೊಡ್ಡ ಮಟ್ಟದ ಅಭಿಪ್ರಾಯಗಳು ವ್ಯಕ್ತವಾಗುತ್ತಿವೆ. ತಪ್ಪು ನಡೆದಾಗಲೆಲ್ಲಾ ಖಡಕ್ ಆಗಿ ಎಚ್ಚರಿಕೆ ನೀಡುವ ನಿರೂಪಕ ಕಿಚ್ಚ ಸುದೀಪ್ ಅವರು, ಈ ವಾರಾಂತ್ಯದ ಪಂಚಾಯಿತಿಯಲ್ಲಿ ಗಗನ್ ಅವರ ಈ ವರ್ತನೆಯನ್ನು ಪ್ರಶ್ನಿಸಿ ಸರಿಯಾಗಿ ಕ್ಲಾಸ್ ತೆಗೆದುಕೊಳ್ಳುತ್ತಾರಾ ಎಂಬುದನ್ನು ನೋಡಲು ಪ್ರೇಕ್ಷಕರು ಕಾತರದಿಂದ ಕಾಯುತ್ತಿದ್ದಾರೆ.

ಇದನ್ನೂ ಓದಿ: ಸುದೀಪ್-ಪ್ರೇಮ್ ಹೊಸ ಸಿನಿಮಾಗೆ ಭವ್ಯ ಆರಂಭ: ಮುಹೂರ್ತ ಕಾರ್ಯಕ್ರಮಕ್ಕೆ ಸಿಎಂ ಡಿ.ಕೆ. ಶಿವಕುಮಾರ್ ಮುಖ್ಯ ಅತಿಥಿ

Leave a Reply

Your email address will not be published. Required fields are marked *