TOP NEWS

Pradeep Eshwar: ಚಿಕ್ಕಬಳ್ಳಾಪುರ ಕಾಂಗ್ರೆಸ್‌ನಲ್ಲಿ ಸ್ಫೋಟಗೊಂಡ ಆಂತರಿಕ ಬೇಗುದಿ: ಸ್ವಪಕ್ಷದ ನಾಯಕರ ವಿರುದ್ಧವೇ ಶಾಸಕ ಪ್ರದೀಪ್ ಈಶ್ವರ್ ಗಂಭೀರ ಆರೋಪ!

Gave Crores to 30 Leaders Congress MLA Pradeep Eshwar Drops Explosive Money Bombshell

ಚಿಕ್ಕಬಳ್ಳಾಪುರ: ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ಶಾಸಕ ಪ್ರದೀಪ್ ಈಶ್ವರ್ (Pradeep Eshwar) ಹಾಗೂ ಕ್ಷೇತ್ರದ ಸ್ಥಳೀಯ ನಾಯಕರ ನಡುವೆ ಸೃಷ್ಟಿಯಾಗಿದ್ದ ಮುಸುಕಿನ ಗುದ್ದಾಟ ಇದೀಗ ಬಹಿರಂಗ ಬೀದಿ ರಂಪಾಟಕ್ಕೆ ತಿರುಗಿದ್ದು, ಸ್ವಪಕ್ಷೀಯರ ವಿರುದ್ಧವೇ ಶಾಸಕರು ಹೊಸ ಬಾಂಬ್ ಸಿಡಿಸಿದ್ದಾರೆ. ಕಳೆದ ಹಲವು ದಿನಗಳಿಂದ ಚಿಕ್ಕಬಳ್ಳಾಪುರ ಕಾಂಗ್ರೆಸ್‌ನಲ್ಲಿ ಆಂತರಿಕ ಭಿನ್ನಾಭಿಪ್ರಾಯ ತೀವ್ರಗೊಂಡಿದ್ದು, ಮುಂಬರುವ ಚುನಾವಣೆಯಲ್ಲಿ ಪ್ರದೀಪ್ ಈಶ್ವರ್ ಅವರಿಗೆ ಮತ್ತೆ ಟಿಕೆಟ್ ನೀಡಬಾರದು ಎಂದು ಸ್ಥಳೀಯ ನಾಯಕರು ಮುಖ್ಯಮಂತ್ರಿ ಸಿದ್ಧರಾಮಯ್ಯ ಹಾಗೂ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರಿಗೆ ಮನವಿ ಸಲ್ಲಿಕೆ ಮಾಡಿದ್ದರು. ಇಷ್ಟೇ ಅಲ್ಲದೆ, ಜಿಲ್ಲೆಯ ಉಸ್ತುವಾರಿ ಸಚಿವ ಎಂ.ಸಿ. ಸುಧಾಕರ್ ವಿರುದ್ಧವೂ ಪ್ರದೀಪ್ ಈಶ್ವರ್ ಪರೋಕ್ಷವಾಗಿ ವಾಗ್ದಾಳಿ ನಡೆಸುತ್ತಲೇ ಬಂದಿದ್ದರು. ಈ ಎಲ್ಲಾ ರಾಜಕೀಯ ಹೈಡ್ರಾಮಾಗಳ ನಡುವೆಯೇ, ಚುನಾವಣೆಯಲ್ಲಿ ಗೆಲ್ಲಲು ಮತ್ತು ಪಕ್ಷದ ನಾಯಕರನ್ನು ಓಲೈಸಲು ಕೋಟಿ ಕೋಟಿ ಹಣ ಖರ್ಚು ಮಾಡಿದ್ದೇನೆ ಎಂದು ಸ್ವತಃ ಶಾಸಕರೇ ಬಹಿರಂಗವಾಗಿ ಹೇಳಿಕೆ ನೀಡಿರುವುದು ರಾಜ್ಯ ರಾಜಕಾರಣದಲ್ಲಿ ಭಾರಿ ಚರ್ಚೆಗೆ ಗ್ರಾಸವಾಗಿದೆ.

ಕಮಿಷನ್‌ ದಂಧೆ ಆರೋಪ ಮಾಡಿದ ಶಾಸಕ

ಸಾರ್ವಜನಿಕ ಕಾರ್ಯಕ್ರಮವೊಂದರಲ್ಲಿ ಆವೇಶಭರಿತರಾಗಿ ಮಾತನಾಡಿದ ಶಾಸಕ ಪ್ರದೀಪ್ ಈಶ್ವರ್, ತಮ್ಮದೇ ಪಕ್ಷದ ನಾಯಕರ ನಡವಳಿಕೆ ಮತ್ತು ಕಮಿಷನ್ ದಂಧೆಯ ವಿರುದ್ಧ ಗಂಭೀರ ಆರೋಪಗಳ ಸುರಿಮಳೆ ಗೈದಿದ್ದಾರೆ. “ನಾನು ಶಾಸಕನಾದಾಗಿನಿಂದ ಈವರೆಗೆ ಚುನಾವಣೆ ಹಾಗೂ ಪಕ್ಷದ ಕೆಲಸಗಳಿಗಾಗಿ ಅಪಾರ ಪ್ರಮಾಣದ ಹಣವನ್ನು ವೆಚ್ಚ ಮಾಡಿದ್ದೇನೆ. ಕ್ಷೇತ್ರದ ಸುಮಾರು 30 ಪ್ರಮುಖ ನಾಯಕರಿಗೆ ಕೋಟಿ ಕೋಟಿ ರೂಪಾಯಿ ಹಣ ಹಂಚಿದ್ದೇನೆ. ಪಕ್ಷದ ಅಧಿಕೃತ ಸಂಘಟನೆ ಅಥವಾ ಕಾರ್ಯಕ್ರಮಗಳಿಗಾಗಿ ಹಣ ಕೇಳಿದರೆ ನೀಡಲು ನಾನು ಸದಾ ಸಿದ್ಧ, ಆದರೆ ನಾಯಕರು ತಮ್ಮ ವೈಯಕ್ತಿಕ ಸ್ವಾರ್ಥ ಮತ್ತು ಕಷ್ಟಗಳಿಗೆ ನನ್ನ ಬಳಿ ಹಣ ಕೇಳಬಾರದು” ಎಂದು ಬಹಿರಂಗವಾಗಿ ಕಿಡಿಕಾರಿದ್ದಾರೆ.

ಮುಂದುವರಿದು ಸ್ಥಳೀಯ ನಾಯಕರ ಬ್ಲ್ಯಾಕ್‌ಮೇಲ್ ತಂತ್ರವನ್ನು ಎಳೆಎಳೆಯಾಗಿ ಬಿಚ್ಚಿಟ್ಟ ಅವರು, “ಕೆಲವು ನಾಯಕರು ನನ್ನನ್ನು ಪ್ರತ್ಯೇಕವಾಗಿ ಬದಿಗೆ ಕರೆದುಕೊಂಡು ಹೋಗಿ 10 ಲಕ್ಷ ರೂಪಾಯಿ ನೀಡುವಂತೆ ಪಟ್ಟು ಹಿಡಿಯುತ್ತಾರೆ. ನಾನು ಒಮ್ಮೆ ಅವರ ಫೋನ್ ಕಾಲ್ ಸ್ವೀಕರಿಸಿದರೆ ಸಾಕು, ತಕ್ಷಣವೇ 10 ಲಕ್ಷ ರೂಪಾಯಿ ಕೈಗಿಡಬೇಕಾದ ದುಸ್ಥಿತಿ ನಿರ್ಮಾಣವಾಗಿದೆ” ಎಂದು ತೀವ್ರ ಆಕ್ರೋಶ ಹೊರಹಾಕಿದ್ದಾರೆ.

ರಾಜ್ಯ ರಾಜಕೀಯದಲ್ಲಿ ಕಾಂಗ್ರೆಸ್‌ಗೆ ಮುಜುಗರ

ಇಷ್ಟಕ್ಕೇ ನಿಲ್ಲಿಸದ ಪ್ರದೀಪ್ ಈಶ್ವರ್, ಕಾಂಗ್ರೆಸ್ ಮುಖಂಡ ಮಂಚೇನಹಳ್ಳಿ ಪ್ರಕಾಶ್ ಅವರ ಹೆಸರನ್ನು ನೇರವಾಗಿ ಪ್ರಸ್ತಾಪಿಸಿ ವಾಗ್ದಾಳಿ ನಡೆಸಿದ್ದಾರೆ. “ಮಂಚೇನಹಳ್ಳಿ ಪ್ರಕಾಶ್ ಮತ್ತು ಅವರ ಬೆಂಬಲಿಗ ನಾಯಕರು ಎಲ್ಲಾದರೂ ಪ್ರವಾಸ ಅಥವಾ ಟ್ರಿಪ್‌ಗೆ ತೆರಳಿದರೆ ಅವರ ವಿಮಾನ ಪ್ರಯಾಣದ ಟಿಕೆಟ್ ವೆಚ್ಚವನ್ನು ನಾನೇ ಭರಿಸಬೇಕಾಗಿದೆ. ಅವರು ಶಿರಡಿಗೆ ಹೋಗಿ ಬರಬೇಕಂದರೂ ಫ್ಲೈಟ್ ಟಿಕೆಟ್‌ಗೆ ನನ್ನ ಬಳಿಯೇ ಹಣ ಪಡೆಯುತ್ತಾರೆ. ಪಕ್ಷದ ನಾಯಕರ ಇಂತಹ ಎಲ್ಲಾ ವೈಯಕ್ತಿಕ ವಿಮಾನ ಪ್ರಯಾಣದ ವೆಚ್ಚಗಳನ್ನು ನಾನೇ ನೋಡಿಕೊಳ್ಳುತ್ತಿದ್ದೇನೆ” ಎಂದು ಗಂಭೀರ ಸ್ಫೋಟಕ ಹೇಳಿಕೆ ನೀಡಿದ್ದಾರೆ.

ಶಾಸಕ ಪ್ರದೀಪ್ ಈಶ್ವರ್ ಅವರ ಈ ಸಾರ್ವಜನಿಕ ಬಾಂಬ್ ಹೇಳಿಕೆಯಿಂದಾಗಿ ಚಿಕ್ಕಬಳ್ಳಾಪುರ ಕಾಂಗ್ರೆಸ್ ಅಂಗಳದಲ್ಲಿ ಅಷ್ಟೇ ಅಲ್ಲದೆ ರಾಜ್ಯ ಕಾಂಗ್ರೆಸ್ ಪಾಳಯದಲ್ಲೂ ತೀವ್ರ ಮುಜುಗರ ಉಂಟಾಗಿದ್ದು, ಬಿಜೆಪಿ ಹಾಗೂ ಜಾತ್ಯತೀತ ಜನತಾದಳ (ಜೆಡಿಎಸ್) ನಾಯಕರು ಇದನ್ನು ಕಾಂಗ್ರೆಸ್‌ನ ಭ್ರಷ್ಟಾಚಾರ ಮತ್ತು ಆಂತರಿಕ ಕಲಹಕ್ಕೆ ಜೀವಂತ ಸಾಕ್ಷಿ ಎಂದು ಟೀಕಿಸಲು ಶುರು ಮಾಡಿದ್ದಾರೆ.

ಇದನ್ನೂ ಓದಿ: ದಸರಾ ಹಬ್ಬಕ್ಕೆ ಕೆಎಸ್‌ಆರ್‌ಟಿಸಿ ಬಿಗ್ ಗಿಫ್ಟ್: ಪ್ರಯಾಣಿಕರ ಅನುಕೂಲಕ್ಕೆ 3,000 ವಿಶೇಷ ಬಸ್‌ಗಳ ಕಾರ್ಯಾಚರಣೆ!

Leave a Reply

Your email address will not be published. Required fields are marked *