ಮೈಸೂರು: ವಿಶ್ವವಿಖ್ಯಾತ ಮೈಸೂರು ದಸರಾ (Mysuru Dasara) ಮಹೋತ್ಸವವನ್ನು ಕಣ್ಣುತುಂಬಿಕೊಳ್ಳಲು ಸಾಂಸ್ಕೃತಿಕ ನಗರಿಗೆ ಹರಿದುಬರುವ ಲಕ್ಷಾಂತರ ಸಾರ್ವಜನಿಕರು ಹಾಗೂ ಹಬ್ಬದ ಸಾಲು ಸಾಲು ರಜೆಗಳ ಹಿನ್ನೆಲೆಯಲ್ಲಿ ಸ್ವಗ್ರಾಮಗಳಿಗೆ ತೆರಳುವ ಪ್ರಯಾಣಿಕರ ಅನುಕೂಲಕ್ಕಾಗಿ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮವು (KSRTC) ಬೃಹತ್ ಸಾರಿಗೆ ಯೋಜನೆಯನ್ನು ರೂಪಿಸಿದೆ. ರಾಜ್ಯ ಹಾಗೂ ಹೊರರಾಜ್ಯಗಳ ವಿವಿಧ ಭಾಗಗಳಿಂದ ಆಗಮಿಸುವ ಜನಸ್ತೋಮದ ಸಂಚಾರ ಸುಗಮಗೊಳಿಸಲು ಒಟ್ಟು 3,000 ಹೆಚ್ಚುವರಿ ವಿಶೇಷ ಬಸ್ಗಳನ್ನು ರಸ್ತೆಗೆ ಇಳಿಸಲು ನಿಗಮ ಸಂಪೂರ್ಣ ಸಜ್ಜಾಗಿದೆ.
ಸಾಮಾನ್ಯವಾಗಿ ನಿತ್ಯ ಕಾರ್ಯಾಚರಣೆ ನಡೆಸುವ ಕರ್ನಾಟಕ ಸಾರಿಗೆ, ರಾಜಹಂಸ, ಸ್ಲೀಪರ್, ಐರಾವತ, ಐರಾವತ ಕ್ಲಬ್ಕ್ಲಾಸ್, ಅಂಬಾರಿ ಕ್ಲಬ್ಕ್ಲಾಸ್, ಪಲ್ಲಕ್ಕಿ ಸ್ಲೀಪರ್ ಹಾಗೂ ಹೊಸದಾಗಿ ಸೇರ್ಪಡೆಯಾಗಿರುವ ಅಶ್ವಮೇಧ ಬಸ್ ಸೇವೆಗಳ ಜೊತೆಗೆ ಈ 3,000 ವಿಶೇಷ ಬಸ್ಗಳು ಹೆಚ್ಚುವರಿಯಾಗಿ ಸೇವೆ ಸಲ್ಲಿಸಲಿವೆ. ದಸರಾ ಹಬ್ಬದ ಪ್ರಮುಖ ದಿನಗಳನ್ನು ಗಮನದಲ್ಲಿಟ್ಟುಕೊಂಡು ಅಕ್ಟೋಬರ್ 16ರಿಂದ ಅಕ್ಟೋಬರ್ 20ರವರೆಗೆ ರಾಜಧಾನಿ ಬೆಂಗಳೂರಿನಿಂದ ರಾಜ್ಯದ ಮೂಲೆ ಮೂಲೆಗಳಿಗೆ ಹಾಗೂ ನೆರೆ ರಾಜ್ಯಗಳ ಪ್ರಮುಖ ನಗರಗಳಿಗೆ ಈ ವಿಶೇಷ ಸಾರಿಗೆ ಸೌಲಭ್ಯ ಲಭ್ಯವಾಗಲಿದೆ ಎಂದು ಕೆಎಸ್ಆರ್ಟಿಸಿ ತನ್ನ ಅಧಿಕೃತ ಪತ್ರಿಕಾ ಪ್ರಕಟಣೆಯಲ್ಲಿ ಸ್ಪಷ್ಟಪಡಿಸಿದೆ.
ವಿಶೇಷ ಬಸ್ಗಳ ನಿರ್ಗಮನ ಮತ್ತು ನಿಲ್ದಾಣಗಳ ವಿವರ:
ಪ್ರಯಾಣಿಕರ ಒತ್ತಡವನ್ನು ನಿರ್ವಹಿಸಲು ಬೆಂಗಳೂರಿನ ಕೆಂಪೇಗೌಡ ಬಸ್ ನಿಲ್ದಾಣ (ಮೆಜೆಸ್ಟಿಕ್), ಮೈಸೂರು ರಸ್ತೆ ಬಸ್ ನಿಲ್ದಾಣ ಹಾಗೂ ಶಾಂತಿನಗರದ ಬಿಎಂಟಿಸಿ ಬಸ್ ನಿಲ್ದಾಣಗಳಿಂದ ಈ ಬಸ್ಗಳು ಸಂಚರಿಸಲಿವೆ. ಇದರ ಜೊತೆಗೆ ನಗರದ ಪ್ರಮುಖ ವಸತಿ ಹಾಗೂ ವಾಣಿಜ್ಯ ಪ್ರದೇಶಗಳಾದ ವಿಜಯನಗರ, ಯಶವಂತಪುರ, ಜಯನಗರ, ಬಸವೇಶ್ವರನಗರ, ದೊಮಲೂರು ಮತ್ತು ಬನಶಂಕರಿ ಬಿಎಂಟಿಸಿ ನಿಲ್ದಾಣಗಳಿಂದಲೂ ಪ್ರತ್ಯೇಕವಾಗಿ ಬಸ್ಗಳು ಕಾರ್ಯಾಚರಣೆ ನಡೆಸಲಿವೆ. ಹಬ್ಬ ಮುಗಿದ ಬಳಿಕ ಅಂದರೆ ಅಕ್ಟೋಬರ್ 20 ಮತ್ತು 21ರಂದು ವಿವಿಧ ಜಿಲ್ಲೆಗಳು ಹಾಗೂ ಹೊರರಾಜ್ಯಗಳಿಂದ ಪ್ರಯಾಣಿಕರು ಸುಲಭವಾಗಿ ಬೆಂಗಳೂರಿಗೆ ಮರಳಲು ಮರುಪ್ರಯಾಣದ ವಿಶೇಷ ಬಸ್ ವ್ಯವಸ್ಥೆಯನ್ನೂ ಮಾಡಲಾಗಿದೆ.
ರಾಜ್ಯ ಮತ್ತು ಹೊರರಾಜ್ಯ ಸಂಪರ್ಕ:
ಕರಾವಳಿ ಮತ್ತು ಮಲೆನಾಡು ಭಾಗಗಳಾದ ಮಂಗಳೂರು, ಉಡುಪಿ, ಕುಂದಾಪುರ, ಪುತ್ತೂರು, ಧರ್ಮಸ್ಥಳ, ಕುಕ್ಕೆ ಸುಬ್ರಹ್ಮಣ್ಯ, ಶೃಂಗೇರಿ, ಹೊರನಾಡು, ಶಿವಮೊಗ್ಗ, ಮಡಿಕೇರಿಗೆ ವಿಶೇಷ ಬಸ್ಗಳು ತೆರಳಲಿವೆ. ಜೊತೆಗೆ ಉತ್ತರ ಕರ್ನಾಟಕದ ದಾವಣಗೆರೆ, ಗೋಕರ್ಣ, ಹುಬ್ಬಳ್ಳಿ, ಧಾರವಾಡ, ಬೆಳಗಾವಿ, ವಿಜಯಪುರ, ಕಾರವಾರ, ಬಳ್ಳಾರಿ, ಹೊಸಪೇಟೆ, ಕಲಬುರಗಿ ಹಾಗೂ ರಾಯಚೂರಿಗೂ ಹೆಚ್ಚುವರಿ ಸೇವೆ ಇರಲಿದೆ. ನೆರೆ ರಾಜ್ಯಗಳಾದ ಹೈದರಾಬಾದ್, ವಿಜಯವಾಡ, ನೆಲ್ಲೂರು, ಚೆನ್ನೈ, ಊಟಿ, ಕೊಡೈಕೆನಾಲ್, ಸೇಲಂ, ತಿರುಚಿರಾಪಳ್ಳಿ, ಕುಂಭಕೋಣಂ, ಕೊಯಂಬತ್ತೂರು, ಮಧುರೈ, ಪಣಜಿ, ಮಂತ್ರಾಲಯ, ಪುಣೆ, ಎರ್ನಾಕುಲಂ ಹಾಗೂ ಪಾಲಕ್ಕಾಡ್ ನಗರಗಳಿಗೂ ಕೆಎಸ್ಆರ್ಟಿಸಿ ಬಸ್ಗಳು ಸಂಚರಿಸಲಿವೆ.
ಮೈಸೂರು ದಸರಾಗೆ ವಿಶೇಷ 700 ಬಸ್ಗಳ ಪ್ಯಾಕೇಜ್:
ಸಾಂಸ್ಕೃತಿಕ ನಗರಿ ಮೈಸೂರಿಗೆ ನೇರವಾಗಿ ತೆರಳುವ ಪ್ರವಾಸಿಗರಿಗಾಗಿ ಬೆಂಗಳೂರಿನ ಮೈಸೂರು ರಸ್ತೆ ಬಸ್ ನಿಲ್ದಾಣದಿಂದಲೇ ಪ್ರತ್ಯೇಕವಾಗಿ 300 ಹೆಚ್ಚುವರಿ ಬಸ್ಗಳನ್ನು ಕಾಯ್ದಿರಿಸಲಾಗಿದೆ. ಇದರ ಜೊತೆಗೆ ಮೈಸೂರು ತಲುಪಿದ ಬಳಿಕ ಅಲ್ಲಿನ ಸುತ್ತಮುತ್ತಲಿನ ಪ್ರಸಿದ್ಧ ಪ್ರವಾಸಿ ಹಾಗೂ ಧಾರ್ಮಿಕ ತಾಣಗಳಾದ ಚಾಮುಂಡಿಬೆಟ್ಟ, ಕೆ.ಆರ್.ಎಸ್. ಅಣೆಕಟ್ಟು/ಬೃಂದಾವನ, ಶ್ರೀರಂಗಪಟ್ಟಣ, ನಂಜನಗೂಡು, ಮಡಿಕೇರಿ, ಮಂಡ್ಯ, ಮಳವಳ್ಳಿ, ಹೆಚ್.ಡಿ.ಕೋಟೆ, ಚಾಮರಾಜನಗರ, ಹುಣಸೂರು, ಕೆ.ಆರ್.ನಗರ ಮತ್ತು ಗುಂಡ್ಲುಪೇಟೆ ಮುಂತಾದ ಸ್ಥಳಗಳ ವೀಕ್ಷಣೆಗೆ ಅನುಕೂಲವಾಗುವಂತೆ ಇನ್ನೂ 400 ಬಸ್ಗಳನ್ನು ನಿಯೋಜಿಸಲಾಗಿದೆ. ಇನ್ನು ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಆಗಮಿಸುವ ದೇಶ-ವಿದೇಶಿ ಪ್ರವಾಸಿಗರಿಗಾಗಿ ಮೈಸೂರಿಗೆ ನೇರ ‘ಫ್ಲೈ ಬಸ್’ (Fly Bus) ಸೇವೆಗಳು ಲಭ್ಯವಿರಲಿವೆ. ಪ್ರಯಾಣಿಕರು ಮುಂಗಡ ಟಿಕೆಟ್ ಕಾಯ್ದಿರಿಸಿ ಸುಗಮ ಪ್ರಯಾಣ ಬೆಳೆಸುವಂತೆ ಸಾರಿಗೆ ನಿಗಮ ಮನವಿ ಮಾಡಿದೆ
ಇದನ್ನೂ ಓದಿ: ರಾಜ್ಯ ರಾಜಕೀಯದಲ್ಲಿ ಸ್ಟಿಂಗ್ ಆಪರೇಷನ್ ಧಮಾಕ: ಸಿಬಿಐ ತನಿಖೆಗೆ ಆಗ್ರಹಿಸಿ ರಾಜ್ಯಪಾಲರಿಗೆ ದಿನೇಶ್ ಕಲ್ಲಹಳ್ಳಿ ದೂರು!
