ಹಾಸನ: ರಾಜ್ಯ ರಾಜಕಾರಣದಲ್ಲಿ ತೀವ್ರ ಸಂಚಲನ ಮೂಡಿಸಿರುವ ‘ಸ್ಟಿಂಗ್ ಆಪರೇಷನ್’ (Sting Operation) ವಿವಾದಕ್ಕೆ ಸಂಬಂಧಿಸಿದಂತೆ ಜೆಡಿಎಸ್ ಯುವಘಟಕದ ರಾಜ್ಯಾಧ್ಯಕ್ಷ ನಿಖಿಲ್ ಕುಮಾರಸ್ವಾಮಿ (Nikhil Kumaraswamy) ಅವರು ಕಾಂಗ್ರೆಸ್ ಸರ್ಕಾರ ಹಾಗೂ ಸಿಎಂ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ. ರಾಜಕೀಯ ಲಾಭಕ್ಕಾಗಿ ಹಾಗೂ ವಿರೋಧಿಗಳನ್ನು ಮಟ್ಟಹಾಕಲು ಸ್ಟಿಂಗ್ ಆಪರೇಷನ್ ತಂತ್ರಜ್ಞಾನವನ್ನು ಯಾರಿಗೆ ಹೆಚ್ಚು ಬಳಸಲು ತಿಳಿದಿದೆ ಮತ್ತು ಅದರಲ್ಲಿ ಯಾರಿಗೆ ಹೆಚ್ಚಿನ ಜ್ಞಾನವಿದೆ ಎಂಬ ಸತ್ಯ ಇಡೀ ಜಗತ್ತಿಗೆ ಸ್ಪಷ್ಟವಾಗಿ ತಿಳಿದಿದೆ ಎಂದು ಅವರು ಮಾರ್ಮಿಕವಾಗಿ ತಿರುಗೇಟು ನೀಡಿದ್ದಾರೆ.
ಜನರೇ ಎಲ್ಲದರ ಬಗ್ಗೆ ತೀರ್ಮಾನ ಮಾಡಲಿದ್ದಾರೆ
ಹಾಸನ ಜಿಲ್ಲೆಯ ಚನ್ನರಾಯಪಟ್ಟಣದಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ನಿಖಿಲ್ ಕುಮಾರಸ್ವಾಮಿ, ಪ್ರಸ್ತುತ ಆಡಳಿತಾರೂಢ ಸರ್ಕಾರದಲ್ಲಿ ನಡೆಯುತ್ತಿರುವ ಆಂತರಿಕ ಗೊಂದಲಗಳು ಹಾಗೂ ಭಯವನ್ನು ಬಹಿರಂಗಪಡಿಸಿದರು. ಇತ್ತೀಚೆಗೆ ಶಾಸನಸಭೆಯ (ಸದನ) ಒಳಗೆ ಆಡಳಿತ ಪಕ್ಷದ ಹಿರಿಯ ಸಚಿವರೊಬ್ಬರು, ಅದೂ ಸಹ ವಿಧಾನಸೌಧದ ಮೆಟ್ಟಿಲುಗಳನ್ನು ಹಲವು ಬಾರಿ ಏರಿ ಅನುಭವ ಹೊಂದಿರುವ ಹಿರಿಯ ನಾಯಕರೇ ಸ್ಟಿಂಗ್ ಆಪರೇಷನ್ ಕುರಿತು ಆತಂಕ ವ್ಯಕ್ತಪಡಿಸಿರುವುದನ್ನು ಸಾರ್ವಜನಿಕರು ಗಮನಿಸಿದ್ದಾರೆ. ಈ ಕುರಿತು ಸದನದ ಕಲಾಪಗಳ ದಾಖಲೆಯಲ್ಲೇ ಪ್ರಸ್ತಾಪವಾಗಿದ್ದು, ಈ ಎಲ್ಲಾ ಬೆಳವಣಿಗೆಗಳ ಅಸಲಿಯತ್ತನ್ನು ಜನತೆಯೇ ತೀರ್ಮಾನ ಮಾಡಲಿ ಎಂದು ಅವರು ಹೇಳಿದರು.
ಸಚಿವ ಸಂಪುಟದ ಸಹೋದ್ಯೋಗಿಗಳಿಗೆ ‘ಹುಷಾರಾಗಿರಿ, ಸ್ಟಿಂಗ್ ಆಪರೇಷನ್‌ಗಳು ನಡೆಯುತ್ತಿವೆ’ ಎಂದು ಆಡಳಿತ ಪಕ್ಷದ ನಾಯಕರೇ ಎಚ್ಚರಿಕೆ ನೀಡುತ್ತಿದ್ದಾರೆ ಎಂದರೆ ವಿಕಾಸಸೌಧ ಮತ್ತು ವಿಧಾನಸೌಧದ ಒಳಗಡೆ ಏನೋ ಬೃಹತ್ ಅಕ್ರಮ ಅಥವಾ ಭ್ರಷ್ಟಾಚಾರ ನಡೆಯುತ್ತಿದೆ ಎಂಬುದು ಸ್ಪಷ್ಟವಾಗುತ್ತದೆ ಎಂದು ನಿಖಿಲ್ ಆರೋಪಿಸಿದರು. ರಾಜ್ಯದ ಜನತೆಗೆ ಅನುಕೂಲ ಮಾಡಿಕೊಡುವ ಹಾಗೂ ಅಭಿವೃದ್ಧಿ ಕೆಲಸಗಳನ್ನು ಬದಿಗೆ ಸರಿಸಿ, ತಮ್ಮ ಸ್ವಂತ ಸ್ವಾರ್ಥ ಮತ್ತು ಅನುಕೂಲಕ್ಕಾಗಿ ಇಂತಹ ಕೆಲಸಗಳಲ್ಲಿ ತೊಡಗಿಸಿಕೊಂಡಿದ್ದಾರೆ ಎಂಬುದನ್ನು ಸಚಿವರುಗಳು ಮೊದಲು ಗ್ರಹಿಸಬೇಕು ಎಂದು ಅವರು ತೀವ್ರ ತರಾಟೆಗೆ ತೆಗೆದುಕೊಂಡರು.
ಸರ್ಕಾರದ ಒಳಗೆ ಏನು ನಡೆಯುತ್ತಿದೆ ಎಂಬುದು ಸಿಎಂಗೆ ಗೊತ್ತು
ಇನ್ನು ಸ್ಟಿಂಗ್ ಆಪರೇಷನ್ ಆರೋಪಗಳ ಬೆನ್ನಲ್ಲೇ ನಡೆಯುತ್ತಿರುವ ತನಿಖೆ ಮತ್ತು ಗುಪ್ತಚರ ವರದಿಗಳ ಕುರಿತು ಪ್ರತಿಕ್ರಿಯಿಸಿದ ಅವರು, ರಾಜ್ಯ ಸರ್ಕಾರದ ಗೃಹ ಹಾಗೂ ಗುಪ್ತಚರ ಇಲಾಖೆಗಳು ಪ್ರಸ್ತುತ ಮುಖ್ಯಮಂತ್ರಿಗಳ ಕೈಯಲ್ಲೇ ಇವೆ. ಹೀಗಿರುವಾಗ ರಾಜ್ಯದಲ್ಲಿ ಹಾಗೂ ಸರ್ಕಾರದ ಒಳಗೆ ಏನು ನಡೆಯುತ್ತಿದೆ ಎಂಬುದನ್ನು ಬಹಿರಂಗಪಡಿಸಬೇಕಾದ ಹೊಣೆಗಾರಿಕೆ ಸ್ವತಃ ಮುಖ್ಯಮಂತ್ರಿಗಳದ್ದಾಗಿದೆ. ಗುಪ್ತಚರ ಇಲಾಖೆ ಯಾರ ವಶದಲ್ಲಿದೆಯೋ ಅವರೇ ಈ ಬಗ್ಗೆ ಜನರಿಗೆ ಸ್ಪಷ್ಟನೆ ನೀಡಬೇಕೇ ಹೊರತು ವಿರೋಧ ಪಕ್ಷದವರಿಂದ ಉತ್ತರ ನಿರೀಕ್ಷಿಸುವುದು ಸರಿ ಅಲ್ಲ ಎಂದು ನಿಖಿಲ್ ಕುಮಾರಸ್ವಾಮಿ ಖಡಕ್ ಆಗಿ ನುಡಿದರು.
ಇದನ್ನೂ ಓದಿ: ಕೆಪಿಎಸ್‌ಸಿ ಪಶುವೈದ್ಯಕೀಯ ಹಗರಣದಲ್ಲಿ ಸ್ಫೋಟಕ ಸತ್ಯ ಬಯಲು: 80 ಪ್ರಶ್ನೆಗಳ ಕೀ ಉತ್ತರ ಮಾರಿ ಕೋಟಿ ಕೋಟಿ ಲೂಟಿ!
