ಬೆಂಗಳೂರು: ಬೈಯಪ್ಪನಹಳ್ಳಿ ಪೊಲೀಸ್ ಠಾಣೆ ವ್ಯಾಪ್ತಿಯ ಕಗ್ಗದಾಸಪುರದಲ್ಲಿ ಭಾರಿ ಅನಾಹುತವೊಂದು ಅದೃಷ್ಟವಶಾತ್ ತಪ್ಪಿದೆ. ಅಕ್ರಮವಾಗಿ ಗ್ಯಾಸ್ ಸಿಲಿಂಡರ್ಗಳನ್ನು (Cylinder Blast) ರೀಫಿಲ್ಲಿಂಗ್ ಮಾಡುತ್ತಿದ್ದ ಸಂದರ್ಭದಲ್ಲಿ ಸರಣಿಯಾಗಿ ನಾಲ್ಕು ಎಲ್ಪಿಜಿ ಸಿಲಿಂಡರ್ಗಳು ಭೀಕರವಾಗಿ ಸ್ಫೋಟಗೊಂಡಿವೆ.
ಕಗ್ಗದಾಸಪುರದ ಅಟಲ್ ಬಿಹಾರಿ ವಾಜಪೇಯಿ ಪಾರ್ಕ್ ಸಮೀಪ ಈ ಘಟನೆ ಸಂಭವಿಸಿದ್ದು, ಸ್ಫೋಟದ ತೀವ್ರತೆ ಎಷ್ಟಿತ್ತೆಂದರೆ ಒಂದು ಗ್ಯಾಸ್ ಸಿಲಿಂಡರ್ ಹಾರಿ ಪಕ್ಕದಲ್ಲೇ ಇದ್ದ ಶಾಲೆಯ ಕಿಟಕಿಗೆ ಬಲವಾಗಿ ಅಪ್ಪಳಿಸಿದೆ. ಏಕಾಏಕಿ ಸಾಲು ಸಾಲು ಸ್ಫೋಟದ ಶಬ್ದ ಕೇಳಿಬರುತ್ತಿದ್ದಂತೆ ಸುತ್ತಮುತ್ತಲಿನ ನಿವಾಸಿಗಳು ಭೀತಿಯಿಂದ ರಸ್ತೆಗೆ ಓಡಿ ಬಂದಿದ್ದು, ಸ್ಥಳದಲ್ಲಿ ತೀವ್ರ ಆತಂಕದ ವಾತಾವರಣ ಸೃಷ್ಟಿಯಾಗಿತ್ತು.
ವಿಷಯ ತಿಳಿದ ಕೂಡಲೇ ಅಗ್ನಿಶಾಮಕ ದಳದ ಸಿಬ್ಬಂದಿ ಹಾಗೂ ಬೈಯಪ್ಪನಹಳ್ಳಿ ಠಾಣೆ ಪೊಲೀಸರು ತಕ್ಷಣವೇ ಸ್ಥಳಕ್ಕೆ ಧಾವಿಸಿ, ಬೆಂಕಿಯನ್ನು ನಂದಿಸುವಲ್ಲಿ ಯಶಸ್ವಿಯಾಗಿದ್ದಾರೆ. ಅದೃಷ್ಟವಶಾತ್ ಈ ಭೀಕರ ಸ್ಫೋಟದಲ್ಲಿ ಯಾವುದೇ ಪ್ರಾಣಾಪಾಯ ಸಂಭವಿಸಿಲ್ಲ ಹಾಗೂ ಯಾರಿಗೂ ಗಂಭೀರ ಗಾಯಗಳಾಗಿಲ್ಲ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಸ್ಥಳದಲ್ಲಿ ಅಕ್ರಮವಾಗಿ ಗ್ಯಾಸ್ ರೀಫಿಲ್ಲಿಂಗ್ ದಂಧೆ ನಡೆಸಲಾಗುತ್ತಿತ್ತು ಎನ್ನಲಾಗಿದ್ದು, ಈ ಕುರಿತು ಬೈಯಪ್ಪನಹಳ್ಳಿ ಪೊಲೀಸರು ಪ್ರಕರಣ ದಾಖಲಿಸಿಕೊಂಡು ಮುಂದಿನ ತನಿಖೆಯನ್ನು ಕೈಗೊಂಡಿದ್ದಾರೆ.
ಶಾಲೆಯ ಅಡುಗೆ ಕೊಠಡಿಯಲ್ಲಿ ಸಿಲಿಂಡರ್ ಸ್ಫೋಟ: ಚಿಕಿತ್ಸೆ ಫಲಿಸದೆ ಅಡುಗೆ ಸಹಾಯಕಿ ಸಾವು
ತುಮಕೂರು: ಜಿಲ್ಲೆಯ ಸರ್ಕಾರಿ ಶಾಲೆಯೊಂದರ ದಾಸೋಹ ಕೊಠಡಿಯಲ್ಲಿ ಸಂಭವಿಸಿದ ಸಿಲಿಂಡರ್ ಸ್ಫೋಟದ ದುರಂತದಲ್ಲಿ ತೀವ್ರವಾಗಿ ಗಾಯಗೊಂಡಿದ್ದ ಅಡುಗೆ ಸಹಾಯಕಿಯೊಬ್ಬರು (Tragedy) ಚಿಕಿತ್ಸೆ ಫಲಕಾರಿಯಾಗದೆ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದಿದ್ದಾರೆ.
ಏನಿದು ಪ್ರಕರಣ?
ತುಮಕೂರು ಜಿಲ್ಲೆ ಚಿಕ್ಕನಾಯಕನಹಳ್ಳಿ ತಾಲೂಕಿನ ಕಂದಿಕೆರೆ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಈ ದುರಂತ ಸಂಭವಿಸಿತ್ತು. ಮೃತ ದುರ್ದೈವಿಯನ್ನು ಲತಾಮಣಿ (30) ಎಂದು ಗುರುತಿಸಲಾಗಿದೆ.
ಇದೇ ತಿಂಗಳ 24 ರಂದು ಶಾಲಾ ಮಕ್ಕಳಿಗೆ ಮಧ್ಯಾಹ್ನದ ಬಿಸಿಊಟ ಸಿದ್ಧಪಡಿಸುವ ವೇಳೆ ದಾಸೋಹ ಕೊಠಡಿಯಲ್ಲಿದ್ದ ಗ್ಯಾಸ್ ಸಿಲಿಂಡರ್ ಇದ್ದಕ್ಕಿದ್ದಂತೆ ಸ್ಫೋಟಗೊಂಡಿತ್ತು. ಈ ಅನಿರೀಕ್ಷಿತ ದುರಂತದಲ್ಲಿ ಅಡುಗೆ ಕೆಲಸದಲ್ಲಿದ್ದ ಲತಾಮಣಿ ಅವರಿಗೆ ತೀವ್ರ ಸ್ವರೂಪದ ಸುಟ್ಟ ಗಾಯಗಳಾಗಿದ್ದವು. ಘಟನೆ ನಡೆದ ತಕ್ಷಣವೇ ಅವರನ್ನು ಚಿಕ್ಕನಾಯಕನಹಳ್ಳಿಯ ಸರ್ಕಾರಿ ಆಸ್ಪತ್ರೆಗೆ ಕರೆದೊಯ್ದು ಪ್ರಾಥಮಿಕ ಚಿಕಿತ್ಸೆ ನೀಡಲಾಗಿತ್ತು.
ಆದರೆ, ಗಾಯಗಳು ಗಂಭೀರವಾಗಿದ್ದರಿಂದ ಹೆಚ್ಚಿನ ಚಿಕಿತ್ಸೆಗಾಗಿ ಅವರನ್ನು ತಕ್ಷಣವೇ ಬೆಂಗಳೂರಿನ ವಿಕ್ಟೋರಿಯಾ ಆಸ್ಪತ್ರೆಗೆ ರವಾನಿಸಲಾಗಿತ್ತು. ಅಲ್ಲಿ ತುರ್ತು ನಿಗಾ ಘಟಕದಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಲತಾಮಣಿ ಅವರು ಚಿಕಿತ್ಸೆಗೆ ಸ್ಪಂದಿಸದೆ ಸಾವನ್ನಪ್ಪಿದ್ದಾರೆ. ಈ ಸಂಬಂಧ ಚಿಕ್ಕನಾಯಕನಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆ ಕೈಗೊಂಡಿದ್ದಾರೆ. ಶಾಲೆಯಲ್ಲೇ ನಡೆದ ಈ ದುರಂತದಿಂದಾಗಿ ಕಂದಿಕೆರೆ ಗ್ರಾಮದಲ್ಲಿ ಶೋಕಛಾಯೆ ಆವರಿಸಿದೆ.
ಇದನ್ನೂ ಓದಿ: ಶಾಲೆಯ ಅಡುಗೆ ಕೊಠಡಿಯಲ್ಲಿ ಸಿಲಿಂಡರ್ ಸ್ಫೋಟ: ಚಿಕಿತ್ಸೆ ಫಲಿಸದೆ ಅಡುಗೆ ಸಹಾಯಕಿ ಸಾವು
