ಕೋಲಾರ/ರಾಯಚೂರು: ರಾಜ್ಯದ ಬೇರೆ ಬೇರೆ ಕಡೆಗಳಲ್ಲಿ ಸಂಭವಿಸಿದ ಭೀಕರ ರಸ್ತೆ ಅಪಘಾತಗಳಲ್ಲಿ ಒಟ್ಟು ಆರು ಮಂದಿ ದಾರುಣವಾಗಿ ಪ್ರಾಣ ಕಳೆದುಕೊಂಡಿದ್ದು, ಹಲವರು ತೀವ್ರವಾಗಿ (Road Mishap) ಗಾಯಗೊಂಡಿದ್ದಾರೆ. ಚೆನ್ನೈ-ಬೆಂಗಳೂರು ಎಕ್ಸ್‌ಪ್ರೆಸ್‌ವೇನಲ್ಲಿ ಸಂಭವಿಸಿದ ಸರಣಿ ಅಪಘಾತಗಳ ಪೈಕಿ ಕೋಲಾರ ಜಿಲ್ಲೆಯ ಮರಗಲ್ ಬಳಿ ಸಂಭವಿಸಿದ ಭೀಕರ ರಸ್ತೆ ದುರಂತದಲ್ಲಿ ಕಾರು ಪಲ್ಟಿಯಾಗಿ ನಾಲ್ವರು ಸಾವನ್ನಪ್ಪಿದ್ದಾರೆ. ಇನ್ನೊಂದೆಡೆ ರಾಯಚೂರು ಜಿಲ್ಲೆಯಲ್ಲಿ ನಡೆದ ಹಿಟ್ ಆಂಡ್ ರನ್ ಪ್ರಕರಣದಲ್ಲಿ ಇಬ್ಬರು ಸ್ಥಳದಲ್ಲೇ ಮೃತಪಟ್ಟಿದ್ದಾರೆ.
ಇಷ್ಟಕ್ಕೂ ಆಗಿದ್ದೇನು?
ಕೋಲಾರ ಜಿಲ್ಲೆಯ ಬಂಗಾರಪೇಟೆ ತಾಲೂಕಿನ ಮರಗಲ್ ಗ್ರಾಮದ ಬಳಿ ಚೆನ್ನೈ-ಬೆಂಗಳೂರು ಎಕ್ಸ್‌ಪ್ರೆಸ್‌ವೇನಲ್ಲಿ ಅತಿವೇಗವಾಗಿ ಬಂದ ಕಾರೊಂದು ನಿಯಂತ್ರಣ ತಪ್ಪಿ ರಸ್ತೆ ವಿಭಾಜಕಕ್ಕೆ (ಡಿವೈಡರ್) ರಭಸದಿಂದ ಢಿಕ್ಕಿಯಾಗಿದೆ. ಢಿಕ್ಕಿಯಾದ ತೀವ್ರತೆಗೆ ಕಾರು ಹಲವು ಬಾರಿ ಪಲ್ಟಿ ಹೊಡೆದು ಸಂಪೂರ್ಣವಾಗಿ ನಜ್ಜುಗುಜ್ಜಾಗಿದೆ. ಪರಿಣಾಮ ಕಾರಿನಲ್ಲಿದ್ದ ಐವರ ಪೈಕಿ ಮೂವರು ಸ್ಥಳದಲ್ಲೇ ದಾರುಣವಾಗಿ ಮೃತಪಟ್ಟರೆ, ಮತ್ತೊಬ್ಬರು ಆಸ್ಪತ್ರೆಗೆ ಸಾಗಿಸುವ ಮಾರ್ಗಮಧ್ಯೆ ಕೊನೆಯುಸಿರೆಳೆದಿದ್ದಾರೆ. ಗಂಭೀರವಾಗಿ ಗಾಯಗೊಂಡಿರುವ ಮತ್ತೊಬ್ಬ ಪ್ರಯಾಣಿಕನನ್ನು ಕೋಲಾರದ ಜಿಲ್ಲಾ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ. ಮೃತರು ಹಾಗೂ ಗಾಯಾಳುಗಳು ಮಹಾರಾಷ್ಟ್ರದ ಪುಣೆ ಮೂಲದವರು ಎಂದು ಶಂಕಿಸಲಾಗಿದ್ದು, ಬಂಗಾರಪೇಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಇದೇ ಕೋಲಾರ ಜಿಲ್ಲೆಯ ಬಂಗಾರಪೇಟೆ ತಾಲೂಕಿನ ಕಾಮಸಮುದ್ರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದ ಮತ್ತೊಂದು ಅಪಘಾತದಲ್ಲಿ ಗಾಯಗೊಂಡಿದ್ದ ತೊಪ್ಪನಹಳ್ಳಿ ಗ್ರಾಮದ ಜಗದೀಶ್ ಎಂಬುವರಿಗೆ ಕೋಲಾರ ಸಂಸದ ಮಲ್ಲೇಶ್ ಬಾಬು ಮಾನವೀಯತೆಯ ನೆರವು ನೀಡಿದ್ದಾರೆ. ಆ ಮಾರ್ಗವಾಗಿ ತೆರಳುತ್ತಿದ್ದ ಸಂಸದರು, ತಕ್ಷಣವೇ ಆಂಬ್ಯುಲೆನ್ಸ್ ಕರೆಸಿ ಗಾಯಾಳು ಜಗದೀಶ್ ಅವರನ್ನು ಆಸ್ಪತ್ರೆಗೆ ರವಾನಿಸಲು ನೆರವಾಗಿದ್ದಾರೆ.
ರಾಯಚೂರಿನಲ್ಲೂ ಭೀಕರ ಅಪಘಾತ
ಇತ್ತ ರಾಯಚೂರು ಜಿಲ್ಲೆಯ ದೇವದುರ್ಗ ತಾಲೂಕಿನ ಜಾಲಹಳ್ಳಿ ಬಳಿ ನಿನ್ನೆ ರಾತ್ರಿ ಸಂಭವಿಸಿದ ಭೀಕರ ಹಿಟ್ ಆಂಡ್ ರನ್ ದುರಂತದಲ್ಲಿ ಹನುಮಯ್ಯ (೫೦) ಹಾಗೂ ಲಿಂಗರಾಜು (೩೫) ಎಂಬಿಬ್ಬರು ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಜಾಲಹಳ್ಳಿಯಿಂದ ತಿಂಥಣಿ ಸೇತುವೆ ಕಡೆಗೆ ಸಾಗುತ್ತಿದ್ದ ಬೊಲೆರೋ ವಾಹನವೊಂದು ಎದುರಿಗೆ ಬರುತ್ತಿದ್ದವರಿಗೆ ರಭಸದಿಂದ ಢಿಕ್ಕಿ ಹೊಡೆದು, ಚಾಲಕ ವಾಹನದ ಸಮೇತ ಸ್ಥಳದಿಂದ ಪರಾರಿಯಾಗಿದ್ದಾನೆ. ಘಟನೆಯಲ್ಲಿ ಗಂಭೀರವಾಗಿ ಗಾಯಗೊಂಡ ರಾಮಲಿಂಗಪ್ಪ ನಾಯಕ ಹಾಗೂ ರಂಗನಾಥ ನಾಯಕ ಅವರನ್ನು ರಾಯಚೂರಿನ ರಿಮ್ಸ್ ಆಸ್ಪತ್ರೆಗೆ ದಾಖಲಿಸಲಾಗಿದೆ.
ಅಪಘಾತಕ್ಕೆ ರಸ್ತೆ ಪಕ್ಕದಲ್ಲಿ ಬೇಕಾಬಿಟ್ಟಿಯಾಗಿ ನಡೆಸಲಾಗುತ್ತಿರುವ ಜಲ ಜೀವನ್ ಮಿಷನ್ (JJM) ಕಾಮಗಾರಿಯೇ ಕಾರಣ ಎಂದು ಆರೋಪಿಸಿ ಜಾಲಹಳ್ಳಿ ಪಟ್ಟಣದಲ್ಲಿ ಸ್ಥಳೀಯರು ಬೆಳಿಗ್ಗೆಯಿಂದಲೇ ರಸ್ತೆ ತಡೆ ನಡೆಸಿ ತೀವ್ರ ಪ್ರತಿಭಟನೆ ನಡೆಸಿದ್ದಾರೆ. ಕಾಮಗಾರಿಗಾಗಿ ಅಗೆದಿರುವ ಗುಂಡಿಗಳು ಹಾಗೂ ರಸ್ತೆಯಲ್ಲಿ ಹಾಕಲಾಗಿರುವ ಮಣ್ಣಿನ ರಾಶಿಗಳ ಬಳಿ ಯಾವುದೇ ಸೂಚನಾ ಫಲಕಗಳನ್ನು ಅಳವಡಿಸದಿರುವುದೇ ಈ ದುರಂತಕ್ಕೆ ಕಾರಣ ಎಂದು ಆಕ್ರೋಶ ವ್ಯಕ್ತಪಡಿಸಿದ ಸ್ಥಳೀಯರು, ಬೇಜವಾಬ್ದಾರಿ ಅಧಿಕಾರಿಗಳ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಬೇಕು ಮತ್ತು ಮೃತರ ಕುಟುಂಬಕ್ಕೆ ತಕ್ಷಣ ಪರಿಹಾರ ಒದಗಿಸಬೇಕು ಎಂದು ಪಟ್ಟು ಹಿಡಿದಿದ್ದಾರೆ.
ಇದನ್ನೂ ಓದಿ: ಸ್ಕೂಟರ್ ಡಿಕ್ಕಿಯಾಗಿ ಕರ್ತವ್ಯನಿರತ ಎಸ್‌ಐ ಸಾವು!
