Delhi High Court: ₹೫೦,೦೦೦ ದಂಡದ ಬದಲಿಗೆ ಸಮೋಸಾ-ಚಾಯ್ ಹಂಚಿ: ದೆಹಲಿ ಹೈಕೋರ್ಟ್‌ನ ಸ್ವಾರಸ್ಯಕರ ತೀರ್ಪು!

Forget the 50K Fine Treat Court Staff to Samosa Chai Delhi High Court Quirky Ruling

ನವದೆಹಲಿ: ಚೆಕ್ ಬೌನ್ಸ್ ಪ್ರಕರಣವೊಂದರಲ್ಲಿ ಕಂಪನಿಯೊಂದಕ್ಕೆ ವಿಧಿಸಲಾಗಿದ್ದ ₹50,೦೦೦ ದಂಡವನ್ನು ರದ್ದುಗೊಳಿಸುವ ವೇಳೆ ದೆಹಲಿ ಹೈಕೋರ್ಟ್ (Delhi High Court) ವಿನೂತನ ಹಾಗೂ ಸ್ವಾರಸ್ಯಕರ ಆದೇಶವೊಂದನ್ನು ಹೊರಡಿಸಿದೆ. ದಂಡದ ಮೊತ್ತವನ್ನು ಮನ್ನಾ ಮಾಡುವ ಪ್ರತಿಯಾಗಿ ದೆಹಲಿ ಹೈಕೋರ್ಟ್ ಬಾರ್ ಅಸೋಸಿಯೇಷನ್‌ನ ಎಲ್ಲಾ ಸಿಬ್ಬಂದಿಗೆ ಬಿಸಿಬಿಸಿ ಸಮೋಸಾ ಮತ್ತು ಚಹಾ ಹಂಚುವಂತೆ ಕಂಪನಿಯ ಪರ ವಕೀಲರಿಗೆ ನ್ಯಾಯಪೀಠ ಸೂಚನೆ ನೀಡಿದೆ.

ಏನಿದು ಪ್ರಕರಣ?

ಈ ಪ್ರಕರಣದ ಹಿನ್ನೆಲೆಯನ್ನು ನೋಡುವುದಾದರೆ, ‘ಇಂಡಸ್ ಬಿರ್ರಾ ಬೀವ್ರೇಜಸ್’ ಎಂಬ ಕಂಪನಿಯು ತನ್ನ ವಿರುದ್ಧದ ಚೆಕ್ ಬೌನ್ಸ್ ಪ್ರಕರಣವನ್ನು ರದ್ದುಗೊಳಿಸುವಂತೆ ಕೋರಿ ಆಗಸ್ಟ್ ೧೭ ರಂದು ದೆಹಲಿ ಹೈಕೋರ್ಟ್ ಮೆಟ್ಟಿಲೇರಿತ್ತು. ಆದರೆ ವಿಚಾರಣೆ ವೇಳೆ, ಈ ಪ್ರಕರಣಕ್ಕೆ ಸಂಬಂಧಿಸಿದಂತೆ ವಿಚಾರಣಾ ನ್ಯಾಯಾಲಯ (ಟ್ರಯಲ್ ಕೋರ್ಟ್) ನೀಡಿದ್ದ ಪ್ರಮುಖ ಆದೇಶವೊಂದನ್ನು ಕಂಪನಿಯು ಹೈಕೋರ್ಟ್‌ನಿಂದ ಮುಚ್ಚಿಟ್ಟಿತ್ತು. ನ್ಯಾಯಾಲಯವನ್ನು ತಪ್ಪುದಾರಿಗೆ ಎಳೆದು ತಮಗೆ ಅನುಕೂಲಕರವಾದ ಆದೇಶ ಪಡೆಯುವ ದುರುದ್ದೇಶದಿಂದ ಮಾಹಿತಿ ಮರೆಮಾಚಲಾಗಿದೆ ಎಂಬುದನ್ನು ಗಮನಿಸಿದ ನ್ಯಾಯಮೂರ್ತಿ ಸೌರಭ್ ಬ್ಯಾನರ್ಜಿ ಅವರಿದ್ದ ಪೀಠವು, ಆಗಸ್ಟ್ ೨೦ ರಂದು ಕಂಪನಿಗೆ ₹೫೦,೦೦೦ ದಂಡ ವಿಧಿಸಿ ಆದೇಶಿಸಿತ್ತು.

ವಿವಿಧ ನ್ಯಾಯಾಲಯಗಳ ಮುಂದೆ ಪರಸ್ಪರ ವಿರುದ್ಧ ಹೇಳಿಕೆಗಳನ್ನು ನೀಡುತ್ತಾ, ಪ್ರಮುಖ ಮಾಹಿತಿಯನ್ನು ಮರೆಮಾಚಿ ಆದೇಶ ಗಿಟ್ಟಿಸಿಕೊಳ್ಳಲು ಯತ್ನಿಸಿದ ಕಂಪನಿಯ ನಡೆಗೆ ನ್ಯಾಯಪೀಠ ತೀವ್ರ ಅಸಮಾಧಾನ ವ್ಯಕ್ತಪಡಿಸಿತ್ತು. ಈ ದಂಡದ ಮೊತ್ತವನ್ನು ಕಂಪನಿಯ ವಕೀಲರೇ ದೆಹಲಿ ಹೈಕೋರ್ಟ್ ಬಾರ್ ಅಸೋಸಿಯೇಷನ್ ವಕೀಲರ ಸಾಮಾಜಿಕ ಭದ್ರತೆ ಮತ್ತು ಕಲ್ಯಾಣ ನಿಧಿಗೆ ಪಾವತಿಸಬೇಕು ಎಂದು ಕೋರ್ಟ್ ಕಟ್ಟುನಿಟ್ಟಿನ ಆದೇಶ ನೀಡಿತ್ತು.

ವಿಚಿತ್ರ ಷರತ್ತು ವಿಧಿಸಿದ ಕೋರ್ಟ್

ಆದರೆ, ಈ ದಂಡದ ಮೊತ್ತವನ್ನು ಮನ್ನಾ ಮಾಡುವಂತೆ ಕೋರಿ ಕಂಪನಿಯು ಹೈಕೋರ್ಟ್‌ಗೆ ಮರು ಅರ್ಜಿ ಸಲ್ಲಿಸಿತ್ತು. ಸೆಪ್ಟೆಂಬರ್ ೧೭ ರಂದು ಈ ಅರ್ಜಿಯ ವಿಚಾರಣೆ ನಡೆಸಿದ ಹೈಕೋರ್ಟ್, ದಂಡವನ್ನು ರದ್ದುಗೊಳಿಸಲು ಸಮ್ಮತಿಸಿತಾದರೂ ಒಂದು ವಿಚಿತ್ರ ಷರತ್ತನ್ನು ವಿಧಿಸಿತು. ಅರ್ಜಿಯನ್ನು ವಿಲೇವಾರಿ ಮಾಡಿದ ನ್ಯಾಯಮೂರ್ತಿಗಳು, “ಅರ್ಜಿದಾರರ ಪರ ವಕೀಲರು ಮುಂದಿನ ಒಂದು ವಾರದ ಒಳಗಾಗಿ ದೆಹಲಿ ಹೈಕೋರ್ಟ್ ಬಾರ್ ಅಸೋಸಿಯೇಷನ್‌ನ ಎಲ್ಲಾ ಉದ್ಯೋಗಿಗಳಿಗೆ ಸಮೋಸಾ ಮತ್ತು ಚಹಾ ವಿತರಿಸಬೇಕು” ಎಂದು ನಿರ್ದೇಶನ ನೀಡಿದರು. ದಂಡದ ಬದಲು ಸಮೋಸಾ-ಚಹಾ ನೀಡುವಂತೆ ಕೋರ್ಟ್ ನೀಡಿದ ಈ ವಿಶಿಷ್ಟ ತೀರ್ಪು ಇದೀಗ ಕಾನೂನು ಹಾಗೂ ಸಾರ್ವಜನಿಕ ವಲಯದಲ್ಲಿ ಭಾರಿ ಕುತೂಹಲ ಮೂಡಿಸಿದೆ.

ಇದನ್ನೂ ಓದಿ: ಕಾಂಬೋಡಿಯಾ ಪ್ರೇಯಸಿ ಜೊತೆ ಹಸೆಮಣೆ ಏರಲು ಕುಖ್ಯಾತ ಕೈದಿಗೆ 12 ಗಂಟೆ ಪರೋಲ್: ಜೈಲಿನ ಬಳಿಯೇ ಮದುವೆ!

Leave a Reply

Your email address will not be published. Required fields are marked *