ಸಾಗರ: ಅಧಿಕಾರ ಹಾಗೂ ರಾಜಕೀಯ ಬಲವಿದ್ದವರಿಗೆ ಒಂದು ನ್ಯಾಯ, ಬಡವರಿಗೆ ಮತ್ತೊಂದು ನ್ಯಾಯ ಎಂಬಂತೆ ಕರ್ನಾಟಕ ಪವರ್ ಕಾರ್ಪೊರೇಷನ್ (KPCL) ಅಧಿಕಾರಿಗಳು ಏಕಪಕ್ಷೀಯವಾಗಿ (Sagara) ನಡೆದುಕೊಳ್ಳುತ್ತಿದ್ದಾರೆ ಎಂಬ ಗಂಭೀರ ಆರೋಪ ಕೇಳಿಬಂದಿದೆ. ಯಾವುದೇ ಪೂರ್ವಭಾವಿ ನೋಟಿಸ್ ಅಥವಾ ಮುನ್ಸೂಚನೆ ನೀಡದೆ, ಬಡ ರೈತನೊಬ್ಬನ ಅಡಿಕೆ ತೋಟದ ಬೇಲಿಯನ್ನು ಕೆಪಿಸಿ ಅಧಿಕಾರಿಗಳು ಏಕಾಏಕಿ ತೆರವುಗೊಳಿಸಿದ್ದು, ಸಂತ್ರಸ್ತ ರೈತ ಕುಟುಂಬ ಕಣ್ಣೀರಿಡುವಂತಾಗಿದೆ.
80 ವರ್ಷಗಳಿಂದ ಅದೇ ಜಾಗದಲ್ಲಿ ಇರುವ ಕುಟುಂಬ
ಸಂತ್ರಸ್ತ ರೈತ ಗೋವರ್ಧನ ಅರಬಳ್ಳಿ ಅವರು ನೀಡಿರುವ ಮಾಹಿತಿಯ ಪ್ರಕಾರ, ಕಳೆದ ಸುಮಾರು 80 ವರ್ಷಗಳಿಂದ ಅವರ ತಂದೆ ವೆಂಕಣ್ಣ ಕಾನಕೇರಿ ಅರಬಳ್ಳಿ ಹಾಗೂ ಅವರ ಇಡೀ ಸಂಸಾರ ಇದೇ ಜಾಗದಲ್ಲಿ ವಾಸಿಸುತ್ತಾ ಬಂದಿದೆ. ತಮ್ಮ ಕುಟುಂಬದ ಜೀವನೋಪಾಯಕ್ಕಾಗಿ ಅವರು ಸಣ್ಣ ಮಟ್ಟದಲ್ಲಿ ಅಡಿಕೆ ತೋಟವನ್ನು ಮಾಡಿಕೊಂಡು ಜೀವನ ಸಾಗಿಸುತ್ತಿದ್ದರು. ಆದರೆ, ಇತ್ತೀಚೆಗೆ ಸ್ಥಳೀಯ ರಾಜಕೀಯ ಕಾರಣಗಳನ್ನು ಮುಂದಿಟ್ಟುಕೊಂಡು, ಕೆಪಿಸಿ ಅಧಿಕಾರಿಗಳು ಮನೆಯಲ್ಲಿ ಯಾರೂ ಇಲ್ಲದ ಸಂದರ್ಭ ನೋಡಿ ಯಾವುದೇ ಕಾನೂನಾತ್ಮಕ ಮಾಹಿತಿ ಅಥವಾ ನೋಟಿಸ್ ನೀಡದೆ ತೋಟದ ಬೇಲಿಯನ್ನು ತೆರವುಗೊಳಿಸಿದ್ದಾರೆ. ಈ ದಿಢೀರ್ ಕ್ರಮಕ್ಕೆ ನಿಖರವಾದ ಕಾರಣ ಏನೆಂಬುದು ತಿಳಿಯದೆ ರೈತ ಕುಟುಂಬ ಕಂಗಾಲಾಗಿದೆ.
ಗ್ರಾಮಸ್ಥರ ಆಕ್ರೋಶಕ್ಕೆ ಕಾರಣವಾದ KPCL ಕ್ರಮ
ಇನ್ನು ಸ್ಥಳೀಯವಾಗಿ ಬಲಾಢ್ಯರು ಹಾಗೂ ದೊಡ್ಡ ದೊಡ್ಡ ವ್ಯಕ್ತಿಗಳು ಕೂಡ ಇದೇ ರೀತಿಯಾಗಿ ಕೆಪಿಸಿ ಜಾಗವನ್ನು ಬಳಸಿಕೊಳ್ಳುತ್ತಿದ್ದಾರೆ. ಆದರೆ, ಅಧಿಕಾರಿಗಳು ಆ ಪ್ರಭಾವಿ ವ್ಯಕ್ತಿಗಳ ವಿರುದ್ಧ ಯಾವುದೇ ಕ್ರಮ ಕೈಗೊಳ್ಳದೆ, ಕೇವಲ ಬಡ ರೈತನನ್ನು ಗುರಿಯಾಗಿಸಿಕೊಂಡು ಈ ರೀತಿ ದೌರ್ಜನ್ಯ ಎಸಗುತ್ತಿರುವುದು ಗ್ರಾಮಸ್ಥರ ಆಕ್ರೋಶಕ್ಕೆ ಕಾರಣವಾಗಿದೆ. ಬಲಾಢ್ಯರಿಗೊಂದು ನ್ಯಾಯ, ಬಡವರಿಗೊಂದು ನ್ಯಾಯವೇ ಎಂದು ಪ್ರಶ್ನಿಸಿರುವ ಗೋವರ್ಧನ ಅರಬಳ್ಳಿ, ತಮಗೆ ಜಮೀನಿನಿಂದಲೇ ಜೀವನೋಪಾಯ ನಡೆಯುತ್ತಿದ್ದು, ಈ ಹಠಾತ್ ಕ್ರಮದಿಂದ ತಮಗೆ ತೀವ್ರ ಅನ್ಯಾಯವಾಗಿದೆ ಎಂದು ಅಳಲು ತೋಡಿಕೊಂಡಿದ್ದಾರೆ. ಶೀಘ್ರವೇ ಸಂಬಂಧಪಟ್ಟ ಹಿರಿಯ ಅಧಿಕಾರಿಗಳು ಹಾಗೂ ಜನಪ್ರತಿನಿಧಿಗಳು ಈ ವಿಷಯದಲ್ಲಿ ಮಧ್ಯಪ್ರವೇಶಿಸಿ ತಮಗೆ ಸೂಕ್ತ ನ್ಯಾಯ ದೊರಕಿಸಿಕೊಡಬೇಕೆಂದು ಅವರು ಆಗ್ರಹಿಸಿದ್ದಾರೆ.
ಇದನ್ನೂ ಓದಿ: ಮಂಗಳೂರು ಕೆಆರ್ಐಡಿಎಲ್ನಲ್ಲಿ 7% ಕಮಿಷನ್ ಆರೋಪ: 7 ದಿನಗಳಲ್ಲಿ ವರದಿ ಸಲ್ಲಿಸಲು ಸಚಿವ ಖಂಡ್ರೆ ಆದೇಶ
ವರದಿ: ಪ್ರಶಾಂತ್ ಭಟ್
