TOP NEWS

Bengaluru: ಬೆಂಗಳೂರು ಟೆಕ್ಕಿಗಳಿಗೆ ಮತ್ತೆ ವರ್ಕ್ ಫ್ರಂ ಹೋಂ ಭಾಗ್ಯ: ಟ್ರಾಫಿಕ್ ತಪ್ಪಿಸಲು ಸರ್ಕಾರದ ಮಾಸ್ಟರ್ ಪ್ಲಾನ್!

Bengaluru Traffic Control Master Plan ORR IT Firms Agree to 4 Month WFH as Mega Roadworks Set to Begin in October

ಬೆಂಗಳೂರು: ಸಿಲಿಕಾನ್ ಸಿಟಿಯ ಐಟಿ ಉದ್ಯೋಗಿಗಳಿಗೆ ಮತ್ತೊಮ್ಮೆ ಮನೆಯಿಂದಲೇ ಕೆಲಸ ಮಾಡುವ (Work From Home) ಅವಕಾಶ ಸಿಗುವ ಸಾಧ್ಯತೆ ದಟ್ಟವಾಗಿದೆ. ವಿಶೇಷವಾಗಿ ಬೆಂಗಳೂರಿನ (Bengaluru) ಪ್ರಮುಖ ಐಟಿ ಹಬ್ ಆಗಿರುವ ಔಟರ್ ರಿಂಗ್ ರೋಡ್ (ORR) ವ್ಯಾಪ್ತಿಯ ತಾಂತ್ರಿಕ ಕಂಪನಿಗಳ ಉದ್ಯೋಗಿಗಳಿಗೆ ಈ ಸೌಲಭ್ಯ ಕಲ್ಪಿಸಲು ಜಿಬಿಎ (GBA) ಗಂಭೀರ ಚಿಂತನೆ ನಡೆಸಿದೆ. ಮುಂಬರುವ ಅಕ್ಟೋಬರ್ ತಿಂಗಳಿನಿಂದ ಹೊರವರ್ತುಲ ರಸ್ತೆಯಲ್ಲಿ ಬೃಹತ್ ಮಟ್ಟದ ವೈಟ್ ಟಾಪಿಂಗ್ ಕಾಮಗಾರಿ ಆರಂಭವಾಗುತ್ತಿರುವುದೇ ಈ ಮಹತ್ವದ ತೀರ್ಮಾನಕ್ಕೆ ಮುಖ್ಯ ಕಾರಣವಾಗಿದೆ.

ಶೇ. 50 ರಷ್ಟು ಐಟಿ ಉದ್ಯೋಗಿಗಳಿಗೆ ಮನೆಯಿಂದಲೇ ಕೆಲಸ ಮಾಡಲು ಮನವಿ: ರಸ್ತೆ ಅಭಿವೃದ್ಧಿ ಕೆಲಸಗಳು ನಡೆಯುವಾಗ ಈ ಭಾಗದಲ್ಲಿ ಭೀಕರ ಸಂಚಾರ ದಟ್ಟಣೆ ಸೃಷ್ಟಿಯಾಗುವುದನ್ನು ತಡೆಯಲು ಸರ್ಕಾರ ಮುನ್ನೆಚ್ಚರಿಕೆ ಕ್ರಮ ಕೈಗೊಂಡಿದೆ. ಈ ಹಿನ್ನೆಲೆಯಲ್ಲಿ ಕಂದಾಯ ಸಚಿವ ಕೃಷ್ಣಬೈರೇಗೌಡ ಹಾಗೂ ಜಿಬಿಎ ಉನ್ನತ ಅಧಿಕಾರಿಗಳು ಔಟರ್ ರಿಂಗ್ ರೋಡ್ ಕಂಪನಿಗಳ ಒಕ್ಕೂಟದೊಂದಿಗೆ ಮಹತ್ವದ ಜಂಟಿ ಸಭೆ ನಡೆಸಿದ್ದಾರೆ. ಅಕ್ಟೋಬರ್‌ನಿಂದ ಆರಂಭವಾಗಿ ಮುಂದಿನ ವರ್ಷದ ಜನವರಿವರೆಗೆ (ಸುಮಾರು 4 ತಿಂಗಳು) ಈ ವೈಟ್ ಟಾಪಿಂಗ್ ಪ್ರಕ್ರಿಯೆ ನಡೆಯಲಿದ್ದು, ಈ ಅವಧಿಯಲ್ಲಿ ಕಂಪನಿಗಳ ಒಟ್ಟು ಸಿಬ್ಬಂದ ಪೈಕಿ ಶೇಕಡಾ 50 ರಷ್ಟು ಉದ್ಯೋಗಿಗಳಿಗೆ ವರ್ಕ್ ಫ್ರಂ ಹೋಂ ನೀಡುವಂತೆ ಸರ್ಕಾರದ ಪರವಾಗಿ ವಿನಂತಿಸಲಾಗಿದೆ. ಸರ್ಕಾರದ ಈ ಪ್ರಸ್ತಾವನೆಗೆ ಐಟಿ ಸಂಸ್ಥೆಗಳು ಸಕಾರಾತ್ಮಕವಾಗಿ ಸ್ಪಂದಿಸಿದ್ದು, ಆಂತರಿಕ ಸಿದ್ಧತೆಗಳನ್ನು ಮಾಡಿಕೊಳ್ಳುತ್ತಿವೆ.

ಟ್ರಾಫಿಕ್ ಕಿರಿಕಿರಿ ಇರಲ್ಲ; ನಿರ್ಧಾರ ಸ್ವಾಗತಿಸಿದ ಟೆಕ್ಕಿಗಳು: ಪ್ರತಿದಿನ ಲಕ್ಷಾಂತರ ವಾಹನಗಳು ಓಡಾಡುವ ಹೊರವರ್ತುಲ ರಸ್ತೆ ಕಿರಿದಾದರೆ ಇಡೀ ಭಾಗ ಸ್ತಬ್ಧಗೊಳ್ಳುವ ಭೀತಿ ಇತ್ತು. ಆದರೆ ಅರ್ಧದಷ್ಟು ಐಟಿ ಉದ್ಯೋಗಿಗಳು ಮನೆಯಲ್ಲೇ ಉಳಿದು ಕೆಲಸ ಮಾಡುವುದರಿಂದ ರಸ್ತೆಯ ಮೇಲಿನ ವಾಹನಗಳ ಒತ್ತಡ ಗಣನೀಯವಾಗಿ ತಗ್ಗಲಿದ್ದು, ಇಂಧನ ಮತ್ತು ಸಮಯ ಎರಡೂ ಉಳಿತಾಯವಾಗಲಿದೆ. ಸರ್ಕಾರದ ಈ ನೂತನ ಕ್ರಮವನ್ನು ಐಟಿ ವಲಯದ ಉದ್ಯೋಗಿಗಳು ಮುಕ್ತಕಂಠದಿಂದ ಸ್ವಾಗತಿಸಿದ್ದಾರೆ. ಕೋವಿಡ್ ಸಮಯದಲ್ಲಿ ಮನೆಯಿಂದಲೇ ಕೆಲಸ ಮಾಡಿದ ದೀರ್ಘ ಅನುಭವ ಇರುವುದರಿಂದ, ಕಂಪನಿಯ ದೈನಂದಿನ ಉತ್ಪಾದಕತೆಗೆ ಯಾವುದೇ ಧಕ್ಕೆಯಾಗದಂತೆ ಕೆಲಸ ನಿಭಾಯಿಸಲು ತಾಂತ್ರಿಕ ವಲಯ ಸಜ್ಜಾಗಿದೆ.

ದೊಡ್ಡ ದೊಡ್ಡ ಟೆಕ್ ಪಾರ್ಕ್‌ಗಳನ್ನು ಹೊಂದಿರುವ ಈ ವಲಯದಲ್ಲಿ ಕಾಮಗಾರಿ ಮುಗಿಯುವವರೆಗೂ ಪರಿಸ್ಥಿತಿಯನ್ನು ನಿಭಾಯಿಸಲು ಕಂಪನಿಗಳು ತಮ್ಮದೇ ಆದ ನಿಯಮಾವಳಿಗಳನ್ನು ರೂಪಿಸಿಕೊಳ್ಳುತ್ತಿವೆ. ಜನವರಿ ಅಂತ್ಯದ ವೇಳೆಗೆ ರಸ್ತೆ ಕೆಲಸಗಳು ಮುಗಿದ ನಂತರ ಎಂದಿನಂತೆ ಕಚೇರಿಗಳು ಕಾರ್ಯನಿರ್ವಹಿಸಲಿವೆ. ಆದಾಗ್ಯೂ, ಐಟಿ ವಾಹನಗಳ ಸಂಖ್ಯೆ ರಸ್ತೆಯಲ್ಲಿ ಕಡಿಮೆ ಆದರೂ ಸಹ, ಅದೇ ಮಾರ್ಗದಲ್ಲಿ ಸಂಚರಿಸುವ ಇತರ ಸಾಮಾನ್ಯ ವಾಹನ ಸವಾರರಿಗೆ ಕಾಮಗಾರಿ ಮುಗಿಯುವವರೆಗೂ ಸ್ವಲ್ಪ ಮಟ್ಟಿನ ಟ್ರಾಫಿಕ್ ಬಿಸಿ ತಟ್ಟುವುದಂತೂ ಗ್ಯಾರಂಟಿ.

ಇದನ್ನೂ ಓದಿ: ಹೊಸೂರು ಮೆಟ್ರೋಗೆ ಕರ್ನಾಟಕ ಬ್ರೇಕ್: ಬೊಮ್ಮಸಂದ್ರ ಟು ಅತ್ತಿಬೆಲೆ ವಿಸ್ತರಣೆಗೆ ಬಿಎಂಆರ್‌ಸಿಎಲ್ ಪ್ಲಾನ್

Leave a Reply

Your email address will not be published. Required fields are marked *