ಬೆಂಗಳೂರು: ಬಹುಚರ್ಚಿತ ರೇಣುಕಾಸ್ವಾಮಿ ಕೊಲೆ (Renukaswamy Case) ಪ್ರಕರಣದ ನ್ಯಾಯಾಲಯದ ವಿಚಾರಣೆಯಲ್ಲಿ ದಿನಕ್ಕೊಂದು ಮಹತ್ವದ ತಿರುವುಗಳು ಸಿಗುತ್ತಿವೆ. ಪ್ರಕರಣದ ಪ್ರಮುಖ ಸಾಕ್ಷಿಯಾಗಿರುವ ಮೃತನ ತಾಯಿ ರತ್ನಪ್ರಭಾ ಅವರನ್ನು ‘ಪ್ರತಿಕೂಲ ಸಾಕ್ಷಿ’ (ಹೊಸ್ಟೈಲ್ ವಿಟ್ನೆಸ್) ಎಂದು ಪರಿಗಣಿಸಿ, ಅವರನ್ನು ಮರು ಪಾಟೀಸವಾಲಿಗೆ ಒಳಪಡಿಸಲು ಅನುಮತಿ ಕೋರಿ ಪ್ರಾಸಿಕ್ಯೂಷನ್ ಬುಧವಾರ (ಆಗಸ್ಟ್ 12) ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿದೆ.
ಷೆಡ್ನಿಂದ ಬಂದಿದ್ದ ಕರೆಗಳೇ ಹೈಲೈಟ್
ಪ್ರಾಸಿಕ್ಯೂಷನ್ ಪರವಾಗಿ ವಿಶೇಷ ಸರ್ಕಾರಿ ಅಭಿಯೋಜಕ (ಎಸ್ಪಿಪಿ) ಪ್ರಸನ್ನ ಕುಮಾರ್ ಅವರು ಕೋರ್ಟ್ನಲ್ಲಿ ಬಲವಾದ ವಾದ ಮಂಡಿಸಿದರು. “ಕೊಲೆಯಾದ ದಿನ ಅಂದರೆ 2024ರ ಜೂನ್ 8ರಂದು ರೇಣುಕಾಸ್ವಾಮಿ ಅವರು ಚಿತ್ರದುರ್ಗದ ಷೆಡ್ನಿಂದಲೇ ತಮ್ಮ ತಾಯಿಯ ಮೊಬೈಲ್ಗೆ ಎರಡು ಬಾರಿ ಕರೆ ಮಾಡಿದ್ದರು. 27 ಸೆಕೆಂಡ್ ಹಾಗೂ 47 ಸೆಕೆಂಡ್ಗಳ ಕಾಲ ಈ ಸಂಭಾಷಣೆ ನಡೆದಿರುವ ತಾಂತ್ರಿಕ ದಾಖಲೆಗಳು ತನಿಖಾಧಿಕಾರಿಗಳ ಬಳಿ ಇವೆ. ಆದರೆ, ತಾಯಿ ರತ್ನಪ್ರಭಾ ಅವರು ತಮಗೆ ಮಗನಿಂದ ಯಾವುದೇ ಕರೆ ಬಂದಿಲ್ಲ ಎಂದು ಹೇಳಿಕೆ ನೀಡುತ್ತಿದ್ದಾರೆ. ಈ ಹೇಳಿಕೆಯು ಲಭ್ಯವಿರುವ ತಾಂತ್ರಿಕ ಸಾಕ್ಷ್ಯಗಳಿಗೆ ತದ್ವಿರುದ್ಧವಾಗಿರುವುದರಿಂದ ಅವರನ್ನು ಪ್ರತಿಕೂಲ ಸಾಕ್ಷಿ ಎಂದು ಘೋಷಿಸಿ, ಮರು ವಿಚಾರಣೆಗೆ ಅವಕಾಶ ನೀಡಬೇಕು” ಎಂದು ಕೋರಿದರು.
ದರ್ಶನ್ ಪರ ವಕೀಲರ ಆಕ್ಷೇಪ
ಇದಕ್ಕೆ ನಟ ದರ್ಶನ್ ಪರ ಹಿರಿಯ ವಕೀಲ ಹಷ್ಮತ್ ಪಾಷಾ ತೀವ್ರ ವಿರೋಧ ವ್ಯಕ್ತಪಡಿಸಿದರು. “ಮೃತನ ತಾಯಿ ಎಲ್ಲೂ ಪ್ರತಿಕೂಲ ಸಾಕ್ಷಿಯಾಗಿ ಬದಲಾಗಿಲ್ಲ. ಮುಖ್ಯ ವಿಚಾರಣೆಯ ಸಂದರ್ಭದಲ್ಲಿ ಅವರು ಪ್ರಾಸಿಕ್ಯೂಷನ್ಗೆ ಪೂರಕವಾಗಿಯೇ ಹೇಳಿಕೆ ನೀಡಿದ್ದಾರೆ. ಪಾಟೀಸವಾಲಿನ ವೇಳೆ ಕೇಳಲಾದ ಪ್ರಶ್ನೆಗಳಿಗೂ ಸೂಕ್ತ ಉತ್ತರವನ್ನೇ ಕೊಟ್ಟಿದ್ದಾರೆ. ಆದರೆ ಮರು ವಿಚಾರಣೆಯ ಸಮಯದಲ್ಲಿ ಪ್ರಾಸಿಕ್ಯೂಷನ್ ಯಾವುದೇ ಸ್ಪಷ್ಟನೆ ಕೇಳದೆ, ಈಗ ಈ ರೀತಿ ಅರ್ಜಿ ಸಲ್ಲಿಸುತ್ತಿರುವುದು ಸರಿಯಲ್ಲ. ಹೀಗಾಗಿ ಮರು ಪಾಟೀಸವಾಲಿಗೆ ಅವಕಾಶ ನೀಡಬಾರದು” ಎಂದು ಪ್ರತಿವಾದ ಮಂಡಿಸಿದರು.
ಇರಡೂ ಕಡೆಯ ಸುದೀರ್ಘ ವಾದ ಆಲಿಸಿದ ಹೈಕೋರ್ಟ್ ನ್ಯಾಯಮೂರ್ತಿ ಎಂ. ನಾಗಪ್ರಸನ್ನ ಅವರು, “ಇದು ಯಾರೋ ಅಪರಿಚಿತರು ಕೊಟ್ಟಿರುವ ಹೇಳಿಕೆಯಲ್ಲ. ಸ್ವತಃ ಕೊಲೆಯಾದ ಮಗನ ತಾಯಿಯ ಹೇಳಿಕೆಯನ್ನು ಪ್ರತಿಕೂಲ ಎಂದು ಪರಿಗಣಿಸಲು ಹೇಗೆ ಸಾಧ್ಯ?” ಎಂದು ಪ್ರಶ್ನಿಸಿ, ಈ ಅರ್ಜಿ ಮೇಲಿನ ತನ್ನ ಆದೇಶವನ್ನು ಕಾಯ್ದಿರಿಸಿದೆ.
ಆಗಸ್ಟ್ 18ಕ್ಕೆ ಪ್ರದೋಶ್ ಮಾಫಿ ಸಾಕ್ಷಿ ಹೇಳಿಕೆ ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಮತ್ತೊಂದೆಡೆ ಕಾನೂನು ಪ್ರಕ್ರಿಯೆಗಳು ತೇಜಸ್ವಿಯಾಗಿ ನಡೆಯುತ್ತಿವೆ. ದರ್ಶನ್ ಅವರ ಆಪ್ತ ಹಾಗೂ ಪ್ರಕರಣದ ಪ್ರಮುಖ ಆರೋಪಿಗಳಲ್ಲಿ ಒಬ್ಬನಾದ ಪ್ರದೋಶ್, ತಾನು ಮಾಫಿ ಸಾಕ್ಷಿ (ಅಪ್ರೂವರ್) ಆಗಲು ಸಿದ್ಧನಾಗಿ ಅರ್ಜಿ ಸಲ್ಲಿಸಿದ್ದು, ಆಗಸ್ಟ್ 18 ರಂದು ನ್ಯಾಯಾಲಯದ ಮುಂದೆ ತನ್ನ ಅಧಿಕೃತ ಹೇಳಿಕೆಯನ್ನು ದಾಖಲಿಸಲಿದ್ದಾನೆ.
ಇದರ ಜೊತೆಗೆ, ಮುಂದಿನ ಪ್ರಮುಖ ಸಾಕ್ಷಿಗಳ ವಿಚಾರಣೆಯ ದಿನಗಳಂದು ನಟ ದರ್ಶನ್ ಅವರು ಖುದ್ದಾಗಿ ಕೋರ್ಟ್ ಹಾಜರಿರಲು ಅನುಮತಿ ನೀಡಬೇಕೆಂದು ಅವರ ಪರ ವಕೀಲರು ಮನವಿ ಮಾಡಿದ್ದು, ಆ ಅರ್ಜಿಯ ವಿಚಾರಣೆಯೂ ಬಾಕಿ ಇದೆ. ಇನ್ನು ಪ್ರಕರಣದ 12ನೇ ಆರೋಪಿಯೂ ಸಹ ಜಾಮೀನು ಕೋರಿ ಕೋರ್ಟ್ ಮೆಟ್ಟಿಲೇರಿದ್ದು, ಶೀಘ್ರದಲ್ಲೇ ಅದರ ವಿಚಾರಣೆಯೂ ಆರಂಭವಾಗಲಿದೆ.
ಇದನ್ನೂ ಓದಿ: ಮದುವೆ ಆಮಿಷ, ಖಾಸಗಿ ವಿಡಿಯೋ ಲೀಕ್ ಬೆದರಿಕೆ: ವಿಶಾಖಪಟ್ಟಣಂನಲ್ಲಿ ರಾಹುಲ್ ಸಿಪ್ಲಿಗಂಜ್ ಸೇರಿ 12 ಜನರ ವಿರುದ್ಧ ಎಫ್ಐಆರ್!
