ಬೆಂಗಳೂರು: ರಾಜಧಾನಿ ಬೆಂಗಳೂರಿನ ಸುತ್ತಮುತ್ತಲಿರುವ ಕೋಟ್ಯಂತರ ರೂಪಾಯಿ ಮೌಲ್ಯದ ಸರ್ಕಾರಿ ಜಮೀನನ್ನು ಪ್ರಭಾವಿ ರಾಜಕಾರಣಿಗಳು ಮತ್ತು ಅಧಿಕಾರಿಗಳು ಸೇರಿ ಲೂಟಿ ಮಾಡಿರುವ ಬೃಹತ್ ಭೂ ಹಗರಣವೊಂದು (HC Balakrishna) ಬೆಳಕಿಗೆ ಬಂದಿದೆ. 2006ರ ಎ.ಟಿ. ರಾಮಸ್ವಾಮಿ ವರದಿ ಪ್ರಕಾರ ಸರ್ಕಾರಿ ಜಮೀನಿನ ಪೋಡಿ ಹಾಗೂ ಖಾತೆ ಮಾಡುವುದು ಸಂಪೂರ್ಣ ನಿಷಿದ್ಧವಾಗಿದ್ದರೂ, ನಿಯಮಗಳನ್ನು ಗಾಳಿಗೆ ತೂರಿ ಸುಮಾರು 300 ಕೋಟಿ ರೂಪಾಯಿಗೂ ಹೆಚ್ಚು ಮೌಲ್ಯದ ಭೂಮಿಯನ್ನು ಅಕ್ರಮವಾಗಿ ಖಾಸಗಿಯವರ ಹೆಸರಿಗೆ ವರ್ಗಾಯಿಸಲಾಗಿದೆ ಎಂಬ ಗಂಭೀರ ಆರೋಪ ಕೇಳಿಬಂದಿದೆ.
ಕುರುಬರಹಳ್ಳಿಯಲ್ಲಿ 100 ಕೋಟಿ ಆಸ್ತಿ ಸಚಿವರ ಪತ್ನಿ ಪಾಲು?
ಯಶವಂತಪುರ ಕ್ಷೇತ್ರದ ತಾವರೆಕೆರೆ ಹೋಬಳಿ ಕುರುಬರಹಳ್ಳಿ ಗ್ರಾಮದ ಸರ್ವೆ ನಂ. 158ರಲ್ಲಿರುವ ಸುಮಾರು 100 ಕೋಟಿ ರೂ. ಮೌಲ್ಯದ 8 ಎಕರೆ ಸರ್ಕಾರಿ ಜಮೀನನ್ನು ಸಚಿವ ಹೆಚ್.ಸಿ. ಬಾಲಕೃಷ್ಣ ಅವರ ಧರ್ಮಪತ್ನಿ ರಾಧಾ ಬಾಲಕೃಷ್ಣ ಅವರ ಹೆಸರಿಗೆ ಕಾನೂನುಬಾಹಿರವಾಗಿ ಪಹಣಿ ಮಾಡಿಕೊಡಲಾಗಿದೆ. 2025ರ ಏಪ್ರಿಲ್ ಮತ್ತು ಮೇ ತಿಂಗಳಲ್ಲಿ ಕೆಂಗೇರಿ ಉಪನಂದಣಾಧಿಕಾರಿ ಕಚೇರಿಯಲ್ಲಿ ಖಾಸಗಿ ವ್ಯಕ್ತಿಗಳಿಂದ ಈ ಆಸ್ತಿಯನ್ನು ನೋಂದಾಯಿಸಲಾಗಿತ್ತು. ನಂತರ ರಾಜಕೀಯ ಪ್ರಭಾವ ಬಳಸಿ ಹೆಚ್ಚುವರಿಯಾಗಿ 2.20 ಎಕರೆ ಸೇರಿಸಿ ಒಟ್ಟು 10.20 ಎಕರೆಗೆ ಅಕ್ರಮವಾಗಿ ಪೋಡಿ ದುರಸ್ತಿ ಮಾಡಲಾಗಿದ್ದು, ಪ್ರಸ್ತುತ ಖಾಸಗಿ ಡೆವಲಪರ್‌ಗಳು ಇಲ್ಲಿ ಬೃಹತ್ ಬಡಾವಣೆ ನಿರ್ಮಿಸಿದ್ದಾರೆ ಎನ್ನಲಾಗಿದೆ.
ಯು.ಎಂ. ಕಾವಲ್‌ನಲ್ಲಿ 200 ಕೋಟಿ ರೂ. ಬಂಡೆ ಸ್ವತ್ತು ಲೂಟಿ
ಇನ್ನೊಂದೆಡೆ ಉತ್ತರಹಳ್ಳಿ ಹೋಬಳಿಯ ಯು.ಎಂ. ಕಾವಲ್‌ನ ಸರ್ವೆ ನಂ. 18ರಲ್ಲಿರುವ ಸುಮಾರು 200 ಕೋಟಿ ರೂ. ಮೌಲ್ಯದ 8 ಎಕರೆ ಸರ್ಕಾರಿ ಬಂಡೆ ಸ್ವತ್ತನ್ನು ಕಾಂಗ್ರೆಸ್ ಮುಖಂಡರಾದ ಎಂ. ಮಂಜುನಾಥ್, ಆರ್. ಶೋಭಾ ಮಂಜುನಾಥ್, ಉಮೇಶ್ ಬಾಬು ಸೇರಿದಂತೆ ಹಲವರ ಹೆಸರಿಗೆ ದುರಸ್ತು ಮಾಡಿಕೊಡಲಾಗಿದೆ. ಈ ಆಸ್ತಿಯನ್ನು ಕಬಳಿಸಲು ದೂರದ ವಜ್ರಮುನೇಶ್ವರ ರಸ್ತೆಯ ದಾಖಲೆಗಳನ್ನು ದುರುಪಯೋಗಪಡಿಸಿಕೊಳ್ಳಲಾಗಿದೆ. 2026ರ ಮಾರ್ಚ್ ತಿಂಗಳಿನ ಜಿಲ್ಲಾಧಿಕಾರಿಗಳ ವರದಿಯಲ್ಲಿ ಇದು “ಸರ್ಕಾರಿ ಆಸ್ತಿ” ಎಂದು ಸ್ಪಷ್ಟವಾಗಿ ಉಲ್ಲೇಖವಾಗಿದ್ದರೂ ಅಕ್ರಮ ಪ್ರಕ್ರಿಯೆ ಮುಂದುವರಿದಿದೆ.
ಅಧಿಕಾರಿಗಳು – ರಾಜಕಾರಣಿಗಳ ಅಪವಿತ್ರ ಮೈತ್ರಿ
ಈ ಎರಡೂ ಪ್ರಕರಣಗಳಲ್ಲಿ ಸಚಿವ ಹೆಚ್.ಸಿ. ಬಾಲಕೃಷ್ಣ ಹಾಗೂ ಶಾಸಕ ಎಸ್.ಟಿ. ಸೋಮಶೇಖರ್ ಬೆಂಬಲಿಗರ ಪ್ರಭಾವಕ್ಕೆ ಮಣಿದು ಮಾಗಡಿ ಯೋಜನಾ ಪ್ರಾಧಿಕಾರ, ಬಿಎಂಐಸಿಎಪಿಎ (BMICAPA) ಅಧ್ಯಕ್ಷರು ಹಾಗೂ ಕಂದಾಯ ಇಲಾಖೆಯ ವಿಶೇಷ ಜಿಲ್ಲಾಧಿಕಾರಿ ಬಾಲಚಂದ್ರ, ತಹಸೀಲ್ದಾರ್‌ಗಳು, ಡಿಡಿಎಲ್‌ಆರ್ (DDLR) ಹಾಗೂ ಎಡಿಎಲ್‌ಆರ್ (ADLR) ಅಧಿಕಾರಿಗಳು ಶಾಮೀಲಾಗಿ ಖಾತೆಗಳನ್ನು ಮಾಡಿಕೊಟ್ಟಿದ್ದಾರೆ ಎಂದು ಆರೋಪಿಸಲಾಗಿದೆ.
ಈ ಹಿಂದೆ ಲೋಕಾಯುಕ್ತ ಹಾಗೂ ಜಿಲ್ಲಾಧಿಕಾರಿಗಳಿಗೆ ದೂರು ನೀಡಿದ್ದರೂ ಯಾವುದೇ ಕ್ರಮ ಕೈಗೊಂಡಿರಲಿಲ್ಲ. ಪ್ರಸ್ತುತ 300 ಕೋಟಿಗೂ ಹೆಚ್ಚು ಮೌಲ್ಯದ ಆಸ್ತಿ ಲೂಟಿ ಮಾಡಿರುವ ಭ್ರಷ್ಟ ಅಧಿಕಾರಿಗಳು ಮತ್ತು ನಾಯಕರ ವಿರುದ್ಧ ಕ್ರಿಮಿನಲ್ ಮೊಕದ್ದಮೆ ದಾಖಲಿಸುವಂತೆ ಲೋಕಾಯುಕ್ತ ಐಜಿಪಿ ಕಚೇರಿ, ಕಂದಾಯ ಇಲಾಖೆಯ ಅಪರ ಮುಖ್ಯ ಕಾರ್ಯದರ್ಶಿಗಳು ಹಾಗೂ ಪ್ರಾದೇಶಿಕ ಆಯುಕ್ತರಿಗೆ ಸಂಪೂರ್ಣ ದಾಖಲೆಗಳೊಂದಿಗೆ ದೂರು ಸಲ್ಲಿಸಲಾಗಿದ್ದು, ಜಮೀನನ್ನು ತಕ್ಷಣವೇ ಸರ್ಕಾರದ ವಶಕ್ಕೆ ಪಡೆಯಲು ಆಗ್ರಹಿಸಲಾಗಿದೆ.
ಇದನ್ನೂ ಓದಿ: ದೇಹಕ್ಕೆ ವಯಸ್ಸಾಗಿದೆ, ಬುದ್ಧಿಗಲ್ಲ: ಬಿಡದಿ ಟೌನ್‌ಶಿಪ್ ವಿರುದ್ಧದ ಹೋರಾಟದಲ್ಲಿ ಕಾಂಗ್ರೆಸ್‌ಗೆ ದೇವೇಗೌಡರ ಖಡಕ್ ಟಾಂಗ್!
