TOP NEWS

HD Deve Gowda: ದೇಹಕ್ಕೆ ವಯಸ್ಸಾಗಿದೆ, ಬುದ್ಧಿಗಲ್ಲ: ಬಿಡದಿ ಟೌನ್‌ಶಿಪ್‌ ವಿರುದ್ಧದ ಹೋರಾಟದಲ್ಲಿ ಕಾಂಗ್ರೆಸ್‌ಗೆ ದೇವೇಗೌಡರ ಖಡಕ್ ಟಾಂಗ್!

My Body Has Aged Not My Mind HD Deve Gowda Hits Back at Congress Over Bidadi Township Protest

ಬೆಂಗಳೂರು: ಕರ್ನಾಟಕ ಸರ್ಕಾರದ ಬಿಡದಿ ಟೌನ್‌ಶಿಪ್ ಯೋಜನೆಯನ್ನು ವಿರೋಧಿಸಿ ಜೆಡಿಎಸ್ ಹಮ್ಮಿಕೊಂಡಿರುವ ಪಾದಯಾತ್ರೆ ಎರಡನೇ ದಿನಕ್ಕೆ ಕಾಲಿಟ್ಟಿದ್ದು, ಮಾಜಿ ಪ್ರಧಾನಿ ಹೆಚ್.ಡಿ. ದೇವೇಗೌಡರು (HD Deve Gowda) ಭಾಗವಹಿಸಿ ಕಾಂಗ್ರೆಸ್ ಸರ್ಕಾರಕ್ಕೆ ನೇರ ಟಾಂಗ್ ನೀಡಿದ್ದಾರೆ. ಮಾಧ್ಯಮ ಪ್ರತಿನಿಧಿ ಜತೆ ಮಾತನಾಡಿದ ಅವರು, ಜೆಡಿಎಸ್‌ನ ಈ ಹೋರಾಟವನ್ನು ‘ಪ್ರಾಯಶ್ಚಿತ್ತ ಯಾತ್ರೆ’ ಎಂದು ಕರೆಯುತ್ತಿರುವ ಕಾಂಗ್ರೆಸ್ ನಾಯಕರಿಗೆ ಖಡಕ್ ತಿರುಗೇಟು ನೀಡಿದರು.

ರಾಜ್ಯದ ಜನರೇ ಕಾದು ನೋಡಲಿದ್ದಾರೆ

ಯಾರಿಗೆ ಪ್ರಾಯಶ್ಚಿತ್ತ ಆಗುತ್ತದೆ ಎಂಬುದನ್ನು ಮುಂದಿನ ದಿನಗಳಲ್ಲಿ ರಾಜ್ಯದ ಜನರೇ ಕಾದು ನೋಡಲಿದ್ದಾರೆ ಎಂದ ದೇವೇಗೌಡರು, ಕಾಂಗ್ರೆಸ್ ಸರ್ಕಾರದ ಈ ರೈತವಿರೋಧಿ ನಡವಳಿಕೆಯಿಂದ ಮುಂಬರುವ ದಿನಗಳಲ್ಲಿ ಯಾರಿಗೆ ಹಾನಿಯಾಗಲಿದೆ ಎಂಬುದಕ್ಕೆ ಕಾಲವೇ ಸೂಕ್ತ ಉತ್ತರ ನೀಡಲಿದೆ ಎಂದು ಎಚ್ಚರಿಸಿದರು.

ತಾವು ಹುಟ್ಟಿನಿಂದಲೇ ರೈತನ ಮಗನಾಗಿದ್ದು, ಜೀವನ ಪೂರ್ತಿ ರೈತರ ಪರವಾಗಿಯೇ ಹೋರಾಟ ನಡೆಸಿಕೊಂಡು ಬಂದಿರುವುದಾಗಿ ಸ್ಮರಿಸಿದ ಅವರು, ತಮ್ಮ ದೇಹಕ್ಕೆ ವಯಸ್ಸಾಗಿದೆಯೇ ಹೊರತು ಬುದ್ಧಿಗಲ್ಲ ಎಂಬುದನ್ನು ಸ್ಪಷ್ಟಪಡಿಸಿದರು. ಅಗತ್ಯ ಬಿದ್ದರೆ ವ್ಹೀಲ್ ಚೇರ್‌ನಲ್ಲಾದರೂ ಸರಿ, ರೈತರ ನ್ಯಾಯಕ್ಕಾಗಿ ಆರಂಭಿಸಿರುವ ಈ ಹೋರಾಟವನ್ನು ತಾರ್ಕಿಕ ಅಂತ್ಯಕ್ಕೆ ಕೊಂಡೊಯ್ಯುವುದಾಗಿ ದೇವೇಗೌಡರು ದೃಢವಾಗಿ ಹೇಳಿದರು.

ಕುಮಾರಸ್ವಾಮಿಯವರೇ ಬಿಡದಿ ಟೌನ್‌ಶಿಪ್‌ನ ನಿಜವಾದ ಪಿತಾಮಹ: ಎಂ.ಬಿ. ಪಾಟೀಲ್ ಖಡಕ್ ವ್ಯಂಗ್ಯ!

ಬಿಡದಿ ಟೌನ್‌ಶಿಪ್‌ ಯೋಜನೆಗೆ ಸಂಬಂಧಿಸಿದಂತೆ ಸಚಿವ ಎಂ.ಬಿ. ಪಾಟೀಲ್ ಅವರು ಕೇಂದ್ರ ಸಚಿವ ಹೆಚ್.ಡಿ. ಕುಮಾರಸ್ವಾಮಿ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ್ದು, ಈ ಯೋಜನೆಯ ನಿಜವಾದ ಪಿತಾಮಹ ಸ್ವತಃ ಕುಮಾರಸ್ವಾಮಿಯವರೇ ಎಂದು ತಿರುಗೇಟು ನೀಡಿದ್ದಾರೆ.

ವಿಜಯಪುರದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಎಂ.ಬಿ. ಪಾಟೀಲ್, ಬಿಡದಿ ಟೌನ್‌ಶಿಪ್‌ ಯೋಜನೆ ಎಂಬುದು ಕುಮಾರಸ್ವಾಮಿ ಅವರು ರಾಜ್ಯದ ಮುಖ್ಯಮಂತ್ರಿಯಾಗಿದ್ದ ಅವಧಿಯಲ್ಲಿ ರೂಪುಗೊಂಡ ಅವರ ‘ಕನಸಿನ ಕೂಸು’. ಈ ಯೋಜನೆಗೆ ಮೂಲ ಜನ್ಮ ನೀಡಿದ್ದೇ ಅವರು, ಹೀಗಾಗಿ ಅವರೇ ಈ ಯೋಜನೆಯ ಸಾಚಾ ‘ಪಿತಾಮಹ’ ಎಂದು ವ್ಯಂಗ್ಯವಾಡಿದರು. ತಾವೇ ಮುತುವರ್ಜಿ ವಹಿಸಿ ಆರಂಭಿಸಿದ ಯೋಜನೆಗೆ ಈಗ ಅವರೇ ವಿರೋಧ ವ್ಯಕ್ತಪಡಿಸುತ್ತಿರುವುದು ಕೇವಲ ರಾಜಕೀಯ ಲಾಭಕ್ಕಾಗಿ ಎಂದು ದೂರಿದರು.

ಇದೇ ವೇಳೆ ಬಿಡದಿ ಯೋಜನೆ ವಿರುದ್ಧ ಜೆಡಿಎಸ್ ಮತ್ತು ಬಿಜೆಪಿ ನಾಯಕರು ಹಮ್ಮಿಕೊಂಡಿರುವ ಜಂಟಿ ಪಾದಯಾತ್ರೆ ವಿಚಾರಕ್ಕೆ ಪ್ರತಿಕ್ರಿಯಿಸಿದ ಅವರು, ಇದೆಲ್ಲವೂ ಬರಿ ರಾಜಕೀಯ ಗಿಮಿಕ್ ಮತ್ತು ಜನರ ಕಣ್ಣಿಗೆ ಮಣ್ಣೆರಚುವ ನಾಟಕ ಎಂದು ಟೀಕಿಸಿದರು. ಇನ್ನು ಮಾಜಿ ಸಚಿವ ನಾಗೇಂದ್ರ ಅವರು ನ್ಯಾಯಾಲಯದ ನಿಯಮ ಉಲ್ಲಂಘಿಸಿರುವ ಆರೋಪದ ಕುರಿತು ಕೇಳಲಾದ ಪ್ರಶ್ನೆಗೆ ಉತ್ತರಿಸಿದ ಎಂ.ಬಿ. ಪಾಟೀಲ್, ಈ ವಿಚಾರವಾಗಿ ತಮಗೆ ಸಂಪೂರ್ಣ ಮಾಹಿತಿ ಇಲ್ಲ ಎಂದು ಹೇಳಿದರು. ವಿಷಯದ ಸತ್ಯಾಸತ್ಯತೆ ತಿಳಿಯದೆ ಮಾತನಾಡುವುದು ಸರಿಯಲ್ಲ, ಪ್ರಕರಣದ ಕುರಿತು ಪೂರ್ಣ ಮಾಹಿತಿ ಪಡೆದುಕೊಂಡ ನಂತರವೇ ಸೂಕ್ತವಾಗಿ ಪ್ರತಿಕ್ರಿಯಿಸುವುದಾಗಿ ಅವರು ಸ್ಪಷ್ಟಪಡಿಸಿದರು.

ಇದನ್ನೂ ಓದಿ: ಅಕ್ರಮ ವಲಸಿಗರ ವಿರುದ್ಧ ಸರ್ಕಾರದ ಬಿಗಿ ಕ್ರಮ: ಕಳೆದ 3 ತಿಂಗಳಲ್ಲಿ 1,000 ವಿದೇಶಿಗರ ಪತ್ತೆ, ಎಫ್‌ಆರ್‌ಒಗೆ ಹಸ್ತಾಂತರ!

Leave a Reply

Your email address will not be published. Required fields are marked *