TOP NEWS

Delimitation: ಕ್ಷೇತ್ರ ಮರುವಿಂಗಡಣೆ ಬಿಲ್ ಪಾಸ್ ಮಾಡಲು ಎನ್‌ಡಿಎಗೆ ಇದೆ ಸಂಖ್ಯಾಬಲ: ಪಿಎಂ ಮೋದಿ!

Targeting Delimitation bill PM Modi Assures NDA Has Required Strength for Legislative Push

ನವದೆಹಲಿ: ಕೇಂದ್ರ ಸರ್ಕಾರದ ಮಹತ್ವಾಕಾಂಕ್ಷೆಯ ಮಹಿಳಾ ಮೀಸಲಾತಿ ಮಸೂದೆ ಹಾಗೂ ಕ್ಷೇತ್ರ ಮರುವಿಂಗಡಣೆ (Delimitation) ಮಸೂದೆಯನ್ನು ಲೋಕಸಭೆಯಲ್ಲಿ ಅಂಗೀಕರಿಸಲು ಎನ್‌ಡಿಎ ಮೈತ್ರಿಕೂಟಕ್ಕೆ ಅಗತ್ಯವಿರುವ ಪೂರ್ಣ ಬೆಂಬಲವಿದೆ ಎಂದು ಪ್ರಧಾನಿ ನರೇಂದ್ರ ಮೋದಿ ವಿಶ್ವಾಸ ವ್ಯಕ್ತಪಡಿಸಿದ್ದಾರೆ. ಪ್ರತಿಪಕ್ಷಗಳ ಗದ್ದಲದಿಂದಾಗಿ ಸದ್ಯ ನಡೆಯುತ್ತಿರುವ ಮುಂಗಾರು ಅಧಿವೇಶನದಲ್ಲಿ ಈ ಮಸೂದೆಗಳನ್ನು ಮಂಡಿಸಲು ಸಾಧ್ಯವಾಗದಿದ್ದರೆ, ಇದೇ ತಿಂಗಳು ಸಂಸತ್ತಿನ ವಿಶೇಷ ಅಧಿವೇಶನ ಕರೆದಾದರೂ ಇವುಗಳನ್ನು ಪಾಸ್ ಮಾಡಲಾಗುವುದು ಎಂದು ಅವರು ತಿಳಿಸಿದ್ದಾರೆ. ಈ ಪ್ರಮುಖ ಬಿಲ್‌ಗಳನ್ನು ಕಾನೂನನ್ನಾಗಿ ಮಾಡಲು ಈಗಾಗಲೇ ಎನ್‌ಡಿಎ ಸರ್ಕಾರಕ್ಕೆ 366 ಸಂಸದರ ಬೆಂಬಲ ಸಿಕ್ಕಿದೆ ಎಂದು ಮೂಲಗಳು ತಿಳಿಸಿವೆ.

ಎನ್‌ಡಿಎ ಸಂಸದರ ಜೊತೆ ಚರ್ಚೆ

ಶುಕ್ರವಾರ ನಡೆದ ಎನ್‌ಡಿಎ ಸಂಸದರ ಪ್ರಮುಖ ಉಪಹಾರ ಸಭೆಯಲ್ಲಿ ಪ್ರಧಾನಿ ಈ ವಿಷಯಗಳನ್ನು ಹಂಚಿಕೊಂಡಿದ್ದಾರೆ. ಸಂಸತ್ತಿನ ಕಲಾಪ ಸುಗಮವಾಗಿ ನಡೆಯಲು ಸರ್ಕಾರವು ಪ್ರತಿಪಕ್ಷಗಳೊಂದಿಗೆ ಮಾತುಕತೆಗೆ ಪ್ರಯತ್ನಿಸುತ್ತಿರುವ ನಡುವೆಯೇ ಈ ಮಹತ್ವದ ಬೆಳವಣಿಗೆ ನಡೆದಿದೆ. ಶಿವಸೇನೆ ಮತ್ತು ಎನ್‌ಸಿಪಿ ಸೇರಿದಂತೆ ಮೈತ್ರಿಕೂಟದ ವಿವಿಧ ಪಕ್ಷಗಳ ಸುಮಾರು 45 ಸಂಸದರು ಈ ಸಭೆಯಲ್ಲಿ ಭಾಗವಹಿಸಿದ್ದರು. ಈ ವೇಳೆ ಪ್ರಧಾನಿ ಮೋದಿ ಅವರು ಪ್ರತಿಯೊಬ್ಬ ಸಂಸದರೊಂದಿಗೆ ವೈಯಕ್ತಿಕವಾಗಿ ಮಾತನಾಡಿ, ಅವರ ಕ್ಷೇತ್ರಗಳ ಅಭಿವೃದ್ಧಿ ಕಾರ್ಯಗಳು ಮತ್ತು ಜನಸಂಪರ್ಕದ ಬಗ್ಗೆ ಚರ್ಚಿಸಿದರು. ಕ್ಷೇತ್ರ ಮರುವಿಂಗಡಣೆ ಪ್ರಕ್ರಿಯೆಯಿಂದ ಯಾವುದೇ ಕ್ಷೇತ್ರದ ಹಿತಾಸಕ್ತಿಗೆ ಧಕ್ಕೆಯಾಗದಂತೆ ನೋಡಿಕೊಳ್ಳಲಾಗುವುದು ಎಂದು ಸಂಸದರಿಗೆ ಭರವಸೆ ನೀಡಿದರು.

ಇತ್ತೀಚಿನ ವಿದ್ಯಾರ್ಥಿ ಪ್ರತಿಭಟನೆಗಳ ಹಿನ್ನೆಲೆಯಲ್ಲಿ ಸಂಸದರು ಯುವ ಪೀಳಿಗೆಯನ್ನು, ವಿಶೇಷವಾಗಿ ‘ಜೆನ್-ಝಿ’ (GenZ) ಯುವಕರನ್ನು ತಲುಪಲು ಹೆಚ್ಚಿನ ಆದ್ಯತೆ ನೀಡಬೇಕು ಎಂದು ಪ್ರಧಾನಿ ಕರೆ ನೀಡಿದರು. ಸರ್ಕಾರದ ಯೋಜನೆಗಳು ಮತ್ತು ಸಾಧನೆಗಳನ್ನು ಯುವ ಮತದಾರರಿಗೆ ಮನವರಿಕೆ ಮಾಡಿಕೊಡಬೇಕು ಹಾಗೂ ಸರ್ಕಾರದ ಮೇಲಿರುವ ಅಸಮಾಧಾನಗಳನ್ನು ನೇರ ಸಂವಾದದ ಮೂಲಕ ಬಗೆಹರಿಸಬೇಕು ಎಂದು ಸಲಹೆ ನೀಡಿದರು. ಇದೇ ವೇಳೆ ಏಕನಾಥ್ ಶಿಂಧೆ ನೇತೃತ್ವದ ಶಿವಸೇನೆಯ ಸಂಸದರ ಆತಂಕ ದೂರ ಮಾಡಿದ ಮೋದಿ, ಪಕ್ಷಕ್ಕೆ ಸಂಬಂಧಿಸಿದ ನಿರ್ಧಾರಗಳನ್ನು ಸಾಂವಿಧಾನಿಕ ಚೌಕಟ್ಟಿನಲ್ಲೇ ತೆಗೆದುಕೊಳ್ಳಲಾಗಿದೆ. ಸುಪ್ರೀಂ ಕೋರ್ಟ್‌ನಲ್ಲಿ ಪ್ರಕರಣ ಬಾಕಿ ಇದ್ದರೂ ಸಂಸದರ ಸದಸ್ಯತ್ವಕ್ಕೆ ಯಾವುದೇ ಧಕ್ಕೆ ಇಲ್ಲ ಎಂದು ಸ್ಪಷ್ಟಪಡಿಸಿದರು.

ಸಂಸದರು ತಮ್ಮ ಕ್ಷೇತ್ರಗಳ ಅಭಿವೃದ್ಧಿ ಯೋಜನೆಗಳಿಗೆ ಏನಾದರೂ ಅಡೆತಡೆಗಳು ಎದುರಾದರೆ ನೇರವಾಗಿ ಪ್ರಧಾನಮಂತ್ರಿ ಕಚೇರಿಯನ್ನು (PMO) ಸಂಪರ್ಕಿಸಬಹುದು ಎಂದು ಮೋದಿ ಮುಕ್ತ ಅವಕಾಶ ನೀಡಿದರು. ಇದರೊಂದಿಗೆ ದೇಶಸೇವೆ ಮಾಡಲು ಸಂಸದರು ದೈಹಿಕವಾಗಿ ಸದೃಢವಾಗಿರಬೇಕು, ಅದಕ್ಕಾಗಿ ನಿಯಮಿತವಾಗಿ ಯೋಗ ಮತ್ತು ವ್ಯಾಯಾಮ ಮಾಡಬೇಕು ಎಂದು ಕಿವಿಮಾತು ಹೇಳಿದರು. ರೈತರು, ಕಾರ್ಮಿಕರು ಮತ್ತು ಆರ್ಥಿಕವಾಗಿ ಹಿಂದುಳಿದ ವರ್ಗಗಳ ಜನರೊಂದಿಗೆ ಸದಾ ಸಂಪರ್ಕದಲ್ಲಿದ್ದು ಅವರ ಸಮಸ್ಯೆಗಳಿಗೆ ಸ್ಪಂದಿಸಬೇಕು ಎಂದು ತಿಳಿಸಿದರು.

ಅಭಿವೃದ್ಧಿಗೆ ಕೇಂದ್ರ ಸರ್ಕಾರ ಮೊದಲ ಆದ್ಯತೆ

ಈಶಾನ್ಯ ರಾಜ್ಯಗಳ ಅಭಿವೃದ್ಧಿಗೆ ಕೇಂದ್ರ ಸರ್ಕಾರ ಮೊದಲ ಆದ್ಯತೆ ನೀಡಿದೆ ಎಂದ ಪ್ರಧಾನಿ, ಮೈತ್ರಿಕೂಟದಲ್ಲಿ ಯಾವುದೇ ಪಕ್ಷದ ಬಲವನ್ನು ಅದರ ಸಂಸದರ ಸಂಖ್ಯೆಯ ಆಧಾರದ ಮೇಲೆ ಅಳೆಯಬಾರದು ಎಂದರು. ಕೇವಲ ಒಬ್ಬ ಸಂಸದರಿರುವ ಸಣ್ಣ ಪಕ್ಷಕ್ಕೂ ದೊಡ್ಡ ಪಕ್ಷದಷ್ಟೇ ಗೌರವ ಮತ್ತು ಪ್ರಾಮುಖ್ಯತೆ ಸಿಗಲಿದ್ದು, ಮೈತ್ರಿಕೂಟ ಬಲಪಡಿಸಲು ಹೆಚ್ಚಿನ ಸಮನ್ವಯತೆಯ ಅಗತ್ಯವಿದೆ ಎಂದು ಒತ್ತಿ ಹೇಳಿದರು. ಇನ್ನು ಸಂಸತ್ತಿನಲ್ಲಿ ಪದೇ ಪದೇ ಉಂಟಾಗುತ್ತಿರುವ ಕಲಾಪದ ಅಡ್ಡಿಯ ಬಗ್ಗೆ ಕಳವಳ ವ್ಯಕ್ತಪಡಿಸಿದ ಅವರು, ಸಂಸತ್ತು ಪ್ರಜಾಪ್ರಭುತ್ವದ ಪರಮೋಚ್ಚ ದೇವಾಲಯವಾಗಿದೆ. ನಿರಂತರ ಗದ್ದಲದಿಂದಾಗಿ ಹೊಸದಾಗಿ ಆಯ್ಕೆಯಾದ ಸಂಸದರಿಗೆ ಮಾತನಾಡಲು ಅವಕಾಶ ಸಿಗುತ್ತಿಲ್ಲ, ಇದು ಅವರಿಗೆ ಮಾಡುತ್ತಿರುವ ಅನ್ಯಾಯ ಎಂದು ಬೇಸರ ವ್ಯಕ್ತಪಡಿಸಿದರು. ಕಲಾಪ ಸುಗಮವಾಗಿ ನಡೆಯಲು ಪ್ರತಿಪಕ್ಷಗಳ ಜೊತೆ ಚರ್ಚೆ ನಡೆಸಿದರೂ ಗದ್ದಲ ಮುಂದುವರಿದಿರುವುದು ದುರದೃಷ್ಟಕರ ಎಂದರು.

ಇದನ್ನೂ ಓದಿ: ಲಷ್ಕರ್ ಕಮಾಂಡರ್ ಲತೀಫ್ ಭಟ್ ಪತ್ತೆಗೆ 15 ಲಕ್ಷ ರೂ. ನಗದು ಬಹುಮಾನ ಘೋಷಿಸಿದ ಜಮ್ಮು-ಕಾಶ್ಮೀರ ಪೊಲೀಸ್

Leave a Reply

Your email address will not be published. Required fields are marked *