TOP NEWS

AAP: ದೆಹಲಿ ದಂಗೆ ವೇಳೆ ಐಬಿ ಅಧಿಕಾರಿ ಅಂಕಿತ್ ಶರ್ಮಾ ಕೊಲೆ ಪ್ರಕರಣ: ಆಪ್ ಮಾಜಿ ಮುಖಂಡ ತಾಹಿರ್ ಹುಸೇನ್‌ ಸೇರಿ ಐವರಿಗೆ ಜೀವಾವಧಿ ಶಿಕ್ಷೆ!

IB Officer Ankit Sharma Murder Case Delhi Court Hands Life Term to Former AAP Leader Tahir Hussain

ನವದೆಹಲಿ: ಕಳೆದ 2020ರ ಈಶಾನ್ಯ ದೆಹಲಿ ಗಲಭೆಯ ಸಂದರ್ಭದಲ್ಲಿ ಇಂಟೆಲಿಜೆನ್ಸ್ ಬ್ಯೂರೋ (ಐಬಿ) ಅಧಿಕಾರಿ ಅಂಕಿತ್ ಶರ್ಮಾ ಅವರನ್ನು ಭೀಕರವಾಗಿ ಹತ್ಯೆ ಮಾಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ, ಆಮ್ ಆದ್ಮಿ (AAP) ಪಕ್ಷದ ಮಾಜಿ ನಾಯಕ ತಾಹಿರ್ ಹುಸೇನ್ ಸೇರಿದಂತೆ ಐವರು ಆರೋಪಿಗಳಿಗೆ ದೆಹಲಿ ನ್ಯಾಯಾಲಯವು ಇಂದು ಶುಕ್ರವಾರ ಜೀವಾವಧಿ ಕಠಿಣ ಜೈಲು ಶಿಕ್ಷೆ ವಿಧಿಸಿ ಮಹತ್ವದ ತೀರ್ಪು ನೀಡಿದೆ.

ಈ ಭೀಕರ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಜುಲೈ 13 ರಂದು ಕರಕರ್‌ದೂಮಾ ನ್ಯಾಯಾಲಯವು ತಾಹಿರ್ ಹುಸೇನ್, ನಾಜಿಮ್, ಕಾಸಿಮ್, ಜಾವೇದ್ ಮತ್ತು ಅನಾಸ್ ಅವರನ್ನು ಅಪರಾಧಿಗಳು ಎಂದು ಘೋಷಿಸಿತ್ತು. ಕೊಲೆ ಮತ್ತು ಕ್ರಿಮಿನಲ್ ಪಿತೂರಿ ಸೇರಿದಂತೆ ಹಲವು ಗಂಭೀರ ಸೆಕ್ಷನ್‌ಗಳ ಅಡಿಯಲ್ಲಿ ಇವರೆಲ್ಲರೂ ದೋಷಿ ಎಂದು ಸಾಬೀತಾಗಿತ್ತು. ಇಂದು ನಡೆದ ಶಿಕ್ಷೆಯ ಪ್ರಮಾಣ ಪ್ರಕಟಿಸುವ ಅಂತಿಮ ವಿಚಾರಣೆಯ ವೇಳೆ, ದೆಹಲಿ ಪೊಲೀಸರು ಈ ಪ್ರಕರಣವು ಅತ್ಯಂತ ಅಪರೂಪದಲ್ಲಿ ಅಪರೂಪದ (Rarest of Rare) ಜಾತಿಗೆ ಸೇರುವುದರಿಂದ ತಾಹಿರ್ ಹುಸೇನ್ ಮತ್ತು ಇತರ ಅಪರಾಧಿಗಳಿಗೆ ಗಲ್ಲು ಶಿಕ್ಷೆ ವಿಧಿಸಬೇಕು ಎಂದು ಪ್ರಬಲವಾಗಿ ವಾದಿಸಿದ್ದರು. ಆದರೆ, ಇಕ್ಕೆಲಗಳ ವಾದ-ಪ್ರತಿವಾದಗಳನ್ನು ಆಲಿಸಿದ ನ್ಯಾಯಾಲಯವು ಅಪರಾಧಿಗಳಿಗೆ ಗಲ್ಲು ಶಿಕ್ಷೆಯ ಬದಲಾಗಿ ಜೀವಾವಧಿ ಜೈಲು ಶಿಕ್ಷೆಯನ್ನು ಪ್ರಕಟಿಸಿದೆ.

ಪ್ರಕರಣದ ಹಿನ್ನೆಲೆ ಏನು?

ಕಳೆದ 2020ರ ಫೆಬ್ರವರಿಯಲ್ಲಿ ಈಶಾನ್ಯ ದೆಹಲಿಯಲ್ಲಿ ಭುಗಿಲೆದ್ದಿದ್ದ ಭೀಕರ ಕೋಮು ಗಲಭೆಯ ಸಂದರ್ಭದಲ್ಲಿ ಗುಪ್ತಚರ ಇಲಾಖೆಯ ಯುವ ಅಧಿಕಾರಿ ಅಂಕಿತ್ ಶರ್ಮಾ ಅವರನ್ನು ದುಷ್ಕರ್ಮಿಗಳ ಗುಂಪು ಅತ್ಯಂತ ಕ್ರೂರವಾಗಿ ಕೊಲೆ ಮಾಡಿತ್ತು. ಹತ್ಯೆಯ ನಂತರ ಅವರ ಮೃತದೇಹವನ್ನು ಹತ್ತಿರದ ಚರಂಡಿಯೊಂದಕ್ಕೆ ಎಸೆಯಲಾಗಿತ್ತು. ತದನಂತರ ಚರಂಡಿಯಿಂದ ಪತ್ತೆಯಾದ ಅವರ ಶವ ಇಡೀ ದೇಶವನ್ನೇ ಬೆಚ್ಚಿಬೀಳಿಸಿತ್ತು. ದೆಹಲಿ ದಂಗೆಯ ಇಡೀ ತನಿಖೆಯಲ್ಲೇ ಇದು ಅತ್ಯಂತ ಹೈಪ್ರೊಫೈಲ್ ಮತ್ತು ಪ್ರಮುಖ ಪ್ರಕರಣವಾಗಿತ್ತು. ಸುದೀರ್ಘ ವಿಚಾರಣೆಯ ಬಳಿಕ ಇದೀಗ ಮಾಜಿ ರಾಜಕಾರಣಿ ತಾಹಿರ್ ಹುಸೇನ್ ಹಾಗೂ ಆತನ ಸಹಚರರಿಗೆ ಕಾನೂನುಬದ್ಧವಾಗಿ ತಕ್ಕ ಶಿಕ್ಷೆಯಾಗಿದೆ.

ಕೋರ್ಟ್‌ ಹೇಳಿದ್ದೇನು?

ಶಿಕ್ಷೆಯ ತೀರ್ಪಿನ ಅಂತಿಮ ಹಂತದಲ್ಲಿ ಮಾತನಾಡಿದ ನ್ಯಾಯಾಲಯ, ಅಪರಾಧಿಯು ಸಂಪೂರ್ಣವಾಗಿ ಸುಧಾರಿಸಿಕೊಳ್ಳಲು ಸಾಧ್ಯವೇ ಇಲ್ಲವೇ ಎಂಬುದನ್ನು ಪರಿಶೀಲಿಸುವುದು ಮುಖ್ಯವಾಗುತ್ತದೆ. ಇಂತಹ ಕೋಮು ಉದ್ವಿಗ್ನತೆಯ ಸಂದರ್ಭದಲ್ಲಿ ಹರಡುವ ತಪ್ಪು ಮಾಹಿತಿ, ಪ್ರಚೋದನೆ ಮತ್ತು ಅಪರಾಧಿಗಳ ಶೈಕ್ಷಣಿಕ ಹಿನ್ನೆಲೆಯನ್ನು ಪರಿಗಣಿಸಿ ಅವರಿಗೆ ಗಲ್ಲು ಶಿಕ್ಷೆಯ ಬದಲಾಗಿ ಕಠಿಣ ಜೀವಾವಧಿ ಶಿಕ್ಷೆಯನ್ನು ವಿಧಿಸಲಾಗುತ್ತಿದೆ ಎಂದು ಕೋರ್ಟ್ ತನ್ನ ತೀರ್ಪಿನಲ್ಲಿ ಸ್ಪಷ್ಟಪಡಿಸಿದೆ.

ಇದನ್ನೂ ಓದಿ: ಕಾಶ್ಮೀರದಲ್ಲಿ ರಸ್ತೆ ಅಪಘಾತ, 39 ಮಂದಿಗೆ ಗಾಯ

Leave a Reply

Your email address will not be published. Required fields are marked *