TOP NEWS

BPSC: ಹೋಟೆಲ್‌ನಲ್ಲಿ ಅಭ್ಯರ್ಥಿಗಳನ್ನು ಕೂಡಿಹಾಕಿ ಉತ್ತರ ಬಾಯಿಪಾಠ ಮಾಡಿಸಿದ್ದ ವೈದ್ಯ!; ಬಿಪಿಎಸ್‌ಸಿ ಪರೀಕ್ಷಾ ದಂಧೆಯ ರೋಚಕ ಕಥೆ ಬಿಚ್ಚಿಟ್ಟ ಪೊಲೀಸರು!

BPSC TRE 3 Scam Seal tampering expert former doctor arrested

ಪಾಟ್ನಾ: ಬಿಹಾರ ಶಿಕ್ಷಕರ ನೇಮಕಾತಿ ಪರೀಕ್ಷೆಯ (BPSC TRE-3) ಪ್ರಶ್ನೆಪತ್ರಿಕೆ ಸೋರಿಕೆ ಹಗರಣಕ್ಕೆ ಸಂಬಂಧಿಸಿದಂತೆ ಆರ್ಥಿಕ ಅಪರಾಧಗಳ ಘಟಕ (EOU) ಮಹತ್ವದ ಕಾರ್ಯಾಚರಣೆ ನಡೆಸಿದ್ದು, ಪ್ರಮುಖ ಆರೋಪಿಯಾಗಿದ್ದ ಸರ್ಕಾರಿ ಮಾಜಿ ವೈದ್ಯನನ್ನು ಬಂಧಿಸಿದೆ. ಬಂಧಿತ ಆರೋಪಿಯನ್ನು ಡಾ. ಮನೀಶ್ ಕುಮಾರ್ ಎಂದು ಗುರುತಿಸಲಾಗಿದ್ದು, ಈತ ಪರೀಕ್ಷೆಗೂ ಮುನ್ನವೇ ಸುಮಾರು 30 ಅಭ್ಯರ್ಥಿಗಳಿಗೆ ಸೋರಿಕೆಯಾದ ಪ್ರಶ್ನೆಪತ್ರಿಕೆಗಳನ್ನು ನೀಡಿ, ಅವರಿಂದ ಬರೋಬ್ಬರಿ 1.2 ಕೋಟಿ ರೂಪಾಯಿ ವಸೂಲಿ ಮಾಡಿದ್ದಾಗಿ ತನಿಖಾಧಿಕಾರಿಗಳು ಬಹಿರಂಗಪಡಿಸಿದ್ದಾರೆ. ಪ್ರಶ್ನೆಪತ್ರಿಕೆಗಳು ಇರುವ ಸೀಲ್ ಮಾಡಿದ ಬಾಕ್ಸ್‌ಗಳನ್ನು ಯಾವುದೇ ಅನುಮಾನ ಬಾರದಂತೆ ಅತ್ಯಂತ ಚಾಣಾಕ್ಷತನದಿಂದ ಓಪನ್ ಮಾಡಿ, ಮರಳಿ ಸೀಲ್ ಮಾಡುವುದರಲ್ಲಿ ಈ ವೈದ್ಯ ಎಕ್ಸ್‌ಪರ್ಟ್ ಆಗಿದ್ದ ಎಂದು ತನಿಖೆಯಿಂದ ತಿಳಿದುಬಂದಿದೆ.

ಸರ್ಕಾರಿ ವೈದ್ಯನಾಗಿ ಕೆಲಸ ಮಾಡುತ್ತಿದ್ದ ಆರೋಪಿ

ಹಗರಣದ ಕಿಂಗ್‌ಪಿನ್ ಎನ್ನಲಾದ ಸಂಜೀವ್ ಮುಖಿಯಾ ಎಂಬಾತನ ಮಗನೇ ಈ ಡಾ. ಮನೀಶ್ ಕುಮಾರ್. ಈತ ಈ ಹಿಂದೆ ಸರ್ಕಾರಿ ವೈದ್ಯನಾಗಿ ಕೆಲಸ ಮಾಡುತ್ತಿದ್ದು, ಪಾಟ್ನಾದಲ್ಲಿ ನೀಟ್-ಪಿಜಿ ಪರೀಕ್ಷೆಗೆ ಸಿದ್ಧತೆ ನಡೆಸುವಾಗ ತನ್ನ ಕೆಲಸಕ್ಕೆ ರಾಜೀನಾಮೆ ನೀಡಿದ್ದ. ಡಾ. ಶಿವ್ ಹಾಗೂ ಡಾ. ಶುಭಂ ಎಂಬ ತನ್ನ ಸಹಚರರೊಂದಿಗೆ ಸೇರಿಕೊಂಡು ಈತ ಪತ್ರಿಕೆ ಸೋರಿಕೆ ಜಾಲವನ್ನು ನಡೆಸುತ್ತಿದ್ದ. ಪರೀಕ್ಷೆ ನಡೆಯುವ ಒಂದು ದಿನ ಮುಂಚಿತವಾಗಿ ಅಂದರೆ, 2024ರ ಮಾರ್ಚ್ 14 ರಂದು ಪಾಟ್ನಾದ ಕೋಹಿನೂರ್ ಹೋಟೆಲ್‌ನಲ್ಲಿ ಸುಮಾರು 30 ಅಭ್ಯರ್ಥಿಗಳನ್ನು ಇರಿಸಲಾಗಿತ್ತು. ಅಲ್ಲಿ ಅವರಿಗೆ ಸೋರಿಕೆಯಾದ ಪ್ರಶ್ನೆಪತ್ರಿಕೆ ನೀಡಿ ಸಿದ್ಧತೆ ಮಾಡಿಸಲಾಗಿತ್ತು. ಆ ಸಮಯದಲ್ಲಿ ಪೊಲೀಸರು ಹೋಟೆಲ್ ಮೇಲೆ ದಾಳಿ ನಡೆಸಿದಾಗ ಮನೀಶ್ ಪರಾರಿಯಾಗಿದ್ದ. ಬಳಿಕ ಹೋಟೆಲ್‌ನ ಸಿಸಿಟಿವಿ ದೃಶ್ಯಾವಳಿ ಹಾಗೂ ವೈದ್ಯಕೀಯ ಕಾಲೇಜುಗಳ ವಿದ್ಯಾರ್ಥಿಗಳ ದತ್ತಾಂಶವನ್ನು ಪರಿಶೀಲಿಸಿ ಈತನನ್ನು ಪತ್ತೆಹಚ್ಚಿ ಬಂಧಿಸಲಾಗಿದೆ. ಪ್ರತಿ ಅಭ್ಯರ್ಥಿಯಿಂದ 50 ಸಾವಿರ ರೂಪಾಯಿ ಕಮಿಷನ್ ಪಡೆದಿದ್ದ ಈ ಜಾಲಕ್ಕೆ ಸಂಬಂಧಿಸಿದಂತೆ ಇದುವರೆಗೆ ಬರೋಬ್ಬರಿ 296 ಜನರನ್ನು ಬಂಧಿಸಲಾಗಿದೆ.

ಪರೀಕ್ಷಾ ಅಕ್ರಮಗಳ ವಿಚಾರಣೆಗೆ 3 ಫಾಸ್ಟ್ ಟ್ರ್ಯಾಕ್ ಕೋರ್ಟ್‌ಗಳ ಸ್ಥಾಪನೆ ಇದೇ ವೇಳೆ ಪರೀಕ್ಷಾ ವಂಚನೆ ಮತ್ತು ಪ್ರಶ್ನೆಪತ್ರಿಕೆ ಸೋರಿಕೆ ಪ್ರಕರಣಗಳ ವಿಚಾರಣೆಯನ್ನು ಚುರುಕುಗೊಳಿಸಲು ಬಿಹಾರ ಸರ್ಕಾರ ಮಹತ್ವದ ನಿರ್ಧಾರ ಕೈಗೊಂಡಿದೆ. ಪಾಟ್ನಾ ಹೈಕೋರ್ಟ್ ನಿರ್ದೇಶನದ ಮೇರೆಗೆ ಸಾರ್ವಜನಿಕ ಪರೀಕ್ಷೆಗಳ ಕಾಯ್ದೆ-2024ರ ಅಡಿಯಲ್ಲಿ ಪಾಟ್ನಾ, ಲಖಿಸರಾಯ್ ಮತ್ತು ಪೂರ್ಣಿಯಾದಲ್ಲಿ ಮೂರು ವಿಶೇಷ ಫಾಸ್ಟ್ ಟ್ರ್ಯಾಕ್ ನ್ಯಾಯಾಲಯಗಳನ್ನು ಸ್ಥಾಪಿಸಲಾಗಿದೆ. ಸಾಕ್ಷ್ಯಗಳ ಶೀಘ್ರ ದಾಖಲಾತಿ ಮತ್ತು ಪ್ರತ್ಯೇಕ ರೋಸ್ಟರ್‌ಗಳ ಮೂಲಕ ಇಂತಹ ಗಂಭೀರ ಪ್ರಕರಣಗಳ ವಿಚಾರಣೆಯನ್ನು ಕೇವಲ ಮೂರು ತಿಂಗಳ ಅವಧಿಯಲ್ಲಿ ಪೂರ್ಣಗೊಳಿಸಿ ತೀರ್ಪು ನೀಡುವುದು ಸರ್ಕಾರದ ಮುಖ್ಯ ಉದ್ದೇಶವಾಗಿದೆ.

ಈ ವಿಶೇಷ ನ್ಯಾಯಾಲಯಗಳಿಗೆ ನ್ಯಾಯಾಧೀಶರನ್ನು ನೇಮಕ ಮಾಡಲಾಗಿದ್ದು, ಪಾಟ್ನಾ ಕೋರ್ಟ್‌ಗೆ ಗೌರವ್ ಸಿಂಗ್, ಲಖಿಸರಾಯ್ ಕೋರ್ಟ್‌ಗೆ ಸೀಮಾ ಭಾರತೀಯ ಹಾಗೂ ಪೂರ್ಣಿಯಾ ನ್ಯಾಯಾಲಯಕ್ಕೆ ಅಮನ್ ಕುಮಾರ್ ಠಾಕೂರ್ ಅವರನ್ನು ಪ್ರಮುಖ ನ್ಯಾಯಾಧೀಶರನ್ನಾಗಿ ನೇಮಿಸಲಾಗಿದೆ. ಈ ಪೈಕಿ ಪಾಟ್ನಾದ ಫಾಸ್ಟ್ ಟ್ರ್ಯಾಕ್ ಕೋರ್ಟ್‌ನಲ್ಲಿ ಶಿಕ್ಷಕರ ನೇಮಕಾತಿ ಪರೀಕ್ಷೆ (TRE-3), ಕಾನ್‌ಸ್ಟೆಬಲ್ ನೇಮಕಾತಿ, 67ನೇ ಬಿಪಿಎಸ್‌ಸಿ ಪ್ರಿಲಿಮ್ಸ್ ಹಾಗೂ ಸಹಾಯಕ ಶಿಕ್ಷಣ ಅಭಿವೃದ್ಧಿ ಅಧಿಕಾರಿ (AEDO) ಪೇಪರ್ ಲೀಕ್‌ನಂತಹ ಹೈಪ್ರೊಫೈಲ್ ಪ್ರಕರಣಗಳ ವಿಚಾರಣೆ ನಡೆಯಲಿದೆ. ಇನ್ನು ಲಖಿಸರಾಯ್ ನ್ಯಾಯಾಲಯವು ನೀಟ್ (NEET) ಪರೀಕ್ಷಾ ಅಕ್ರಮದ ಪ್ರಕರಣವನ್ನು ಕೈಗೆತ್ತಿಕೊಳ್ಳಲಿದ್ದರೆ, ಪೂರ್ಣಿಯಾ ನ್ಯಾಯಾಲಯವು ಎಸ್‌ಎಸ್‌ಸಿ ಎಂಟಿಎಸ್ (SSC MTS) ಪರೀಕ್ಷಾ ಅಕ್ರಮಕ್ಕೆ ಸಂಬಂಧಿಸಿದ ಪ್ರಕರಣಗಳ ವಿಚಾರಣೆ ನಡೆಸಲಿದೆ.

ಇದನ್ನೂ ಓದಿ: ದೇಶದ ಶಿಕ್ಷಣ ವ್ಯವಸ್ಥೆ ಆರ್‌ಎಸ್‌ಎಸ್ ಹಿಡಿತದಲ್ಲಿದೆ!; ಕಿಡಿಕಾರಿದ ರಾಹುಲ್ ಗಾಂಧಿ!

Leave a Reply

Your email address will not be published. Required fields are marked *