TOP NEWS

Shocking: ದೆಹಲಿಯಲ್ಲಿ ವಿಧ್ವಂಸಕ ಕೃತ್ಯಕ್ಕೆ ಸಂಚು: ಪಾಕ್ ಐಎಸ್‌ಐ ಬೆಂಬಲಿತ ನಾಲ್ವರು ಶಂಕಿತ ಉಗ್ರರ ಬಂಧನ

ISI Handlers Directing Delhi Terror Plot here is how

ನವದೆಹಲಿ: ದೇಶದ ರಾಜಧಾನಿ ಹಾಗೂ ಸುತ್ತಮುತ್ತಲಿನ ದೆಹಲಿ-ಎನ್‌ಸಿಆರ್ ಪ್ರದೇಶದಲ್ಲಿ ಭಾರಿ ಪ್ರಮಾಣದ ಭಯೋತ್ಪಾದನಾ ದಾಳಿ ನಡೆಸಲು ಸಂಚು ರೂಪಿಸುತ್ತಿದ್ದ (Shocking) ಪಾಕಿಸ್ತಾನ ಬೆಂಬಲಿತ ನಾಲ್ವರು ಶಂಕಿತ ಉಗ್ರರನ್ನು ದೆಹಲಿ ಪೊಲೀಸರ ವಿಶೇಷ ದಳ (ಸ್ಪೆಷಲ್ ಸೆಲ್) ಯಶಸ್ವಿಯಾಗಿ ಬಂಧಿಸಿದೆ. ಈ ಮೂಲಕ ಪಾಕಿಸ್ತಾನದ ಗುಪ್ತಚರ ಸಂಸ್ಥೆ ಐಎಸ್‌ಐ (ISI) ನಂಟು ಹೊಂದಿದ್ದ ಅಂತರರಾಷ್ಟ್ರೀಯ ಮಟ್ಟದ ಕಾನೂನುಬಾಹಿರ ಶಸ್ತ್ರಾಸ್ತ್ರ ಜಾಲವನ್ನು ಪೊಲೀಸರು ಧ್ವಂಸಗೊಳಿಸಿದ್ದಾರೆ. ಬಂಧಿತ ಶಂಕಿತರು ಪಾಕ್ ಮೂಲದ ಹ್ಯಾಂಡ್ಲರ್ ಶಹಜಾದ್ ಭಟ್ಟಿ ಎಂಬಾತನ ನೇರ ಸೂಚನೆಯ ಮೇರೆಗೆ ದೆಹಲಿಯಲ್ಲಿ ವಿಧ್ವಂಸಕ ಕೃತ್ಯ ಎಸಗಲು ಸ್ಕೆಚ್ ಹಾಕಿದ್ದರು ಎಂದು ದೆಹಲಿ ಪೊಲೀಸ್ ವಿಶೇಷ ದಳದ ಡಿಸಿಪಿ ಪ್ರವೀಣ್ ತ್ರಿಪಾಠಿ ತಿಳಿಸಿದ್ದಾರೆ.

ವಿದೇಶಿ ಮೊಬೈಲ್ ಸಂಖ್ಯೆಗಳ ಬಳಕೆ

ಭಾರತೀಯ ತನಿಖಾ ಸಂಸ್ಥೆಗಳ ಕಣ್ಣಿಗೆ ಮಣ್ಣೆರಚಲು ಮತ್ತು ತಮ್ಮ ಸಂಭಾಷಣೆಯನ್ನು ಪತ್ತೆಹಚ್ಚಲು ಸಾಧ್ಯವಾಗದಂತೆ ತಡೆಯಲು ಈ ಉಗ್ರರು ಅತ್ಯಂತ ರಹಸ್ಯ ಸಮ್ಮೋಹನ ತಂತ್ರವನ್ನು ಬಳಸುತ್ತಿದ್ದರು. ಪಾಕಿಸ್ತಾನದಲ್ಲೇ ಕುಳಿತಿರುವ ಇವರ ಹ್ಯಾಂಡ್ಲರ್‌ಗಳು ಇವರಿಗೆ ವಿದೇಶಿ ಮೊಬೈಲ್ ಸಂಖ್ಯೆಗಳನ್ನು ಒದಗಿಸಿದ್ದರು. ಆ ಸಂಖ್ಯೆಗಳ ಮೂಲಕವೇ ವಾಟ್ಸಾಪ್ ಖಾತೆಗಳನ್ನು ತೆರೆದು ಈ ಶಂಕಿತರು ದೇಶವಿರೋಧಿ ಕೃತ್ಯಗಳ ಬಗ್ಗೆ ಮಾತನಾಡುತ್ತಿದ್ದರು ಎಂದು ಅಧಿಕಾರಿಗಳು ವಿವರಿಸಿದ್ದಾರೆ. ಬಂಧಿತ ಆರೋಪಿಗಳನ್ನು ಪಂಜಾಬ್ ಮೂಲದ ಶುಭದೀಪ್ ಸಿಂಗ್ ಅಲಿಯಾಸ್ ವಿಶಾಲ್, ಗುರ್ಜಾಂತ್ ಸಿಂಗ್ ಅಲಿಯಾಸ್ ರಿಷಿ, ಸಜ್ಜನ್ ಸಿಂಗ್ ಅಲಿಯಾಸ್ ಹನಿ ಮತ್ತು ದೆಹಲಿಯಲ್ಲಿ ಸಿಕ್ಕಿಬಿದ್ದ ಗಗನ್‌ಪ್ರೀತ್ ಎಂದು ಗುರುತಿಸಲಾಗಿದೆ.

ಪಾಕಿಸ್ತಾನದ ಹ್ಯಾಂಡ್ಲರ್‌ಗಳು ದೆಹಲಿಯಲ್ಲಿ ಹಲ್ಲೆ ನಡೆಸಲು ಪಂಜಾಬ್‌ನ ಯುವಕರನ್ನು ಸೆಳೆಯುತ್ತಿದ್ದಾರೆ ಎಂಬ ಖಚಿತ ಮಾಹಿತಿ ಮೇರೆಗೆ ಪೊಲೀಸರು ತಾಂತ್ರಿಕ ಕಣ್ಗಾವಲು ಹಾಗೂ ಕಾರ್ಯಾಚರಣೆ ನಡೆಸಿ ಇವರನ್ನು ಬಂಧಿಸಿದ್ದಾರೆ. ಮೊದಲಿಗೆ ಅಮೃತಸರದಲ್ಲಿ ಸಿಕ್ಕಿಬಿದ್ದ ಶುಭದೀಪ್ ಸಿಂಗ್ ವಿಚಾರಣೆ ವೇಳೆ ಆಘಾತಕಾರಿ ಮಾಹಿತಿ ಹೊರಹಾಕಿದ್ದಾನೆ. ಗಡಿಯುದ್ದಕ್ಕೂ ಪಾಕಿಸ್ತಾನದಿಂದ ಡ್ರೋನ್‌ಗಳ ಮೂಲಕ ರವಾನೆಯಾಗುತ್ತಿದ್ದ ಶಸ್ತ್ರಾಸ್ತ್ರಗಳು ಹಾಗೂ ಮಾದಕ ದ್ರವ್ಯಗಳ ಪಾರ್ಸೆಲ್‌ಗಳನ್ನು ಸ್ವೀಕರಿಸಿ ಸಂಗ್ರಹಿಸಿಡುವುದು ಇವರ ಮುಖ್ಯ ಕೆಲಸವಾಗಿತ್ತು. ಈತನ ಮಾಹಿತಿ ಆಧರಿಸಿ ಪಂಜಾಬ್‌ನಲ್ಲಿ ಗುರ್ಜಾಂತ್ ಮತ್ತು ಸಜ್ಜನ್ ಸಿಂಗ್‌ನನ್ನು ಬಂಧಿಸಲಾಯಿತು. ಇವರಲ್ಲಿ ಇಬ್ಬರು ಆರೋಪಿಗಳು ಈ ಹಿಂದೆ ಎನ್‌ಡಿಪಿಎಸ್ (NDPS) ಮಾದಕ ದ್ರವ್ಯ ಕಾಯ್ದೆಯಡಿಯೂ ಜೈಲು ಸೇರಿದ್ದರು.

ತನಿಖೆ ಮುಂದುವರೆಸಿದ ಪೊಲೀಸರು

ಇನ್ನು ದೆಹಲಿಯಲ್ಲಿ ಬಂಧಿತನಾದ ಗಗನ್‌ಪ್ರೀತ್ ಎಂಬಾತನಿಗೆ ರಾಜಧಾನಿಯ ಪ್ರಮುಖ ಧಾರ್ಮಿಕ ಸ್ಥಳಗಳು, ಪೊಲೀಸ್ ಠಾಣೆಗಳು ಹಾಗೂ ಪೊಲೀಸ್ ಪಿಕೆಟ್‌ಗಳ ಸುತ್ತಮುತ್ತ ರೆಕ್ಕಿ ನಡೆಸಿ ವಿಡಿಯೋ ಚಿತ್ರೀಕರಿಸುವ ಜವಾಬ್ದಾರಿ ನೀಡಲಾಗಿತ್ತು. ಆ ವಿಡಿಯೋಗಳನ್ನು ಪಾಕ್ ಹ್ಯಾಂಡ್ಲರ್‌ಗಳಿಗೆ ಕಳುಹಿಸಿ, ದೆಹಲಿಯಲ್ಲಿ ಭೀತಿ ಸೃಷ್ಟಿಸಲು ಗುಂಡಿನ ದಾಳಿ ನಡೆಸಲು ಈತ ಸಜ್ಜಾಗುತ್ತಿದ್ದ ಎಂದು ತನಿಖೆಯಿಂದ ತಿಳಿದುಬಂದಿದೆ. ಕಾರ್ಯಾಚರಣೆ ವೇಳೆ ಪೊಲೀಸರು ಅತ್ಯಾಧುನಿಕ ಜಿಗಾನಾ ಪಿಸ್ತೂಲ್, .30 ಬೋರ್ ಪಿಸ್ತೂಲ್ ಸೇರಿದಂತೆ ಎರಡು ವಿದೇಶಿ ಶಸ್ತ್ರಾಸ್ತ್ರಗಳು, ಒಂಬತ್ತು ಸಜೀವ ಗುಂಡುಗಳು ಹಾಗೂ ಐದು ಮೊಬೈಲ್ ಫೋನ್‌ಗಳನ್ನು ವಶಪಡಿಸಿಕೊಂಡಿದ್ದಾರೆ. ಸದ್ಯ ಆರೋಪಿಗಳ ವಿರುದ್ಧ ಭಾರತೀಯ ನ್ಯಾಯ ಸಂಹಿತೆ (BNS) ಹಾಗೂ ಶಸ್ತ್ರಾಸ್ತ್ರ ಕಾಯ್ದೆಯಡಿ ಪ್ರಕರಣ ದಾಖಲಿಸಲಾಗಿದ್ದು, ಈ ಜಾಲಕ್ಕೆ ಹಣಕಾಸು ಮತ್ತು ಲಾಗಿಸ್ಟಿಕ್ ನೆರವು ನೀಡಿದವರು ಯಾರು ಎಂಬ ಬಗ್ಗೆ ತನಿಖೆ ಮುಂದುವರಿದಿದೆ.

ಇದನ್ನೂ ಓದಿ:  ಅಮೆಜಾನ್ ಪ್ರೈಮ್‌ಗೆ ಬಿಗ್ ಶಾಕ್: ಕಂಪನಿ ವಿರುದ್ಧ ಕಾನೂನು ಕ್ರಮ!

Leave a Reply

Your email address will not be published. Required fields are marked *