TOP NEWS

BJP: ಕರ್ನಾಟಕ ಬಿಜೆಪಿಯಲ್ಲಿ ಬಣ ರಾಜಕೀಯ ಸ್ಫೋಟ: ಒಡೆದ ಮನೆಯಾದ ಕಮಲ ಪಡೆ

Internal Feud Rockets in Karnataka BJP Amid High Command Absolute

ಬೆಂಗಳೂರು: ರಾಜ್ಯ ಬಿಜೆಪಿಯಲ್ಲಿನ (BJP) ಆಂತರಿಕ ಭಿನ್ನಮತ ಈಗ ಬೀದಿಗೆ ಬಂದಿದ್ದು, ಪಕ್ಷವು ಸಂಪೂರ್ಣವಾಗಿ ನಿಯಂತ್ರಣ ತಪ್ಪಿದಂತೆ ಕಾಣುತ್ತಿದೆ. ‘ಮನೆಯೊಂದು ಮೂರು ಬಾಗಿಲು’ ಎಂಬ ಸ್ಥಿತಿಯನ್ನೂ ಮೀರಿ, ಸದ್ಯ ಪಕ್ಷದೊಳಗೆ ನಾಲ್ಕೈದು ಪ್ರತ್ಯೇಕ ಬಣಗಳು ಸೃಷ್ಟಿಯಾಗಿವೆ. ನಾಯಕರ ನಡುವಿನ ಇಗೊ ಫೈಟ್‌ನಿಂದಾಗಿ ಒಬ್ಬರ ಮುಖ ಮತ್ತೊಬ್ಬರು ನೋಡದಂತಹ ವಾತಾವರಣ ನಿರ್ಮಾಣವಾಗಿದ್ದರೂ, ಹೈಕಮಾಂಡ್ ಮಾತ್ರ ಗಂಭೀರ ಕ್ರಮ ಕೈಗೊಳ್ಳದೆ ನಿಗೂಢ ಮೌನ ವಹಿಸಿರುವುದು ತಳಮಟ್ಟದ ಕಾರ್ಯಕರ್ತರಲ್ಲಿ ತೀವ್ರ ಹತಾಶೆ ಮೂಡಿಸಿದೆ. ಮುಂದಿನ ವಿಧಾನಸಭಾ ಚುನಾವಣೆಗೆ ಇನ್ನು ಕೇವಲ ಎರಡು ವರ್ಷ ಬಾಕಿ ಇರುವಾಗ, ಆಡಳಿತ ಪಕ್ಷದ ವಿರುದ್ಧ ಹೋರಾಡಬೇಕಾದ ವಿರೋಧ ಪಕ್ಷ ಬಿಜೆಪಿ ತಾನೇ ಸೃಷ್ಟಿಸಿಕೊಂಡ ಆಂತರಿಕ ಜಗಳಗಳಲ್ಲೇ ಮುಳುಗಿಹೋಗಿದೆ. ಪ್ರಸ್ತುತ ಪಕ್ಷದಲ್ಲಿ ಬಿ.ವೈ.ವಿಜಯೇಂದ್ರ ಬಣ, ಆರ್.ಅಶೋಕ್ ಬಣ, ಹೈಕಮಾಂಡ್ ನಿಷ್ಠಾವಂತರು, ರೆಬೆಲ್ಸ್ ಪಡೆ ಹಾಗೂ ರಾಜಕೀಯ ಸಾಕು ಎಂದು ಸೈಲೆಂಟ್ ಆಗಿರುವ ಹತಾಶರ ಗುಂಪುಗಳು ಸಕ್ರಿಯವಾಗಿವೆ.

ವಿಜಯೇಂದ್ರ ವಿರುದ್ಧ ತಿರುಗಿಬಿದ್ದ ರೆಬೆಲ್ಸ್ ಪಡೆ

ರಾಜ್ಯ ಪ್ರವಾಸದ ಮೂಲಕ ಪಕ್ಷ ಸಂಘಟನೆಗೆ ಮುಂದಾಗಿರುವ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಅವರಿಗೆ ಒಳಗಿನಿಂದಲೇ ಭಾರಿ ಪ್ರತಿರೋಧ ವ್ಯಕ್ತವಾಗುತ್ತಿದೆ. ಅವರನ್ನು ಅಧ್ಯಕ್ಷ ಸ್ಥಾನದಿಂದ ಕೆಳಗಿಳಿಸಲೇಬೇಕು ಎಂದು ಒಂದು ದೊಡ್ಡ ರೆಬೆಲ್ ಪಡೆಯೇ ಕಾರ್ಯಾಚರಣೆ ನಡೆಸುತ್ತಿದೆ. ಇದಕ್ಕೆ ಪೂರಕವೆಂಬಂತೆ ಇತ್ತೀಚೆಗಷ್ಟೇ ಮಾಜಿ ಸಿಎಂ ಡಿ.ವಿ.ಸದಾನಂದ ಗೌಡರದ್ದು ಎನ್ನಲಾದ ಆಡಿಯೋ ಕ್ಲಿಪ್ ಒಂದು ಹರಿದಾಡಿದ್ದು, ಪಕ್ಷದೊಳಗಿನ ಬೇಗುದಿಯನ್ನು ಬಹಿರಂಗಪಡಿಸಿದೆ. ದೆಹಲಿಯ ಪ್ರಭಾವಿ ನಾಯಕರ ಆಶೀರ್ವಾದ ಇರುವುದರಿಂದ ವಿಜಯೇಂದ್ರ ಸದ್ಯಕ್ಕೆ ಸುರಕ್ಷಿತವಾಗಿದ್ದರೂ, ಬಂಡಾಯಗಾರರ ನಿರಂತರ ಸವಾಲು ಅವರಿಗೆ ತಲೆನೋವಾಗಿ ಪರಿಣಮಿಸಿದೆ.

ಡಿವಿಎಸ್ ಮತ್ತು ಎಸ್.ಆರ್.ವಿಶ್ವನಾಥ್ ನಡುವೆ ಕಾನೂನು ಸಮರ

ಇನ್ನೊಂದೆಡೆ, ಮಾಜಿ ಸಿಎಂ ಡಿ.ವಿ.ಸದಾನಂದ ಗೌಡ ಹಾಗೂ ಯಲಹಂಕ ಶಾಸಕ ಎಸ್.ಆರ್.ವಿಶ್ವನಾಥ್ ನಡುವಿನ ಜಗಳ ತಾರಕಕ್ಕೇರಿದೆ. ಕೆಂಪೇಗೌಡ ಜಯಂತಿ ಆಚರಣೆಯ ವೇದಿಕೆಯಲ್ಲಿ ಶುರುವಾದ ಈ ಕಿಡಿ, ಈಗ ವೈಯಕ್ತಿಕ ಆರೋಪ-ಪ್ರತ್ಯಾರೋಪಗಳ ಮಟ್ಟಕ್ಕೆ ತಲುಪಿದೆ. ವಿಶ್ವನಾಥ್ ವಿರುದ್ಧ ಡಿವಿಎಸ್ ಬಹಿರಂಗವಾಗಿಯೇ ಅಸಮಾಧಾನ ಹೊರಹಾಕಿದ್ದರೆ, ಇತ್ತ ವಿಶ್ವನಾಥ್ ಅವರು ಡಿವಿಎಸ್‌ಗೆ ಲೀಗಲ್ ನೋಟಿಸ್ ಕಳುಹಿಸುವ ಮೂಲಕ ಕೋರ್ಟ್ ಮೆಟ್ಟಿಲೇರಲು ಸಜ್ಜಾಗಿದ್ದಾರೆ. ವಿರೋಧ ಪಕ್ಷದ ನಾಯಕ ಆರ್.ಅಶೋಕ್ ನಡೆಸಿದ ಸಂಧಾನದ ಯತ್ನಗಳೂ ಇವರಿಬ್ಬರ ನಡುವೆ ವರ್ಕೌಟ್ ಆಗಿಲ್ಲ.

ಸುಧಾಕರ್ ಮತ್ತು ವಿಶ್ವನಾಥ್ ನಡುವೆ ಕ್ಷೇತ್ರಕ್ಕಾಗಿ ಫೈಟ್

ಎಸ್.ಆರ್.ವಿಶ್ವನಾಥ್ ಅವರಿಗೆ ಕೇವಲ ಡಿವಿಎಸ್ ಮಾತ್ರವಲ್ಲದೆ, ಸಂಸದ ಡಾ. ಕೆ.ಸುಧಾಕರ್ ಕೂಡ ಎದುರಾಳಿಯಾಗಿ ನಿಂತಿದ್ದಾರೆ. ಮುಂದಿನ ಚುನಾವಣೆಯಲ್ಲಿ ತಾವು ಯಲಹಂಕ ಕ್ಷೇತ್ರದಿಂದ ಸ್ಪರ್ಧಿಸುವುದಾಗಿ ಸುಧಾಕರ್ ಪರೋಕ್ಷ ಎಚ್ಚರಿಕೆ ನೀಡಿದ್ದರೆ, ಇದಕ್ಕೆ ಕೌಂಟರ್ ಕೊಟ್ಟಿರುವ ವಿಶ್ವನಾಥ್, “ಸುಧಾಕರ್ ಮೊದಲು ತಾವು ಸಂಸದರಾಗಿ ಇರುತ್ತಾರೋ ಅಥವಾ ಶಾಸಕರಾಗುತ್ತಾರೋ ಎಂಬುದನ್ನು ಸ್ಪಷ್ಟಪಡಿಸಲಿ” ಎಂದು ಸವಾಲು ಹಾಕಿದ್ದಾರೆ. ಈ ಬಹಿರಂಗ ವಾಕ್ಸಮರ ಪಕ್ಷದ ಇಮೇಜ್ ಅನ್ನು ಡ್ಯಾಮೇಜ್ ಮಾಡುತ್ತಿದೆ.

ಯತ್ನಾಳ್ ಉಚ್ಚಾಟನೆಯಾದರೂ ಮುಗಿಯದ ಯಡಿಯೂರಪ್ಪ ವಿರೋಧಿ ಅಲೆ

ಪಕ್ಷ ವಿರೋಧಿ ಹೇಳಿಕೆಗಳ ಹಿನ್ನೆಲೆಯಲ್ಲಿ ಹಿರಿಯ ನಾಯಕ ಬಸನಗೌಡ ಪಾಟೀಲ್ ಯತ್ನಾಳ್ ಅವರನ್ನು ಪಕ್ಷದಿಂದ ಉಚ್ಚಾಟನೆ ಮಾಡಲಾಗಿದ್ದರೂ, ಯಡಿಯೂರಪ್ಪ ಕುಟುಂಬದ ವಿರುದ್ಧ ಅವರ ವಾಗ್ದಾಳಿ ಮಾತ್ರ ಕಮ್ಮಿಯಾಗಿಲ್ಲ. ಅಚ್ಚರಿಯೆಂದರೆ, ಪಕ್ಷದೊಳಗಿರುವ ರೆಬೆಲ್ ನಾಯಕರು ಯತ್ನಾಳ್ ಹೇಳಿಕೆಗಳಿಗೆ ಪರೋಕ್ಷ ಬೆಂಬಲ ನೀಡುತ್ತಿರುವುದು ಪ್ರಸ್ತುತ ನಾಯಕತ್ವಕ್ಕೆ ಪ್ರತಿದಿನ ಹೊಸ ಸವಾಲುಗಳನ್ನು ತಂದೊಡ್ಡುತ್ತಿದೆ.

ಆರ್‌ಎಸ್‌ಎಸ್ ಸೂಚನೆಗೂ ಬೆಲೆಯಿಲ್ಲ, ಹೈಕಮಾಂಡ್ ಯಾವಾಗ ಎಚ್ಚರಗೊಳ್ಳತ್ತೆ?

ರಾಜ್ಯ ಬಿಜೆಪಿಯಲ್ಲಿ ಇಷ್ಟೆಲ್ಲಾ ಹೈಡ್ರಾಮಾ ನಡೆಯುತ್ತಿದ್ದರೂ ಕೇಂದ್ರ ನಾಯಕತ್ವವಾಗಲಿ ಅಥವಾ ರಾಷ್ಟ್ರೀಯ ಶಿಸ್ತು ಸಮಿತಿಯಾಗಲಿ ಯಾವುದೇ ಕಠಿಣ ಕ್ರಮಕ್ಕೆ ಮುಂದಾಗಿಲ್ಲ. ರಾಷ್ಟ್ರೀಯ ಸ್ವಯಂಸೇವಕ ಸಂಘದ (RSS) ಹಿರಿಯ ನಾಯಕರು ಈ ಗೊಂದಲಗಳಿಗೆ ಬ್ರೇಕ್ ಹಾಕಲು ಕೆಲವು ಆಂತರಿಕ ಸೂಚನೆಗಳನ್ನು ನೀಡಿದ್ದರೂ, ರಾಜ್ಯದ ನಾಯಕರು ಅದನ್ನು ಪಾಲಿಸುವ ಮನಸ್ಥಿತಿಯಲ್ಲಿಲ್ಲ. ಹೈಕಮಾಂಡ್‌ನ ಈ ಉದಾಸೀನತೆ ಹೀಗೆಯೇ ಮುಂದುವರಿದರೆ, ಈ ಜಗಳಕ್ಕೆ ಮುಕ್ತಿ ಸಿಗುವುದು ಯಾವಾಗ ಮತ್ತು ಪಕ್ಷಕ್ಕೆ ಭವಿಷ್ಯವಿದೆಯೇ ಎಂಬ ಯಕ್ಷಪ್ರಶ್ನೆ ಸಾಮಾನ್ಯ ಕಾರ್ಯಕರ್ತರನ್ನು ಕಾಡುತ್ತಿದೆ.

ಇದನ್ನೂ ಓದಿ: ರಾಜ್ಯದಲ್ಲಿ ಶೀಘ್ರದಲ್ಲೇ ಸಚಿವ ಸಂಪುಟ ವಿಸ್ತರಣೆ: 20 ಸ್ಥಾನಗಳಿಗಾಗಿ 50ಕ್ಕೂ ಹೆಚ್ಚು ಶಾಸಕರ ಭಾರಿ ಪೈಪೋಟಿ!

Leave a Reply

Your email address will not be published. Required fields are marked *