ನವದೆಹಲಿ: ಮೆಟ್ರೋ ರೈಲಿನಲ್ಲಿ ಪ್ರಯಾಣಿಸುವಾಗ ಮಹಿಳೆಯೊಬ್ಬರು ‘ಹೌ ಟು ಕಿಲ್ ಮೆನ್’ (ಪುರುಷರನ್ನು ಕೊಲ್ಲುವುದು ಹೇಗೆ) ಎಂಬ ವಿಲಕ್ಷಣ ಹೆಸರಿನ ಪುಸ್ತಕವನ್ನು ಓದುತ್ತಿರುವ ವಿಡಿಯೋವೊಂದು ಇತ್ತೀಚೆಗೆ (Viral Video) ಸೋಶಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ಹರಿದಾಡುತ್ತಿದ್ದು, ನೆಟ್ಟಿಗರ ಗಮನ ಸೆಳೆದಿದೆ. ಕೇವಲ ಪುಸ್ತಕದ ಶೀರ್ಷಿಕೆಯಿಂದಾಗಿಯೇ ಈ ಸಾಮಾನ್ಯ ದೃಶ್ಯವೀಗ ಇಂಟರ್ನೆಟ್ನಲ್ಲಿ ತೀವ್ರ ಚರ್ಚೆಗೆ ಕಾರಣವಾಗಿದೆ.
1.9 ಕೋಟಿಗೂ ಹೆಚ್ಚು ವೀವ್ಸ್
ಸುಮಾರು 1.9 ಕೋಟಿಗೂ ಹೆಚ್ಚು ವೀಕ್ಷಣೆ ಹಾಗೂ 4 ಲಕ್ಷಕ್ಕೂ ಅಧಿಕ ಲೈಕ್ಸ್ ಪಡೆದಿರುವ ಈ ಕ್ಲಿಪ್ಗೆ ಜನ ತರಹೇವಾರಿ ಕಮೆಂಟ್ಗಳನ್ನು ಮಾಡುತ್ತಿದ್ದಾರೆ. ಕೆಲವರು ಇದನ್ನು ಕೇವಲ ಒಂದು ಜೋಕ್ ಅಥವಾ ತಮಾಷೆಯ ವಿಷಯವಾಗಿ ನೋಡುತ್ತಿದ್ದರೆ, ಮತ್ತೆ ಕೆಲವರು ಇತ್ತೀಚಿನ ‘ಸಿಯಾ ಪ್ರಕರಣ’ದಂತಹ ಗಂಭೀರ ಸಂಗತಿಗಳಿಗೆ ಇದನ್ನು ಜೋಡಿಸಿ ಆನ್ಲೈನ್ನಲ್ಲಿ ದೊಡ್ಡ ಮಟ್ಟದ ವಾದ-ವಿವಾದಗಳನ್ನು ಎಬ್ಬಿಸುತ್ತಿದ್ದಾರೆ.
ಆದರೆ ಈ ವಿಡಿಯೋದ ಹಿಂದಿನ ಅಸಲಿ ಸತ್ಯ ಏನೆಂಬುದು ಯಾರಿಗೂ ಗೊತ್ತಿಲ್ಲ. ವಿಡಿಯೋದಲ್ಲಿ ಕೇವಲ ಪುಸ್ತಕದ ಮುಖಪುಟ ಮಾತ್ರ ಎದ್ದುಕಾಣುತ್ತಿರುವುದರಿಂದ ಆಕೆ ನಿಜವಾಗಿಯೂ ಆ ಪುಸ್ತಕವನ್ನು ಪೂರ್ತಿಯಾಗಿ ಓದುತ್ತಿದ್ದಾರೋ ಅಥವಾ ಕೇವಲ ಕುತೂಹಲಕ್ಕೆ ಹಿಡಿದುಕೊಂಡಿದ್ದಾರೋ ಎಂಬುದು ನಿಗೂಢವಾಗಿದೆ. ಹೀಗಿರುವಾಗ ಬರೀ ಹೆಡ್ಡಿಂಗ್ ನೋಡಿ ಆ ಮಹಿಳೆಯ ಉದ್ದೇಶ ಅಥವಾ ಸ್ವಭಾವವನ್ನು ಅಳೆಯುವುದು ತಪ್ಪು ಎಂದು ಹಲವರು ವಾದಿಸಿದ್ದಾರೆ. ಸಾಮಾನ್ಯವಾಗಿ ಕ್ರೈಮ್ ಥ್ರಿಲ್ಲರ್ ಅಥವಾ ಡಾರ್ಕ್ ಕಾಮೆಡಿ ಪ್ರಕಾರದ ಕಾದಂಬರಿಗಳಿಗೆ ಓದುಗರನ್ನು ಸೆಳೆಯಲು ಇಂತಹ ಶಾಕಿಂಗ್ ಶೀರ್ಷಿಕೆಗಳನ್ನು ಇಡುವುದು ಪಬ್ಲಿಷರ್ಸ್ ತಂತ್ರವಾಗಿರುತ್ತದೆ ಎಂದು ನೆಟ್ಟಿಗರು ನೆನಪಿಸಿದ್ದಾರೆ.
ಏನಿದು ಪುಸ್ತಕ ಕಥೆ?
ಈ ವಿಡಿಯೋ ಯಾವ ನಗರದ್ದು ಮತ್ತು ಯಾವಾಗ ಚಿತ್ರೀಕರಿಸಲಾಗಿದೆ ಎಂಬ ಸ್ಪಷ್ಟ ಮಾಹಿತಿ ಇಲ್ಲದ ಕಾರಣ, ಇದನ್ನು ಯಾವುದೇ ನೈಜ ಅಪರಾಧ ಘಟನೆಗಳಿಗೆ ಲಿಂಕ್ ಮಾಡುವುದು ಸರಿಯಲ್ಲ. ಅಂದಹಾಗೆ, ವಿಡಿಯೋದಲ್ಲಿರುವ ಪುಸ್ತಕ ಖ್ಯಾತ ಲೇಖಕಿ ಕೇಟಿ ಬ್ರೆಂಟ್ ಬರೆದಿರುವ ‘ಹೌ ಟು ಕಿಲ್ ಮೆನ್ ಆಂಡ್ ಗೆಟ್ ಅವೇ ವಿತ್ ಇಟ್’ ಎಂಬ ಜನಪ್ರಿಯ ಕಾದಂಬರಿಯಾಗಿದೆ. ಹೆಸರೇನೋ ಕೊಲೆಯ ಬಗ್ಗೆ ಹೇಳುವಂತಿದ್ದರೂ, ಇದು ಯಾವುದೇ ರಿಯಲ್ ಗೈಡ್ ಅಲ್ಲ; ಬದಲಿಗೆ ಸಸ್ಪೆನ್ಸ್ ಹಾಗೂ ಡಾರ್ಕ್ ಕಾಮೆಡಿ ಒಳಗೊಂಡ ಒಂದು ಕಾಲ್ಪನಿಕ ಕಥೆಯಾಗಿದೆ. ಬಿಡುಗಡೆಯಾದ ಸಮಯದಲ್ಲಿ ತನ್ನ ವಿಭಿನ್ನ ಪ್ರಚಾರದ ಶೈಲಿಯಿಂದಾಗಿ ಜಾಗತಿಕವಾಗಿ ಭಾರಿ ಸದ್ದು ಮಾಡಿದ್ದ ಈ ಪುಸ್ತಕ, ಈಗ ಈ ಮೆಟ್ರೋ ವಿಡಿಯೋ ಮೂಲಕ ಮತ್ತೊಮ್ಮೆ ಮುಂಚೂಣಿಗೆ ಬಂದಿದೆ.
ಇದನ್ನೂ ಓದಿ: ತಾಂತ್ರಿಕ ದೋಷ ತಂದಿಟ್ಟ ತಲೆನೋವು: ಮಹಾರಾಷ್ಟ್ರದ ರೈತ ಮಹಿಳೆಗೆ ‘1 ಪೈಸೆ’ ಪಿಎಂ-ಕಿಸಾನ್ ಕಂತಿನ ಮೆಸೇಜ್
