ಮುಂಬೈ: ಮಹಾರಾಷ್ಟ್ರದ ರೈತರೊಬ್ಬರಿಗೆ ಪ್ರಧಾನಮಂತ್ರಿ ಕಿಸಾನ್ ಸಮ್ಮಾನ್ ನಿಧಿ (PM-Kisan) ಯೋಜನೆಯ ಕಂತಿನ ಹಣ ಜಮೆಯಾದ ಕುರಿತು ಬಂದ ಒಂದು ಎಸ್‌ಎಮ್‌ಎಸ್ (SMS) ಇಡೀ ಕುಟುಂಬವನ್ನು ತೀವ್ರ ಗೊಂದಲಕ್ಕೆ ತಳ್ಳಿದ ಅಪರೂಪದ ಘಟನೆಯೊಂದು ವರದಿಯಾಗಿದೆ. ಯೋಜನೆಯಡಿ ಬರಬೇಕಿದ್ದ 2,000 ರೂಪಾಯಿ ಬದಲಿಗೆ ಕೇವಲ ‘1 ಪೈಸೆ’ ಮಾತ್ರ ಖಾತೆಗೆ ಜಮೆಯಾಗಿದೆ ಎಂಬ ಸಂದೇಶ ಮೊಬೈಲ್‌ಗೆ ಬಂದಿದ್ದೇ ಈ ಗೊಂದಲಕ್ಕೆ ಕಾರಣವಾಗಿತ್ತು. ಆದರೆ, ತಾಂತ್ರಿಕ ದೋಷದಿಂದಾಗಿ ಈ ರೀತಿ ತಪ್ಪು ಸಂದೇಶ ರವಾನೆಯಾಗಿದೆಯೇ ವಿನಃ ರೈತರ ಖಾತೆಗೆ ಪೂರ್ಣ ಹಣ ತಲುಪಿದೆ ಎಂದು ಅಲ್ಲಿನ ಕೃಷಿ ಇಲಾಖೆ ಸ್ಪಷ್ಟನೆ ನೀಡಿದೆ.
ಏನಿದು ಪ್ರಕರಣ?
ಮಹಾರಾಷ್ಟ್ರದ ಭಂಡಾರಾ ಜಿಲ್ಲೆಯ ಜೀವನಾಲ್ ಗ್ರಾಮದ 65 ವರ್ಷದ ರೈತ ಮಹಿಳೆ ಲಕ್ಷ್ಮೀಬಾಯಿ ಅವರಿಗೆ ಈ ವಾರದ ಆರಂಭದಲ್ಲಿ ಇಂತಹದೊಂದು ವಿಚಿತ್ರ ಸಂದೇಶ ಬಂದಿತ್ತು. ಖಾತೆಗೆ ಕೇವಲ 0.01 ರೂಪಾಯಿ ಜಮೆಯಾಗಿದೆ ಎಂಬ ನೋಟಿಫಿಕೇಶನ್ ನೋಡಿ ಇಡೀ ಕುಟುಂಬವೇ ಆತಂಕಕ್ಕೊಳಗಾಗಿತ್ತು. ಈ ಬಗ್ಗೆ ಮಾಧ್ಯಮಗಳೊಂದಿಗೆ ಮಾತನಾಡಿದ ಲಕ್ಷ್ಮೀಬಾಯಿ ಅವರ ಪುತ್ರ ಖೇಮರಾಜ್ ಗಿರೆಪುಂಜೆ, ಪ್ರಸ್ತುತ ಮುಂಗಾರು (ಖಾರಿಫ್) ಹಂಗಾಮು ಆರಂಭವಾಗುತ್ತಿರುವುದರಿಂದ ಬಿತ್ತನೆ ಬೀಜ ಹಾಗೂ ರಸಗೊಬ್ಬರ ಖರೀದಿಸಲು ನಾವು ಈ ಕಂತಿನ ಹಣವನ್ನೇ ನಂಬಿಕೊಂಡಿದ್ದೆವು. ಈ ಸಮಯದಲ್ಲಿ ಕೇವಲ 1 ಪೈಸೆ ಬಂದಿದೆ ಎಂಬ ಸಂದೇಶ ನೋಡಿ ಹಣ ಸಿಗುವುದಿಲ್ಲವೇನೋ ಎಂಬ ಆತಂಕ ಮೂಡಿತ್ತು ಎಂದು ತಮ್ಮ ಅಳಲು ತೋಡಿಕೊಂಡಿದ್ದಾರೆ.
ಕೇಂದ್ರ ಸರ್ಕಾರದ ಪಿಎಂ-ಕಿಸಾನ್ ಯೋಜನೆಯಡಿ ಅರ್ಹ ರೈತರಿಗೆ ವಾರ್ಷಿಕವಾಗಿ 6,000 ರೂಪಾಯಿ ಆರ್ಥಿಕ ನೆರವು ನೀಡಲಾಗುತ್ತಿದ್ದು, ಇದನ್ನು ತಲಾ 2,000 ರೂಪಾಯಿಯಂತೆ ಮೂರು ಸಮಾನ ಕಂತುಗಳಲ್ಲಿ ವಿತರಿಸಲಾಗುತ್ತದೆ. ಸದ್ಯ ರೈತ ಕುಟುಂಬದಲ್ಲಿದ್ದ ಗೊಂದಲದ ಬಗ್ಗೆ ತಕ್ಷಣವೇ ಪ್ರತಿಕ್ರಿಯಿಸಿದ ಭಂಡಾರಾ ಜಿಲ್ಲಾ ಕೃಷಿ ಅಧಿಕಾರಿ ಸಂಗೀತ ಮಾನೆ, ಬ್ಯಾಂಕ್ ಖಾತೆಗೆ ನಿಯಮದಂತೆ 2,000 ರೂಪಾಯಿ ಯಶಸ್ವಿಯಾಗಿ ಜಮೆಯಾಗಿದೆ. ಕೇವಲ ಸಂದೇಶ ಕಳುಹಿಸುವ ವ್ಯವಸ್ಥೆಯಲ್ಲಿ ಉಂಟಾದ ತಾಂತ್ರಿಕ ದೋಷದಿಂದಾಗಿ ಮೊಬೈಲ್‌ನಲ್ಲಿ ತಪ್ಪು ಮೊತ್ತ ತೋರಿಸಿದೆ ಎಂದು ಸ್ಪಷ್ಟಪಡಿಸಿದ್ದಾರೆ.
ಕೊನೆಗೂ ಸಿಕ್ಕ ಪೂರ್ಣ ಹಣ
ರೈತರು ಕೃಷಿ ಚಟುವಟಿಕೆಗಳ ವೆಚ್ಚವನ್ನು ತೂಗಿಸಲು ಇಂತಹ ಸರ್ಕಾರಿ ಸಹಾಯಧನವನ್ನೇ ಹೆಚ್ಚಾಗಿ ಅವಲಂಬಿಸಿರುತ್ತಾರೆ. ಹೀಗಿರುವಾಗ ಬಿತ್ತನೆಯ ಪ್ರಮುಖ ಅವಧಿಯಲ್ಲೇ ಇಂತಹ ಗೊಂದಲಕಾರಿ ಸಂದೇಶಗಳು ಬಂದರೆ ರೈತರಲ್ಲಿ ಅನಗತ್ಯ ಆತಂಕ ಸೃಷ್ಟಿಯಾಗುತ್ತದೆ ಎಂಬುದಕ್ಕೆ ಈ ಘಟನೆಯೇ ಸಾಕ್ಷಿಯಾಗಿದೆ. ಸದ್ಯ ಲಕ್ಷ್ಮೀಬಾಯಿ ಅವರಿಗೆ ಪೂರ್ಣ ಹಣ ಸಿಕ್ಕಿರುವುದು ಖಚಿತವಾಗಿದ್ದರೂ, ಡಿಜಿಟಲ್ ತಂತ್ರಜ್ಞಾನದ ಇಂತಹ ಸಣ್ಣ ತಪ್ಪುಗಳು ತಳಮಟ್ಟದ ಫಲಾನುಭವಿಗಳಿಗೆ ಎಷ್ಟು ದೊಡ್ಡ ತಲೆನೋವಾಗಿ ಪರಿಣಮಿಸುತ್ತವೆ ಎಂಬುದನ್ನು ಈ ಪ್ರಸಂಗ ನೆನಪಿಸುವಂತಿದೆ.
ಇದನ್ನೂ ಓದಿ: ರಾಮ ಮಂದಿರ ದೇಣಿಗೆ ಹಗರಣಕ್ಕೆ ರಾಜಕೀಯ ಟ್ವಿಸ್ಟ್: ಪ್ರಧಾನಿ ಮೋದಿ ಮೌನಕ್ಕೆ ಕಾಂಗ್ರೆಸ್ ಕಿಡಿ
