ಅಹಮದಾಬಾದ್: ಸಾರ್ವಜನಿಕರ ಮೊಬೈಲ್ಗಳಿಗೆ ನಕಲಿ ಆ್ಯಪ್ ಲಿಂಕ್ (APK File) ಕಳುಹಿಸಿ, ಇಡೀ ಫೋನ್ ಅನ್ನು ಹ್ಯಾಕ್ ಮಾಡುವ ಮೂಲಕ ದೇಶಾದ್ಯಂತ (Cyber Crime) ಭೀತಿ ಸೃಷ್ಟಿಸಿದ್ದ ಕುಖ್ಯಾತ ಜಾಮತಾರಾ ಸೈಬರ್ ವಂಚಕರ ಹೆಡೆಮುರಿಯನ್ನು ಸೈಬರ್ ಕ್ರೈಂ ಪೊಲೀಸರು ಕಟ್ಟಿದ್ದಾರೆ. ರಾಷ್ಟ್ರೀಯ ಸೈಬರ್ ಸಹಾಯವಾಣಿ 1930ಕ್ಕೆ ಬಂದ ಸಾಲು ಸಾಲು ದೂರುಗಳ ತಾಂತ್ರಿಕ ವಿಶ್ಲೇಷಣೆ ನಡೆಸಿದ ಸೈಬರ್ ತಜ್ಞರ ವಿಶೇಷ ತಂಡವು, ಈ ವಂಚಕ ಜಾಲದ ಕಾರ್ಯಾಚರಣೆಯ ಶೈಲಿಯನ್ನು ಪತ್ತೆಹಚ್ಚಿ ಇಡೀ ನೆಟ್ವರ್ಕ್ ಅನ್ನು ಧ್ವಂಸಗೊಳಿಸುವಲ್ಲಿ ಯಶಸ್ವಿಯಾಗಿದೆ.
ಅಹಮದಾಬಾದ್ನ ಹನ್ಸೋಲ್ ನಿವಾಸಿ ನರೇಶ್ ದೇವಾನಂದ್ ಸಬ್ನಾನಿ ಎಂಬುವವರು ತಾವು ಬರೋಬ್ಬರಿ 6,68,914 ರೂಪಾಯಿ ಕಳೆದುಕೊಂಡಿರುವುದಾಗಿ ದಾಖಲಿಸಿದ ದೂರಿನ ಆಧಾರದ ಮೇಲೆ ಈ ಬೃಹತ್ ಜಾಲ ಪತ್ತೆಯಾಗಿದೆ. ವಂಚಕರು ಇವರ ವಾಟ್ಸಾಪ್ಗೆ ‘ಸಬರಮತಿ ಗ್ಯಾಸ್ ಲಿಮಿಟೆಡ್’ ಸಂಸ್ಥೆಯ ಹೆಸರಿನಲ್ಲಿ ಒಂದು ನಕಲಿ ಸಂದೇಶ ಕಳುಹಿಸಿದ್ದರು. ಅದರಲ್ಲಿ, ತಕ್ಷಣವೇ ಬಿಲ್ ಅಪ್ಡೇಟ್ ಮಾಡದಿದ್ದರೆ ಗ್ಯಾಸ್ ಕನೆಕ್ಷನ್ ಕಡಿತ ಮಾಡಲಾಗುವುದು ಎಂದು ಹೆದರಿಸಲಾಗಿತ್ತು. ಗ್ಯಾಸ್ ಕಂಪನಿಯ ಅಧಿಕಾರಿಗಳ ಸೋಗಿನಲ್ಲಿ ಮಾತನಾಡಿದ ಖದೀಮರು, ನರೇಶ್ ಅವರ ಕೈಯಿಂದ ‘Sabarmati Gas Bill Update.apk’ ಎಂಬ ನಕಲಿ ಆ್ಯಪ್ ಅನ್ನು ಡೌನ್ಲೋಡ್ ಮಾಡಿಸಿದ್ದರು. ಈ ಅಪಾಯಕಾರಿ ಆ್ಯಪ್ ಇನ್ಸ್ಟಾಲ್ ಆಗುತ್ತಿದ್ದಂತೆಯೇ ವಂಚಕರು ನರೇಶ್ ಅವರ ಮೊಬೈಲ್ನ ಸಂಪೂರ್ಣ ನಿಯಂತ್ರಣ (Remote Access) ಪಡೆದು, ಅವರ ಎಚ್ಡಿಎಫ್ಸಿ ಬ್ಯಾಂಕ್ ಖಾತೆಯಲ್ಲಿದ್ದ ಹಣವನ್ನು ಗುಪ್ತವಾಗಿ ವರ್ಗಾಯಿಸಿಕೊಂಡಿದ್ದರು.
ಚಲಿಸುವ ರೈಲಿನಲ್ಲೇ ಎಪಿಕೆ ಡೆವಲಪರ್ ಬಂಧನ; ಚೈನ್ ರಿಯಾಕ್ಷನ್ ತಂತ್ರಜ್ಞಾನದ ಆಘಾತಕಾರಿ ಸತ್ಯ
ಪ್ರಕರಣದ ಆಳಕ್ಕಿಳಿದ ಪೊಲೀಸರು ತೀವ್ರ ತಾಂತ್ರಿಕ ತನಿಖೆಯ ನಂತರ ಈ ಗ್ಯಾಂಗ್ನ ಪ್ರಮುಖ ಸೂತ್ರಧಾರಿಗಳನ್ನು ಸೆರೆಹಿಡಿದಿದ್ದಾರೆ. ಈ ನಕಲಿ ಎಪಿಕೆ ಆ್ಯಪ್ಗಳನ್ನು ಸೃಜಿಸುತ್ತಿದ್ದ ಮುಖ್ಯ ಡೆವಲಪರ್ ಪೂರ್ಣಾನಂದ್ ಅಲಿಯಾಸ್ ಮುಖೇಶ್ ತಿವಾರಿಯನ್ನು ಕೋಲ್ಕತ್ತಾದಿಂದ ಸೈರಂಗ್ಗೆ ಚಲಿಸುತ್ತಿದ್ದ ರೈಲಿನಲ್ಲೇ ರೈಲ್ವೆ ಸಂರಕ್ಷಣಾ ಪಡೆಯ (RPF) ನೆರವಿನೊಂದಿಗೆ ಸಿನಿಮೀಯ ಶೈಲಿಯಲ್ಲಿ ಬಂಧಿಸಲಾಗಿದೆ. ಇದರ ಬೆನ್ನಲ್ಲೇ, ಸಾರ್ವಜನಿಕರಿಗೆ ಮೋಸದ ಲಿಂಕ್ಗಳನ್ನು ಹರಡುತ್ತಿದ್ದ ವಿಕಾಸ್ ದಾಸ್ ಹಾಗೂ ಕದ್ದ ಹಣವನ್ನು ಡ್ರಾ ಮಾಡಲು ಬ್ಯಾಂಕ್ ಕಾರ್ಡ್ಗಳ ವಿವರ ನೀಡುತ್ತಿದ್ದ ಸೀತಾರಾಮ್ ಮಂಡಲ್ ಎಂಬಿಬ್ಬರು ಪ್ರಮುಖ ಆರೋಪಿಗಳನ್ನು ಜಾರ್ಖಂಡ್ನಲ್ಲಿ ವಶಕ್ಕೆ ಪಡೆಯಲಾಗಿದೆ.
ಸ್ವಯಂಚಾಲಿತ ವಂಚನೆಯ ಜಾಲ: ಈ ಗ್ಯಾಂಗ್ ಅತ್ಯಂತ ವ್ಯವಸ್ಥಿತವಾದ ‘ಚೈನ್ ರಿಯಾಕ್ಷನ್’ ಮಾದರಿಯ ತಂತ್ರಜ್ಞಾನವನ್ನು ಅಳವಡಿಸಿಕೊಂಡಿತ್ತು. ಖಾಸಗಿ ಟೆಲಿಗ್ರಾಂ ಬೋಟ್ ಚಾನೆಲ್ ಬಳಸಿ ಬ್ಯಾಂಕ್ ಕೆವೈಸಿ, ವಿದ್ಯುತ್ ಬಿಲ್ ಹಾಗೂ ಆರ್ಟಿಒ ನೋಟಿಸ್ಗಳ ಹೆಸರಿನಲ್ಲಿ ಇವರು ನಕಲಿ ಆ್ಯಪ್ಗಳನ್ನು ಆಟೋಮ್ಯಾಟಿಕ್ ಆಗಿ ಸೃಷ್ಟಿಸುತ್ತಿದ್ದರು. ಒಮ್ಮೆ ಈ ಆ್ಯಪ್ ಫೋನ್ ಸೇರಿದರೆ, ಅದು ಬ್ಯಾಂಕಿಂಗ್ ಐಡಿ, ಪಾಸ್ವರ್ಡ್ ಹಾಗೂ ಒಟಿಪಿಗಳನ್ನು (OTP) ಕದಿಯುವುದಲ್ಲದೆ, ಸಂತ್ರಸ್ತರ ವಾಟ್ಸಾಪ್ ಮತ್ತು ಟೆಲಿಗ್ರಾಂ ಗ್ರೂಪ್ಗಳಲ್ಲಿದ್ದ ಎಲ್ಲಾ ಕಾಂಟ್ಯಾಕ್ಟ್ಗಳಿಗೂ ಅದೇ ಮಾಲಿಶಿಯಸ್ ಲಿಂಕ್ ಅನ್ನು ಆಟೋಮ್ಯಾಟಿಕ್ ಆಗಿ ಫಾರ್ವರ್ಡ್ ಮಾಡುತ್ತಿತ್ತು. ಇದರಿಂದಾಗಿ ಕೇವಲ ಕೆಲವೇ ದಿನಗಳಲ್ಲಿ ಸಾವಿರಾರು ಜನರಿಗೆ ಈ ವಂಚನೆ ಹರಡುತ್ತಿತ್ತು. ಇನ್ನು ಲೂಟಿ ಮಾಡಿದ ಹಣವನ್ನು ಡಿಜಿಟಲ್ ಹೆಜ್ಜೆಗುರುತು ಸಿಗದಂತೆ ಮಾಡಲು ಎಸ್ಬಿಐನ ಯೋನೋ (SBI YONO) ಕಾರ್ಡ್ರಹಿತ ಎಟಿಎಂ ಸೌಲಭ್ಯದ ಮೂಲಕ ಡ್ರಾ ಮಾಡಿಕೊಳ್ಳುತ್ತಿದ್ದರು. ಸದ್ಯ ಆರೋಪಿಗಳು ಕಟಕಟೆಗೆ ಸೇರಿದ್ದು, ಸೈಬರ್ ಪೊಲೀಸರು ವಿಚಾರಣೆ ಮುಂದುವರಿಸಿದ್ದಾರೆ.
