TOP NEWS

Donald Trump: ಸ್ಟೀಫನ್ ಕೋಲ್ಬರ್ಟ್ ವಿದಾಯಕ್ಕೆ ಟ್ರಂಪ್ ವ್ಯಂಗ್ಯ

donald trump shares AI video social media trend

ವಾಷಿಂಗ್ಟನ್: ಖ್ಯಾತ ಟಿವಿ ನಿರೂಪಕ ಸ್ಟೀಫನ್ ಕೋಲ್ಬರ್ಟ್ ಅವರ ‘ದಿ ಲೇಟ್ ಶೋ’ ಕಾರ್ಯಕ್ರಮದ ಕೊನೆಯ ಪ್ರಸಾರದ ಬೆನ್ನಲ್ಲೇ, ಅಮೆರಿಕದ ಮಾಜಿ ಅಧ್ಯಕ್ಷ ಡೊನಾಲ್ಡ್ ಟ್ರಂಪ್ (Donald Trump) ತಮ್ಮ ಸಾಮಾಜಿಕ ಮಾಧ್ಯಮಗಳಾದ ಎಕ್ಸ್ (ಟ್ವಿಟರ್) ಹಾಗೂ ಟ್ರುತ್ ಸೋಶಿಯಲ್‌ನಲ್ಲಿ ವಿಲಕ್ಷಣವಾದ ಎಐ (AI) ತಂತ್ರಜ್ಞಾನ ಆಧಾರಿತ ವಿಡಿಯೋವೊಂದನ್ನು ಹಂಚಿಕೊಂಡಿದ್ದಾರೆ. ತೀವ್ರವಾಗಿ ಎಡಿಟ್ ಮಾಡಲಾದ ಈ ವಿಡಿಯೋ ಕ್ಲಿಪ್‌ನಲ್ಲಿ, ಟ್ರಂಪ್ ಅವರು ಕೋಲ್ಬರ್ಟ್ ಅವರನ್ನು ಎತ್ತಿ ಕಸದ ತೊಟ್ಟಿಗೆ ಎಸೆಯುವಂತೆ ಬಿಂಬಿಸಲಾಗಿದೆ. ತದನಂತರ ವಿಡಿಯೋದಲ್ಲಿ ಟ್ರಂಪ್ ಅವರು ಜನರ ಸಮ್ಮುಖದಲ್ಲಿ ಪ್ರಸಿದ್ಧ ‘YMCA’ ಹಾಡಿಗೆ ನೃತ್ಯ ಮಾಡುವ ದೃಶ್ಯಗಳು ಮೂಡಿಬಂದಿವೆ. ಯಾವುದೇ ಶೀರ್ಷಿಕೆ ಇಲ್ಲದೆ ಪೋಸ್ಟ್ ಮಾಡಲಾದ ಈ ವಿಡಿಯೋ, ಟ್ರಂಪ್ ಮತ್ತು ದೂರದರ್ಶನದ ಮಾಜಿ ನಿರೂಪಕನ ನಡುವಿನ ದೀರ್ಘಕಾಲದ ವೈಷಮ್ಯದ ಮತ್ತೊಂದು ಕಹಿ ಅಧ್ಯಾಯವನ್ನು ತೆರೆದಿಟ್ಟಿದೆ.

ಸೋಷಿಯಲ್‌ ಮೀಡಿಯಾದಲ್ಲಿ ವಿಡಿಯೋ ವೈರಲ್

ಈ ಪೋಸ್ಟ್ ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ಸದ್ದು ಮಾಡುತ್ತಿದ್ದು, ಪರ-ವಿರೋಧದ ಚರ್ಚೆಗಳನ್ನು ಹುಟ್ಟುಹಾಕಿದೆ. ಟ್ರಂಪ್ ಬೆಂಬಲಿಗರು ಇದನ್ನು ವಿರೋಧಿಗಳ ವಿರುದ್ಧ ಅವರ ಸಾಂಪ್ರದಾಯಿಕ ಮತ್ತು ನೇರ ಶೈಲಿಯ ವಾಗ್ದಾಳಿ ಎಂದು ಶ್ಲಾಘಿಸಿದರೆ, ವಿರೋಧಿಗಳು ಇದು ಪ್ರಮುಖ ಧ್ವನಿಗಳನ್ನು ಹತ್ತಿಕ್ಕುವ ಟ್ರಂಪ್ ಅವರ ರಾಜಕೀಯ ತಂತ್ರ ಎಂದು ಟೀಕಿಸಿದ್ದಾರೆ. “ಇದು ನಿಜಕ್ಕೂ ಟ್ರಂಪ್ ಅವರ ಅಧಿಕೃತ ಖಾತೆಯೇ ಅಥವಾ ಯಾರಾದರೂ ಸೃಷ್ಟಿಸಿರುವ ಅಣಕು ಖಾತೆಯೇ ಎಂದು ನಾನು ಮತ್ತೊಮ್ಮೆ ಪರಿಶೀಲಿಸಬೇಕಾಯಿತು” ಎಂದು ಬಳಕೆದಾರರೊಬ್ಬರು ಕಾಮೆಂಟ್ ಮಾಡಿದ್ದರೆ, ಮತ್ತೊಬ್ಬರು “ಕೊನೆಯಲ್ಲಿ ಟ್ರಂಪ್ ಅವರ ನೃತ್ಯ ನೋಡಿ ನನಗೆ ನಗು ತಡೆಯಲಾಗಲಿಲ್ಲ” ಎಂದು ಬರೆದುಕೊಂಡಿದ್ದಾರೆ. ಮೂರನೇ ವ್ಯಕ್ತಿಯೊಬ್ಬರು, “ರಾಜಕೀಯ ಒತ್ತಡದ ಕಾರಣಕ್ಕಾಗಿಯೇ ಕೋಲ್ಬರ್ಟ್ ಅವರ ಶೋ ರದ್ದಾಗಿದೆ ಎಂಬುದನ್ನು ನಾವೀಗ ಒಪ್ಪಿಕೊಳ್ಳಲೇಬೇಕಾಗಿದೆ” ಎಂದು ಅಭಿಪ್ರಾಯಪಟ್ಟಿದ್ದಾರೆ.

ಕೋಲ್ಬರ್ಟ್ ಅವರ ದಶಕದ ಸುದೀರ್ಘ ಟಿವಿ ಪಯಣ ಕೊನೆಗೊಂಡ ಕೆಲವೇ ಗಂಟೆಗಳ ನಂತರ ಟ್ರಂಪ್ ಈ ವಿಡಿಯೋ ಹಂಚಿಕೊಂಡಿದ್ದಾರೆ. ಈ ಕುರಿತು ತಮ್ಮ ಸಾಮಾಜಿಕ ಮಾಧ್ಯಮದಲ್ಲಿ ಬರೆದುಕೊಂಡಿದ್ದ ಟ್ರಂಪ್, “ಸಿಬಿಎಸ್ (CBS) ವಾಹಿನಿಯಲ್ಲಿ ಕೋಲ್ಬರ್ಟ್ ಅಧ್ಯಾಯ ಕೊನೆಗೂ ಮುಗಿದಿದೆ. ಆತ ಇಷ್ಟು ದಿನಗಳ ಕಾಲ ಅಲ್ಲಿ ಮುಂದುವರಿದಿದ್ದೇ ಆಶ್ಚರ್ಯ! ಆತನಿಗೆ ಯಾವುದೇ ಪ್ರತಿಭೆಯಾಗಲಿ, ರೇಟಿಂಗ್ಸ್ ಆಗಲಿ ಇರಲಿಲ್ಲ. ಆತ ಒಣಗಿದ ಮರದಂತಿದ್ದನು. ರಸ್ತೆಯಲ್ಲಿ ಹೋಗುವ ಸಾಮಾನ್ಯ ವ್ಯಕ್ತಿಯನ್ನು ತಂದು ನಿಲ್ಲಿಸಿದರೂ ಆತನಿಗಿಂತ ಉತ್ತಮವಾಗಿ ಶೋ ನಡೆಸಬಲ್ಲನು. ಆ ಮೂರ್ಖ ಕೊನೆಗೂ ಹೋದನಲ್ಲ, ಅದೇ ಸಂತೋಷ” ಎಂದು ಕಟುವಾಗಿ ನಿಂದಿಸಿದ್ದಾರೆ.

ಕಳೆದ ವರ್ಷದ ಜುಲೈ ತಿಂಗಳಿನಲ್ಲಿ ಸಿಬಿಎಸ್ ವಾಹಿನಿಯು ‘ದಿ ಲೇಟ್ ಶೋ’ ಕಾರ್ಯಕ್ರಮವನ್ನು ರದ್ದುಗೊಳಿಸುವುದಾಗಿ ಘೋಷಿಸಿದಾಗಲೂ ಟ್ರಂಪ್ ತಮ್ಮ ಸಂತಸವನ್ನು ಬಹಿರಂಗಪಡಿಸಿದ್ದರು. ಜೊತೆಗೆ ಇತರ ತಡರಾತ್ರಿಯ ಟಿವಿ ಶೋಗಳ ನಿರೂಪಕರನ್ನು ಲೇವಡಿ ಮಾಡಿದ್ದರು. “ಕೋಲ್ಬರ್ಟ್‌ನನ್ನು ಕೆಲಸದಿಂದ ತೆಗೆದುಹಾಕಿರುವುದು ನನಗೆ ಅಪಾರ ಸಂತೋಷ ತಂದಿದೆ. ಆತನ ರೇಟಿಂಗ್ಸ್‌ಗಿಂತಲೂ ಆತನ ಪ್ರತಿಭೆ ತೀರಾ ಕಳಪೆಯಾಗಿತ್ತು. ಮುಂದಿನ ಸರದಿ ಜಿಮ್ಮಿ ಕಿಮ್ಮೆಲ್ ಅವರದ್ದು ಎಂದು ಕೇಳಲ್ಪಟ್ಟಿದ್ದೇನೆ. ಇವರೆಲ್ಲರಿಗಿಂತ ಗ್ರೆಗ್ ಗುಟ್‌ಫೆಲ್ಡ್ ಎಷ್ಟೋ ಪಟ್ಟು ಉತ್ತಮ. ಎನ್‌ಬಿಸಿ (NBC) ವಾಹಿನಿಯ ಶೋ ಹಾಳು ಮಾಡಿದ ಮೂರ್ಖನಿಗಿಂತಲೂ ಇವರು ನಯಾ” ಎಂದು ಬರೆದುಕೊಂಡಿದ್ದರು.

ಟ್ರಂಪ್‌ಗೂ-ಕೋಲ್ಬರ್ಟ್‌ಗೂ ವೈಷಮ್ಯ?

2015 ರಲ್ಲಿ ಪ್ರಸಿದ್ಧ ನಿರೂಪಕ ಡೇವಿಡ್ ಲೆಟರ್‌ಮನ್ ಅವರಿಂದ ಜವಾಬ್ದಾರಿ ವಹಿಸಿಕೊಂಡಿದ್ದ ಕೋಲ್ಬರ್ಟ್, ಟ್ರಂಪ್ ಅವರ ತೀವ್ರ ಟೀಕಾಕಾರರಲ್ಲಿ ಒಬ್ಬರಾಗಿದ್ದರು. ಕಳೆದ ವರ್ಷ ಪ್ಯಾರಾಮೌಂಟ್ ಸಂಸ್ಥೆಯು ಟ್ರಂಪ್ ಅವರೊಂದಿಗೆ ಮಾಡಿಕೊಂಡಿದ್ದ ಕಾನೂನು ರಾಜಿ ಸಂಧಾನಕ್ಕೂ ಹಾಗೂ ಈ ಶೋ ರದ್ದತಿಗೂ ನೇರ ನಂಟಿದೆ ಎಂದು ಕಾರ್ಯಕ್ರಮದ ಅಭಿಮಾನಿಗಳು ಅನುಮಾನ ವ್ಯಕ್ತಪಡಿಸುತ್ತಿದ್ದಾರೆ.

ಇದನ್ನೂ ಓದಿ: ಪ್ರಧಾನಿ, ಗೃಹ ಸಚಿವರ ವಿರುದ್ಧ ರಾಹುಲ್ ಗಾಂಧಿ ವಿವಾದಾತ್ಮಕ ವಾಗ್ದಾಳಿ: ತಿರುಗೇಟು ನೀಡಿದ ಬಿಜೆಪಿ

Leave a Reply

Your email address will not be published. Required fields are marked *