ಇಂಫಾಲ್: ಕಳೆದ ಕೆಲ ದಿನಗಳಿಂದ ಜನಾಂಗೀಯ ಹಿಂಸಾಚಾರಕ್ಕೆ ಸಾಕ್ಷಿಯಾಗುತ್ತಿರುವ ಮಣಿಪುರದಲ್ಲಿ (Manipur) ಬುಧವಾರ ಮತ್ತೊಂದು ಘೋರ ಘಟನೆ ನಡೆದಿದೆ. ಕಾಂಗ್ಪೋಕ್ಪಿ ಜಿಲ್ಲೆಯಲ್ಲಿ ನಡೆದ ಉಗ್ರರ ಗುಂಡಿನ ದಾಳಿಗೆ ಕುಕಿ ಸಮುದಾಯದ ಮೂವರು ಪ್ರಮುಖ ಧರ್ಮಗುರುಗಳು ಬಲಿಯಾಗಿದ್ದು, ನಾಲ್ವರು ಗಂಭೀರವಾಗಿ ಗಾಯಗೊಂಡಿದ್ದಾರೆ. ಈ ಕೃತ್ಯವು ರಾಜ್ಯದಲ್ಲಿ ಮತ್ತೆ ಉದ್ವಿಗ್ನತೆಯನ್ನು ಹೆಚ್ಚಿಸಿದೆ.
ಹೊಂಚುದಾಳಿ ನಡೆಸಿದ ದುಷ್ಕರ್ಮಿಗಳು ಥಡೌ ಬ್ಯಾಪ್ಟಿಸ್ಟ್ ಅಸೋಸಿಯೇಷನ್ (TBA) ತಂಡವು ಚುರಚಂದ್‌ಪುರದಲ್ಲಿ ಶಾಂತಿ ಮಾತುಕತೆ ಮುಗಿಸಿ ವಾಹನದಲ್ಲಿ ಮರಳುತ್ತಿತ್ತು. ಈ ವೇಳೆ ಕೋಟ್ಜಿಮ್ ಮತ್ತು ಕೋಟ್ಲೆನ್ ಗ್ರಾಮಗಳ ಮಧ್ಯೆ ಕಾದು ಕುಳಿತಿದ್ದ ಶಂಕಿತ ಉಗ್ರರು ಏಕಾಏಕಿ ಗುಂಡಿನ ಮಳೆಗರೆದಿದ್ದಾರೆ. ಮೃತಪಟ್ಟವರಲ್ಲಿ ಮಣಿಪುರ ಬ್ಯಾಪ್ಟಿಸ್ಟ್ ಕನ್ವೆನ್ಷನ್‌ನ ಮಾಜಿ ಪ್ರಧಾನ ಕಾರ್ಯದರ್ಶಿ ರೆವರೆಂಡ್ ವಿ ಸಿಟ್ಲ್‌ಹೌರ್ ಕೂಡ ಸೇರಿದ್ದಾರೆ. ಗಾಯಾಳುಗಳನ್ನು ಸಮೀಪದ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಅವರ ಸ್ಥಿತಿ ಚಿಂತಾಜನಕವಾಗಿದೆ ಎಂದು ವರದಿಯಾಗಿದೆ.
ಬಂದ್ ವಾತಾವರಣ, ಜನಾಂಗೀಯ ಸಂಘರ್ಷದ ಶಂಕೆ ಈ ದಾಳಿಯನ್ನು ಖಂಡಿಸಿ ಕುಕಿ ಸಂಘಟನೆಗಳು ಕಾಂಗ್ಪೋಕ್ಪಿಯ ಸದರ್ ಬೆಟ್ಟಗಳಲ್ಲಿ ಬಂದ್‌ಗೆ ಕರೆ ನೀಡಿವೆ. ಈ ಹೇಯ ಕೃತ್ಯದ ಹಿಂದೆ ನಾಗಾ ಬಂಡುಕೋರ ಸಂಘಟನೆಗಳ ಕೈವಾಡವಿರಬಹುದು ಎಂದು ಕುಕಿ ಹಕ್ಕುಗಳ ಸಂಘಟನೆಗಳು ಆರೋಪಿಸಿವೆ. ಈ ವರ್ಷದ ಆರಂಭದಿಂದಲೇ ರಾಜ್ಯದಲ್ಲಿ ಕುಕಿ ಮತ್ತು ನಾಗಾ ಸಮುದಾಯಗಳ ನಡುವೆ ಆಗಾಗ್ಗೆ ಸಂಘರ್ಷ ನಡೆಯುತ್ತಿದ್ದು, ಶಾಂತಿಗಾಗಿ ಶ್ರಮಿಸುತ್ತಿದ್ದ ನಾಯಕರನ್ನೇ ಈಗ ಗುರಿಯಾಗಿಸಿರುವುದು ಆತಂಕ ಮೂಡಿಸಿದೆ.
ಶಾಂತಿ ಪ್ರಯತ್ನಗಳಿಗೆ ಹಿನ್ನಡೆ ಕೊಲೆಯಾದ ನಾಯಕರು ಇತ್ತೀಚೆಗಷ್ಟೇ ನಾಗಾಲ್ಯಾಂಡ್‌ನಲ್ಲಿ ನಡೆದಿದ್ದ ಶಾಂತಿ ಸಮಾಲೋಚನಾ ಸಭೆಯಲ್ಲಿ ಪಾಲ್ಗೊಂಡು ಮಣಿಪುರದಲ್ಲಿ ಸೌಹಾರ್ದತೆ ನೆಲೆಸಲು ಪ್ರಯತ್ನಿಸಿದ್ದರು. ಶಾಂತಿ ದೂತರ ಮೇಲೆ ನಡೆದ ಈ ದಾಳಿಯಿಂದಾಗಿ ಮಾತುಕತೆಯ ಪ್ರಕ್ರಿಯೆಗೆ ದೊಡ್ಡ ಹಿನ್ನಡೆಯಾಗಿದೆ. ಉಖ್ರುಲ್ ಮತ್ತು ಸುತ್ತಮುತ್ತಲಿನ ಜಿಲ್ಲೆಗಳಲ್ಲಿ ಪರಿಸ್ಥಿತಿ ವಿಕೋಪಕ್ಕೆ ಹೋಗದಂತೆ ತಡೆಯಲು ಭದ್ರತಾ ಪಡೆಗಳು ಹೆಚ್ಚಿನ ನಿಗಾ ವಹಿಸಿವೆ.
