Hantavirus: ಮಾರಕ ಹಂಟಾವೈರಸ್‌ಗೆ ಮೂವರು ಬಲಿ

Hantavirus case 3 Cruise Passengers lost life

ದಕ್ಷಿಣ ಅಟ್ಲಾಂಟಿಕ್ ಮಹಾಸಾಗರದಲ್ಲಿ ಪ್ರವಾಸಕ್ಕೆ ತೆರಳಿದ್ದ ‘ಎಂವಿ ಹೊಂಡಿಯಸ್’ ಎಂಬ ಐಷಾರಾಮಿ ಹಡಗು ಈಗ ಮಾರಕ ‘ಹಂಟಾವೈರಸ್’ (Hantavirus) ಹರಡುವ ಕೇಂದ್ರಬಿಂದುವಾಗಿ ಮಾರ್ಪಟ್ಟಿದೆ. ಈ ಹಡಗಿನಲ್ಲಿದ್ದ ಪ್ರಯಾಣಿಕರಲ್ಲಿ ಹರಡಿರುವ ಈ ವೈರಾಣು ಈಗಾಗಲೇ ಮೂವರನ್ನು ಬಲಿಪಡೆದಿದ್ದು, ಯುರೋಪ್ ಹಾಗೂ ಅಮೆರಿಕದ ಹಲವು ದೇಶಗಳಲ್ಲಿ ತೀವ್ರ ಆತಂಕ ಸೃಷ್ಟಿಸಿದೆ. ಹಡಗು ಪ್ರಯಾಣ ಮುಗಿಸಿ ತಾಯ್ನಾಡಿಗೆ ಮರಳಿದವರಲ್ಲಿ ಸೋಂಕು ಕಾಣಿಸಿಕೊಳ್ಳುತ್ತಿರುವುದು ಜಾಗತಿಕ ಆರೋಗ್ಯ ತುರ್ತುಸ್ಥಿತಿಗೆ ಕಾರಣವಾಗಿದೆ.

ಸೋಂಕಿನ ಅಬ್ಬರ ಎಲ್ಲೆಲ್ಲಿದೆ?

  • ನೆದರ್ಲ್ಯಾಂಡ್ಸ್: ಇಲ್ಲಿ ಸೋಂಕಿನ ತೀವ್ರತೆ ಹೆಚ್ಚಿದ್ದು, ಅರ್ಜೆಂಟೈನಾದಿಂದ ಹಡಗು ಹತ್ತಿದ್ದ ವೃದ್ಧ ದಂಪತಿಗಳು ಸಾವನ್ನಪ್ಪಿದ್ದಾರೆ. 70 ವರ್ಷದ ಪತಿ ಹಡಗಿನಲ್ಲೇ ಮೃತಪಟ್ಟರೆ, ಅವರ ಪತ್ನಿ ಚಿಕಿತ್ಸೆಗಾಗಿ ಜೋಹಾನ್ಸ್‌ಬರ್ಗ್‌ಗೆ ತೆರಳುವ ಮಾರ್ಗಮಧ್ಯೆ ಕೊನೆಯುಸಿರೆಳೆದಿದ್ದಾರೆ. ಇವರಿಬ್ಬರಿಗೂ ಹಂಟಾವೈರಸ್ ಇರುವುದು ದೃಢಪಟ್ಟಿದೆ. ಇದರ ಬೆನ್ನಲ್ಲೇ ಹಡಗಿನಲ್ಲಿದ್ದ ವೈದ್ಯರಿಗೂ ಸೋಂಕು ತಗುಲಿದ್ದು, ಅವರನ್ನು ನೆದರ್ಲ್ಯಾಂಡ್ಸ್‌ನಲ್ಲಿ ಪ್ರತ್ಯೇಕವಾಗಿ ಇರಿಸಿ ಚಿಕಿತ್ಸೆ ನೀಡಲಾಗುತ್ತಿದೆ.
  • ಬ್ರಿಟನ್: ಇಲ್ಲಿ ಇಬ್ಬರಲ್ಲಿ ಸೋಂಕು ಪತ್ತೆಯಾಗಿದ್ದು, ಹಡಗಿನ ಮಾರ್ಗದರ್ಶಿಯೂ ಇದರಲ್ಲಿ ಸೇರಿದ್ದಾರೆ. ಗಂಭೀರ ಸ್ಥಿತಿಯಲ್ಲಿದ್ದ ರೋಗಿಗಳಿಗೆ ಚಿಕಿತ್ಸೆ ನೀಡಲು ಬ್ರಿಟಿಷ್ ಸೇನಾ ವೈದ್ಯರು ವಿಮಾನದ ಮೂಲಕ ಪ್ಯಾರಾಚೂಟ್ ಬಳಸಿ ಔಷಧಿಗಳನ್ನು ರವಾನಿಸಿದ ಅನಿವಾರ್ಯತೆ ಎದುರಾಗಿತ್ತು.
  • ಜರ್ಮನಿ: ಜರ್ಮನಿಯ ಮಹಿಳೆಯೊಬ್ಬರು ಜ್ವರ ಮತ್ತು ನ್ಯುಮೋನಿಯಾದಿಂದ ಮೃತಪಟ್ಟಿದ್ದು, ಪರೀಕ್ಷೆಯಲ್ಲಿ ಅವರಿಗೆ ‘ಆಂಡಿಸ್’ ತಳಿಯ ಹಂಟಾವೈರಸ್ ತಗುಲಿರುವುದು ಸಾಬೀತಾಗಿದೆ.
  • ಅಮೆರಿಕ: ಹಡಗಿನಿಂದ ಮರಳಿದ 17 ಅಮೆರಿಕನ್ನರ ಪೈಕಿ ಒಬ್ಬರಲ್ಲಿ ಸೋಂಕು ದೃಢಪಟ್ಟಿದೆ. ಇವರನ್ನು ಹೆಚ್ಚಿನ ಚಿಕಿತ್ಸೆಗಾಗಿ ನೆಬ್ರಸ್ಕಾದ ವೈದ್ಯಕೀಯ ಕೇಂದ್ರಕ್ಕೆ ದಾಖಲಿಸಲಾಗಿದೆ.
  • ಇತರ ದೇಶಗಳು: ಸ್ವಿಟ್ಜರ್ಲೆಂಡ್, ಸ್ಪೇನ್ ಮತ್ತು ಫ್ರಾನ್ಸ್‌ನಲ್ಲೂ ತಲಾ ಒಂದೊಂದು ಪ್ರಕರಣಗಳು ದಾಖಲಾಗಿವೆ. ಫ್ರಾನ್ಸ್‌ನಲ್ಲಿ ಸೋಂಕಿತ ಮಹಿಳೆಯ ಸ್ಥಿತಿ ಗಂಭೀರವಾಗಿದೆ ಎಂದು ವರದಿಯಾಗಿದೆ.

ಹಂಟಾವೈರಸ್ ಎಂದರೇನು?

ಹಂಟಾವೈರಸ್ ಪ್ರಮುಖವಾಗಿ ಪ್ರಾಣಿಗಳಿಂದ ಮನುಷ್ಯರಿಗೆ ಹರಡುವ ವೈರಾಣುವಾಗಿದೆ. ಈ ಪ್ರವಾಸಿ ಹಡಗಿನಲ್ಲಿ ಪತ್ತೆಯಾಗಿರುವುದು ಅತ್ಯಂತ ಅಪಾಯಕಾರಿ ‘ಆಂಡಿಸ್ ಸ್ಟ್ರೈನ್’ ಎಂದು ಗುರುತಿಸಲಾಗಿದೆ. ಇದು ನೇರವಾಗಿ ಮನುಷ್ಯನ ಶ್ವಾಸಕೋಶದ ಮೇಲೆ ದಾಳಿ ಮಾಡುತ್ತದೆ. ಪ್ರಸ್ತುತ ಹಡಗಿನಲ್ಲಿದ್ದ ನೂರಾರು ಪ್ರಯಾಣಿಕರು ತಮ್ಮ ದೇಶಗಳಿಗೆ ಮರಳಿದ್ದು, ಅವರೆಲ್ಲರನ್ನೂ ಪತ್ತೆಹಚ್ಚಿ ಸೋಂಕು ಹರಡುವುದನ್ನು ತಡೆಯುವುದು ವಿಶ್ವ ಆರೋಗ್ಯ ಸಂಸ್ಥೆ (WHO) ಮುಂದಿರುವ ದೊಡ್ಡ ಸವಾಲಾಗಿದೆ.

ಇದನ್ನೂ ಓದಿ: ಜನರಿಗೆ ತೊಂದರೆ ಆಗುವಂತೆ ಪೋಸ್ಟರ್-ಬ್ಯಾನರ್‌ ಹಾಕಬೇಡಿ: ಟಿವಿಕೆ ಕಾರ್ಯಕರ್ತರಿಗೆ ವಿಜಯ್‌ ಆದೇಶ

Leave a Reply

Your email address will not be published. Required fields are marked *