ಚೆನ್ನೈ: ರಾಜಕೀಯ ಮತ್ತು ಸಿನಿಮಾ ರಂಗದ ಇಬ್ಬರು ದೊಡ್ಡ ಶಕ್ತಿಗಳು ಒಂದಾದಾಗ ಸೃಷ್ಟಿಯಾಗುವ ಇಂಪ್ಯಾಕ್ಟ್ ಹೇಗಿರುತ್ತದೆ ಎಂಬುದಕ್ಕೆ ರಾಹುಲ್ ಗಾಂಧಿ ಹಾಗೂ ತಮಿಳುನಾಡಿನ ನೂತನ ಮುಖ್ಯಮಂತ್ರಿ ವಿಜಯ್ ಅವರ ಇತ್ತೀಚಿನ ಇನ್‌ಸ್ಟಾಗ್ರಾಮ್ ಪೋಸ್ಟ್ (Viral) ಸಾಕ್ಷಿಯಾಗಿದೆ. ಈ ಜೋಡಿಯ ಫೋಟೋ ಮತ್ತು ವಿಡಿಯೋಗಳು ಬರೋಬ್ಬರಿ 73 ಲಕ್ಷಕ್ಕೂ ಹೆಚ್ಚು (7.3 ಮಿಲಿಯನ್) ಲೈಕ್ಸ್ ಪಡೆಯುವ ಮೂಲಕ ಇಂಟರ್ನೆಟ್‌ನಲ್ಲಿ ಹೊಸ ಇತಿಹಾಸ ಬರೆದಿವೆ.
ಪ್ರಧಾನಿ ಮೋದಿ ಪೋಸ್ಟ್‌ಗಿಂತಲೂ ನಾಲ್ಕು ಪಟ್ಟು (Viral) ಹೆಚ್ಚು ಲೈಕ್ಸ್!
ಕುತೂಹಲಕಾರಿ ಸಂಗತಿಯೆಂದರೆ, ಇದೇ ಸಮಯದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ಪಶ್ಚಿಮ ಬಂಗಾಳದ ಸಿಎಂ ಸುವೇಂದು ಅಧಿಕಾರಿ ಅವರೊಂದಿಗೆ ಹಂಚಿಕೊಂಡಿದ್ದ ಪೋಸ್ಟ್ ಕೇವಲ 16 ಲಕ್ಷ ಲೈಕ್ಸ್ ಗಳಿಸಿದೆ. ಮೋದಿಯವರ ಪೋಸ್ಟ್‌ಗೆ ಹೋಲಿಸಿದರೆ ರಾಹುಲ್-ವಿಜಯ್ ಜೋಡಿಯ ಪೋಸ್ಟ್ ನಾಲ್ಕು ಪಟ್ಟು ಅಧಿಕ ಜನಪ್ರಿಯತೆ ಗಳಿಸಿರುವುದು ಡಿಜಿಟಲ್ ತಜ್ಞರ ಹುಬ್ಬೇರಿಸುವಂತೆ ಮಾಡಿದೆ. ದಕ್ಷಿಣ ಭಾರತದ ಸೂಪರ್‌ಸ್ಟಾರ್ ಆಗಿದ್ದ ವಿಜಯ್ ಅವರ ಅಗಾಧ ಅಭಿಮಾನಿ ಬಳಗ ಮತ್ತು ರಾಹುಲ್ ಗಾಂಧಿಯವರ ಇತ್ತೀಚಿನ ಇಮೇಜ್ ಮೇಕ್ ಓವರ್ ಈ ಬೃಹತ್ ದಾಖಲೆಗೆ ಕಾರಣ ಎನ್ನಲಾಗುತ್ತಿದೆ.
ವಿವಾದಕ್ಕೆ ಕಾರಣವಾದ ‘ಬ್ಲಾಕ್’ ಪ್ರಕ್ರಿಯೆ
ದಾಖಲೆ ಮಟ್ಟದ ಜನಪ್ರಿಯತೆ ಗಳಿಸುತ್ತಿದ್ದ ಬೆನ್ನಲ್ಲೇ, ರಾಹುಲ್ ಗಾಂಧಿ ಹಂಚಿಕೊಂಡಿದ್ದ ಈ ಪೋಸ್ಟ್ ಮತ್ತು ರೀಲ್ಸ್ ಅನ್ನು ಇನ್‌ಸ್ಟಾಗ್ರಾಮ್ ಹಠಾತ್ತನೆ ತೆಗೆದುಹಾಕಿದ್ದು (Block) ದೊಡ್ಡ ರಾಜಕೀಯ ವಿವಾದಕ್ಕೆ ನಾಂದಿ ಹಾಡಿದೆ. ಇದು ಪ್ರತಿಪಕ್ಷಗಳ ಧ್ವನಿ ಹತ್ತಿಕ್ಕಲು ಕೇಂದ್ರ ಸರ್ಕಾರ ಮಾಡುತ್ತಿರುವ ಸಂಚು ಎಂದು ಕಾಂಗ್ರೆಸ್ ಗಂಭೀರ ಆರೋಪ ಮಾಡಿದೆ. ಸಾಮಾಜಿಕ ಜಾಲತಾಣಗಳಲ್ಲಿ ಸಂಚಲನ ಮೂಡಿಸುತ್ತಿದ್ದ ಪೋಸ್ಟ್‌ಗಳನ್ನು ಉದ್ದೇಶಪೂರ್ವಕವಾಗಿ ನಿರ್ಬಂಧಿಸಲಾಗಿದೆ ಎಂದು ಕೈ ನಾಯಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಕೇಂದ್ರ ಸರ್ಕಾರ ನೀಡಿದ ಸ್ಪಷ್ಟನೆ ಏನು?
ಈ ವಿವಾದದ ಬೆನ್ನಲ್ಲೇ ಎಚ್ಚೆತ್ತುಕೊಂಡಿರುವ ಕೇಂದ್ರ ಎಲೆಕ್ಟ್ರಾನಿಕ್ಸ್ ಮತ್ತು ಮಾಹಿತಿ ತಂತ್ರಜ್ಞಾನ ಸಚಿವಾಲಯ (MeitY), ಈ ವಿಚಾರದಲ್ಲಿ ಸರ್ಕಾರದ ಯಾವುದೇ ಪಾತ್ರವಿಲ್ಲ ಎಂದು ಸ್ಪಷ್ಟಪಡಿಸಿದೆ. “ಇನ್‌ಸ್ಟಾಗ್ರಾಮ್ ಪೋಸ್ಟ್ ಬ್ಲಾಕ್ ಆಗಿರುವುದು ಆ ಸಂಸ್ಥೆಯ ತಾಂತ್ರಿಕ ಅಥವಾ ಆಂತರಿಕ ನಿರ್ಧಾರವಾಗಿರಬಹುದು. ಇದರಲ್ಲಿ ಸರ್ಕಾರದ ಹಸ್ತಕ್ಷೇಪವಿಲ್ಲ” ಎಂದು ಸಚಿವಾಲಯ ಹೇಳಿದೆ. ಒಟ್ಟಿನಲ್ಲಿ, ತಮಿಳುನಾಡು ಚುನಾವಣೆಯ ನಂತರ ವಿಜಯ್ ಮತ್ತು ಕಾಂಗ್ರೆಸ್ ನಡುವಿನ ಈ ಡಿಜಿಟಲ್ ಬಾಂಧವ್ಯ ರಾಷ್ಟ್ರ ರಾಜಕಾರಣದಲ್ಲಿ ಹೊಸ ಸಂಚಲನವನ್ನಂತೂ ಸೃಷ್ಟಿಸಿದೆ.
ಇದನ್ನೂ ಓದಿ: ಟಿವಿಕೆಗೆ ಮತ್ತೊಂದು ಶಾಕ್, ಶಾಸಕನಿಗೆ ಸದನದಲ್ಲಿ ಮತ ಹಾಕದಂತೆ ಹೈಕೋರ್ಟ್ ತಡೆ
