TOP NEWS

AIADMK: ಎಐಎಡಿಎಂಕೆ ಪಾಳಯದಲ್ಲಿ ಭಿನ್ನಮತದ ಕಿಚ್ಚು: ಪಳನಿಸ್ವಾಮಿ ನಾಯಕತ್ವಕ್ಕೆ ವಿಜಯ್‌ ಪಕ್ಷದ ಭೀತಿ!

AIADMK mlas against palaniswami

ತಮಿಳುನಾಡು ಚುನಾವಣಾ ಫಲಿತಾಂಶದ ಬೆನ್ನಲ್ಲೇ ಎಐಎಡಿಎಂಕೆ (AIADMK) ಪಕ್ಷದಲ್ಲಿ ಆಂತರಿಕ ಕಲಹ ತಾರಕಕ್ಕೇರಿದೆ. ಚುನಾವಣಾ ಹಿನ್ನಡೆಯ ಬೆನ್ನಲ್ಲೇ ಪಕ್ಷದ ನಾಯಕತ್ವ ಬದಲಾವಣೆ ಮತ್ತು ನಟ ವಿಜಯ್‌ ಅವರ ಟಿವಿಕೆ (TVK) ಪಕ್ಷದೊಂದಿಗೆ ಕೈಜೋಡಿಸುವ ವಿಚಾರದಲ್ಲಿ ಶಾಸಕರು ಎರಡು ಭಾಗವಾಗಿರುವುದು ಎಡಪ್ಪಾಡಿ ಕೆ. ಪಳನಿಸ್ವಾಮಿ ಅವರಿಗೆ ತಲೆನೋವಾಗಿ ಪರಿಣಮಿಸಿದೆ.

ಸೋಲಿನ ಬೆನ್ನಲ್ಲೇ ಇಪಿಎಸ್‌ ವಿರುದ್ಧ ತಿರುಗಿಬಿದ್ದ ಶಾಸಕರು

ಈ ಬಾರಿಯ ಚುನಾವಣೆಯಲ್ಲಿ ಎಐಎಡಿಎಂಕೆ ನಿರೀಕ್ಷಿತ ಮಟ್ಟದಲ್ಲಿ ಸಾಧನೆ ಮಾಡಿಲ್ಲ. 167 ಕ್ಷೇತ್ರಗಳಲ್ಲಿ ಸ್ಪರ್ಧಿಸಿದ್ದರೂ ಕೇವಲ 47 ಸ್ಥಾನಗಳನ್ನಷ್ಟೇ ಗೆಲ್ಲಲು ಸಾಧ್ಯವಾಗಿದೆ. ಈ ಹೀನಾಯ ಸೋಲಿಗೆ ಪಳನಿಸ್ವಾಮಿ ಅವರೇ ಹೊಣೆ ಎಂದು ಗುಡುಗಿರುವ ಒಂದು ಗುಂಪು, ಅವರು ಕೂಡಲೇ ನಾಯಕತ್ವದಿಂದ ಕೆಳಗಿಳಿಯಬೇಕು ಎಂದು ಒತ್ತಾಯಿಸುತ್ತಿದೆ. ಇತ್ತೀಚೆಗೆ ನಡೆದ ಸಮಾಲೋಚನಾ ಸಭೆಗಳಲ್ಲಿ ಶಾಸಕರು ಬಹಿರಂಗವಾಗಿಯೇ ತಮ್ಮ ಅಸಮಾಧಾನ ಹೊರಹಾಕಿದ್ದಾರೆ.

ವಿಜಯ್‌ ಜೊತೆ ಮೈತ್ರಿಗೆ ಹಿರಿಯ ನಾಯಕರ ಪಟ್ಟು?

ಪಕ್ಷದ ಪ್ರಭಾವಿ ನಾಯಕರಾದ ಸಿ.ವಿ. ಷಣ್ಮುಗಂ ಮತ್ತು ಎಸ್.ಪಿ. ವೇಲುಮಣಿ ಅವರು ಪಳನಿಸ್ವಾಮಿ ನಡೆಸಿದ ಸಭೆಗೆ ಗೈರಾಗುವ ಮೂಲಕ ಬಂಡಾಯದ ಸೂಚನೆ ನೀಡಿದ್ದಾರೆ. ಮೂಲಗಳ ಪ್ರಕಾರ, ಈ ನಾಯಕರು ನಟ ವಿಜಯ್‌ ಅವರ ಟಿವಿಕೆ ಪಕ್ಷವನ್ನು ಬೆಂಬಲಿಸುವ ಮೂಲಕ ಡಿಎಂಕೆ (DMK) ವಿರುದ್ಧ ಪ್ರಬಲ ಪೈಪೋಟಿ ನೀಡಲು ಮುಂದಾಗಿದ್ದಾರೆ. ಆದರೆ, ಪಕ್ಷದ ಒಂದು ವರ್ಗ ಮಾತ್ರ ಸಿನಿಮಾ ನಟನ ಪಕ್ಷಕ್ಕೆ ಶರಣಾಗುವುದನ್ನು ತೀವ್ರವಾಗಿ ವಿರೋಧಿಸುತ್ತಿದೆ.

ಅನಿಶ್ಚಿತತೆಯಲ್ಲಿ ಎಐಎಡಿಎಂಕೆ ಭವಿಷ್ಯ

ಪಕ್ಷದ ಪ್ರಮುಖ ನಾಯಕರು ಮತ್ತು ಶಾಸಕರಲ್ಲೇ ಸಮನ್ವಯ ಇಲ್ಲದಿರುವುದು ಎಐಎಡಿಎಂಕೆಯ ಅಸ್ತಿತ್ವಕ್ಕೆ ದೊಡ್ಡ ಹೊಡೆತ ನೀಡುವ ಸಾಧ್ಯತೆಯಿದೆ. ಈಗ ಉದ್ಭವಿಸಿರುವ ಈ ಆಂತರಿಕ ಸಂಘರ್ಷವು ಪಕ್ಷದ ವಿಭಜನೆಗೆ ಕಾರಣವಾಗುತ್ತದೆಯೇ ಅಥವಾ ಇಪಿಎಸ್‌ ಪರಿಸ್ಥಿತಿಯನ್ನು ಹತೋಟಿಗೆ ತರುತ್ತಾರೆಯೇ ಎಂಬುದು ತಮಿಳುನಾಡು ರಾಜಕೀಯದಲ್ಲಿ ತೀವ್ರ ಕುತೂಹಲ ಮೂಡಿಸಿದೆ. ಒಂದು ಕಾಲದಲ್ಲಿ ರಾಜ್ಯವನ್ನಾಳಿದ ಶಿಸ್ತಿನ ಪಕ್ಷ ಈಗ ವಿಜಯ್‌ ಎನ್ನುವ ಹೊಸ ಶಕ್ತಿಯ ಪ್ರಭಾವಕ್ಕೆ ಸಿಲುಕಿ ದಿಕ್ಕು ತಪ್ಪಿದಂತಿದೆ.

ಇದನ್ನೂ ಓದಿ: ವಿಜಯ್‌ ಪಟ್ಟಾಭಿಷೇಕದಲ್ಲಿ ವಿಳಂಬ, ಬೆಂಕಿ ಹಚ್ಚಿಕೊಂಡು ಅಭಿಮಾನಿ ಆತ್ಮಹ*ತ್ಯೆ ಯತ್ನ

Leave a Reply

Your email address will not be published. Required fields are marked *