TOP NEWS

Road Mishap: 5 ಜನರ ಬಲಿ ಪಡೆದ ಸೂಪರ್‌ ಬೈಕ್‌ ಸ್ಪೀಡ್‌, ತೆಲಂಗಾಣದಲ್ಲಿ ಭೀಕರ ಘಟನೆ

road mishap 5 lost life due to Hayabusa speeding

ಹೈದರಾಬಾದ್: ತೆಲಂಗಾಣದ ಮಹಬೂಬ್‌ನಗರ ಜಿಲ್ಲೆಯ ಪಾಲಕೊಂಡ (‌Crime) ಬೈಪಾಸ್ (Road Mishap) ರಸ್ತೆಯಲ್ಲಿ ಭಾನುವಾರ ತಡರಾತ್ರಿ ಸಂಭವಿಸಿದ ಭೀಕರ ರಸ್ತೆ ಅಪಘಾತದಲ್ಲಿ ಐವರು ಪ್ರಾಣ ಕಳೆದುಕೊಂಡಿದ್ದಾರೆ. ಸುಮಾರು 140 ಕಿ.ಮೀ ವೇಗದಲ್ಲಿ ಅತೀ ವೇಗವಾಗಿ ಬಂದ ಸುಜುಕಿ ಹಯಾಬುಸಾ ಸೂಪರ್ ಬೈಕ್ ನಿಯಂತ್ರಣ ತಪ್ಪಿ ಕಾರಿಗೆ ಡಿಕ್ಕಿ ಹೊಡೆದ ಪರಿಣಾಮ ಈ ದುರಂತ ಸಂಭವಿಸಿದೆ. ಯುವಕರು ತಡರಾತ್ರಿ ನಡೆಸುತ್ತಿದ್ದ ಕಾನೂನುಬಾಹಿರ ಬೈಕ್ ರೇಸಿಂಗ್ ಈ ಸಾವಿಗೆ ಪ್ರಮುಖ ಕಾರಣ ಎಂದು ಶಂಕಿಸಲಾಗಿದೆ.

ಪೊಲೀಸರಿಂದ ತನಿಖೆ ಆರಂಭ

ಡಿಕ್ಕಿಯ ರಭಸಕ್ಕೆ ಕಾರಿನಲ್ಲಿದ್ದ ಒಂದೇ ಕುಟುಂಬದ ಮೂವರು ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಮೃತರನ್ನು ಅರ್ಶಿಯಾ ಬೇಗಂ (30), ಏಳು ವರ್ಷದ ಉಜೆಪಾ ಮತ್ತು ಎರಡು ವರ್ಷದ ಮಗು ಅಮರ್ ಎಂದು ಗುರುತಿಸಲಾಗಿದೆ. ಇನ್ನು ಬೈಕ್‌ನಲ್ಲಿದ್ದ ಇಬ್ಬರು ಯುವಕರು ಕೂಡ ಅಪಘಾತದಲ್ಲಿ ಸಾವನ್ನಪ್ಪಿದ್ದು, ಅವರಲ್ಲಿ ಒಬ್ಬನನ್ನು 25 ವರ್ಷದ ಯಾಕೂಬ್ ಅಫ್ಜಲ್ ಎಂದು ಗುರುತಿಸಲಾಗಿದೆ. ಮತ್ತೊಬ್ಬ ಸವಾರನ ಗುರುತು ಇನ್ನು ಪತ್ತೆಯಾಗಬೇಕಿದ್ದು, ಅಪಘಾತದ ಸಮಯದಲ್ಲಿ ಬೈಕ್ ಅನ್ನು ಯಾರು ಚಲಾಯಿಸುತ್ತಿದ್ದರು ಎಂಬ ಬಗ್ಗೆ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

ಜನರ ಆಕ್ರೋಶ

ಈ ಘಟನೆಯಿಂದ ಪಾಲಕೊಂಡ ಬೈಪಾಸ್ ರಸ್ತೆಯ ಸುತ್ತಮುತ್ತಲ ನಿವಾಸಿಗಳು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಈ ರಸ್ತೆಯು ಇತ್ತೀಚಿನ ದಿನಗಳಲ್ಲಿ ತಡರಾತ್ರಿಯ ಬೈಕ್ ರೇಸಿಂಗ್ ಮತ್ತು ಅಪಾಯಕಾರಿ ಸ್ಟಂಟ್‌ಗಳಿಗೆ ಅಡ್ಡವಾಗಿ ಮಾರ್ಪಟ್ಟಿದೆ ಎಂದು ಸ್ಥಳೀಯರು ಆರೋಪಿಸಿದ್ದಾರೆ. “ಪ್ರತಿ ರಾತ್ರಿ ಯುವಕರು ಅಬ್ಬರದ ಸದ್ದು ಮಾಡುವ ಸ್ಪೋರ್ಟ್ಸ್ ಬೈಕ್‌ಗಳಲ್ಲಿ ಇಲ್ಲಿ ರೇಸಿಂಗ್ ನಡೆಸುತ್ತಾರೆ. ಈ ಬಗ್ಗೆ ನಾವು ಹಲವು ಬಾರಿ ಅಧಿಕಾರಿಗಳಿಗೆ ದೂರು ನೀಡಿದ್ದರೂ ಯಾವುದೇ ಕ್ರಮ ಕೈಗೊಂಡಿಲ್ಲ” ಎಂದು ಜನರು ಕಿಡಿಕಾರಿದ್ದಾರೆ.

ಅಮಾಯಕ ಕುಟುಂಬವೊಂದು ಬಲಿಯಾದ ಬೆನ್ನಲ್ಲೇ ಎಚ್ಚೆತ್ತುಕೊಂಡಿರುವ ಸಾರ್ವಜನಿಕರು, ಪೊಲೀಸರು ತಕ್ಷಣವೇ ಈ ರಸ್ತೆಯಲ್ಲಿ ಗಸ್ತು ಹೆಚ್ಚಿಸಬೇಕು ಎಂದು ಒತ್ತಾಯಿಸಿದ್ದಾರೆ. ಅಲ್ಲದೆ ಹೈವೇಗಳಲ್ಲಿ ಸಿಸಿಟಿವಿ ಕ್ಯಾಮೆರಾಗಳನ್ನು ಅಳವಡಿಸುವುದು, ಸ್ಪೀಡ್ ಗನ್ ಬಳಸುವುದು ಹಾಗೂ ಅತಿ ವೇಗವಾಗಿ ವಾಹನ ಚಲಾಯಿಸುವ ರೇಸಿಂಗ್ ಗ್ಯಾಂಗ್‌ಗಳ ವಿರುದ್ಧ ವಿಶೇಷ ಕಾರ್ಯಾಚರಣೆ ನಡೆಸುವಂತೆ ನಿವಾಸಿಗಳು ಅಧಿಕಾರಿಗಳಿಗೆ ಮನವಿ ಮಾಡಿದ್ದಾರೆ. ಮತ್ತಷ್ಟು ಜೀವಗಳು ಬಲಿಯಾಗುವ ಮುನ್ನ ಇಂತಹ ರೇಸಿಂಗ್ ಚಟುವಟಿಕೆಗಳಿಗೆ ಬ್ರೇಕ್ ಹಾಕಬೇಕೆಂದು ಜನರು ಆಗ್ರಹಿಸಿದ್ದಾರೆ.

ಇದನ್ನೂ ಓದಿ: ಭೀಕರ ಆಸಿಡ್‌ ದಾಳಿಯಲ್ಲಿ ಅಂತ್ಯವಾದ ಕೌಟುಂಬಿಕ ಕಲಹ

Leave a Reply

Your email address will not be published. Required fields are marked *