TOP NEWS

Shocking: ಮಂಡ್ಯದಲ್ಲಿ ಬಯಲಾಯ್ತು ಸ್ಫೋಟಕ ಮಾಹಿತಿ: ಒಂದೇ ವರ್ಷದಲ್ಲಿ 55 ಅಪ್ರಾಪ್ತ ಬಾಲಕಿಯರ ಸ್ಕ್ಯಾನಿಂಗ್!

shocking 55 minor pregnant girl scanning took place

ಮಂಡ್ಯ: ಜಿಲ್ಲೆಯಲ್ಲಿ ಭ್ರೂಣ ಹತ್ಯೆ ತಡೆಗೆ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳುತ್ತಿರುವ ಬೆನ್ನಲ್ಲೇ, ಮಂಡ್ಯ ನಗರದ ಖಾಸಗಿ ಡಯಾಗ್ನೋಸ್ಟಿಕ್ ಸೆಂಟರ್‌ನಲ್ಲಿ ಕಳೆದ ಒಂದು ವರ್ಷದಲ್ಲಿ 55 ಅಪ್ರಾಪ್ತ ಬಾಲಕಿಯರು ಗರ್ಭಿಣಿ ಸ್ಕ್ಯಾನಿಂಗ್ ಮಾಡಿಸಿಕೊಂಡಿರುವ ಗಂಭೀರ ವಿಚಾರ (Shocking) ಬಯಲಾಗಿದೆ. ಜಾಗೃತ ದಳದ ಅಧಿಕಾರಿಗಳು ನಡೆಸಿದ ಮಿಂಚಿನ ದಾಳಿಯ ವೇಳೆ ಈ ಆಘಾತಕಾರಿ ಅಂಕಿಅಂಶಗಳು ಲಭ್ಯವಾಗಿವೆ.

ದಾಖಲೆಗಳ ಪರಿಶೀಲನೆ ವೇಳೆ ಸತ್ಯ ದರ್ಶನ: ಉಪ ಲೋಕಾಯುಕ್ತರ ಸೂಚನೆಯಂತೆ ಮಂಡ್ಯದ ವಿವಿಧ ಸ್ಕ್ಯಾನಿಂಗ್ ಸೆಂಟರ್‌ಗಳ ಮೇಲೆ ತಹಸೀಲ್ದಾರ್ ವಿಶ್ವನಾಥ್ ಮತ್ತು ಆರೋಗ್ಯ ಇಲಾಖೆಯ ತಂಡ ದಾಳಿ ನಡೆಸಿತು. ನಗರದ ಪ್ರಮುಖ ಡಯಾಗ್ನೋಸ್ಟಿಕ್ ಸೆಂಟರ್ ಒಂದರಲ್ಲಿ ಕಳೆದ ಒಂದು ವರ್ಷದ ದಾಖಲೆಗಳನ್ನು ಜಾಲಾಡಿದಾಗ, ಒಟ್ಟು 16 ಸಾವಿರ ಗರ್ಭಿಣಿಯರ ಪೈಕಿ 55 ಮಂದಿ 18 ವರ್ಷಕ್ಕಿಂತ ಕಡಿಮೆ ವಯಸ್ಸಿನವರು ಎಂಬುದು ಖಚಿತಪಟ್ಟಿದೆ. ಈ ಬೆಳವಣಿಗೆಯು ಜಿಲ್ಲಾಡಳಿತದ ನಿದ್ದೆ ಗೆಡಿಸಿದೆ.

ಪೊಲೀಸರಿಗೆ ಮಾಹಿತಿ ನೀಡದಿದ್ದಲ್ಲಿ ಸಂಕಷ್ಟ: ನಿಯಮದ ಪ್ರಕಾರ, ಯಾವುದೇ ಅಪ್ರಾಪ್ತ ಬಾಲಕಿ ಗರ್ಭಿಣಿಯಾಗಿ ಸ್ಕ್ಯಾನಿಂಗ್‌ಗೆ ಬಂದಾಗ ಆ ಮಾಹಿತಿಯನ್ನು ತಕ್ಷಣವೇ ಆರೋಗ್ಯ ಇಲಾಖೆ ಅಥವಾ ಪೊಲೀಸರಿಗೆ ನೀಡಬೇಕು. ಬಾಲಕಿಯರಿಗೆ ಮದುವೆಯಾಗಿದ್ದರೂ ಸಹ, 18 ವರ್ಷಕ್ಕಿಂತ ಮೊದಲು ಗರ್ಭಿಣಿಯಾದರೆ ಅದು ಫೋಕ್ಸೋ (POCSO) ಕಾಯ್ದೆಯಡಿ ಪ್ರಕರಣವಾಗಿ ದಾಖಲಾಗುತ್ತದೆ. ಆದರೆ ಈ ಸ್ಕ್ಯಾನಿಂಗ್ ಸೆಂಟರ್ ನಿಯಮ ಪಾಲಿಸಿದೆಯೇ ಅಥವಾ ಮಾಹಿತಿ ಮುಚ್ಚಿಟ್ಟಿದೆಯೇ ಎಂಬ ಬಗ್ಗೆ ಅಧಿಕಾರಿಗಳು ಈಗ ತನಿಖೆ ಚುರುಕುಗೊಳಿಸಿದ್ದಾರೆ.

ಕಟ್ಟುನಿಟ್ಟಿನ ಕ್ರಮದ ಎಚ್ಚರಿಕೆ: ನೋಡಲ್ ಅಧಿಕಾರಿ ಡಾ. ಕೆ. ಸೋಮಶೇಖರ್ ಅವರು ಈ ಬಗ್ಗೆ ಪ್ರತಿಕ್ರಿಯಿಸಿ, “ದಾಖಲೆಗಳನ್ನು ಸಮಗ್ರವಾಗಿ ಪರಾಮರ್ಶಿಸಲಾಗುತ್ತಿದೆ. ಬಾಲ ಗರ್ಭಿಣಿಯರ ಬಗ್ಗೆ ಮಾಹಿತಿ ನೀಡುವಲ್ಲಿ ವಿಫಲರಾಗಿದ್ದರೆ ಸ್ಕ್ಯಾನಿಂಗ್ ಸೆಂಟರ್ ವಿರುದ್ಧ ಕಠಿಣ ಕಾನೂನು ಕ್ರಮ ಜರುಗಿಸಲಾಗುವುದು,” ಎಂದು ಎಚ್ಚರಿಕೆ ನೀಡಿದ್ದಾರೆ. ಜಿಲ್ಲೆಯಲ್ಲಿ ಬಾಲ್ಯ ವಿವಾಹ ಅಥವಾ ಅಪ್ರಾಪ್ತರ ಮೇಲೆ ಲೈಂಗಿಕ ದೌರ್ಜನ್ಯ ನಡೆಯುತ್ತಿದೆಯೇ ಎಂಬ ಅನುಮಾನವನ್ನು ಈ ಪ್ರಕರಣವು ಹುಟ್ಟುಹಾಕಿದೆ.

ಇದನ್ನೂ ಓದಿ: ವಿದೇಶದಿಂದ ಬಂದ ನಾಲ್ಕೇ ದಿನಕ್ಕೆ ಪತಿ ಆತ್ಮಹತ್ಯೆ; ಪತ್ನಿ, ಅತ್ತೆ ವಿರುದ್ಧ ಡೆತ್‌ನೋಟ್‌ನಲ್ಲಿ ಗಂಭೀರ ಆರೋಪ

Leave a Reply

Your email address will not be published. Required fields are marked *