ದಾಂಡೇಲಿ: ಮಲೇಷ್ಯಾದಲ್ಲಿ ಕೆಲಸ ಮುಗಿಸಿ ನಾಲ್ಕು ದಿನಗಳ ಹಿಂದಷ್ಟೇ ತಾಯ್ನಾಡಿಗೆ ಮರಳಿದ್ದ ವ್ಯಕ್ತಿಯೊಬ್ಬರು ಮನೆಯಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆ (Self Harming) ಮಾಡಿಕೊಂಡಿದ್ದಾರೆ. ಉತ್ತರ ಕನ್ನಡ ಜಿಲ್ಲೆಯ ದಾಂಡೇಲಿಯ ಬಾಂಬೆಚಾಳದ ನಿವಾಸಿ ರಾಘವೇಂದ್ರ ವಾಡಕರ ಮೃತಪಟ್ಟವರು. ಸಾವಿಗೂ ಮುನ್ನ ಅವರು ಬರೆದಿಟ್ಟಿರುವ ಡೆತ್‌ನೋಟ್‌ನಲ್ಲಿ ಪತ್ನಿ ಮತ್ತು ಅತ್ತೆಯ ವಿರುದ್ಧ ಗಂಭೀರ ಆರೋಪಗಳನ್ನು ಮಾಡಿದ್ದಾರೆ.
ಸಾವಿಗೆ ಪತ್ನಿಯ ನಡವಳಿಕೆಯೇ ಕಾರಣ? ಕಳೆದ ಹಲವು ವರ್ಷಗಳಿಂದ ಮಲೇಷ್ಯಾದಲ್ಲಿ ಉದ್ಯೋಗದಲ್ಲಿದ್ದ ರಾಘವೇಂದ್ರ, ಪತ್ನಿ ಮೇಘಾ ಜೊತೆಗಿನ ಭಿನ್ನಾಭಿಪ್ರಾಯದಿಂದಾಗಿ ಕಳೆದ ಮೂರ್ನಾಲ್ಕು ವರ್ಷಗಳಿಂದ ಪ್ರತ್ಯೇಕವಾಗಿ ವಾಸಿಸುತ್ತಿದ್ದರು. ತಾವು ವಿದೇಶದಲ್ಲಿದ್ದಾಗ ಪತ್ನಿ ಅಕ್ರಮ ಸಂಬಂಧ ಹೊಂದಿದ್ದಳು ಮತ್ತು ಆಕೆ ಹಾಗೂ ಆಕೆಯ ತಾಯಿ ತಮಗೆ ನಿರಂತರವಾಗಿ ಮಾನಸಿಕ ಕಿರುಕುಳ ನೀಡುತ್ತಿದ್ದರು ಎಂದು ರಾಘವೇಂದ್ರ ಡೆತ್‌ನೋಟ್‌ನಲ್ಲಿ ಉಲ್ಲೇಖಿಸಿದ್ದಾರೆ ಎನ್ನಲಾಗಿದೆ. ಪತ್ನಿಯ ನಡವಳಿಕೆಯಿಂದ ಮನನೊಂದು ಅವರು ಈ ನಿರ್ಧಾರ ಕೈಗೊಂಡಿದ್ದಾರೆ ಎಂದು ಕುಟುಂಬಸ್ಥರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಪೊಲೀಸ್ ವಶದಲ್ಲಿ ಪತ್ನಿ ಮತ್ತು ಅತ್ತೆ: ವಿದೇಶದಿಂದ ಬಂದ ಕೆಲವೇ ದಿನಗಳಲ್ಲಿ ನಡೆದ ಈ ದುರಂತ ಘಟನೆಯು ಸ್ಥಳೀಯರಲ್ಲಿ ತೀವ್ರ ಆಘಾತ ಮೂಡಿಸಿದೆ. ರಾಘವೇಂದ್ರ ಅವರ ಸಾವಿನ ಬೆನ್ನಲ್ಲೇ ದಾಂಡೇಲಿ ಪೊಲೀಸರು ಪತ್ನಿ ಮೇಘಾ ಮತ್ತು ಆಕೆಯ ತಾಯಿಯನ್ನು ವಶಕ್ಕೆ ಪಡೆದು ವಿಚಾರಣೆ ಆರಂಭಿಸಿದ್ದಾರೆ. ಡೆತ್‌ನೋಟ್ ಅನ್ನು ವಶಪಡಿಸಿಕೊಂಡಿರುವ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದು, ತನಿಖೆ ಮುಂದುವರಿಸಿದ್ದಾರೆ. ಮಲೇಷ್ಯಾದಲ್ಲಿ ಕಷ್ಟಪಟ್ಟು ದುಡಿದು ಬಂದ ವ್ಯಕ್ತಿ ಹೀಗೆ ಬಾರದ ಲೋಕಕ್ಕೆ ಪಯಣಿಸಿರುವುದು ಆ ಪ್ರದೇಶದಲ್ಲಿ ವಿಷಾದ ಮೂಡಿಸಿದೆ.
ಇದನ್ನೂ ಓದಿ: ಮದುವೆ ಬ್ರೋಕರ್ ಸೋಗಿನಲ್ಲಿ ಬೈಕ್ ಕಳ್ಳತನ; ಖದೀಮ ದೊಡ್ಡಬಸವ ಅರೆಸ್ಟ್
