ನವದೆಹಲಿ: 140 ಕೋಟಿ ಭಾರತೀಯರ ಇಂಧನ ಸುರಕ್ಷತೆ ಸರ್ಕಾರದ ಪ್ರಮುಖ ಆದ್ಯತೆಯಾಗಿದ್ದು, ದೇಶಕ್ಕೆ ಲಭ್ಯವಾಗುವ ಇಂಧನ ಮೂಲಗಳನ್ನು ವೈವಿಧ್ಯೀಕರಣಗೊಳಿಸಲಾಗುತ್ತಿದೆ ಎಂದು ವಿದೇಶಾಂಗ ವ್ಯವಹಾರಗಳ ಸಚಿವಾಲಯದ ವಕ್ತಾರ ರಣಧೀರ್ ಜೈಸ್ವಾಲ್ (Randhir Jaiswal) ತಿಳಿಸಿದ್ದಾರೆ.
ಇಂಧನ ಸುರಕ್ಷತೆಗೆ ಹೆಚ್ಚಿನ ಗಮನ
ದೆಹಲಿಯಲ್ಲಿ ನಿನ್ನೆ ವಿದೇಶಾಂಗ ವ್ಯವಹಾರಗಳ ಸಚಿವಾಲಯದ ವಕ್ತಾರ ರಣಧೀರ್ ಜೈಸ್ವಾಲ್ , ಮಾರುಕಟ್ಟೆ ಸ್ಥಿತಿಗತಿ ಹಾಗೂ ಬದಲಾಗುತ್ತಿರುವ ಅಂತಾರಾಷ್ಟ್ರೀಯ ಪರಿಸ್ಥಿತಿಗೆ ಅನುಗುಣವಾಗಿ ಹಾಗೂ ದೇಶದ ಇಂಧನ ಸುರಕ್ಷತೆಯನ್ನು ಗಮನದಲ್ಲಿರಿಸಿಕೊಂಡು ಸರ್ಕಾರ ಕ್ರಮ ಕೈಗೊಳ್ಳುತ್ತಿದೆ ಎಂದು ತಿಳಿಸಿದ್ದಾರೆ.
ಹೊಸ ಆಯ್ಕೆಗೆ ಭಾರತ ಮುಕ್ತ
ದೀರ್ಘಕಾಲದಿಂದಲೂ ವೆನೆಜುವೆಲಾ ಇಂಧನ ವಲಯದಲ್ಲಿ ಭಾರತದ ಪಾಲುದಾರ ದೇಶವಾಗಿತ್ತು. ನಿರ್ಬಂಧದ ಹಿನ್ನೆಲೆಯಲ್ಲಿ 2019ರಿಂದ ಕಚ್ಛಾ ತೈಲದ ಆಮದನ್ನು ಸ್ಥಗಿತಗೊಳಿಸಲಾಗಿತ್ತು. ಬಳಿಕ 2023ರಲ್ಲಿ ಆಮದು ಪುನರಾರಂಭಗೊಂಡಿದ್ದರೂ, ಪುನಃ ನಿರ್ಬಂಧ ಹೇರಿದ್ದರಿಂದ ನಿಲ್ಲಿಸಲಾಗಿತ್ತು. ಇದೀಗ ವೆನೆಜುವೆಲಾ ಸೇರಿದಂತೆ ಯಾವುದೇ ಹೊಸ ಆಯ್ಕೆಗಳನ್ನು ಅನ್ವೇಷಿಸಲು ಭಾರತ ಮುಕ್ತವಾಗಿದೆ ಎಂದು ಹೇಳಿದರು.
ಪೂರ್ವವಲಯದ ಕಾರ್ಯದರ್ಶಿ ಪಿ. ಕುಮಾರನ್, ಪ್ರಧಾನಿ ನರೇಂದ್ರ ಮೋದಿ ಅವರು ಶನಿವಾರದಿಂದ ಎರಡು ದಿನಗಳ ಕಾಲ ಮಲೇಷಿಯಾ ಪ್ರವಾಸ ಕೈಗೊಂಡಿದ್ದಾರೆ. ಮಲೇಷಿಯಾ ಪ್ರಧಾನಿ ಅನ್ವರ್ ಇಬ್ರಾಹಿಂ ಅವರೊಂದಿಗೆ ಕೌಲಾಲಂಪುರದಲ್ಲಿ ದ್ವಿಪಕ್ಷೀಯ ಮಾತುಕತೆ ನಡೆಸಲಿದ್ದಾರೆ. ಆಸಿಯಾನ್ ದೇಶಗಳೊಂದಿಗೆ ಸಂಬಂಧ ಬಲವರ್ಧನೆಗೆ ಈ ಭೇಟಿ ಹೆಚ್ಚಿನ ಅವಕಾಶ ನೀಡಲಿದೆ ಎಂದು ತಿಳಿಸಿದರು.
ಇದನ್ನೂ ಓದಿ: ನಾಗಾಲ್ಯಾಂಡ್-ಕೇಂದ್ರ ನಡುವಿನ ಒಪ್ಪಂದಕ್ಕೆ ಸಹಿ, ಅಮಿತ್ ಶಾ ನೇತೃತ್ವದಲ್ಲಿ ನಡೆದ ಸಭೆ
