ಬೆಂಗಳೂರು: ಭಾರತ ತಂಡದ ಯುವ ಆರಂಭಿಕ ಬ್ಯಾಟರ್ ಯಶಸ್ವಿ ಜೈಸ್ವಾಲ್ ಕ್ರಿಕೆಟ್ ಲೋಕದಲ್ಲಿ ವಿಶಿಷ್ಟ ಸಾಧನೆಯೊಂದನ್ನು ಮಾಡಿದ್ದಾರೆ. ನ್ಯೂಜಿಲೆಂಡ್ ವಿರುದ್ಧದ ಎರಡನೇ ಟೆಸ್ಟ್ (Yashasvi Jaiswal) ಪಂದ್ಯಕ್ಕಾಗಿ ಕ್ರೈಸ್ಟ್ಚರ್ಚ್ನ ಹ್ಯಾಗ್ಲಿ ಓವಲ್ ಕ್ರೀಡಾಂಗಣದಲ್ಲಿ ಕಣಕ್ಕಿಳಿಯುವ ಮೂಲಕ, ತಮ್ಮ ವೃತ್ತಿಜೀವನದ ಆರಂಭಿಕ 33 ಟೆಸ್ಟ್ ಪಂದ್ಯಗಳನ್ನು 33 ಪ್ರತ್ಯೇಕ ಮೈದಾನಗಳಲ್ಲಿ ಆಡಿದ ವಿಶ್ವದ ಎರಡನೇ ಕ್ರಿಕೆಟರ್ ಎಂಬ ಕೀರ್ತಿಗೆ ಪಾತ್ರರಾಗಿದ್ದಾರೆ. 2023ರ ಜುಲೈ 12ರಂದು ವೆಸ್ಟ್ ಇಂಡೀಸ್ ವಿರುದ್ಧ ರೋಸೌನ ವಿಂಡ್ಸರ್ ಪಾರ್ಕ್ನಲ್ಲಿ ಟೆಸ್ಟ್ ಕ್ರಿಕೆಟ್ಗೆ ಪದಾರ್ಪಣೆ ಮಾಡಿದ ಮುಂಬೈ ಮೂಲದ ಎಡಗೈ ಬ್ಯಾಟರ್, ಇಲ್ಲಿಯವರೆಗೆ ಆಡಿದ ಎಲ್ಲಾ 33 ಪಂದ್ಯಗಳನ್ನು ಹೊಸ ಕ್ರೀಡಾಂಗಣಗಳಲ್ಲೇ ಆಡಿರುವುದು ಗಮನಾರ್ಹವಾಗಿದೆ. ಅಂದರೆ, ಇದುವರೆಗೂ ಅವರು ಒಂದೇ ಕ್ರೀಡಾಂಗಣದಲ್ಲಿ ಎರಡನೇ ಟೆಸ್ಟ್ ಆಡುವ ಸಂದರ್ಭ ಬಂದಿಲ್ಲ.
ಸಚಿನ್ ದಾಖಲೆ ಹಿಂದಿಕ್ಕಿ (Yashasvi Jaiswal) ಮಾಂಜ್ರೇಕರ್ ಸರಿಗಟ್ಟಿದ ಜೈಸ್ವಾಲ್
ಈ ಅಪರೂಪದ ಸಾಧನೆಯ ಪಟ್ಟಿಯಲ್ಲಿ ಯಶಸ್ವಿ ಜೈಸ್ವಾಲ್ ಅವರು ಭಾರತದ ಮಾಜಿ ಆಟಗಾರ ಸಂಜಯ್ ಮಾಂಜ್ರೇಕರ್ ಅವರ ವಿಶ್ವದಾಖಲೆಯನ್ನು ಸರಿಗಟ್ಟಿದ್ದಾರೆ. ಮಾಂಜ್ರೇಕರ್ ಕೂಡ ತಮ್ಮ ಆರಂಭಿಕ 33 ಟೆಸ್ಟ್ ಪಂದ್ಯಗಳನ್ನು ವಿಭಿನ್ನ ಮೈದಾನಗಳಲ್ಲಿ ಆಡಿದ್ದರು. ಮತ್ತೊಂದೆಡೆ, ಕ್ರಿಕೆಟ್ ದಿಗ್ಗಜ ಸಚಿನ್ ತೆಂಡೂಲ್ಕರ್ ತಮ್ಮ ಮೊದಲ 32 ಟೆಸ್ಟ್ ಪಂದ್ಯಗಳನ್ನು ಬೇರೆ ಬೇರೆ ಕ್ರೀಡಾಂಗಣಗಳಲ್ಲಿ ಆಡಿದ್ದು, ಇದೀಗ ಜೈಸ್ವಾಲ್ ಸಚಿನ್ ಅವರನ್ನು ಹಿಂದಿಕ್ಕಿದ್ದಾರೆ. ಕನ್ನಡಿಗ ಜಾವಗಲ್ ಶ್ರೀನಾಥ್ ಮತ್ತು ವೆಸ್ಟ್ ಇಂಡೀಸ್ನ ದಿನೇಶ್ ರಾಮ್ದಿನ್ ತಲಾ 24 ವಿಭಿನ್ನ ಮೈದಾನಗಳಲ್ಲಿ ಮೊದಲ 24 ಟೆಸ್ಟ್ಗಳನ್ನು ಆಡಿ ನಂತರದ ಸ್ಥಾನಗಳಲ್ಲಿದ್ದಾರೆ.
| ಆಟಗಾರ | ದೇಶ ಮತ್ತು ಅವಧಿ | ವಿಭಿನ್ನ ಮೈದಾನಗಳಲ್ಲಿ ಆಡಿದ ಮೊದಲ ಟೆಸ್ಟ್ಗಳು |
| ಸಂಜಯ್ ಮಾಂಜ್ರೇಕರ್ | ಭಾರತ (1987–1994) | 33 |
| ಯಶಸ್ವಿ ಜೈಸ್ವಾಲ್ | ಭಾರತ (2023–2026) | 33 |
| ಸಚಿನ್ ತೆಂಡೂಲ್ಕರ್ | ಭಾರತ (1989–1994) | 32 |
| ಜಾವಗಲ್ ಶ್ರೀನಾಥ್ | ಭಾರತ (1991–1996) | 24 |
| ದಿನೇಶ್ ರಾಮ್ದಿನ್ | ವೆಸ್ಟ್ ಇಂಡೀಸ್ (2005–2008) | 24 |
ನಾಗ್ಪುರದಲ್ಲಿ ಏಕೈಕ ವಿಶ್ವದಾಖಲೆಯ ಅವಕಾಶ
ಸತತ ಹೊಸ ಮೈದಾನಗಳಲ್ಲಿ ಟೆಸ್ಟ್ ಆಡುವ ವಿಶ್ವದಾಖಲೆಯನ್ನು ಸಂಪೂರ್ಣವಾಗಿ ತಮ್ಮದಾಗಿಸಿಕೊಳ್ಳಲು ಜೈಸ್ವಾಲ್ ಅವರಿಗೆ ಇನ್ನು ಕೇವಲ ಒಂದೇ ಹೆಜ್ಜೆ ಬಾಕಿ ಇದೆ. 2027ರ ಜನವರಿ 21ರಿಂದ ನಾಗ್ಪುರದ ವಿದರ್ಭ ಕ್ರಿಕೆಟ್ ಸಂಸ್ಥೆ (VCA) ಕ್ರೀಡಾಂಗಣದಲ್ಲಿ ಆರಂಭವಾಗಲಿರುವ ಆಸ್ಟ್ರೇಲಿಯಾ ವಿರುದ್ಧದ ಬಾರ್ಡರ್-ಗವಾಸ್ಕರ್ ಟ್ರೋಫಿಯ ಮೊದಲ ಟೆಸ್ಟ್ ಪಂದ್ಯದಲ್ಲಿ ಜೈಸ್ವಾಲ್ ಆಡಿದರೆ, ಮೊದಲ 34 ಟೆಸ್ಟ್ಗಳನ್ನು 34 ವಿಭಿನ್ನ ಮೈದಾನಗಳಲ್ಲಿ ಆಡಿದ ವಿಶ್ವದ ಮೊಟ್ಟಮೊದಲ ಆಟಗಾರ ಎಂಬ ಏಕೈಕ ದಾಖಲೆ ಬರೆಯಲಿದ್ದಾರೆ. 2025ರಲ್ಲಿ ನಾಗ್ಪುರದಲ್ಲಿ ಏಕದಿನ ಪಂದ್ಯಕ್ಕೆ ಪದಾರ್ಪಣೆ ಮಾಡಿದ್ದರೂ, ಜೈಸ್ವಾಲ್ ಅಲ್ಲಿ ಇಲ್ಲಿಯವರೆಗೆ ಯಾವುದೇ ಟೆಸ್ಟ್ ಪಂದ್ಯ ಆಡಿಲ್ಲ.
ದಾಖಲೆಯ ಬೆನ್ನಲ್ಲೇ ಸರಣಿಗೆ ತೆರೆ ಬೀಳುವ ಸಾಧ್ಯತೆ
ನಾಗ್ಪುರದಲ್ಲಿ ಹೊಸ ವಿಶ್ವದಾಖಲೆ ನಿರ್ಮಿಸಿದ ಬಳಿಕ ಜೈಸ್ವಾಲ್ ಅವರ ಈ ವಿಶಿಷ್ಟ ದಾಖಲೆಯ ಸರಣಿ ಅಂತ್ಯಗೊಳ್ಳುವ ಸಾಧ್ಯತೆ ಇದೆ. ಬಾರ್ಡರ್-ಗವಾಸ್ಕರ್ ಸರಣಿಯ ಉಳಿದ ನಾಲ್ಕು ಟೆಸ್ಟ್ ಪಂದ್ಯಗಳು ಚೆನ್ನೈ, ಗುವಾಹಟಿ, ರಾಂಚಿ ಮತ್ತು ಅಹಮದಾಬಾದ್ನಲ್ಲಿ ನಡೆಯಲಿದ್ದು, ಈ ನಾಲ್ಕೂ ಕ್ರೀಡಾಂಗಣಗಳಲ್ಲಿ ಜೈಸ್ವಾಲ್ ಈಗಾಗಲೇ ತಲಾ ಒಂದು ಟೆಸ್ಟ್ ಪಂದ್ಯ ಆಡಿದ್ದಾರೆ. ಹೀಗಾಗಿ, ನಾಗ್ಪುರ ಪಂದ್ಯದ ನಂತರ ಚೆನ್ನೈನಲ್ಲಿ ನಡೆಯುವ ಎರಡನೇ ಟೆಸ್ಟ್ನಲ್ಲಿ ಕಣಕ್ಕಿಳಿದರೆ ಅವರ ಈ ಅಪರೂಪದ ದಾಖಲೆಯ ಓಟ 34ನೇ ಪಂದ್ಯಕ್ಕೆ ಕೊನೆಗೊಳ್ಳಲಿದೆ.
33 ಟೆಸ್ಟ್ಗಳಲ್ಲಿ ಜೈಸ್ವಾಲ್ ಬ್ಯಾಟಿಂಗ್ ಸಾಧನೆ
ತಮ್ಮ ವೃತ್ತಿಜೀವನದ ಮೊದಲ 33 ಟೆಸ್ಟ್ ಪಂದ್ಯಗಳಲ್ಲಿ ಜೈಸ್ವಾಲ್ ವಿವಿಧ ತಂಡಗಳ ವಿರುದ್ಧ ಆಡಿದ್ದಾರೆ. ಅದರಲ್ಲಿ ಇಂಗ್ಲೆಂಡ್ ವಿರುದ್ಧ 10 ಪಂದ್ಯ, ನ್ಯೂಜಿಲೆಂಡ್ ಮತ್ತು ಆಸ್ಟ್ರೇಲಿಯಾ ವಿರುದ್ಧ ತಲಾ 5 ಪಂದ್ಯ, ವೆಸ್ಟ್ ಇಂಡೀಸ್ ಮತ್ತು ದಕ್ಷಿಣ ಆಫ್ರಿಕಾ ವಿರುದ್ಧ ತಲಾ 4 ಪಂದ್ಯ, ಬಾಂಗ್ಲಾದೇಶ ಮತ್ತು ಶ್ರೀಲಂಕಾ ವಿರುದ್ಧ ತಲಾ 2 ಪಂದ್ಯ ಹಾಗೂ ಅಫ್ಘಾನಿಸ್ತಾನ ವಿರುದ್ಧ 1 ಟೆಸ್ಟ್ ಪಂದ್ಯ ಆಡಿದ್ದಾರೆ. ಈವರೆಗೆ ಒಟ್ಟು 14 ಅರ್ಧಶತಕ ಮತ್ತು 7 ಶತಕಗಳ ನೆರವಿನಿಂದ 2,697 ರನ್ ಕಲೆಹಾಕಿದ್ದಾರೆ.
