TOP NEWS

Mamata Banerjee: ಬಂಗಾಳದಲ್ಲಿ ‘ಕಮಲ’ ಜಯಭೇರಿ: ಚುನಾವಣೆ ಆಯೋಗ ಮತ್ತು ಬಿಜೆಪಿ ವಿರುದ್ಧ ಮಮತಾ ಬ್ಯಾನರ್ಜಿ ಆಕ್ರೋಶ

west bengal election bjp and eci looted over 100 seats mamata banerjee

ಕೋಲ್ಕತ್ತಾ: ಪಶ್ಚಿಮ ಬಂಗಾಳ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ ಭರ್ಜರಿ ಜಯ ಸಾಧಿಸಿ ಇತಿಹಾಸ ಬರೆಯುತ್ತಿದ್ದಂತೆ, ತೃಣಮೂಲ ಕಾಂಗ್ರೆಸ್ ಮುಖ್ಯಸ್ಥೆ ಮಮತಾ ಬ್ಯಾನರ್ಜಿ (Mamata Banerjee) ಅವರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ. ರಾಜ್ಯದಲ್ಲಿ ಬಿಜೆಪಿ 100ಕ್ಕೂ ಹೆಚ್ಚು ಸ್ಥಾನಗಳನ್ನು ಲೂಟಿ ಮಾಡಿದೆ ಎಂದು ಆರೋಪಿಸಿರುವ ಅವರು, ಈ ಗೆಲುವನ್ನು “ಅನೈತಿಕ ಜಯ” ಎಂದು ಕರೆದಿದ್ದಾರೆ. ಕಳೆದ 15 ವರ್ಷಗಳಿಂದ ಬಂಗಾಳವನ್ನು ಆಳುತ್ತಿದ್ದ ದೀದಿ ಸಾಮ್ರಾಜ್ಯ ಈ ಬಾರಿ ಪತನಗೊಂಡಿದ್ದು, ಕೇಸರಿ ಪಡೆ ಮೊದಲ ಬಾರಿಗೆ ಸ್ವಂತ ಬಲದ ಮೇಲೆ ಅಧಿಕಾರ ಹಿಡಿಯಲು ಸಜ್ಜಾಗಿದೆ.

ಕೋಲ್ಕತ್ತಾದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಮಮತಾ ಬ್ಯಾನರ್ಜಿ, “ಇದು ನೈತಿಕತೆಯ ಗೆಲುವಲ್ಲ. ಚುನಾವಣಾ ಆಯೋಗವು ಈಗ ಬಿಜೆಪಿಯ ಆಯೋಗದಂತೆ ವರ್ತಿಸುತ್ತಿದೆ. ನಾವು ಚುನಾವಣಾ ಅಧಿಕಾರಿಗಳಿಗೆ ದೂರು ನೀಡಿದರೂ ಯಾವುದೇ ಪ್ರಯೋಜನವಾಗಿಲ್ಲ. ಕೇಂದ್ರ ಪಡೆಗಳು, ಪ್ರಧಾನಿ ಮತ್ತು ಗೃಹ ಸಚಿವರು ಸೇರಿಕೊಂಡು ಈ ಚುನಾವಣೆಯನ್ನು ಅಕ್ರಮವಾಗಿ ನಡೆಸಿದ್ದಾರೆ. ಇದು ಮತಗಳ ಲೂಟಿ ಹೊರತು ಮತ್ತೇನಲ್ಲ” ಎಂದು ಕಿಡಿಕಾರಿದ್ದಾರೆ. ಸೋಲಿನ ನಡುವೆಯೂ ಧೃತಿಗೆಡದ ಅವರು, ತಾವು ಶೀಘ್ರದಲ್ಲೇ ಮತ್ತೆ ಪುಟಿದೇಳುವುದಾಗಿ ವಿಶ್ವಾಸ ವ್ಯಕ್ತಪಡಿಸಿದ್ದಾರೆ.

ಮತ್ತೊಂದೆಡೆ ಪ್ರಧಾನಿ ನರೇಂದ್ರ ಮೋದಿ ಅವರು ಬಂಗಾಳದ ಈ ಗೆಲುವನ್ನು ಐತಿಹಾಸಿಕ ಎಂದು ಬಣ್ಣಿಸಿದ್ದಾರೆ. ಬಂಗಾಳದಲ್ಲಿ ಕಮಲ ಅರಳಿದೆ, ಜನರ ಶಕ್ತಿ ಮತ್ತು ಉತ್ತಮ ಆಡಳಿತದ ರಾಜಕಾರಣಕ್ಕೆ ಸಂದ ಜಯವಿದು ಎಂದು ಅವರು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ. ಆದರೆ, ಮತ ಎಣಿಕೆ ಪ್ರಕ್ರಿಯೆಯಲ್ಲಿ ಅಕ್ರಮ ನಡೆದಿದೆ ಎಂದು ಟಿಎಂಸಿ ನಿರಂತರವಾಗಿ ದೂರುತ್ತಿದೆ. ಡೈಮಂಡ್ ಹಾರ್ಬರ್ ಸೇರಿದಂತೆ ಹಲವು ಕ್ಷೇತ್ರಗಳಲ್ಲಿ ಗೆಲುವು ಸ್ಪಷ್ಟವಾಗಿದ್ದರೂ ಆಯೋಗವು ಪ್ರಮಾಣಪತ್ರ ನೀಡಲು ನಿರಾಕರಿಸುತ್ತಿದೆ ಎಂದು ಪಕ್ಷವು ಗಂಭೀರ ಆರೋಪ ಮಾಡಿದೆ.

ರಾತ್ರಿ 8 ಗಂಟೆಯ ವೇಳೆಗೆ ಲಭ್ಯವಿರುವ ಅಂಕಿ-ಅಂಶಗಳ ಪ್ರಕಾರ, ಒಟ್ಟು 294 ಕ್ಷೇತ್ರಗಳ ಪೈಕಿ ಬಿಜೆಪಿ 206 ಸ್ಥಾನಗಳಲ್ಲಿ ಜಯಭೇರಿ ಬಾರಿಸಿದೆ. ಈ ಪೈಕಿ 113 ಕ್ಷೇತ್ರಗಳಲ್ಲಿ ಈಗಾಗಲೇ ಗೆಲುವು ಸಾಧಿಸಿದ್ದು, ಉಳಿದ 93 ಕ್ಷೇತ್ರಗಳಲ್ಲಿ ಮುನ್ನಡೆ ಕಾಯ್ದುಕೊಂಡಿದೆ. ಆಡಳಿತಾರೂಢ ತೃಣಮೂಲ ಕಾಂಗ್ರೆಸ್ ಕೇವಲ 81 ಸ್ಥಾನಗಳಿಗೆ ಸೀಮಿತವಾಗಿದ್ದು, ಭಾರಿ ಮುಖಭಂಗ ಅನುಭವಿಸಿದೆ. ಉಳಿದಂತೆ ಕಾಂಗ್ರೆಸ್ ಮತ್ತು ಇತರ ಸಣ್ಣ ಪಕ್ಷಗಳು ತಲಾ ಎರಡು ಸ್ಥಾನಗಳನ್ನು ಗೆದ್ದಿವೆ. ಈ ಫಲಿತಾಂಶ ಬಂಗಾಳದ ರಾಜಕೀಯ ಇತಿಹಾಸದಲ್ಲಿ ಒಂದು ದೊಡ್ಡ ಬದಲಾವಣೆಗೆ ನಾಂದಿ ಹಾಡಿದೆ.

ಇದನ್ನೂ ಓದಿ: ಬಂಗಾಳದಲ್ಲಿ ‘ಪರಿಬೋರ್ತನ್’: ಗಂಗೋತ್ರಿಯಿಂದ ಗಂಗಾಸಾಗರದವರೆಗೆ ಕಮಲ ಅರಳಿದೆ ಎಂದು ಗುಡುಗಿದ ಪ್ರಧಾನಿ ಮೋದಿ

Leave a Reply

Your email address will not be published. Required fields are marked *