TOP NEWS

Narendra Modi: ಬಂಗಾಳದಲ್ಲಿ ‘ಪರಿಬೋರ್ತನ್’: ಗಂಗೋತ್ರಿಯಿಂದ ಗಂಗಾಸಾಗರದವರೆಗೆ ಕಮಲ ಅರಳಿದೆ ಎಂದು ಗುಡುಗಿದ ಪ್ರಧಾನಿ ಮೋದಿ

Narendra Modi Bengal today is free from fear

ನವದೆಹಲಿ: ಪಶ್ಚಿಮ ಬಂಗಾಳದ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ ಭರ್ಜರಿ ಜಯ ದಾಖಲಿಸಿದ ಹಿನ್ನೆಲೆಯಲ್ಲಿ ದೆಹಲಿಯ ಪಕ್ಷದ ಪ್ರಧಾನ ಕಚೇರಿಯಲ್ಲಿ ವಿಜಯೋತ್ಸವ ಆಚರಿಸಲಾಯಿತು. ಸಾಂಪ್ರದಾಯಿಕ ಬಂಗಾಳಿ ಶೈಲಿಯ ದೋತಿಯಲ್ಲಿ ಮಿಂಚಿದ ಪ್ರಧಾನಿ ನರೇಂದ್ರ ಮೋದಿ (Narendra Modi) ಅವರು, ಬಂಗಾಳದ ನೆಲದಲ್ಲಿ ಅಕ್ಷರಶಃ ‘ಪರಿಬೋರ್ತನ್’ (ಬದಲಾವಣೆ) ಗಾಳಿ ಬೀಸಿದೆ ಎಂದು ಬಂಗಾಳಿ ಭಾಷೆಯಲ್ಲೇ ಘೋಷಿಸಿದರು. ಗಂಗೆಯ ಉಗಮ ಸ್ಥಾನವಾದ ಗಂಗೋತ್ರಿಯಿಂದ ಹಿಡಿದು ಅವಳು ಸಮುದ್ರ ಸೇರುವ ಬಂಗಾಳದ ಗಂಗಾಸಾಗರದವರೆಗೆ ಅಂದರೆ ಉತ್ತರಾಖಂಡ, ಉತ್ತರ ಪ್ರದೇಶ, ಬಿಹಾರ ಮತ್ತು ಈಗ ಪಶ್ಚಿಮ ಬಂಗಾಳ ಸೇರಿದಂತೆ ಗಂಗಾ ನದಿ ಹರಿಯುವ ಎಲ್ಲಾ ರಾಜ್ಯಗಳಲ್ಲಿಯೂ ಇಂದು ಬಿಜೆಪಿ ಮತ್ತು ಎನ್‌ಡಿಎ ಮೈತ್ರಿಕೂಟದ ಸರ್ಕಾರಗಳಿವೆ ಎಂದು ಅವರು ಹೆಮ್ಮೆಯಿಂದ ನುಡಿದರು.

ಭಯದ ವಾತಾವರಣ ಅಂತ್ಯವಾಗಿದೆ
ಬಂಗಾಳದಲ್ಲಿ ದಶಕಗಳ ಕಾಲ ಮನೆಮಾಡಿದ್ದ ಭಯದ ವಾತಾವರಣ ಈಗ ಅಂತ್ಯಗೊಂಡಿದೆ ಎಂದ ಪ್ರಧಾನಿ, ಇಂದಿನಿಂದ ಬಂಗಾಳವು ಅಭಿವೃದ್ಧಿಯತ್ತ ವಿಶ್ವಾಸದಿಂದ ಹೆಜ್ಜೆ ಹಾಕಲಿದೆ ಎಂದು ಭರವಸೆ ನೀಡಿದರು. ಚುನಾವಣಾ ಪ್ರಚಾರದ ವೇಳೆ ಬಿಜೆಪಿ ಕಾರ್ಯಕರ್ತರು, ಅದರಲ್ಲೂ ವಿಶೇಷವಾಗಿ ಮಹಿಳಾ ಕಾರ್ಯಕರ್ತೆಯರು ಅನುಭವಿಸಿದ ದೌರ್ಜನ್ಯಗಳನ್ನು ಸ್ಮರಿಸಿದ ಅವರು, ಬಂಗಾಳದ ಜನತೆ ಅನ್ಯಾಯ ಮತ್ತು ಹಿಂಸಾಚಾರದ ವಿರುದ್ಧ ತೀರ್ಪು ನೀಡಿದ್ದಾರೆ ಎಂದರು. ಈ ಸಂದರ್ಭದಲ್ಲಿ ವಿರೋಧ ಪಕ್ಷಗಳಿಗೆ ಕಿವಿಮಾತು ಹೇಳಿದ ಮೋದಿ, ನಮ್ಮ ಗುರಿ ‘ಬದ್ಲಾ’ (ಸೇಡು) ಅಲ್ಲ, ಬದಲಾಗಿ ‘ಬದಲಾವ್’ (ಬದಲಾವಣೆ). ನಮ್ಮ ದೃಷ್ಟಿ ‘ಭಯ’ದ ಮೇಲಲ್ಲ, ಬಂಗಾಳದ ಉಜ್ವಲ ‘ಭವಿಷ್ಯ’ದ ಮೇಲಿದೆ ಎಂದು ಸ್ಪಷ್ಟಪಡಿಸಿದರು.

ಇದೇ ವೇಳೆ ಮಹಿಳಾ ಸುರಕ್ಷತೆಯ ವಿಚಾರವಾಗಿ ಟಿಎಂಸಿ ಮತ್ತು ಕಾಂಗ್ರೆಸ್ ವಿರುದ್ಧ ವಾಗ್ದಾಳಿ ನಡೆಸಿದ ಮೋದಿ, ಮಹಿಳಾ ಮೀಸಲಾತಿ ಮಸೂದೆಯನ್ನು ವಿರೋಧಿಸಿದ್ದಕ್ಕಾಗಿ ಈ ಪಕ್ಷಗಳಿಗೆ ಮಹಿಳಾ ಮತದಾರರು ತಕ್ಕ ಪಾಠ ಕಲಿಸಿದ್ದಾರೆ ಎಂದರು. ಆರ್‌ಜಿ ಕರ್ ವೈದ್ಯಕೀಯ ಕಾಲೇಜಿನ ಘಟನೆಯು ಈ ಚುನಾವಣೆಯಲ್ಲಿ ಪ್ರಮುಖ ಪಾತ್ರ ವಹಿಸಿದ್ದು, ಸಂತ್ರಸ್ತೆಯ ತಾಯಿ ಪಾನಿಹಟಿ ಕ್ಷೇತ್ರದಲ್ಲಿ ಜಯಗಳಿಸಿರುವುದು ಜನರ ಆಕ್ರೋಶಕ್ಕೆ ಸಾಕ್ಷಿಯಾಗಿದೆ ಎಂದು ಅವರು ತಿಳಿಸಿದರು. ಅಕ್ರಮ ಒಳನುಸುಳುವಿಕೆ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವುದಾಗಿ ಎಚ್ಚರಿಸಿದ ಪ್ರಧಾನಿ, ನೂತನ ಸರ್ಕಾರದ ಮೊದಲ ಸಂಪುಟ ಸಭೆಯಲ್ಲೇ ‘ಆಯುಷ್ಮಾನ್ ಭಾರತ್’ ಯೋಜನೆಗೆ ಅನುಮೋದನೆ ನೀಡಲಾಗುವುದು ಮತ್ತು ಯುವಕರಿಗೆ ಉದ್ಯೋಗ ಒದಗಿಸಿ ವಲಸೆಯನ್ನು ತಡೆಯಲಾಗುವುದು ಎಂದು ಭರವಸೆ ನೀಡಿದರು.

ಮತ್ತೊಂದೆಡೆ, ಮಮತಾ ಬ್ಯಾನರ್ಜಿ ಅವರು ಬಿಜೆಪಿಯ ಈ ಗೆಲುವನ್ನು ‘ಅನೈತಿಕ ಜಯ’ ಎಂದು ಕರೆದಿದ್ದಾರೆ. ಬಿಜೆಪಿ ನೂರು ಸ್ಥಾನಗಳನ್ನು ಲೂಟಿ ಮಾಡಿದೆ ಎಂದು ಆರೋಪಿಸಿರುವ ಅವರು, ನಾವು ಮತ್ತೆ ಪುಟಿದೇಳುತ್ತೇವೆ ಎಂದು ಸವಾಲು ಹಾಕಿದ್ದಾರೆ. ಅಸ್ಸಾಂನಲ್ಲಿ ಮೂರನೇ ಬಾರಿಗೆ ಬಿಜೆಪಿ ಅಧಿಕಾರಕ್ಕೆ ಬಂದಿದ್ದರೆ, ಕೇರಳದಲ್ಲಿ ಮಾತ್ರ ಯುಡಿಎಫ್ ಮೈತ್ರಿಕೂಟದ ಮೂಲಕ ಕಾಂಗ್ರೆಸ್ ಮತ್ತೆ ಅಸ್ತಿತ್ವ ಕಂಡುಕೊಂಡಿದೆ. ಒಟ್ಟಾರೆಯಾಗಿ ಬಂಗಾಳದಲ್ಲಿ ಕೇಸರಿ ಪಡೆಯ ಈ ಗೆಲುವು ದೇಶದ ರಾಜಕೀಯದಲ್ಲಿ ಹೊಸ ಮೈಲಿಗಲ್ಲು ಸೃಷ್ಟಿಸಿದೆ.

ಇದನ್ನೂ ಓದಿ: ಬಂಗಾಳದಲ್ಲಿ ದೀದಿ ಯುಗಾಂತ್ಯ; ಕೇಸರಿ ಸುನಾಮಿಗೆ ನಲುಗಿದ ಟಿಎಂಸಿ ಕೋಟೆ

Leave a Reply

Your email address will not be published. Required fields are marked *