ಚೆನ್ನೈ: ತಮಿಳುನಾಡು ರಾಜಕೀಯದಲ್ಲಿ ಹೊಸ ಸಂಚಲನ ಸೃಷ್ಟಿಸಿರುವ ನಟ ವಿಜಯ್ ಅವರ TVK ಪಕ್ಷವು, ಸಾಮಾನ್ಯ ಕಾರ್ಯಕರ್ತರಿಗೂ ಉನ್ನತ ಸ್ಥಾನ ನೀಡುವ ಮೂಲಕ ಗಮನ ಸೆಳೆದಿದೆ. ವಿಶೇಷವಾಗಿ ವಿಜಯ್ ಅವರ ದೀರ್ಘಕಾಲದ ಚಾಲಕ ಹಾಗೂ ಆಪ್ತ ಸಹಾಯಕ ರಾಜೇಂದ್ರನ್ ಅವರ ಪುತ್ರ ಆರ್. ಶಬರಿನಾಥನ್, ಚೆನ್ನೈನ ವಿರುಗಂಬಕ್ಕಂ ಕ್ಷೇತ್ರದಲ್ಲಿ ಪ್ರಬಲ ಡಿಎಂಕೆ ಅಭ್ಯರ್ಥಿಯನ್ನು ಸೋಲಿಸಿ ಐತಿಹಾಸಿಕ ಜಯ ದಾಖಲಿಸಿದ್ದಾರೆ.
ಭಾವನಾತ್ಮಕ ಗೆಲುವು: ಅಭ್ಯರ್ಥಿಗಳ ಘೋಷಣೆ ಸಂದರ್ಭದಲ್ಲಿ ವಿಜಯ್ ಅವರು ಶಬರಿನಾಥನ್ ಹೆಸರನ್ನು ಪ್ರಕಟಿಸಿದಾಗ, ತಂದೆ-ಮಗ ಇಬ್ಬರೂ ವೇದಿಕೆಯ ಮೇಲೆ ಕಣ್ಣೀರಿಟ್ಟು ದಳಪತಿಯ ಪಾದ ಮುಟ್ಟಿ ಆಶೀರ್ವಾದ ಪಡೆದಿದ್ದರು. ಅಂದು ವೈರಲ್ ಆಗಿದ್ದ ಆ ವಿಡಿಯೋ ಈಗ ಅವರ ಗೆಲುವಿನೊಂದಿಗೆ ಮತ್ತೊಮ್ಮೆ ಸಾಮಾಜಿಕ ಜಾಲತಾಣಗಳಲ್ಲಿ ಸದ್ದು ಮಾಡುತ್ತಿದೆ. ತನ್ನ ಚಾಲಕನ ಕುಟುಂಬದ ಮೇಲಿಟ್ಟಿದ್ದ ನಂಬಿಕೆಯನ್ನು ವಿಜಯ್ ಈ ಮೂಲಕ ಸಾಬೀತುಪಡಿಸಿದ್ದಾರೆ.
Thalapathy Vijay give ticket own driver son ! Now winning the seats 🔥🔥 pic.twitter.com/svLei3lgMs
— Ashish Singh (@AshishSinghKiJi) May 4, 2026
ಡಿಎಂಕೆ ಅಭ್ಯರ್ಥಿಗೆ ಮುಖಭಂಗ: ಪ್ರಬಲ ರಾಜಕೀಯ ಹಿನ್ನೆಲೆಯುಳ್ಳ ಡಿಎಂಕೆ ಅಭ್ಯರ್ಥಿ ಪ್ರಭಾಕರನ್ ರಾಜ್ ಅವರ ವಿರುದ್ಧ ಸೆಣೆಸಿದ್ದ ಶಬರಿನಾಥನ್, ಭರ್ಜರಿ ಮತಗಳ ಅಂತರದಿಂದ ಜಯಗಳಿಸುವ ಮೂಲಕ ಶಾಸಕರಾಗಿ ವಿಧಾನಸಭೆ ಪ್ರವೇಶಿಸಲು ಸಜ್ಜಾಗಿದ್ದಾರೆ. ಒಬ್ಬ ಸಾಮಾನ್ಯ ಚಾಲಕನ ಮಗ ಇಂದು ರಾಜ್ಯದ ಶಾಸಕಾಂಗ ಸಭೆಯಲ್ಲಿ ಕುಳಿತುಕೊಳ್ಳುವ ಅವಕಾಶ ಪಡೆದಿರುವುದು ವಿಜಯ್ ಅವರ ರಾಜಕೀಯ ತಂತ್ರಗಾರಿಕೆಗೆ ಸಂದ ಜಯ ಎಂದೇ ಹೇಳಲಾಗುತ್ತಿದೆ.
ನಿಷ್ಠೆಗೆ ಸಂದ ಗೌರವ: ರಾಜೇಂದ್ರನ್ ಅವರು ವಿಜಯ್ ಅವರ ಆರಂಭಿಕ ದಿನಗಳಿಂದಲೂ ಅವರ ನೆರಳಿನಂತೆ ಜೊತೆಗಿದ್ದವರು. ಅವರ ಕುಟುಂಬದ ಮೇಲಿಟ್ಟ ಅಭಿಮಾನಕ್ಕಾಗಿ ವಿಜಯ್ ಅವರು ಶಬರಿನಾಥನ್ ಅವರಿಗೆ ಟಿಕೆಟ್ ನೀಡಿದ್ದರು. ನಾಯಕನ ನಂಬಿಕೆ ಮತ್ತು ತಳಮಟ್ಟದ ಜನರ ಬೆಂಬಲದಿಂದಾಗಿ ಶಬರಿನಾಥನ್ ಇಂದು ತಮಿಳುನಾಡಿನ ಅತ್ಯಂತ ಕಿರಿಯ ಹಾಗೂ ಚರ್ಚಿತ ಶಾಸಕರಲ್ಲಿ ಒಬ್ಬರಾಗಿ ಹೊರಹೊಮ್ಮಿದ್ದಾರೆ.
