ಚೆನ್ನೈ: ತಮಿಳುನಾಡು (Tamil Nadu) ವಿಧಾನಸಭಾ ಚುನಾವಣಾ ಫಲಿತಾಂಶವು ದ್ರಾವಿಡ ರಾಜಕಾರಣದ ದಿಕ್ಕನ್ನೇ ಬದಲಿಸಿದ್ದು, ಮುಖ್ಯಮಂತ್ರಿ ಎಂ.ಕೆ. ಸ್ಟಾಲಿನ್ ಅವರಿಗೆ ತೀವ್ರ ಹಿನ್ನಡೆಯಾಗಿದೆ. ತಮ್ಮದೇ ಭದ್ರಕೋಟೆಯಾದ ಕೊಳತ್ತೂರು ಕ್ಷೇತ್ರದಲ್ಲಿ ಸ್ಟಾಲಿನ್ ಅವರು ನಟ ವಿಜಯ್ ನೇತೃತ್ವದ ಟಿವಿಕೆ ಪಕ್ಷದ ಅಭ್ಯರ್ಥಿ ವಿ.ಎಸ್. ಬಾಬು ವಿರುದ್ಧ 8,000ಕ್ಕೂ ಅಧಿಕ ಮತಗಳಿಂದ ಪರಾಭವಗೊಂಡಿದ್ದಾರೆ. ಈ ಫಲಿತಾಂಶ ಇಡೀ ದೇಶದ ಗಮನ ಸೆಳೆದಿದ್ದು, ವಿಜಯ್ ಅವರ ಪಕ್ಷ 110 ಸ್ಥಾನಗಳಲ್ಲಿ ಮುನ್ನಡೆ ಸಾಧಿಸುವ ಮೂಲಕ ಅಬ್ಬರಿಸುತ್ತಿದೆ.
ಸ್ಟಾಲಿನ್ ವಿಜಯಕ್ಕೆ ಶ್ರಮಿಸಿದ್ದ ನಾಯಕನಿಂದಲೇ ಸೋಲು! ಮುಖ್ಯಮಂತ್ರಿಯನ್ನೇ ಸೋಲಿಸಿ ಅಚ್ಚರಿ ಮೂಡಿಸಿದ 75 ವರ್ಷದ ಹಿರಿಯ ನಾಯಕ ವಿ.ಎಸ್. ಬಾಬು, ಈ ಹಿಂದೆ ಡಿಎಂಕೆ ಪಕ್ಷದಲ್ಲೇ ಗುರುತಿಸಿಕೊಂಡಿದ್ದವರು. 2006ರಲ್ಲಿ ಪುರಸವಾಲ್ಕಂ ಕ್ಷೇತ್ರದ ಶಾಸಕರಾಗಿದ್ದ ಬಾಬು, 2011ರ ಚುನಾವಣೆಯಲ್ಲಿ ಇದೇ ಕೊಳತ್ತೂರು ಕ್ಷೇತ್ರದಲ್ಲಿ ಸ್ಟಾಲಿನ್ ಅವರ ಗೆಲುವಿಗಾಗಿ ಚುನಾವಣಾ ಉಸ್ತುವಾರಿ ವಹಿಸಿದ್ದರು. ಆದರೆ, ನಂತರದ ದಿನಗಳಲ್ಲಿ ಡಿಎಂಕೆ ನಾಯಕತ್ವದೊಂದಿಗೆ ಉಂಟಾದ ಭಿನ್ನಾಭಿಪ್ರಾಯದಿಂದಾಗಿ ಅವರು ಪಕ್ಷದಿಂದ ದೂರ ಸರಿದಿದ್ದರು. ಈ ವರ್ಷದ ಫೆಬ್ರವರಿಯಲ್ಲಿ ವಿಜಯ್ ಅವರ ಟಿವಿಕೆ ಪಕ್ಷಕ್ಕೆ ಸೇರಿದ ಇವರು, ಈಗ ಸ್ಟಾಲಿನ್ ವಿರುದ್ಧವೇ ಜಯಭೇರಿ ಬಾರಿಸಿ ಸೇಡು ತೀರಿಸಿಕೊಂಡಿದ್ದಾರೆ.
ಸೋಲಿನ ಸುಳಿಯಲ್ಲಿ ಘಟಾನುಘಟಿ ಸಚಿವರು: ಈ ಬಾರಿಯ ಚುನಾವಣೆಯಲ್ಲಿ ಕೇವಲ ಮುಖ್ಯಮಂತ್ರಿ ಮಾತ್ರವಲ್ಲದೆ, ಅವರ ಸಂಪುಟದ ಹಲವು ಪ್ರಭಾವಿ ಸಚಿವರು ಕೂಡ ನೆಲಕಚ್ಚಿದ್ದಾರೆ. ಡಿಎಂಕೆ ಪ್ರಧಾನ ಕಾರ್ಯದರ್ಶಿ ದುರೈಮುರುಗನ್ ಸೇರಿದಂತೆ ತಂಗಂ ತೇನರಸು, ಟಿ.ಆರ್.ಬಿ. ರಾಜಾ, ಮಾ. ಸುಬ್ರಮಣಿಯನ್ ಮತ್ತು ಕೆ.ಎನ್. ನೆಹರೂ ಅವರಂತಹ ಹಿರಿಯ ನಾಯಕರು ಸೋಲಿನ ಭೀತಿಯಲ್ಲಿದ್ದಾರೆ. ಸ್ಟಾಲಿನ್ ಪುತ್ರ ಉದಯನಿಧಿ ಸ್ಟಾಲಿನ್ ಅವರು ತಮ್ಮ ಕ್ಷೇತ್ರದಲ್ಲಿ ಮುನ್ನಡೆ ಕಾಯ್ದುಕೊಂಡಿದ್ದರೂ, ಪಕ್ಷದ ಇತರ ನಾಯಕರ ಹಿನ್ನಡೆ ಡಿಎಂಕೆಗೆ ದೊಡ್ಡ ಆಘಾತ ನೀಡಿದೆ.
ಬದಲಾದ ತಮಿಳುನಾಡು ರಾಜಕೀಯ ಭೂಪಟ: ದಶಕಗಳ ಕಾಲ ಡಿಎಂಕೆ ಮತ್ತು ಎಐಎಡಿಎಂಕೆ ನಡುವೆ ಮಾತ್ರ ನಡೆಯುತ್ತಿದ್ದ ತಮಿಳುನಾಡು ರಾಜಕೀಯ ಸಂಘರ್ಷಕ್ಕೆ ಈಗ ವಿಜಯ್ ಅವರ ಟಿವಿಕೆ ಪಕ್ಷವು ಬ್ರೇಕ್ ಹಾಕಿದೆ. ಹಳೆಯ ರಾಜಕೀಯ ಲೆಕ್ಕಾಚಾರಗಳನ್ನು ಧೂಳೀಪಟ ಮಾಡಿರುವ ವಿಜಯ್ ಅವರ ಈ ‘ಪವರ್ಫುಲ್’ ಎಂಟ್ರಿ, ತಮಿಳುನಾಡಿನಲ್ಲಿ ಹೊಸ ಯುಗ ಆರಂಭವಾಗುವ ಮುನ್ಸೂಚನೆ ನೀಡಿದೆ.
ಇದನ್ನೂ ಓದಿ: ತಮಿಳುನಾಡು ರಾಜಕೀಯದಲ್ಲಿ ವಿಜಯ್ ಸುನಾಮಿ, ರಾಜಕೀಯದ ಹೊಸ ‘ಯೂನಿಕಾರ್ನ್’ ಟಿವಿಕೆ!
