ಚೆನ್ನೈ: ತಮಿಳುನಾಡು ವಿಧಾನಸಭಾ ಚುನಾವಣೆಯ ಫಲಿತಾಂಶವು ಹೊಸ ಇತಿಹಾಸಕ್ಕೆ ಸಾಕ್ಷಿಯಾಗಿದ್ದು, ನಟ ವಿಜಯ್ (Vijay) ನೇತೃತ್ವದ ತಮಿಳಗ ವೆಟ್ರಿ ಕಳಗಂ (ಟಿವಿಕೆ) ಅಕ್ಷರಶಃ ವಿಜಯ ಪತಾಕೆ ಹಾರಿಸಿದೆ. ಸ್ವತಃ ವಿಜಯ್ ಅವರು ಸ್ಪರ್ಧಿಸಿದ್ದ ಚೆನ್ನೈನ ಪೆರಂಬೂರ್ ಮತ್ತು ತಿರುಚಿರಾಪಳ್ಳಿ ಪೂರ್ವ ಎರಡೂ ಕ್ಷೇತ್ರಗಳಲ್ಲಿ ಜಯಭೇರಿ ಬಾರಿಸುವ ಮೂಲಕ ಅಧಿಪತ್ಯ ಸ್ಥಾಪಿಸಿದ್ದಾರೆ. ಡಿಎಂಕೆ ಹಿಡಿತದಲ್ಲಿದ್ದ ಈ ಕ್ಷೇತ್ರಗಳಲ್ಲಿ ವಿಜಯ್ ಅವರ ಎಂಟ್ರಿ ದ್ರಾವಿಡ ಪಕ್ಷಗಳ ಭದ್ರಕೋಟೆಯನ್ನು ಛಿದ್ರಗೊಳಿಸಿದೆ.
ಪ್ರಬಲ ಎದುರಾಳಿಗಳ ವಿರುದ್ಧ ಜಯ: ಚೆನ್ನೈನ ಪೆರಂಬೂರ್ ಕ್ಷೇತ್ರವು ದಶಕಗಳಿಂದ ದ್ರಾವಿಡ ಪಕ್ಷಗಳ ಪ್ರಭಾವಕ್ಕೆ ಒಳಗಾಗಿತ್ತು. ಕಳೆದ ಚುನಾವಣೆಯಲ್ಲಿ ಡಿಎಂಕೆ ಅಭ್ಯರ್ಥಿ ಭಾರಿ ಅಂತರದಿಂದ ಗೆದ್ದಿದ್ದ ಈ ಕ್ಷೇತ್ರದಲ್ಲಿ, ವಿಜಯ್ ಅವರು ನೇರವಾಗಿ ಕಣಕ್ಕಿಳಿದು ದೊಡ್ಡ ಸವಾಲನ್ನೇ ಎಸೆದಿದ್ದರು. ಇಲ್ಲಿನ ಕಾರ್ಮಿಕ ಮತ್ತು ಮಧ್ಯಮ ವರ್ಗದ ಮತದಾರರು ವಿಜಯ್ ಅವರ ‘ಜನಪರ’ ಆಶಯಗಳಿಗೆ ಮನ್ನಣೆ ನೀಡಿರುವುದು ಅವರ ಗೆಲುವಿನಿಂದ ಸಾಬೀತಾಗಿದೆ. ಈ ಗೆಲುವು ವಿಜಯ್ ಅವರ ರಾಜಕೀಯ ತಂತ್ರಗಾರಿಕೆಗೆ ಸಂದ ದೊಡ್ಡ ಜಯ ಎಂದೇ ವಿಶ್ಲೇಷಿಸಲಾಗುತ್ತಿದೆ.
ರಾಜ್ಯವ್ಯಾಪಿ ಪ್ರಭಾವ ಸಾಬೀತು: ಚೆನ್ನೈ ಮಾತ್ರವಲ್ಲದೆ, ಮಧ್ಯ ತಮಿಳುನಾಡಿನ ಪ್ರಮುಖ ಕ್ಷೇತ್ರವಾದ ತಿರುಚಿರಾಪಳ್ಳಿ ಪೂರ್ವದಲ್ಲೂ ವಿಜಯ್ ಗೆಲುವು ಸಾಧಿಸಿರುವುದು ರಾಜ್ಯಾದ್ಯಂತ ಅವರಿಗಿರುವ ಜನಪ್ರಿಯತೆಗೆ ಸಾಕ್ಷಿಯಾಗಿದೆ. ಸುರಕ್ಷಿತ ಕ್ಷೇತ್ರಗಳನ್ನು ಹುಡುಕುವ ಬದಲು, ಆಡಳಿತಾರೂಢ ಡಿಎಂಕೆ ಪ್ರಭಾವವಿರುವ ಕಠಿಣ ಕ್ಷೇತ್ರಗಳನ್ನೇ ಆಯ್ದುಕೊಂಡು ಗೆದ್ದು ಬಂದಿರುವುದು ವಿಜಯ್ ಅವರ ರಾಜಕೀಯ ಹೋರಾಟದ ದೃಢತೆಯನ್ನು ತೋರಿಸುತ್ತಿದೆ.
ಒಂಟಿ ಹೋರಾಟಕ್ಕೆ ಸಂದ ಯಶಸ್ಸು: ಯಾವುದೇ ಪ್ರಮುಖ ಪಕ್ಷಗಳ ಮೈತ್ರಿ ಇಲ್ಲದೆ 234 ಕ್ಷೇತ್ರಗಳಲ್ಲಿ ಸ್ವತಂತ್ರವಾಗಿ ಅಭ್ಯರ್ಥಿಗಳನ್ನು ಕಣಕ್ಕಿಳಿಸಿದ್ದ ಟಿವಿಕೆ, ರಾಜ್ಯದ ಘಟಾನುಘಟಿ ನಾಯಕರ ಲೆಕ್ಕಾಚಾರಗಳನ್ನು ಉಲ್ಟಾ ಮಾಡಿದೆ. ಕೇವಲ ಸಿನಿಮಾ ಸ್ಟಾರ್ ಆಗಿ ಉಳಿಯದೆ, ಜನರ ನಾಡಿಮಿಡಿತ ಅರಿತ ನಾಯಕನಾಗಿ ಹೊರಹೊಮ್ಮಿರುವ ವಿಜಯ್, ಸಿನಿಮಾ ರಂಗದ ಜನಪ್ರಿಯತೆಯನ್ನು ಯಶಸ್ವಿಯಾಗಿ ರಾಜಕೀಯ ಶಕ್ತಿಯನ್ನಾಗಿ ಪರಿವರ್ತಿಸಿದ್ದಾರೆ. ಈ ದ್ವಿಮುಖ ಗೆಲುವು ತಮಿಳುನಾಡು ರಾಜಕಾರಣದಲ್ಲಿ ವಿಜಯ್ ಅವರ ಮುಂದಿನ ಪಯಣಕ್ಕೆ ಭದ್ರ ಬುನಾದಿ ಹಾಕಿದೆ.
