ಉಡುಪಿ: ತಮಿಳುನಾಡಿನ ಪ್ರಮುಖ ನಾಯಕ ಹಾಗೂ ಮಾಜಿ ಐಪಿಎಸ್ ಅಧಿಕಾರಿ ಕೆ. ಅಣ್ಣಾಮಲೈ (Annamalai) ಅವರು ಬುಧವಾರ ಉಡುಪಿಯ ಪ್ರಸಿದ್ಧ ಶ್ರೀಕೃಷ್ಣ ಮಠಕ್ಕೆ ಭೇಟಿ ನೀಡಿ ಕೃಷ್ಣ ದೇವರ ದರ್ಶನ ಪಡೆದರು. ಮಠದ ಆಡಳಿತ ಮಂಡಳಿ ಹಾಗೂ ಅರ್ಚಕರು ಮಾಜಿ ಪೊಲೀಸ್ ಅಧಿಕಾರಿಯನ್ನು ಅತ್ಯಂತ ಆತ್ಮೀಯವಾಗಿ ಬರಮಾಡಿಕೊಂಡರು.
ಮಠದ ಸಂಪ್ರದಾಯದಂತೆ ಕನಕನ ನವಗ್ರಹ ಕಿಂಡಿಯ ಮೂಲಕ ಶ್ರೀಕೃಷ್ಣನ ದರ್ಶನ ಪಡೆದು ಅಣ್ಣಾಮಲೈ ಅವರು ವಿಶೇಷ ಪೂಜೆ ಸಲ್ಲಿಸಿದರು. ದರ್ಶನದ ಬಳಿಕ ಶ್ರೀಮಠದ ತೀರ್ಥ ಪ್ರಸಾದ ಸ್ವೀಕರಿಸಿದ ಅವರಿಗೆ, ಮಠದ ವತಿಯಿಂದ ಕೃಷ್ಣದೇವರ ಸ್ಮರಣಿಕೆ ಹಾಗೂ ಪ್ರಸಾದ ನೀಡಿ ಗೌರವಪೂರ್ವಕವಾಗಿ ಸನ್ಮಾನಿಸಲಾಯಿತು.
ಹಳೆಯ ನಂಟಿನ ಉಡುಪಿಗೆ ಭೇಟಿ
ಅಣ್ಣಾಮಲೈ ಅವರು ಈ ಹಿಂದೆ ಉಡುಪಿ ಜಿಲ್ಲೆಯ ಪೊಲೀಸ್ ವರಿಷ್ಠಾಧಿಕಾರಿಯಾಗಿ (ಎಸ್ಪಿ) ದಕ್ಷ ಸೇವೆ ಸಲ್ಲಿಸಿದ್ದರು. ಈ ಕಾರಣದಿಂದಾಗಿ ಅವರಿಗೆ ಕರಾವಳಿ ಭಾಗದಲ್ಲಿ ಇಂದಿಗೂ ಅಪಾರ ಅಭಿಮಾನಿ ಬಳಗವಿದೆ. ಅವರು ಕೃಷ್ಣ ಮಠಕ್ಕೆ ಭೇಟಿ ನೀಡಿರುವ ಮಾಹಿತಿ ತಿಳಿಯುತ್ತಿದ್ದಂತೆಯೇ, ತಮ್ಮ ನೆಚ್ಚಿನ ಮಾಜಿ ಅಧಿಕಾರಿಯನ್ನು ನೋಡಲು ಮತ್ತು ಮಾತನಾಡಿಸಲು ಮಠದ ಆವರಣದಲ್ಲಿ ನೂರಾರು ಅಭಿಮಾನಿಗಳು ಹಾಗೂ ಸಾರ್ವಜನಿಕರು ನೆರೆದಿದ್ದರು.
ಹೊಸ ಸಂಘಟನೆ ಆರಂಭಿಸಿರುವ ಅಣ್ಣಾಮಲೈ
ರಾಜಕೀಯವಾಗಿ ಬಿಜೆಪಿಯನ್ನು ತೊರೆದು ಇತ್ತೀಚೆಗಷ್ಟೇ ‘ವೀ ದ ಲೀಡರ್ಸ್ ಮೂವ್ಮೆಂಟ್’ ಎಂಬ ಹೊಸ ಸಂಘಟನೆ ಆರಂಭಿಸಿರುವ ಅಣ್ಣಾಮಲೈ, ಆ ಬಳಿಕ ಉಡುಪಿ ಜಿಲ್ಲೆಗೆ ನೀಡುತ್ತಿರುವ ಎರಡನೇ ಭೇಟಿ ಇದಾಗಿದೆ. ಈ ಪ್ರವಾಸದ ಭಾಗವಾಗಿ ಅವರು ಈ ಹಿಂದೆ ಕೊಲ್ಲೂರು ಮೂಕಾಂಬಿಕಾ ದೇವಸ್ಥಾನಕ್ಕೂ ಭೇಟಿ ನೀಡಿ ವಿಶೇಷ ಪೂಜೆ ನೆರವೇರಿಸಿದ್ದರು. ತಮ್ಮ ಖಾಕಿ ಸೇವೆಯ ದಿನಗಳಿಂದಲೂ ಉಡುಪಿಯೊಂದಿಗೆ ಗಟ್ಟಿ ಭಾವನಾತ್ಮಕ ನಂಟು ಹೊಂದಿರುವ ಅಣ್ಣಾಮಲೈ ಅವರಿಗೆ ಸ್ಥಳೀಯರು ಹಾಗೂ ಅಭಿಮಾನಿಗಳು ಅದ್ದೂರಿ ಸ್ವಾಗತ ಕೋರಿದರು.
ಯುವ ಪೀಳಿಗೆಗೆ ಸೇನೆ ಸೇರಲು ಅಣ್ಣಾಮಲೈ ಕರೆ: ದೇಶಸೇವೆಗಿಂತ ಮಿಗಿಲಾದ ಗುರಿ ಮತ್ತೊಂದಿಲ್ಲ ಎಂದ ಮಾಜಿ ಐಪಿಎಸ್ ಅಧಿಕಾರಿ
ಕೊಯಮತ್ತೂರು: ಇಂದಿನ ಯುವ ಪೀಳಿಗೆಯು (ಜೆನ್-ಝೀ) ಜೀವನದಲ್ಲಿ ಸರಿಯಾದ ದಿಕ್ಕಿಲ್ಲದೆ, ಸ್ಪಷ್ಟ ಗುರಿಯನ್ನು ಹುಡುಕುತ್ತಾ ತೊಳಲಾಡುತ್ತಿದೆ. ಇಂತಹ ಯುವಜನರು ಭಾರತೀಯ ಸಶಸ್ತ್ರ ಪಡೆಗಳನ್ನು ತಮ್ಮ ವೃತ್ತಿಜೀವನದ ಪ್ರಮುಖ ಆಯ್ಕೆಯನ್ನಾಗಿ ಮಾಡಿಕೊಳ್ಳಬೇಕು. ದೇಶದ ರಕ್ಷಣೆಗಾಗಿ ಸೇನೆಯ ಸಮವಸ್ತ್ರ ಧರಿಸುವುದಕ್ಕಿಂತ ದೊಡ್ಡ ಹೆಮ್ಮೆ ಮತ್ತು ಉನ್ನತ ಉದ್ದೇಶ ಬೇರೊಂದಿಲ್ಲ ಎಂದು ‘ವಿ ದ ಲೀಡರ್ಸ್’ ಸಂಸ್ಥೆಯ ಸಂಸ್ಥಾಪಕ ಕೆ. ಅಣ್ಣಾಮಲೈ ತಿಳಿಸಿದ್ದಾರೆ.
ಕೊಯಮತ್ತೂರಿನಲ್ಲಿ ನಡೆದ ನಿವೃತ್ತ ಯೋಧ ಹಾಗೂ ರಾಜತಾಂತ್ರಿಕ ವಿಶ್ಲೇಷಕರಾದ ಮೇಜರ್ ಮದನ್ ಕುಮಾರ್ ಅವರ ಹೊಸ ಪುಸ್ತಕ ಬಿಡುಗಡೆ ಸಮಾರಂಭದಲ್ಲಿ ಭಾಗವಹಿಸಿ ಅವರು ಈ ಆಶಯ ವ್ಯಕ್ತಪಡಿಸಿದರು.
ಸೇನೆಯ ಶಿಸ್ತಿನ ಅಗತ್ಯವಿದೆ ಇತ್ತೀಚೆಗಷ್ಟೇ ‘ವಿ ದಿ ಲೀಡರ್ಸ್’ (We The Leaders) ಎನ್ನುವ ಹೊಸ ವೇದಿಕೆ ಸೃಷ್ಟಿಸಿರುವ ಅಣ್ಣಾಮಲೈ, ಇಂದಿನ ಯುವ ಜನಾಂಗವು ಬದುಕಿನ ನೈಜ ಅರ್ಥವನ್ನು ಹುಡುಕುವ ಪ್ರಯತ್ನದಲ್ಲಿದೆ. ಆದರೆ ಸೈನಿಕರಲ್ಲಿರುವಂತಹ ಶಿಸ್ತು ಹಾಗೂ ದೇಶಪ್ರೇಮದ ಚೌಕಟ್ಟು ಇಲ್ಲದಿರುವುದರಿಂದ ಅವರು ಗೊಂದಲಕ್ಕೊಳಗಾಗಿದ್ದಾರೆ. ಮಿಲಿಟರಿ ಉಡುಪು ನೌಕರಿಗೆ ಮಾತ್ರ ಸೀಮಿತವಾಗಿರದೆ, ಬದುಕಿಗೆ ಅತ್ಯುನ್ನತ ಮೌಲ್ಯ ಹಾಗೂ ಗೌರವವನ್ನು ತಂದುಕೊಡುತ್ತದೆ ಎಂದು ಅವರು ಅಭಿಪ್ರಾಯಪಟ್ಟರು.
ವೈಯಕ್ತಿಕ ಹಿತಾಸಕ್ತಿಗಿಂತ ದೇಶ ದೊಡ್ಡದು ಮಾತು ಮುಂದುವರಿಸಿದ ಅವರು, “ದೇಶದ ಭದ್ರತೆಗೆ ಹೋಲಿಸಿದರೆ ನಮ್ಮ ವೈಯಕ್ತಿಕ ಆಸೆ, ಆಕಾಂಕ್ಷೆಗಳು ತೀರಾ ಗೌಣ ಎನಿಸುತ್ತವೆ. ಯುವಕರಿಗೆ ಜೀವನದಲ್ಲಿ ಒಂದು ಬಲವಾದ ಧ್ಯೇಯ ಬೇಕಿದ್ದರೆ ಸೇನೆಗಿಂತ ಉತ್ತಮ ವೇದಿಕೆ ಮತ್ತೊಂದಿಲ್ಲ. ಭಾರತೀಯ ಸೇನೆಯಲ್ಲಿ ಸೈನಿಕರಾಗಿ ಅಥವಾ ಉನ್ನತ ಅಧಿಕಾರಿಗಳಾಗಿ ಸೇವೆ ಸಲ್ಲಿಸುವುದನ್ನು ಯುವಜನತೆ ಒಂದು ಹೆಮ್ಮೆಯ ಕೆರಿಯರ್ ಆಗಿ ಸ್ವೀಕರಿಸಬೇಕು” ಎಂದು ಕರೆ ನೀಡಿದರು.
ಇದೇ ಸಂದರ್ಭದಲ್ಲಿ ಮೇಜರ್ ಮದನ್ ಕುಮಾರ್ ಅವರು ಬರೆದಿರುವ ‘ಆಪರೇಷನ್ ಸಿಂಧೂರ್ – ದಿ ಅನ್ಟೋಲ್ಡ್ ಸ್ಟೋರಿ’ (Operation Sindoor-The Untold Story) ಕೃತಿಯನ್ನು ಲೋಕಾರ್ಪಣೆ ಮಾಡಿದ ಅಣ್ಣಾಮಲೈ, ಭಾರತೀಯ ಸೈನಿಕರ ಅಪ್ರತಿಮ ತ್ಯಾಗ ಹಾಗೂ ಶೌರ್ಯದ ಗಾಥೆಯನ್ನು ಸಮಾಜಕ್ಕೆ ಪರಿಚಯಿಸುತ್ತಿರುವ ಲೇಖಕರ ಪ್ರಯತ್ನವನ್ನು ಮುಕ್ತಕಂಠದಿಂದ ಶ್ಲಾಘಿಸಿದರು.
ಕರ್ನಾಟಕದೊಂದಿಗಿನ ನಂಟು 2011ರ ಬ್ಯಾಚ್ನ ಕರ್ನಾಟಕ ಕೆಡರ್ನ ದಕ್ಷ ಐಪಿಎಸ್ ಅಧಿಕಾರಿಯಾಗಿದ್ದ ಕೆ. ಅಣ್ಣಾಮಲೈ ಅವರು ಸುಮಾರು ಎಂಟು ವರ್ಷಗಳ ಕಾಲ ಪೊಲೀಸ್ ಇಲಾಖೆಯಲ್ಲಿ ಸೇವೆ ಸಲ್ಲಿಸಿದ್ದರು. ಕರಾವಳಿಯ ಉಡುಪಿ ಹಾಗೂ ಮಲೆನಾಡಿನ ಚಿಕ್ಕಮಗಳೂರು ಜಿಲ್ಲೆಗಳಲ್ಲಿ ಪೊಲೀಸ್ ವರಿಷ್ಠಾಧಿಕಾರಿಯಾಗಿ (ಎಸ್ಪಿ) ಹಾಗೂ ಸಿಲಿಕಾನ್ ಸಿಟಿ ಬೆಂಗಳೂರಿನ ದಕ್ಷಿಣ ವಿಭಾಗದ ಉಪ ಪೊಲೀಸ್ ಆಯುಕ್ತರಾಗಿ (ಡಿಸಿಪಿ) ಜನಸ್ನೇಹಿ ಆಡಳಿತ ನೀಡಿದ್ದ ಅವರು, 2019ರಲ್ಲಿ ತಮ್ಮ ಹುದ್ದೆಗೆ ರಾಜೀನಾಮೆ ನೀಡಿ ಸಾರ್ವಜನಿಕ ಜೀವನಕ್ಕೆ ಪ್ರವೇಶಿಸಿದ್ದರು.
ಇದನ್ನೂ ಓದಿ: ರಾಜ್ಯಾದ್ಯಂತ ಗುಟ್ಕಾ, ಪಾನ್ ಮಸಾಲಾ ಮಾರಾಟಕ್ಕೆ ಬ್ರೇಕ್
