TOP NEWS

Viral News: ವೈದ್ಯಕೀಯ ಇತಿಹಾಸದಲ್ಲೇ ಅಪರೂಪದ ಪವಾಡ: 5 ದಿನಗಳ ಅಂತರದಲ್ಲಿ 4 ಮಕ್ಕಳಿಗೆ ಜನ್ಮ ನೀಡಿದ ತಾಯಿ!

viral news women delivered 4 babies over 5 days

ಮೊರಾದಾಬಾದ್: ಉತ್ತರ ಪ್ರದೇಶದ ಮೊರಾದಾಬಾದ್‌ನಲ್ಲಿ ವೈದ್ಯಕೀಯ ಲೋಕವೇ ಬೆರಗಾಗುವಂತಹ ಅತ್ಯಂತ (Viral News) ಅಪರೂಪದ ಹಾಗೂ ಸವಾಲಿನ ಹೆರಿಗೆ ಪ್ರಕರಣವೊಂದು ವರದಿಯಾಗಿದೆ. ಜಿಲ್ಲೆಯ ಸಂಭಲ್ ಮೂಲದ 31 ವರ್ಷದ ಮಹಿಳೆಯೊಬ್ಬರು ಬರೋಬ್ಬರಿ ಐದು ದಿನಗಳ ಅಂತರದಲ್ಲಿ ನಾಲ್ಕು ಮಕ್ಕಳಿಗೆ ಜನ್ಮ ನೀಡಿದ್ದಾರೆ. ಸಾಮಾನ್ಯವಾಗಿ ಇಂತಹ ಹೆಚ್ಚು ಅಪಾಯವಿರುವ (ಹೈ-ರಿಸ್ಕ್) ಗರ್ಭಧಾರಣೆಯ ಸಂದರ್ಭಗಳಲ್ಲಿ ಶಸ್ತ್ರಚಿಕಿತ್ಸೆ (ಸಿಜೇರಿಯನ್) ಅನಿವಾರ್ಯ ಇರುತ್ತದೆ. ಆದರೆ ಇಲ್ಲಿ ಯಾವುದೇ ಸರ್ಜರಿ ಇಲ್ಲದೆ, ನಾಲ್ಕೂ ಮಕ್ಕಳು ಸಹಜ ಹೆರಿಗೆಯ (ನಾರ್ಮಲ್ ಡೆಲಿವರಿ) ಮೂಲಕವೇ ಜನಿಸಿರುವುದು ಜಾಗತಿಕ ಮಟ್ಟದಲ್ಲಿ ದೊಡ್ಡ ವೈದ್ಯಕೀಯ ಸಾಧನೆಯಾಗಿ ಹೊರಹೊಮ್ಮಿದೆ

ಉತ್ತರ ಪ್ರದೇಶದ ಮೊರಾದಾಬಾದ್‌ನಲ್ಲಿರುವ ತೀರ್ಥಂಕರ್ ಮಹಾವೀರ್ ವಿಶ್ವವಿದ್ಯಾಲಯ ಆಸ್ಪತ್ರೆಯಲ್ಲಿ ಈ ಅಪರೂಪದ ಘಟನೆ ನಡೆದಿದೆ. ಸಂಭಲ್ ಜಿಲ್ಲೆಯ ನಿವಾಸಿಯಾದ ಅಮಿನಾ ಎಂಬ ಮಹಿಳೆಗೆ ಇಬ್ಬರು ಗಂಡು ಹಾಗೂ ಇಬ್ಬರು ಹೆಣ್ಣು ಮಕ್ಕಳು ಜನಿಸಿದ್ದಾರೆ. ಸದ್ಯ ತಾಯಿ ಹಾಗೂ ನಾಲ್ಕೂ ನವಜಾತ ಶಿಶುಗಳು ವೈದ್ಯರ ತೀವ್ರ ನಿಗಾ ಘಟಕದಲ್ಲಿದ್ದು, ಅವರ ಆರೋಗ್ಯ ಸ್ಥಿತಿ ದಿನದಿಂದ ದಿನಕ್ಕೆ ಸುಧಾರಿಸುತ್ತಿದೆ ಎಂದು ಆಸ್ಪತ್ರೆಯ ಮೂಲಗಳು ತಿಳಿಸಿವೆ.

ಏನಿದು ಘಟನೆ?

ಆರಂಭಿಕ ದಿನಗಳಲ್ಲಿ ಅಲ್ಟ್ರಾಸೌಂಡ್ ಸ್ಕ್ಯಾನಿಂಗ್ ಮಾಡಿದಾಗ ಗರ್ಭದಲ್ಲಿ ನಾಲ್ಕು ಭ್ರೂಣಗಳಿರುವುದು ಪತ್ತೆಯಾಗಿತ್ತು. ಅಂದಿನಿಂದಲೇ ಈ ಗರ್ಭಧಾರಣೆಯನ್ನು ಅತ್ಯಂತ ಕಠಿಣ ಹಾಗೂ ಸಂಕೀರ್ಣ ಪ್ರಕರಣ ಎಂದು ವರ್ಗೀಕರಿಸಲಾಗಿತ್ತು. ತಾಯಿ ಮತ್ತು ಮಕ್ಕಳ ಜೀವಕ್ಕೆ ಎದುರಾಗಬಹುದಾದ ಭೀತಿಯನ್ನು ಗಮನಿಸಿ, ಕನಿಷ್ಠ ಇಬ್ಬರು ಮಕ್ಕಳನ್ನಾದರೂ ಸುರಕ್ಷಿತವಾಗಿ ಉಳಿಸಿಕೊಳ್ಳಲು ಭ್ರೂಣಗಳ ಸಂಖ್ಯೆಯನ್ನು ಕಡಿಮೆ ಮಾಡುವಂತೆ (ಫೀಟಲ್ ರಿಡಕ್ಷನ್) ವೈದ್ಯರ ತಂಡವು ಸಲಹೆ ನೀಡಿತ್ತು. ಆದರೆ ಕುಟುಂಬದ ಸದಸ್ಯರು ಇದಕ್ಕೆ ಒಪ್ಪದೆ ನಾಲ್ಕೂ ಮಕ್ಕಳನ್ನು ಬೆಳೆಸಲು ನಿರ್ಧರಿಸಿದ್ದರು.

ಒಂಬತ್ತು ತಿಂಗಳ ಈ ಅವಧಿಯಲ್ಲಿ ತಾಯಿ ಅಮಿನಾ ತೀವ್ರ ರಕ್ತದೊತ್ತಡ (ಬಿಪಿ) ಹಾಗೂ ಯಕೃತ್ (ಲಿವರ್) ಸಂಬಂಧಿತ ಆರೋಗ್ಯ ಸಮಸ್ಯೆಗಳಿಂದ ಬಳಲುತ್ತಿದ್ದರು. ಇದಕ್ಕಾಗಿ ಅವರು ಹಲವು ಬಾರಿ ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಮತ್ತು ಸೂಕ್ಷ್ಮ ತಪಾಸಣೆಗೂ ಒಳಗಾಗಬೇಕಾಯಿತು. ಆಸ್ಪತ್ರೆಯ ಆಡಳಿತ ಮಂಡಳಿಯ ಪ್ರಕಾರ, ಮೇ 8 ರಂದು ಅಮಿನಾ ಅವರಿಗೆ ಮೊದಲ ಬಾರಿಗೆ ಹೆರಿಗೆ ನೋವು ಕಾಣಿಸಿಕೊಂಡಿತ್ತು. ಮರುದಿನ ಅಂದರೆ ಮೇ 9 ರಂದು ಅವರು ಮೊದಲ ಗಂಡು ಮಗುವಿಗೆ ಜನ್ಮ ನೀಡಿದರು. ಆ ಮಗು ಕೇವಲ 710 ಗ್ರಾಮ್ ತೂಕವಿತ್ತು. ಗರ್ಭಧಾರಣೆಯು ಕೇವಲ ಆರೂವರೆ ತಿಂಗಳ ಹಂತದಲ್ಲಿದ್ದ ಕಾರಣ, ವೈದ್ಯರು ತಕ್ಷಣವೇ ಅಮಿನಾ ಅವರ ಆರೋಗ್ಯ ಸ್ಥಿತಿಯನ್ನು ಸ್ಥಿರಗೊಳಿಸಿ, ಉಳಿದ ಮಕ್ಕಳ ಹೆರಿಗೆಯನ್ನು ಮುಂದೂಡುವಲ್ಲಿ ಯಶಸ್ವಿಯಾದರು.

5 ದಿನಗಳ ನಂತರ ಮತ್ತೊಮ್ಮೆ ಹೆರಿಗೆ

ಇದಾದ ಐದು ದಿನಗಳ ನಂತರ, ಅಂದರೆ ಮೇ 14 ರಂದು ಅಮಿನಾ ಅವರಿಗೆ ಮತ್ತೆ ಹೆರಿಗೆ ನೋವು ಕಾಣಿಸಿಕೊಂಡಾಗ ತಕ್ಷಣವೇ ಆಸ್ಪತ್ರೆಗೆ ಕರೆತರಲಾಯಿತು. ಈ ವೇಳೆ ಅವರು ಉಳಿದ ಮೂರು ಮಕ್ಕಳಿಗೆ (ಒಂದು ಗಂಡು, ಇಬ್ಬರು ಹೆಣ್ಣು) ಜನ್ಮ ನೀಡಿದ್ದಾರೆ. ಈ ಮೂರು ನವಜಾತ ಶಿಶುಗಳಲ್ಲಿ ಒಂದು ಮಗು ಸಂಪೂರ್ಣವಾಗಿ ಆರೋಗ್ಯವಾಗಿದ್ದು, ಇನ್ನುಳಿದ ಎರಡು ಮಕ್ಕಳನ್ನು ವಿಶೇಷ ನಿಗಾ ಘಟಕದಲ್ಲಿ (NICU) ಇರಿಸಲಾಗಿದೆ ಎಂದು ವೈದ್ಯರು ವಿವರಿಸಿದ್ದಾರೆ. ವೈದ್ಯಕೀಯ ದೃಷ್ಟಿಕೋನದಿಂದ ಈ ಪ್ರಕರಣವು ಅತ್ಯಂತ ಅಪರೂಪದ್ದಾಗಲು ಮತ್ತೊಂದು ಮುಖ್ಯ ಕಾರಣವೆಂದರೆ, ಗರ್ಭದಲ್ಲಿದ್ದ ನಾಲ್ಕೂ ಮಕ್ಕಳು ಪ್ರತ್ಯೇಕ ಚೀಲಗಳಲ್ಲಿ (Separate Sacs) ಬೆಳೆದಿದ್ದವು. ಇದು ಸಹಜ ಹೆರಿಗೆಯ ಪ್ರಕ್ರಿಯೆಯನ್ನು ಮತ್ತಷ್ಟು ಸಂಕೀರ್ಣಗೊಳಿಸಿತ್ತು.

ಈ ಇಡೀ ಪ್ರಕ್ರಿಯೆಯನ್ನು ಯಶಸ್ವಿಗೊಳಿಸುವಲ್ಲಿ ವೈದ್ಯರ ತಂಡ ಹಾಗೂ ಆಸ್ಪತ್ರೆಯ ನರ್ಸಿಂಗ್ ಸಿಬ್ಬಂದಿಯ ಜಂಟಿ ಪರಿಶ್ರಮ ಮತ್ತು ಸಮಯೋಚಿತ ನಿರ್ಧಾರಗಳು ಪ್ರಮುಖ ಪಾತ್ರ ವಹಿಸಿವೆ. ಗರ್ಭಾವಸ್ಥೆಯ ಆರಂಭದಿಂದಲೂ ಕುಟುಂಬದವರು ನೀಡಿದ ಸಹಕಾರ ಮತ್ತು ವೈದ್ಯರ ನಿರಂತರ ಕಣ್ಗಾವಲು ಈ ಹೈ-ರಿಸ್ಕ್ ಹೆರಿಗೆಯನ್ನು ಸುಖಾಂತ್ಯಗೊಳಿಸಿದೆ. ದಿನಸಿ ಅಂಗಡಿ ನಡೆಸುತ್ತಿರುವ ಮಕ್ಕಳ ತಂದೆ ಮೊಹಮ್ಮದ್ ಅಲೀಮ್ ಹಾಗೂ ಅಮಿನಾ ಅವರ ಸಹೋದರಿ ಇಮ್ರಾನಾ ಪರ್ವೀನ್ ಅವರು ವೈದ್ಯರ ಶ್ರಮ ಮತ್ತು ಕಾಳಜಿಯನ್ನು ಮುಕ್ತಕಂಠದಿಂದ ಶ್ಲಾಘಿಸಿ ಧನ್ಯವಾದಗಳನ್ನು ಅರ್ಪಿಸಿದ್ದಾರೆ. ಅತ್ಯಾಧುನಿಕ ವೈದ್ಯಕೀಯ ನಿರ್ವಹಣೆ ಮತ್ತು ಸಮರ್ಪಣಾ ಮನೋಭಾವದ ಚಿಕಿತ್ಸೆಗೆ ಈ ಅಪರೂಪದ ಪ್ರಕರಣವು ಅತ್ಯುತ್ತಮ ಉದಾಹರಣೆಯಾಗಿದೆ ಎಂದು ಆಸ್ಪತ್ರೆಯ ಅಧಿಕಾರಿಗಳು ಹೆಮ್ಮೆಯಿಂದ ವ್ಯಕ್ತಪಡಿಸಿದ್ದಾರೆ.

ಇದನ್ನೂ ಓದಿ: ಸಿಬಿಎಸ್‌ಇ ಪ್ರೌಢಶಾಲಾ ಭಾಷಾ ನೀತಿ ಪರಿಷ್ಕರಣೆ: ಮುಂಬರುವ ಶೈಕ್ಷಣಿಕ ಸಾಲಿನಿಂದ ಮೂರು ಭಾಷೆಗಳ ಕಲಿಕೆ ಕಡ್ಡಾಯ

Leave a Reply

Your email address will not be published. Required fields are marked *