ಬೆಂಗಳೂರು: ಅಂತಾರಾಷ್ಟ್ರೀಯ ಮಟ್ಟದಲ್ಲಿ ಕರ್ನಾಟಕದ ಕೀರ್ತಿ ಪತಾಕೆಯನ್ನು ಎತ್ತಿಹಿಡಿದ ಏಷ್ಯನ್ ಗೇಮ್ಸ್ (Asian Games) ಪದಕ ವಿಜೇತ ರಾಜ್ಯದ ಸಾಧಕ ಕ್ರೀಡಾಪಟುಗಳನ್ನು ವಿಧಾನಸೌಧದಲ್ಲಿ ಮಂಗಳವಾರ ಗೌರವಪೂರ್ವಕವಾಗಿ ಸನ್ಮಾನಿಸಲಾಯಿತು.
ಕ್ರೀಡಾಪಟುಗಳ ಶ್ರಮ ಯುವಜನತೆಗೆ ಪ್ರೇರಣೆ
ವಿಧಾನಸೌಧದಲ್ಲಿ ನಡೆದ ಸರಳ ಹಾಗೂ ಅರ್ಥಪೂರ್ಣ ಸಮಾರಂಭದಲ್ಲಿ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ವಿವಿಧ ಕ್ರೀಡೆಗಳಲ್ಲಿ ನಾಡಿಗೆ ಹಾಗೂ ದೇಶಕ್ಕೆ ಹೆಮ್ಮೆ ತಂದಿತ್ತ ಕ್ರೀಡಾಪಟುಗಳಿಗೆ ಹಾರ, ಶಾಲು ಹೊದಿಸಿ ಸನ್ಮಾನಿಸಿ, ಅವರ ಸಾಧನೆಯನ್ನು ಮುಕ್ತಕಂಠದಿಂದ ಶ್ಲಾಘಿಸಿದರು. ಕ್ರೀಡಾಪಟುಗಳ ಕಠಿಣ ಶ್ರಮ ಹಾಗೂ ಸಾಧನೆ ಯುವಜನತೆಗೆ ಪ್ರೇರಣೆಯಾಗಿದೆ ಎಂದು ಸಿಎಂ ಅಭಿನಂದಿಸಿದರು.
ಈ ವಿಶೇಷ ಗೌರವಾರ್ಪಣೆ ಸಮಾರಂಭದಲ್ಲಿ ಚಿನ್ನ ಹಾಗೂ ಬೆಳ್ಳಿ ಪದಕ ವಿಜೇತ ಅಥ್ಲೀಟ್ ಎಂ.ಆರ್. ಪೂವಮ್ಮ, ಬೆಳ್ಳಿ ಪದಕ ಗೆದ್ದ ಗಾಲ್ಫ್ ಪಟು ಅದಿತಿ ಅಶೋಕ್, ಚಿನ್ನದ ಪದಕ ವಿಜೇತ ಕ್ರಿಕೆಟ್ ಆಟಗಾರ್ತಿ ಶ್ರೇಯಾಂಕ ಪಾಟೀಲ್, ಕಂಚಿನ ಪದಕ ವಿಜೇತ ಬ್ಯಾಡ್ಮಿಂಟನ್ ಆಟಗಾರ ಆಯುಷ್ ಶೆಟ್ಟಿ, ಬೆಳ್ಳಿ ಪದಕ ವಿಜೇತ ಶೂಟರ್ ತಿಲೋತ್ತಮ ಸೇನ್, ಚಿನ್ನದ ಪದಕ ಪಡೆದ ಹಾಕಿ ಆಟಗಾರ ಮೋಹಿತ್ ಎಚ್.ಎಸ್. ಹಾಗೂ ಕಂಚಿನ ಪದಕ ಸಾಧನೆ ಮಾಡಿದ ಅಥ್ಲೀಟ್ ಸ್ನೇಹ ಎಸ್.ಎಸ್. ಅವರನ್ನು ಆತ್ಮೀಯವಾಗಿ ಗೌರವಿಸಲಾಯಿತು.
ಕಾರ್ಯಕ್ರಮದಲ್ಲಿ ಉಪಮುಖ್ಯಮಂತ್ರಿ ಡಾ. ಜಿ. ಪರಮೇಶ್ವರ್, ಕರ್ನಾಟಕ ರಾಜ್ಯ ಒಲಿಂಪಿಕ್ ಸಂಸ್ಥೆಯ ಅಧ್ಯಕ್ಷ ಕೆ. ಗೋವಿಂದರಾಜು, ಯುವ ಸಬಲೀಕರಣ ಹಾಗೂ ವಾರ್ತಾ ಇಲಾಖೆಯ ಆಯುಕ್ತ ಅನುಚೇತ್ ಸೇರಿದಂತೆ ಇಲಾಖೆಯ ಹಿರಿಯ ಅಧಿಕಾರಿಗಳು ಮತ್ತು ಕ್ರೀಡಾ ಕ್ಷೇತ್ರದ ಪ್ರಮುಖರು ಉಪಸ್ಥಿತರಿದ್ದು ಪದಕ ವಿಜೇತರಿಗೆ ಶುಭ ಹಾರೈಸಿದರು.
ಇದನ್ನೂ ಓದಿ: ಹಾರ್ದಿಕ್ ಪಾಂಡ್ಯ ಜೊತೆ ಡೇಟಿಂಗ್ ರೂಮರ್ಸ್: ವದಂತಿ ಹಬ್ಬಿಸಿದ ನೆಟ್ಟಿಗನಿಗೆ ನಟಿ ಅಮೀಷಾ ಪಟೇಲ್ ಖಡಕ್ ಕ್ಲಾಸ್!
