ಬೆಂಗಳೂರು: ದೇಶದಲ್ಲಿ ಮತದಾರರ ಹಕ್ಕುಗಳನ್ನು ಕಸಿಯಲಾಗುತ್ತಿದೆ ಎಂದು ಆರೋಪಿಸಿ ಹಾಗೂ “ವೋಟ್ ಚೋರಿ ನಿಲ್ಲಿಸಿ, ದೇಶ ಉಳಿಸಿ” ಎಂಬ ಘೋಷಣೆಯೊಂದಿಗೆ ಭಾರತೀಯ ರಾಷ್ಟ್ರೀಯ ವಿದ್ಯಾರ್ಥಿ ಒಕ್ಕೂಟ (NSUI) ನೇತೃತ್ವದಲ್ಲಿ ಮಂಗಳವಾರ ನಗರದ ಫ್ರೀಡಂ ಪಾರ್ಕ್ನಲ್ಲಿ ಕೇಂದ್ರ ಚುನಾವಣಾ ಆಯೋಗ ಹಾಗೂ ಮುಖ್ಯ ಚುನಾವಣಾ ಆಯುಕ್ತ ಜ್ಞಾನೇಶ್ ಕುಮಾರ್ ಅವರ ವಿರುದ್ಧ ಬೃಹತ್ ಪ್ರತಿಭಟನಾ ಸಮಾವೇಶ ನಡೆಸಲಾಯಿತು.
ಯಾರೆಲ್ಲಾ ಹೋರಾಟದಲ್ಲಿ ಭಾಗಿ?
ಈ ಬೃಹತ್ ಪ್ರತಿಭಟನೆಯಲ್ಲಿ ಎನ್ಎಸ್ಯುಐ ರಾಷ್ಟ್ರೀಯ ಅಧ್ಯಕ್ಷ ವಿನೋದ್ ಜಾಕಡ್, ಎಐಸಿಸಿ ಕಾರ್ಯದರ್ಶಿ ಗೋಪಿನಾಥ್, ಎನ್ಎಸ್ಯುಐ ರಾಜ್ಯ ಘಟಕದ ಅಧ್ಯಕ್ಷ ಕೀರ್ತಿಗಣೇಶ್, ವಿಧಾನ ಪರಿಷತ್ ಮಾಜಿ ಸದಸ್ಯ ನಾರಾಯಣಸ್ವಾಮಿ, ಬಿಎಂಟಿಸಿ ಅಧ್ಯಕ್ಷ ವಿ.ಎಸ್. ಆರಾಧ್ಯ ಹಾಗೂ ಜಿಲ್ಲಾಧ್ಯಕ್ಷ ಸರವಣ ಸೇರಿದಂತೆ ರಾಜ್ಯದ ವಿವಿಧ ಜಿಲ್ಲೆಗಳಿಂದ ಆಗಮಿಸಿದ್ದ ನೂರಾರು ವಿದ್ಯಾರ್ಥಿ ನಾಯಕರು ಮತ್ತು ಕಾರ್ಯಕರ್ತರು ಭಾಗವಹಿಸಿ ಆಕ್ರೋಶ ವ್ಯಕ್ತಪಡಿಸಿದರು.
ನಾಯಕರ ವಾಗ್ದಾಳಿ ಹಾಗೂ ಪ್ರಮುಖ ಆರೋಪಗಳು: ಪ್ರತಿಭಟನೆಯನ್ನುದ್ದೇಶಿಸಿ ಮಾತನಾಡಿದ ಎಐಸಿಸಿ ಕಾರ್ಯದರ್ಶಿ ಗೋಪಿನಾಥ್, ಮುಖ್ಯ ಚುನಾವಣಾ ಆಯುಕ್ತ ಜ್ಞಾನೇಶ್ ಕುಮಾರ್ ಅವರ ಬೆನ್ನಿಗೆ ಬಿಜೆಪಿ ಮತ್ತು ಆರ್ಎಸ್ಎಸ್ ಶಕ್ತಿಗಳು ನಿಂತಿವೆ. ಪ್ರಸ್ತುತ ದೇಶದಲ್ಲಿ ಅಘೋಷಿತ ತುರ್ತುಪರಿಸ್ಥಿತಿಯ ವಾತಾವರಣ ನಿರ್ಮಾಣವಾಗಿದ್ದು, ಚುನಾವಣಾ ಆಯೋಗವು ಆಡಳಿತಾರೂಢ ಬಿಜೆಪಿಯ ಏಜೆಂಟ್ರಂತೆ ವರ್ತಿಸುತ್ತಿದೆ ಎಂದು ತೀವ್ರವಾಗಿ ವಾಗ್ದಾಳಿ ನಡೆಸಿದರು. ಈ ಇಡೀ ವೋಟ್ ಚೋರಿ ಹಗರಣದ ಹಿಂದೆ ಪ್ರಧಾನಿ ನರೇಂದ್ರ ಮೋದಿ, ಕೇಂದ್ರ ಗೃಹ ಸಚಿವ ಅಮಿತ್ ಶಾ ಹಾಗೂ ಜ್ಞಾನೇಶ್ ಕುಮಾರ್ ಅವರ ನೇರ ಕೈವಾಡವಿದೆ. ಯೋಜನಾಬದ್ಧವಾಗಿ ಅರ್ಹ ಮತದಾರರ ಹೆಸರುಗಳನ್ನು ಮತದಾರರ ಪಟ್ಟಿಯಿಂದ ತೆಗೆದುಹಾಕಲಾಗಿದ್ದು, ತಕ್ಷಣವೇ ಅವರನ್ನು ಮತ್ತೆ ಸೇರ್ಪಡೆಗೊಳಿಸಬೇಕು ಎಂದು ಒತ್ತಾಯಿಸಿದರು.
ಎನ್ಎಸ್ಯುಐ ರಾಷ್ಟ್ರೀಯ ಅಧ್ಯಕ್ಷ ವಿನೋದ್ ಜಾಕಡ್ ಮಾತನಾಡಿ, ಮತದಾರರ ಹಕ್ಕುಗಳನ್ನು ಕಸಿಯುವ ಈ ಬೃಹತ್ ಅಕ್ರಮದ ನಿಜವಾದ ರೂವಾರಿಗಳನ್ನು ತಕ್ಷಣವೇ ಬಂಧಿಸಬೇಕು. ದೇಶದ ಪ್ರತಿಯೊಬ್ಬ ನಾಗರಿಕನಿಗೂ ತಾರತಮ್ಯವಿಲ್ಲದೆ ಮತದಾನದ ಹಕ್ಕು ಸಿಗಬೇಕು ಮತ್ತು ಯಾರೂ ಇದರಿಂದ ವಂಚಿತರಾಗಬಾರದು ಎಂಬ ಉನ್ನತ ಉದ್ದೇಶದಿಂದ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರ ಮಾರ್ಗದರ್ಶನದಲ್ಲಿ ದೇಶಾದ್ಯಂತ ಈ ಹೋರಾಟವನ್ನು ರೂಪಿಸಲಾಗಿದೆ ಎಂದು ತಿಳಿಸಿದರು.
ಎನ್ಎಸ್ಯುಐ ರಾಜ್ಯ ಅಧ್ಯಕ್ಷ ಕೀರ್ತಿಗಣೇಶ್ ಮಾತನಾಡಿ, ರಾಜ್ಯದ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಹಾಗೂ ಕೆಪಿಸಿಸಿ ಕಾರ್ಯಾಧ್ಯಕ್ಷ ಬಿ.ಕೆ. ಹರಿಪ್ರಸಾದ್ ಅವರ ಸೂಚನೆಯಂತೆ ರಾಜ್ಯದಾದ್ಯಂತ ವಿದ್ಯಾರ್ಥಿ ಸಂಘಟನೆಯಿಂದ ಈ ವೋಟ್ ಚೋರಿ ವಿರುದ್ಧದ ಹೋರಾಟವನ್ನು ತೀವ್ರಗೊಳಿಸಲಾಗಿದೆ. ದೇಶದಲ್ಲಿ ನ್ಯಾಯಸಮ್ಮತ ಮತ್ತು ಪಾರದರ್ಶಕ ಚುನಾವಣೆಗಳು ನಡೆಯಬೇಕು ಹಾಗೂ ಪ್ರಜಾಪ್ರಭುತ್ವದ ಮೂಲಭೂತ ಮೌಲ್ಯಗಳಿಗೆ ಧಕ್ಕೆ ತಂದಿರುವ ಮುಖ್ಯ ಚುನಾವಣಾ ಆಯುಕ್ತರನ್ನು ತಕ್ಷಣವೇ ಬಂಧಿಸಬೇಕೆಂದು ಆಗ್ರಹಿಸಿದರು.
ಇದನ್ನೂ ಓದಿ: KPSC ಪಶು ವೈದ್ಯಾಧಿಕಾರಿ ನೇಮಕಾತಿ ಅಕ್ರಮ: ಮಾಜಿ ಅಧ್ಯಕ್ಷ ಶಿವಶಂಕರಪ್ಪ ಸಾಹುಕಾರ್ ನಿವಾಸದ ಮೇಲೆ ಇಡಿ ದಿಢೀರ್ ದಾಳಿ!
