TOP NEWS

Supreme Court: ಇನ್ಶೂರೆನ್ಸ್ ಕಂಪನಿ ಮತ್ತು ಗ್ರಾಹಕರ ನಡುವೆ ಮೂರನೇ ವ್ಯಕ್ತಿಗೆ ಜಾಗವಿಲ್ಲ: ಸುಪ್ರೀಂ

supreme court declined plea about ram mandir urgent hearing application for cbi investigation

ನವದೆಹಲಿ: ವಿಮಾ ಪಾಲಿಸಿಗಳಿಗೆ ಸಂಬಂಧಿಸಿದಂತೆ ದೇಶದ ಅತ್ಯುನ್ನತ ನ್ಯಾಯಾಲಯವಾದ ಸುಪ್ರೀಂ ಕೋರ್ಟ್ (Supreme Court) ಮಹತ್ವದ ತೀರ್ಪೊಂದನ್ನು ನೀಡಿದೆ. ವಿಮೆ ಎಂಬುದು ಪಾಲಿಸಿದಾರ ಮತ್ತು ವಿಮಾ ಕಂಪನಿಯ ನಡುವೆ ನಡೆಯುವ ತೀರಾ ವೈಯಕ್ತಿಕ ಒಪ್ಪಂದವಾಗಿದ್ದು, ಇದರಲ್ಲಿ ಯಾವುದೇ ಮೂರನೇ ವ್ಯಕ್ತಿ ಅಥವಾ ಹಣಕಾಸು ಸಂಸ್ಥೆಗಳು (ಫೈನಾನ್ಸಿಯರ್) ನಷ್ಟ ಪರಿಹಾರಕ್ಕಾಗಿ ಹಕ್ಕು ಸಾಧಿಸಲು ಸಾಧ್ಯವಿಲ್ಲ ಎಂದು ಕೋರ್ಟ್ ಸ್ಪಷ್ಟಪಡಿಸಿದೆ. ನ್ಯಾಯಮೂರ್ತಿಗಳಾದ ಸಂದೀಪ್ ಮೆಹ್ತಾ ಮತ್ತು ವಿಜಯ್ ಬಿಷ್ಣೋಯ್ ಅವರನ್ನೊಳಗೊಂಡ ಪೀಠವು ಈ ಆದೇಶ ಹೊರಡಿಸಿದೆ.

ಸುಪ್ರೀಂ ಹೇಳಿದ್ದೇನು?

ಲೋನ್ ಬಾಕಿ ಉಳಿಸಿಕೊಂಡಿದ್ದಕ್ಕಾಗಿ ವಾಹನ ಮಾಲೀಕರಿಂದ ಗಾಡಿಯನ್ನು ಮುಟ್ಟುಗೋಲು ಹಾಕಿಕೊಂಡಿದ್ದ ಕೆ. ಪ್ರಕಾಶ್‌ಚಂದ್ ಎಂಬ ಫೈನಾನ್ಸಿಯರ್ ಸಲ್ಲಿಕೆ ಮಾಡಿದ್ದ ಅಪೀಲನ್ನು ವಜಾಗೊಳಿಸುವಾಗ ಸುಪ್ರೀಂ ಕೋರ್ಟ್ ಈ ಗಂಭೀರ ಆದೇಶ ನೀಡಿದೆ. ಪ್ರಕರಣದ ವಿವರಗಳ ಪ್ರಕಾರ, ಸೋಮಶೇಖರ್ ಎಂಬುವವರು ಓರಿಯಂಟಲ್ ಇನ್ಶೂರೆನ್ಸ್ ಕಂಪನಿಯಿಂದ ತಮ್ಮ ವಾಹನಕ್ಕೆ ಸಮಗ್ರ ವಿಮೆ ಮಾಡಿಸಿದ್ದರು. ಆದರೆ ಆರ್ಥಿಕ ಸಂಕಷ್ಟದಿಂದಾಗಿ ಅವರು ತಾವು ಪಡೆದಿದ್ದ ಸಾಲವನ್ನು ತೀರಿಸಲಾಗದೆ, 2003ರ ಡಿಸೆಂಬರ್‌ನಲ್ಲಿ ವಾಹನವನ್ನು ಸಾಲ ನೀಡಿದ್ದ ಪ್ರಕಾಶ್‌ಚಂದ್ ಅವರಿಗೆ ಒಪ್ಪಿಸಿದ್ದರು. ಇದಾಗಿ ಕೇವಲ ಎರಡೇ ದಿನಗಳಲ್ಲಿ ಆ ವಾಹನ ಕಳುವಾಗಿತ್ತು. ಈ ಹಿನ್ನೆಲೆಯಲ್ಲಿ ಫೈನಾನ್ಸಿಯರ್ ಪ್ರಕಾಶ್‌ಚಂದ್ ವಿಮಾ ಕಂಪನಿಯಿಂದ ಪರಿಹಾರ ಕೋರಿ ಅರ್ಜಿ ಸಲ್ಲಿಸಿದ್ದರು.

ಈ ವಿವಾದದ ವಿಚಾರಣೆ ನಡೆಸಿದ ಸುಪ್ರೀಂ ಕೋರ್ಟ್, ವಿಮಾ ಪಾಲಿಸಿಯು ಮೂಲ ವಾಹನ ಮಾಲೀಕ ಸೋಮಶೇಖರ್ ಹೆಸರಿನಲ್ಲಿ ಇತ್ತೇ ಹೊರತು ಫೈನಾನ್ಸಿಯರ್ ಹೆಸರಿನಲ್ಲಿ ಇರಲಿಲ್ಲ ಎಂಬುದನ್ನು ಎತ್ತಿ ತೋರಿಸಿದೆ. ವಿಮಾ ಕಂಪನಿಗೂ ಮತ್ತು ಹಣಕಾಸು ನೆರವು ನೀಡಿದ ಪ್ರಕಾಶ್‌ಚಂದ್ ಅವರಿಗೂ ಯಾವುದೇ ನೇರ ಒಪ್ಪಂದ ಇರಲಿಲ್ಲ. ಗ್ರಾಹಕರು ವಾಹನವನ್ನು ತಮಗೆ ಒಪ್ಪಿಸಿದ್ದಾರೆ ಎಂಬುದಕ್ಕೆ ಪ್ರಕಾಶ್‌ಚಂದ್ ಯಾವುದೇ ಲಿಖಿತ ದಾಖಲೆಗಳನ್ನು ಒದಗಿಸಿಲ್ಲ. ಅಷ್ಟೇ ಅಲ್ಲದೆ, ವಾಹನ ಕಳುವಾದ ನಿಖರವಾದ ಸ್ಥಳ, ದಿನಾಂಕ ಮತ್ತು ಸಮಯದ ವಿವರಗಳನ್ನು ನೀಡುವಲ್ಲಿಯೂ ಅವರು ವಿಫಲರಾಗಿದ್ದಾರೆ. ಇದು ಇಡೀ ಪ್ರಕರಣದ ಮೇಲೆ ಸಂಶಯ ಮೂಡುವಂತೆ ಮಾಡಿದೆ ಎಂದು ನ್ಯಾಯಪೀಠ ಹೇಳಿದೆ.

ಒಂದು ವೇಳೆ ವಾಹನವನ್ನು ಮಾಲೀಕರು ಫೈನಾನ್ಸಿಯರ್‌ಗೆ ಹಸ್ತಾಂತರಿಸಿದ್ದೇ ನಿಜವಾಗಿದ್ದರೂ, ಕಾನೂನುಬದ್ಧವಾಗಿ ಪ್ರಕಾಶ್‌ಚಂದ್ ಅವರೇ ಆ ವಾಹನದ ಮಾಲೀಕರಾಗುವುದಿಲ್ಲ. ಹಾಗಾಗಿ ನಷ್ಟ ತುಂಬಿಕೊಡುವಂತೆ ವಿಮಾ ಕಂಪನಿಗೆ ಒತ್ತಾಯಿಸುವ ಯಾವುದೇ ಹಕ್ಕು ಅವರಿಗಿರುವುದಿಲ್ಲ ಎಂದು ಕೋರ್ಟ್ ಸ್ಪಷ್ಟಪಡಿಸಿದೆ. ಈ ಹಿಂದೆ ಮೈಸೂರಿನ ಜಿಲ್ಲಾ ಗ್ರಾಹಕರ ವೇದಿಕೆ ಹಾಗೂ ಕರ್ನಾಟಕ ರಾಜ್ಯ ಗ್ರಾಹಕರ ಆಯೋಗವು ಫೈನಾನ್ಸಿಯರ್ ಪರವಾಗಿ ತೀರ್ಪು ನೀಡಿದ್ದವು. ಆದರೆ ರಾಷ್ಟ್ರೀಯ ಗ್ರಾಹಕರ ವ್ಯಾಜ್ಯಗಳ ಪರಿಹಾರ ಆಯೋಗವು (NCDRC) ಈ ತೀರ್ಪುಗಳನ್ನು ರದ್ದುಗೊಳಿಸಿ ವಿಮಾ ಕಂಪನಿಯ ನಿರ್ಧಾರವನ್ನು ಎತ್ತಿಹಿಡಿದಿತ್ತು. ಈಗ ಸುಪ್ರೀಂ ಕೋರ್ಟ್ ಕೂಡ ರಾಷ್ಟ್ರೀಯ ಆಯೋಗದ ತೀರ್ಪೇ ಸರಿಯಾಗಿದೆ ಎಂದು ಸಾರಿದ್ದು, ಮೂರನೇ ವ್ಯಕ್ತಿಗಳು ಇನ್ಶೂರೆನ್ಸ್ ಕ್ಲೈಮ್ ಮಾಡಲು ಬರುವುದಿಲ್ಲ ಎಂಬ ಕಾನೂನನ್ನು ಮತ್ತೊಮ್ಮೆ ಸ್ಪಷ್ಟಪಡಿಸಿದೆ.

ಇದನ್ನೂ ಓದಿ: ನಾಗಪುರ ವಿದ್ಯಾರ್ಥಿಗೆ ದುಬೈ ಕೇಂದ್ರ ಹಂಚಿಕೆ! ಸೈಬರ್ ತನಿಖೆಗೆ ಮುಂದಾದ ಎನ್‌ಟಿಎ

Leave a Reply

Your email address will not be published. Required fields are marked *