ಮುಂಬೈ: ದೇವಸ್ಥಾನದಲ್ಲಿ ಹನುಮಂತನ ದರ್ಶನ ಪಡೆದು ಭಜನೆಯಲ್ಲಿ ಮುಳುಗಿದ್ದ ಭಕ್ತರ ಮೇಲೆ ನಿರ್ಮಾಣ ಹಂತದ ಸಭಾಂಗಣದ ಪಿಲ್ಲರ್ ಹಾಗೂ ಕಾಂಕ್ರೀಟ್ ಮೇಲ್ಛಾವಣಿ ಕುಸಿದು (Tragedy) ಬಿದ್ದಿರುವ ದಾರುಣ ಘಟನೆ ಮಹಾರಾಷ್ಟ್ರದ ಪರ್ಭಾನಿ ಜಿಲ್ಲೆಯಲ್ಲಿ ಜರುಗಿದೆ. ಈ ಅಪಘಾತದಲ್ಲಿಐವರು ಯಾತ್ರಿಕರು ಪ್ರಾಣ ಕಳೆದುಕೊಂಡಿದ್ದು, ಮತ್ತೂ ಐವರು ಸಾವು-ಬದುಕಿನ ನಡುವೆ ಹೋರಾಡುತ್ತಿದ್ದಾರೆ. ಅವಶೇಷಗಳ ರಾಶಿಯ ಕೆಳಗೆ ಸುಮಾರು 50ಕ್ಕೂ ಹೆಚ್ಚು ಜನರು ಸಿಲುಕಿರುವ ಸಾಧ್ಯತೆ ಇದ್ದು, ಸದ್ಯ ದೊಡ್ಡ ಮಟ್ಟದ ರಕ್ಷಣಾ ಕಾರ್ಯಾಚರಣೆ ಪ್ರಗತಿಯಲ್ಲಿದೆ.
ಏನಿದು ಪ್ರಕರಣ?
ಪರ್ಭಾನಿಯ ಮಾನ್ವತ್ ತಾಲೂಕಿನಲ್ಲಿರುವ ಹೆಸರಾಂತ ಯಶವಾಡಿ ಪುಣ್ಯಕ್ಷೇತ್ರದ ಆವರಣದಲ್ಲಿ ಈ ದುರಂತ ಸಂಭವಿಸಿದೆ. ಶನಿವಾರದ ಹಿನ್ನೆಲೆಯಲ್ಲಿ ಮುಂಜಾನೆಯಿಂದಲೇ ನೂರಾರು ಜನ ಧಾರ್ಮಿಕ ಕಾರ್ಯಗಳಿಗಾಗಿ ಇಲ್ಲಿ ಜಮಾಯಿಸಿದ್ದರು. ಮಧ್ಯಾಹ್ನವಾಗುತ್ತಿದ್ದಂತೆ ದೇವಸ್ಥಾನದ ಎದುರೇ ನಿರ್ಮಿಸಲಾಗುತ್ತಿದ್ದ ಮಂಟಪದ ಬೃಹತ್ ಕಂಬವೊಂದು ಮೇಲ್ಛಾವಣಿ ಸಮೇತ ಭಕ್ತರ ಸಾಲಿನ ಮೇಲೆ ಉರುಳಿ ಬಿದ್ದಿದೆ. ಈ ಅನಿರೀಕ್ಷಿತ ಅವಘಡದಿಂದಾಗಿ ಇಡೀ ಆವರಣದಲ್ಲಿ ಭೀತಿಯ ವಾತಾವರಣ ನಿರ್ಮಾಣವಾಗಿದ್ದು, ಜೀವ ಉಳಿಸಿಕೊಳ್ಳಲು ಜನ ಕಿರುಚಾಡುತ್ತಾ ಓಡಿದ್ದಾರೆ.
ವಿಷಯ ತಿಳಿಯುತ್ತಿದ್ದಂತೆಯೇ ಮಾನ್ವತ್ ಠಾಣೆಯ ಸಹಾಯಕ ಪೊಲೀಸ್ ಇನ್ಸ್‌ಪೆಕ್ಟರ್ ಶಿಂಧೆ ಹಾಗೂ ತಂಡ ಸ್ಥಳೀಯರೊಂದಿಗೆ ಕೈಜೋಡಿಸಿ ರಕ್ಷಣಾ ಕಾರ್ಯಕ್ಕೆ ಧಾವಿಸಿದೆ. ಕಾಂಕ್ರೀಟ್ ಬ್ಲಾಕ್‌ಗಳ ಅಡಿಯಿಂದ ಸದ್ಯಕ್ಕೆ ಎಂಟು ಜನರನ್ನು ಸುರಕ್ಷಿತವಾಗಿ ಹೊರತೆಗೆಯಲಾಗಿದ್ದು, ಗಾಯಾಳುಗಳನ್ನು ಆಸ್ಪತ್ರೆಗಳಿಗೆ ರವಾನಿಸಲು ಆಂಬುಲೆನ್ಸ್‌ಗಳ ವ್ಯವಸ್ಥೆ ಮಾಡಲಾಗಿದೆ. ಜೆಸಿಬಿಗಳ ಮೂಲಕ ಅವಶೇಷಗಳನ್ನು ಸರಿಸುವ ಕೆಲಸ ಮುಂದುವರಿದಿದೆ. ಕಟ್ಟಡ ಕುಸಿತಕ್ಕೆ ತಾಂತ್ರಿಕ ಲೋಪವೇ ಕಾರಣವೇ ಅಥವಾ ಇನ್ಯಾವುದೇ ಸಮಸ್ಯೆಯೇ ಎಂಬುದು ಇನ್ನು ಪತ್ತೆಯಾಗಬೇಕಿದ್ದು, ಆಡಳಿತ ಮಂಡಳಿ ಹಾಗೂ ಹಿರಿಯ ಪೊಲೀಸ್ ಅಧಿಕಾರಿಗಳು ಸ್ಥಳದಲ್ಲೇ ಬೀಡುಬಿಟ್ಟು ನಿಗಾ ವಹಿಸಿದ್ದಾರೆ.
