ಮುಂಬೈ: ಚಿತ್ರರಂಗದ ಸಾಂಪ್ರದಾಯಿಕ ಸೌಂದರ್ಯದ ಮಾಪನಗಳನ್ನು ಮೊದಲಿನಿಂದಲೂ ಪ್ರಶ್ನಿಸುತ್ತಾ ಬಂದಿರುವ ಬಾಲಿವುಡ್ ನಟಿ ತಾಪ್ಸಿ ಪನ್ನು, (Taapsee Pannu) ಇತ್ತೀಚೆಗೆ ಮಹಿಳೆಯರಲ್ಲಿ ಹೆಚ್ಚಾಗುತ್ತಿರುವ ಫ್ಲಾಟ್ ಟಮ್ಮಿ ಅಥವಾ ಸೀದಾ ಹೊಟ್ಟೆಯ ಗೀಳಿನ ಬಗ್ಗೆ ಮಹತ್ವದ ವಿಚಾರಗಳನ್ನು ಹಂಚಿಕೊಂಡಿದ್ದಾರೆ. ಇನ್ಸ್ಟಾಗ್ರಾಮ್ನಲ್ಲಿ ತಮ್ಮ ಅನಿಸಿಕೆ ಹಂಚಿಕೊಂಡಿರುವ ಅವರು, ತಾವೂ ಕೂಡ ಒಂದು ಕಾಲದಲ್ಲಿ ಹೊಟ್ಟೆಯ ಕೆಳಭಾಗದ ಕೊಬ್ಬನ್ನು ಕರಗಿಸಲೇಬೇಕು ಎಂಬ ಹಠಕ್ಕೆ ಬಿದ್ದು ತಮ್ಮ ದೇಹವನ್ನು ತಾವೇ ಹಿಂಸಿಸಿಕೊಂಡಿದ್ದಾಗಿ ಒಪ್ಪಿಕೊಂಡಿದ್ದಾರೆ. ಸಾಮಾಜಿಕ ಜಾಲತಾಣಗಳಲ್ಲಿ ಚಂದ ಕಾಣಿಸುವ ಫೋಟೋಗಳಿಗಾಗಿ ಮಹಿಳೆಯರು ತಮ್ಮ ಆರೋಗ್ಯವನ್ನು ಹಾಳು ಮಾಡಿಕೊಳ್ಳಬಾರದು ಎಂದು ಅವರು ಮನವಿ ಮಾಡಿದ್ದಾರೆ.
ಅತಿಯಾಗಿ ದೇಹವನ್ನ ದಂಡಿಸಬಾರದು
ತಮ್ಮ ಬಾಲ್ಯದ ದಿನಗಳ ಬಗ್ಗೆ ಮಾತನಾಡಿರುವ ತಾಪ್ಸಿ, ತಾವು ಬೆಳೆಯುವ ವಯಸ್ಸಿನಲ್ಲಿ ಅತ್ಯಂತ ಫಿಟ್ ಆಗಿದ್ದರೂ ಹೊಟ್ಟೆಯ ಕೆಳಭಾಗದ ಕೊಬ್ಬು (Lower Belly Fat) ಮಾತ್ರ ಏಕೆ ಕರಗುತ್ತಿಲ್ಲ ಎಂಬ ಗೊಂದಲ ಕಾಡುತ್ತಿತ್ತು ಎಂದಿದ್ದಾರೆ. ಅದಕ್ಕಾಗಿ ತಾವು ಮಿತಿಮೀರಿ ವರ್ಕೌಟ್ ಮಾಡಲು ಶುರು ಮಾಡಿದ್ದರು. ಆದರೆ ಯಾವಾಗ ನಾವು ದೇಹವನ್ನು ಅತಿಯಾಗಿ ದಂಡಿಸುತ್ತೇವೆಯೋ, ಆಗ ಮೆದುಳು ಅಪಾಯದ ಮುನ್ಸೂಚನೆ ಪಡೆದು ದೇಹಕ್ಕೆ ರಕ್ಷಣೆ ನೀಡಲು ಮುಂದಾಗುತ್ತದೆ. ಇದರಿಂದಾಗಿ ದೇಹವು ತೂಕ ಕಳೆದುಕೊಳ್ಳುವ ಬದಲು ನೀರಿನಂಶವನ್ನು (Water Retention) ತನ್ನಲ್ಲೇ ಹಿಡಿದಿಟ್ಟುಕೊಳ್ಳಲು ಆರಂಭಿಸುತ್ತದೆ. ಪರಿಣಾಮವಾಗಿ ಹೊಟ್ಟೆಯ ಭಾಗದ ಬೊಜ್ಜು ಮತ್ತಷ್ಟು ಹೆಚ್ಚಾಗುತ್ತದೆಯೇ ವಿನಃ ಕರಗುವುದಿಲ್ಲ. ಹಾರ್ಮೋನ್ಗಳ ಏರುಪೇರಿನಿಂದಾಗಿ ಮಹಿಳೆಯರ ದೇಹ ದಿನದಿಂದ ದಿನಕ್ಕೆ ಬದಲಾಗುತ್ತಿರುತ್ತದೆ, ಹೀಗಿರುವಾಗ ಪ್ರತಿದಿನವೂ ಒಂದೇ ರೀತಿ ಕಾಣಬೇಕು ಎಂದು ಬಯಸುವುದು ತಪ್ಪು ಎಂದು ಅವರು ವಿವರಿಸಿದ್ದಾರೆ.
ನಟಿ ಹೇಳಿದ್ದೇನು?
ತಮ್ಮ ನ್ಯೂಟ್ರಿಷನಿಸ್ಟ್ ಮುನ್ಮುನ್ ಗನೇರಿವಾಲ್ ಅವರೊಂದಿಗೆ ಚರ್ಚಿಸಿದ ಬಳಿಕವಷ್ಟೇ ತಮಗೆ ಈ ನೈಸರ್ಗಿಕ ಪ್ರಕ್ರಿಯೆಯ ಸತ್ಯ ತಿಳಿಯಿತು ಎಂದು ತಾಪ್ಸಿ ಹೇಳಿದ್ದಾರೆ. ಮಹಿಳೆಯರ ಹೊಟ್ಟೆಯ ಕೆಳಭಾಗದಲ್ಲಿ ಕೊಂಚ ಕೊಬ್ಬು ಮತ್ತು ನೀರಿನಂಶ ಇರುವುದು ಅತ್ಯಂತ ಅವಶ್ಯಕ. ಏಕೆಂದರೆ ಆ ಭಾಗದಲ್ಲಿರುವ ಮಹಿಳೆಯರ ಪ್ರಮುಖ ಸಂತಾನೋತ್ಪತ್ತಿ ಅಂಗಗಳಿಗೆ ರಕ್ಷಣೆ ನೀಡಲು ಪ್ರಕೃತಿಯೇ ಈ ವ್ಯವಸ್ಥೆ ಮಾಡಿದೆ. ಆದ್ದರಿಂದ ಕೇವಲ ಇನ್ಸ್ಟಾಗ್ರಾಮ್ ಫೋಟೋಗಳಿಗಾಗಿ ನಿಮ್ಮ ದೇಹವನ್ನು ನೀವೇ ಟಾರ್ಚರ್ ಮಾಡಿಕೊಳ್ಳಬೇಡಿ, ಕೊಂಚ ಹೊಟ್ಟೆ ಮುಂದೆ ಬಂದಿರುವುದು ಅನಾರೋಗ್ಯದ ಲಕ್ಷಣವಲ್ಲ, ಬದಲಿಗೆ ಅದು ನೈಸರ್ಗಿಕ ಎಂದು ಅವರು ಮಹಿಳೆಯರಿಗೆ ಧೈರ್ಯ ತುಂಬಿದ್ದಾರೆ.
ಇದೇ ವೇಳೆ ತಮ್ಮ ಹಳೆಯ ಸಂದರ್ಶನವೊಂದನ್ನು ನೆನಪಿಸಿಕೊಂಡಿರುವ ಅವರು, ತಾವು ಬೆಳೆದ ಸೌಂದರ್ಯದ ವ್ಯಾಖ್ಯಾನಕ್ಕೂ ತಮ್ಮ ರೂಪಕ್ಕೂ ಯಾವುದೇ ಸಾಮ್ಯತೆ ಇರಲಿಲ್ಲ ಎಂದಿದ್ದಾರೆ. ದೊಡ್ಡ ಕಣ್ಣುಗಳು, ಸಣ್ಣ ಮೂಗು, ನೇರವಾದ ರೇಷ್ಮೆಯಂತಹ ಕೂದಲು ಯಾವುದೂ ತಮಗಿರಲಿಲ್ಲ. ತಮಗಿದ್ದ ಸುರುಳಿ ಕೂದಲು (Curly Hair) ಮತ್ತು ಕೊಂಚ ದೊಡ್ಡದಾಗಿದ್ದ ಮೂಗನ್ನು ಬದಲಾಯಿಸಲು ಶಾಲಾ ದಿನಗಳಲ್ಲಿ ಪೋಷಕರಿಗೆ ತಿಳಿಸದೆ ಕೆಮಿಕಲ್ ಬಳಸಿ ಎರಡು ಬಾರಿ ಕೂದಲನ್ನು ಸ್ಟ್ರೈಟನಿಂಗ್ ಮಾಡಿಸಿಕೊಂಡಿದ್ದಾಗಿ ಅವರು ಹೇಳಿದ್ದಾರೆ. ಆದರೆ ಆ ಕೆಮಿಕಲ್ ಚಿಕಿತ್ಸೆಯಿಂದಾಗಿ ಕೂದಲು ಸಂಪೂರ್ಣ ಹಾಳಾಗಿ ಉದುರಲು ಆರಂಭಿಸಿದಾಗ ಅವರಿಗೆ ತಪ್ಪು ಮನವರಿಕೆಯಾಯಿತು. ಹಲವು ವರ್ಷಗಳ ಕಾಲ ತಮ್ಮನ್ನು ತಾವು ಬದಲಾಯಿಸಿಕೊಳ್ಳಲು ಪ್ರಯತ್ನಿಸಿ ಸೋತ ನಂತರ, ಭಗವಂತ ನಮಗೆ ನೀಡಿರುವ ನೈಸರ್ಗಿಕ ರೂಪವನ್ನು ಪ್ರೀತಿಸುವುದರಲ್ಲೇ ನಿಜವಾದ ಸೌಂದರ್ಯ ಅಡಗಿದೆ ಎಂಬುದನ್ನು ತಾವು ಕಂಡುಕೊಂಡಿದ್ದಾಗಿ ತಾಪ್ಸಿ ಪನ್ನು ಹೆಮ್ಮೆಯಿಂದ ಹೇಳಿಕೊಂಡಿದ್ದಾರೆ.
